ಬೆಂಗಳೂರು: ಬೆಂಗಳೂರಿನಲ್ಲಿ ನಡೆಯುತ್ತಿದ್ದ ಅದ್ಧೂರಿ ವಿವಾಹವೊಂದು ದಿಢೀರ್ ಸ್ಥಗಿತವಾದ ಘಟನೆ ವರದಿಯಾಗಿದ್ದು, ಅಚ್ಚರಿ ಎಂದರೆ ತಾಳಿಕಟ್ಟುವ ಕೆಲವೇ ಹೊತ್ತಿನ ಮೊದಲು ವಧು ಹಾಗೂ ವಧುವಿನ ತಾಯಿ ಮದುವೆಯನ್ನು ರದ್ದುಗೊಳಿಸಿದ್ದಾರೆ…!
ಮದುವೆ ಸಮಾರಂಭದಲ್ಲಿ ವರ ಕುಡಿದು ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಮದುವೆಯಲ್ಲಿ ರಂಪಾಟ ಮಾಡಿದ್ದಾನೆ. ಮದುವೆ ವಿಧಿವಿಧಾನಗಳು ನಡೆಯುತ್ತಿದ್ದಾಗ ವರನ ಕಡೆಯವರು ಅನುಚಿತವಾಗಿ ವರ್ತಿಸಿ ಆರತಿ ತಾಳಿ ಎಸೆದಿದ್ದಾರೆ ಎಂದು ಹೇಳಲಾಗಿದೆ. ಇದರ ನಂತರ ದೃಢ ನಿರ್ಧಾರ ತೆಗೆದುಕೊಂಡನಂತರ ವಧುವಿನ ತಾಯಿ ಮದುವೆಯನ್ನು ರದ್ದುಗೊಳಿಸಿದ ವೀಡಿಯೊ ಆನ್‌ಲೈನ್‌ನಲ್ಲಿ ಹರಿದಾಡುತ್ತಿದೆ.
ವರನ ಕುಟುಂಬವು ಅವಳನ್ನು ಮನವೊಲಿಸಲು ಎಷ್ಟೇ ಪ್ರಯತ್ನಿಸಿದರೂ ಮತ್ತು ಸಮಸ್ಯೆಯನ್ನು ನಂತರ ಸರಿಪಡಿಸುತ್ತೇವೆ ಎಂದು ವಿನಂತಿಸಿಕೊಂಡರೂ, ವಧು ಹಾಗೂ ವಧುವಿನ ತಾಯಿ ಮದುವೆಗೆ ಒಪ್ಪಲಿಲ್ಲ ಎಂದು ವರದಿಯಾಗಿದೆ.
ವರ ಕುಡಿದು ಬಂದು ಸ್ನೇಹಿತರ ಜೊತೆ ಸೇರಿ ಮದುವೆ ಮಂಟಪದಲ್ಲಿ ದುರ್ವರ್ತನೆ ತೋರಿದ್ದಕ್ಕೆ ಅವರು ಅಸಮಾಧಾನಗೊಂಡರು. ನಂತರ ಮಗಳ ಭವಿಷ್ಯದ ದೃಷ್ಟಿಯಿಂದ ತಾಯಿ ಮದುವೆಯನ್ನು ರದ್ದುಗೊಳಿಸುವ ನಿರ್ಧಾರ ತೆಗೆದುಕೊಂಡರು. ಆತ ಮುಂದೆಯೂ ಇದೇ ರೀತಿ ವರ್ತಿಸಿದರೆ ಏನು ಎಂದು ಮಗಳ ಭವಿಷ್ಯದ ಯೋಚಿಸಿದ ತಾಯಿ ತನ್ನ ಮಗಳ ಮದುವೆ ರದ್ದುಗೊಳಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ.
“ನಾನು ನಿಮ್ಮೆಲ್ಲರನ್ನೂ ತುಂಬಾ ನಂಬಿದ್ದೆ, ಆದರೆ ನೀವು ನಮ್ಮನ್ನು ಗೌರವಿಸಲಿಲ್ಲ. ಕೈಮುಗಿದು ಬೇಡಿಕೊಳ್ಳುತ್ತೇನೆ. ಈಗಲೇ ಪರಿಸ್ಥಿತಿ ಹೀಗಿದ್ದರೆ ಮುಂದೆ ನನ್ನ ಮಗಳ ಸ್ಥಿತಿ ಏನಾಗಬಹುದು? ಎಂದು ತಾಯಿ ಪ್ರಶ್ನಿಸಿದ್ದಾರೆ.ವಧುವಿನ ತಾಯಿ ಕೈಮುಗಿದು ವರ ಮತ್ತು ಆತನ ಕುಟುಂಬವನ್ನು ಮದುವೆ ಮಂಟಪದಿಂದ ಹೋಗುವಂತೆ ವಿನಂತಿಸುತ್ತಿರುವ ವೀಡಿಯೊ ವೈರಲ್ ಆಗಿದೆ. ಹಾಜರಾದವರಲ್ಲಿ ಒಬ್ಬರು ಮನವೊಲಿಸಲು ಪ್ರಯತ್ನಿಸುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ. ಆದಾಗ್ಯೂ, ತಾಯಿ ಮದುವೆ ನಡೆಯಬೇಕಾದ ಸ್ಥಳದಿಂದ ಅವರಿಗೆ ಹೋಗುವಂತೆ ಕೇಳಿಕೊಳ್ಳುತ್ತಲೇ ಇದ್ದರು.
ಮದುವೆ ಮನೆಗೆ ಬರುವಾಗ ಮದುಮಗ ಕಂಠಪೂರ್ತಿ ಕುಡಿದು ಬಂದಿದ್ದು ಮಾತ್ರವಲ್ಲದೇ ಆರತಿ ತಟ್ಟೆಯನ್ನು ಎಸೆದು ಅಪಮಾನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಇದು ಮದುವೆ ಹೆಣ್ಣಿನ ಕಡೆಯವರ ಅಸಮಾಧಾನಕ್ಕೆ ಕಾರಣವಾಯಿತು ಎನ್ನಲಾಗಿದೆ. ಈ ಘಟನೆಯು ಮದುವೆಯಂತಹ ಮಹತ್ವದ ಕಾರ್ಯಕ್ರಮಗಳ ವೇಳೆ ಸಭ್ಯತೆಯನ್ನು ಕಾಪಾಡಿಕೊಳ್ಳುವ ಮಹತ್ವವನ್ನು ಎತ್ತಿ ತೋರಿಸುತ್ತವೆ.
ನಿಮ್ಮ ಕಾಮೆಂಟ್ ಬರೆಯಿರಿ