ಮೀರತ್ : ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯಲ್ಲಿ ಲಿಸಾರಿ ಗೇಟ್ ಪ್ರದೇಶದ ಸೊಹೈಲ್ ಗಾರ್ಡನ್ ನಲ್ಲಿರುವ ಮನೆಯೊಂದರಲ್ಲಿ ಒಂದೇ ಕುಟುಂಬದ ಐವರ ಶವಗಳು ಪತ್ತೆಯಾಗಿವೆ. ಈ ಸಂಬಂಧ ಇಬ್ಬರನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಯುತ್ತಿದೆ ಎಂದು ವರದಿಯಾಗಿದೆ.
ಓರ್ವ ಪುರುಷ, ಓರ್ವ ಮಹಿಳೆ ಮತ್ತು ಅವರ ಮೂವರು ಹೆಣ್ಣುಮಕ್ಕಳನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದೆ ಎಂದು ಹೇಳಲಾಗಿದೆ, ಆದಾಗ್ಯೂ, ಅವರ ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಮೃತರನ್ನು ಮೊಯಿನ್ (52), ಅವರ ಪತ್ನಿ ಅಸ್ಮಾ (45), ಮೂವರು ಹೆಣ್ಣು ಮಕ್ಕಳಾದ ಅಫ್ಸಾ (8), ಅಜೀಜಾ (4) ಮತ್ತು ಅಡಿಬಾ (1) ಎಂದು ಗುರುತಿಸಲಾಗಿದೆ. ಮನೆಗೆ ಹೊರಗಿನಿಂದ ಬೀಗ ಹಾಕಲಾಗಿದ್ದು ಛಾವಣಿ ಮೂಲಕ ಒಳಗೆ ಹೋಗಿ ನೋಡಿದಾಗ ಮೃತ ದೇಹಗಳು ಪತ್ತೆಯಾಗಿವೆ. ಮೂರು ಮಕ್ಕಳ ಶವಗಳನ್ನು ಮಂಚದ ಬಾಕ್ಸ್‌ನಲ್ಲಿ ಇಡಲಾಗಿತ್ತು. ಮೊಹಿನ್ ಕಾಲುಗಳನ್ನು ಬೆಡ್‌ಶೀಟ್‌ನಿಂದ ಕಟ್ಟಿ ಹಾಸಿಗೆಗಳನ್ನು ಇಡುವ ರ್ಯಾಕ್‌ನಲ್ಲಿ ಇಡಲಾಗಿತ್ತು ಎಂದು ಹಿರಿಯ ಪೊಲೀಸ್ ಅಧೀಕ್ಷಕ ವಿಪಿನ್ ತಾಡ ತಿಳಿಸಿದ್ದಾರೆ.
ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸಾವಿಗೆ ಕಾರಣ ಇನ್ನೂ ಪತ್ತೆಯಾಗಿಲ್ಲ ತನಿಖೆ ನಡೆಸಲಾಗುತ್ತಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ನಿಖರವಾದ ಕಾರಣ ತಿಳಿದುಬರಲಿದೆ ಎಂದು ಮೀರತ್‌ನ ಎಸ್‌ಎಸ್‌ಪಿ ತಿಳಿಸಿದ್ದಾರೆ.
ಮನೆಗೆ ಹೊರಗಿನಿಂದ ಬೀಗ ಹಾಕಿರುವುದನ್ನು ನೋಡಿದರೆ ಇದು ಹತ್ಯೆ ಎಂದು ತೋರುತ್ತದೆ, ಕುಟುಂಬಕ್ಕೆ ಪರಿಚಿತರಾದವರು ಅಥವಾ ಹಳೆಯ ವೈಷಮ್ಯ ಈ ಘಟನೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದು, ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ವೃತ್ತಿಯಲ್ಲಿ ಮೆಕ್ಯಾನಿಕ್ ಆಗಿರುವ ಮೊಯಿನ್ ಕುಟುಂಬ ಇತ್ತೀಚೆಗೆ ಇಲ್ಲಿಗೆ ಸ್ಥಳಾಂತರಗೊಂಡಿತ್ತು ಎನ್ನಲಾಗಿದೆ. ಮೊಯಿನ್ ಮತ್ತು ಅವರ ಪತ್ನಿ ಅಸ್ಮಾ ಬುಧವಾರದಿಂದ ಕಾಣೆಯಾಗಿದ್ದರು. ತನ್ನ ಸಹೋದರನ ಬಗ್ಗೆ ಆತಂಕಗೊಂಡ ಸಲೀಂ ತನ್ನ ಪತ್ನಿಯೊಂದಿಗೆ ಮೊಯಿನ್ ಮನೆಗೆ ಬಂದಿದ್ದರು. ಬಾಗಿಲು ತೆರೆಯಲು ಪ್ರಯತ್ನ ಮಾಡಿದರೂ ಸಾಧ್ಯವಾಗದ ಕಾರಣ ಅವರು ಅಕ್ಕಪಕ್ಕದವರ ಸಹಾಯದಿಂದ ಛಾವಣಿ ಮೂಲಕ ಮನೆಯೊಳಗೆ ಪ್ರವೇಶಿಸಿದರು. ಆಗ ಅವರಿಗೆ ಶವಗಳು ಪತ್ತೆಯಾಗಿವೆ. ಮೊಯಿನ್ ಮತ್ತು ಅಸ್ಮಾ ಅವರ ಶವಗಳು ನೆಲದ ಮೇಲೆ ಬಿದ್ದಿತ್ತು ಮತ್ತು ಮಕ್ಕಳ ಶವಗಳನ್ನು ಹಾಸಿಗೆಯ ಪೆಟ್ಟಿಗೆಯಲ್ಲಿ ಮುಚ್ಚಿಡಲಾಗಿತ್ತು ಎಂದು ಹೇಳಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ