ಗಾಂಧಿನಗರ: ಗುಜರಾತಿನ ಸ್ಟ್ಯಾಚ್ಯೂ ಆಫ್ ಯೂನಿಟಿ ಬಳಿಯ ಜಂಗಲ್ ಸಫಾರಿ ಪಾರ್ಕ್‌ಗೆ ಚಿರತೆಯೊಂದು ನುಗ್ಗಿ ಕೃಷ್ಣಮೃಗ ಬೇಟೆಯಾಡಿದ ನಂತರ ಇನ್ನೂ ಏಳು ಕೃಷ್ಣಮೃಗಗಳು ಆಘಾತದಿಂದ ಮೃತಪಟ್ಟಿವೆ ಎಂದು ವರದಿಯಾಗಿದೆ.
ಹೊಸ ವರ್ಷದ ಆರಂಭದ ದಿನವಾದ ಜನವರಿ 1 ರ ಮುಂಜಾನೆ ಈ ಘಟನೆ ಸಂಭವಿಸಿದೆ. ಅರಣ್ಯ ಅಧಿಕಾರಿಗಳ ಪ್ರಕಾರ, 2 ರಿಂದ 3 ವರ್ಷ ವಯಸ್ಸಿನ ಚಿರತೆ, ಕೆವಾಡಿಯಾ ಅರಣ್ಯ ವಿಭಾಗದ ಪರಿಧಿಯಲ್ಲಿ ನೆಲೆಗೊಂಡಿರುವ ಉದ್ಯಾನವನದ ಸುಸಜ್ಜಿತ ಗಡಿಯನ್ನು ದಾಟುವಲ್ಲಿ ಯಶಸ್ವಿಯಾಗಿದೆ ಯಶಸ್ವಿಯಾಗಿದೆ. ವಿಶ್ವದ ಅತಿ ಎತ್ತರದ ಪ್ರತಿಮೆಯ ಬಳಿ ಇರುವ ಪ್ರಮುಖ ಆಕರ್ಷಣೆಯಾದ ಈ ಉದ್ಯಾನವನವು ಶೂಲ್ಪನೇಶ್ವರ ವನ್ಯಜೀವಿ ಅಭಯಾರಣ್ಯದ ದಟ್ಟವಾದ ಕಾಡುಗಳಿಂದ ಸುತ್ತುವರೆದಿದೆ. ಇಲ್ಲಿ ಚಿರತೆಗಳು ಸಾಕಷ್ಟಿವೆ.
ಚಿರತೆ ಜಂಗಲ್ ಸಫಾರಿ ಪಾರ್ಕ್‌ಗೆ ಪ್ರವೇಶಿಸಿತು. ಅಲ್ಲಿ ಅದು ಒಂದು ಕೃಷ್ಣಮೃಗವನ್ನು ಬೇಟೆಯಾಡಿತು. ಈ ದಾಳಿಯನ್ನು ನೋಡಿದ ಉಳಿದ ಏಳು ಕೃಷ್ಣಮೃಗಗಳು ಆಘಾತ ಮತ್ತು ಗಾಬರಿಯಿಂದ ಸಾವಿಗೀಡಾಗಿವೆ ಎಂದು ನಂಬಲಾಗಿದೆ. ಎಲ್ಲಾ ಎಂಟು ಕೃಷ್ಣ ಮೃಗಗಳ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ದೃಢಪಡಿಸಿದ್ದು, ನಂತರ ಅವುಗಳನ್ನು ಸುಡಲಾಯಿತು.
ಕೆವಾಡಿಯಾ ವಿಭಾಗದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಅಗ್ನೀಶ್ವರ ವ್ಯಾಸ್ ಅವರು ಮಾತನಾಡಿ, ಸುತ್ತಮುತ್ತಲಿನ ಅರಣ್ಯಗಳಲ್ಲಿ ಚಿರತೆ ಚಲನವಲನಗಳು ಸಾಮಾನ್ಯವಾಗಿದ್ದರೂ, ಇದು ಕಾಡು ಚಿರತೆ ಸಫಾರಿ ಪಾರ್ಕ್‌ಗೆ ಪ್ರವೇಶಿಸಿದ ಬಗ್ಗೆ ದಾಖಲಾದ ಮೊದಲ ನಿದರ್ಶನವಾಗಿದೆ ಎಂದು ಹೇಳಿದ್ದಾರೆ.
400 ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ಮೂಲಕ ಉದ್ಯಾನವನದ ಮೇಲೆ ನಿಗಾ ಇರಿಸಲಾಗಿದೆ ಮತ್ತು ಚಿರತೆಯ ಒಳಗೆ ಪ್ರವೇಶಿಸಿದ್ದನ್ನು ತಕ್ಷಣವೇ ಪತ್ತೆಹಚ್ಚಲಾಗಿದೆ ಎಂದು ಅವರು ಹೇಳಿದರು. ಭದ್ರತಾ ಸಿಬ್ಬಂದಿಗೆ ಎಚ್ಚರಿಕೆ ನೀಡಲಾಗಿದ್ದು, ಅವರು ಹುಡುಕಾಡುವಾಗ ಚಿರತೆ ಪರಾರಿಯಾಗಿದೆ. ಆದರೆ, ಚಿರತೆ ಸಫಾರಿ ಪಾರ್ಕ್‌ನಿಂದ ಸಂಪೂರ್ಣವಾಗಿ ಹೊರಬಂದಿದೆಯೇ ಎಂಬುದು ಇನ್ನೂ ತಿಳಿದಿಲ್ಲ.
ಘಟನೆಯ ನಂತರ, ಉದ್ಯಾನವನ್ನು ತಾತ್ಕಾಲಿಕವಾಗಿ ಪ್ರವಾಸಿಗರಿಗೆ 48 ಗಂಟೆಗಳ ಕಾಲ ಮುಚ್ಚಲಾಗಿದೆ. ಜನವರಿ 3 ರಂದು ಉದ್ಯಾನವನ್ನು ಪುನಃ ತೆರೆಯಲಾಗಿದ್ದರೂ, ಚಿರತೆ ಮರಳುವ ಸಾಧ್ಯತೆಯ ಬಗ್ಗೆ ಆತಂಕವಿದೆ.
ನಿಮ್ಮ ಕಾಮೆಂಟ್ ಬರೆಯಿರಿ