ನಾಗ್ಪುರ: ಇಲ್ಲಿನ ಖಾಸಗಿ ಇಂಜಿನಿಯರಿಂಗ್ ಕಾಲೇಜೊಂದರ 25 ವರ್ಷದ ವಿದ್ಯಾರ್ಥಿಯೊಬ್ಬ ತನ್ನ ವಿದ್ಯಾಭ್ಯಾಸ ಮತ್ತು ಕೋರ್ಸ್ ವಿಚಾರದಲ್ಲಿ ತಂದೆ-ತಾಯಿಯ ಜೊತೆ ಉಂಟಾದ ಭಿನ್ನಾಭಿಪ್ರಾಯದ ನಂತರ ಅವರನ್ನು ಕೊಂದಿದ್ದಾನೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಪೋಷಕರನ್ನು ಕೊಂದ ನಂತರ, ಭೀಕರ ಹತ್ಯೆಗಳ ಬಗ್ಗೆ ತಿಳಿಯದ ತನ್ನ ಸಹೋದರಿಯೊಂದಿಗೆ ಆತ ಚಿಕ್ಕಪ್ಪನ ಮನೆಗೆ ತೆರಳಿದ್ದ ಎಂದು ಅವರು ಹೇಳಿದ್ದಾರೆ.
ಆರೋಪಿ ಉತ್ಕರ್ಷ ಧಾಖೋಲೆ ಎಂಬಾತ ಡಿಸೆಂಬರ್ 26 ರಂದು ನಗರದ ಕಪಿಲ್ ನಗರ ಪ್ರದೇಶದಲ್ಲಿನ ತನ್ನ ನಿವಾಸದಲ್ಲಿ ತನ್ನ ತಂದೆ-ತಾಯಿಯನ್ನು ಕೊಂದಿದ್ದು, ಅಕ್ಕಪಕ್ಕದವರು ಬುಧವಾರ ಬೆಳಿಗ್ಗೆ ದುರ್ವಾಸನೆ ಬಂದ ನಂತರ ಪೊಲೀಸರಿಗೆ ಮಾಹಿತಿ ನೀಡಿದ ನಂತರ ಜೋಡಿ ಕೊಲೆ ಬೆಳಕಿಗೆ ಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆತನ ಹೆತ್ತವರ ಕೊಳೆತ ದೇಹಗಳನ್ನು ವಶಕ್ಕೆ ಪಡೆದ ನಂತರ, ಉತ್ಕರ್ಷನನ್ನು ಬಂಧಿಸಲಾಯಿತು ಮತ್ತು ಅವರನ್ನು ಕೊಂದಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ ಎಂದು ಡಿಸಿಪಿ (ವಲಯ V) ನಿಕೇತನ ಕದಂ ಹೇಳಿದ್ದಾರೆ.
ಕೊಲೆಯಾದವರನ್ನು ಲೀಲಾಧರ ಧಾಖೋಲೆ (55) ಮತ್ತು ಅವರ 50 ವರ್ಷದ ಪತ್ನಿ ಅರುಣಾ ಎಂದು ಗುರುತಿಸಲಾಗಿದೆ. “ಉತ್ಕರ್ಷ ಡಿಸೆಂಬರ್ 26 ರಂದು ಮಧ್ಯಾಹ್ನದ ಸುಮಾರಿಗೆ ತನ್ನ ಶಿಕ್ಷಕಿಯಾಗಿರುವ ತಾಯಿಯನ್ನು ಕತ್ತು ಹಿಸುಕಿ ಕೊಂದಿದ್ದಾನೆ ಮತ್ತು ನಂತರ ಸಂಜೆ 5 ಗಂಟೆಯ ಸುಮಾರಿಗೆ ಮನೆಗೆ ಹಿಂದಿರುಗಿದಾಗ ಪವರ್ ಪ್ಲಾಂಟ್‌ನಲ್ಲಿ ತಂತ್ರಜ್ಞ ಮತ್ತು ಸಾಮಾಜಿಕ ಕಾರ್ಯಕರ್ತನಾಗಿದ್ದ ತನ್ನ ತಂದೆಯನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ. ನಂತರ ಅವನು ಶವಗಳನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾನೆ ಎಂದು ಪೊಲೀಸ್ ಅಧಿಕಾರಿ ಹೇಳಿದರು. ಕೊಲೆಗೆ ಕಾರಣ ಉತ್ಕರ್ಷನ ಶೈಕ್ಷಣಿಕ ದಾಖಲೆ ಮತ್ತು ವೃತ್ತಿಜೀವನದ ಬಗೆಗಿನ ವಿವಾದ ಎಂದು ಅವರು ಹೇಳಿದರು.
“ಉತ್ಕರ್ಷ ತನ್ನ ಇಂಜಿನಿಯರಿಂಗ್ ಕೋರ್ಸ್ ಸಮಯದಲ್ಲಿ ಹಲವಾರು ವಿಷಯಗಳಲ್ಲಿ ಉತ್ತೀರ್ಣನಾಗಿರಲಿಲ್ಲ. ಆದ್ದರಿಂದ ಆತನ ಪೋಷಕರು, ಆತನಿಗೆ ಎಂಜಿನಿಯರಿಂಗ್ ಕೋರ್ಸ್ ಬಿಟ್ಟು ಬೇರೆ ಯಾವುದಾದರೂ ಕೋರ್ಸ್ ಆಯ್ಕೆ ಮಾಡಲು ಹೇಳಿದ್ದರು. ಆದರೆ, ಈತ ಅವರ ತಮ್ಮ ಸಲಹೆಗೆ ವಿರುದ್ಧವಾಗಿದ್ದ ಎಂದು ಕದಮ್ ಹೇಳಿದ್ದಾರೆ.
ಇದರಿಂದ ಕೋಪಗೊಂಡ ಆತ ತಂದೆ-ತಾಯಿಯನ್ನುಕೊಂದಿದ್ದು, ನಂತರ ಅವರ ಕೊಲೆಯ ಬಗ್ಗೆ ಏನೂ ಗೊತ್ತಿರದ ಕಾಲೇಜು ವಿದ್ಯಾರ್ಥಿನಿಯಾಗಿರುವ ತನ್ನ ಸಹೋದರಿಯನ್ನು ತಮ್ಮ ಚಿಕ್ಕಪ್ಪನ ನಿಮನೆಗೆ ಕರೆದೊಯ್ದಿದ್ದಾನೆ. ಕೆಲ ದಿನಗಳ ಕಾಲ ನಡೆದ ಧ್ಯಾನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತಂದೆ-ತಾಯಿ ಬೆಂಗಳೂರಿಗೆ ಹೋಗಿದ್ದಾರೆ ಎಂದು ಸಂಬಂಧಿಕರಿಗೆ ಸುಳ್ಳು ಹೇಳಿದ್ದಾನೆ. ತನ್ನ ಸಹೋದರಿಯೊಂದಿಗೆ, ಉತ್ಕರ್ಷ ಕೂಡ ತನ್ನ ಚಿಕ್ಕಪ್ಪನ ಮನೆಯಲ್ಲಿಯೇ ಇದ್ದ ಎಂದು ಅವರು ಹೇಳಿದರು. ಆದರೆ, ಮನೆಯೊಳಗಿನ ಕೊಳೆತ ಶವಗಳ ವಾಸನೆ ಅಕ್ಕಪಕ್ಕದ ಮನೆಗಳಿಗೆ ಹರಡಿದ ನಂತರ ಜೋಡಿ ಕೊಲೆ ಬೆಳಕಿಗೆ ಬಂದಿದ್ದು, ಆತನನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ