ಐಷಾರಾಮಿ ಕಾರುಗಳಿದ್ದರೂ ರಕ್ತಸ್ರಾವವಾಗುತ್ತಿದ್ದ ನಟ ಸೈಫ್ ಅಲಿ ಖಾನ್‌ ರನ್ನು ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ….

ಮುಂಬೈ: ಚಾಕು ಚಾಕು ಇರಿತದಿಂದ ಆರು ಕಡೆ ಗಾಯವಾಗಿ ಭಾರೀ ರಕ್ತಸ್ರಾವವಾಗುತ್ತಿದ್ದ ನಟ ಸೈಫ್ ಅಲಿ ಖಾನ್ ಅವರನ್ನು ಅವರ ಹಿರಿಯ ಮಗ ಇಬ್ರಾಹಿಂ ಆಟೋ ರಿಕ್ಷಾದಲ್ಲಿ ಲೀಲಾವತಿ ಆಸ್ಪತ್ರೆಗೆ ಸಾಗಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ತಕ್ಷಣವೇ ಕಾರು ಲಭ್ಯವಿಲ್ಲದ ಕಾರಣ ಗಾಯಗೊಂಡು ರಕ್ತ ಸೋರಿಕೆಯಾಗುತ್ತಿದ್ದ ತಂದೆಯನ್ನು ಇಬ್ರಾಹಿಂ ಆಟೋದಲ್ಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ಹೇಳಲಾಗಿದೆ.
23 ವರ್ಷದ ಇಬ್ರಾಹಿಂ, ತನ್ನ ಗಾಯಗೊಂಡ ತಂದೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ತಕ್ಷಣ ಹೊರಡಲು ಕಾರು ಸಿದ್ಧ ಸ್ಥಿತಿಯಲ್ಲಿ ಲಭ್ಯ ಇಲ್ಲದ ಕಾರಣ ಸಮಯ ವ್ಯರ್ಥ ಮಾಡಬಾರದು ಎಂದು ಆಟೋದಲ್ಲಿ ತಮ್ಮ ಬಾಂದ್ರಾ ಮನೆಯಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿರುವ ಲೀಲಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ದಾಳಿಯ ನಂತರ ಸೆರೆಹಿಡಿಯಲಾದ ವೀಡಿಯೊವು ಸೈಫ್‌ ಅಲಿ ಖಾನ್ ಅವರ ಪತ್ನಿ ಹಾಗೂ ನಟಿ ಕರೀನಾ ಕಪೂರ್ ಆಟೋ ರಿಕ್ಷಾದ ಪಕ್ಕದಲ್ಲಿ ನಿಂತು ಮನೆ ಸಿಬ್ಬಂದಿಯೊಂದಿಗೆ ಮಾತನಾಡುವುದನ್ನು ತೋರಿಸುತ್ತದೆ.

54 ವರ್ಷದ ನಟ ಸೈಫ್‌ ಅಲಿ ಖಾನ್‌ ಬುಧವಾರ ತಡರಾತ್ರಿ ತನ್ನ ಮನೆಗೆ ನುಗ್ಗಿದ ವ್ಯಕ್ತಿಯ ಜೊತೆಗಿನ ಜಗಳದ ಸಂದರ್ಭದಲ್ಲಿ ಅಪರಿಚಿತ ದುಷ್ಕರ್ಮಿ ಚಾಕು ಇರಿದ ನಂತರ ಬೆನ್ನುಮೂಳೆಯ ಬಳಿ ಇರಿತದ ಗಾಯ ಸೇರಿದಂತೆ ಆರು ಕಡೆ ಇರಿತದ ಗಾಯಗಳಾಗಿವೆ. ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಈಗ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಅವರ ತಂಡ ತಿಳಿಸಿದೆ. ಕುಟುಂಬದ ಎಲ್ಲ ಸದಸ್ಯರು ಸುರಕ್ಷಿತವಾಗಿದ್ದಾರೆ ಎಂದು ತಂಡದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸೈಫ್ ಅಲಿಖಾನ್ ಮನೆಗೆ ದರೋಡೆ ಮಾಡಲು ವ್ಯಕ್ತಿ ಒಳಗೆ ಪ್ರವೇಶಿಸಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಾತ್ರಿ 2:30ರ ಸುಮಾರಿಗೆ ಮನೆಯಲ್ಲಿ ಗಲಾಟೆ ಕೇಳಿ ಸೈಫ್ ಅವರಿಗೆ ಎಚ್ಚರವಾಗಿದೆ.

ಎದ್ದು ನೋಡಿದಾಗ ಸೈಫ್ ಅಲಿ ಖಾನ್​ಗೆ ಕಳ್ಳ ಮನೆಯೊಳಗೆ ಕಾಣಿಸಿಕೊಂಡಿದ್ದಾನೆ. ಆತನನ್ನು ತಡೆದಾಗ ಇಬ್ಬರ ಮಧ್ಯೆ ಜಗಳವಾಗಿದೆ. ಈ ವೇಳೆ ಕಳ್ಳ ಚಾಕುವಿನಿಂದ ಇರಿದಿದ್ದಾನೆ. ಕತ್ತು, ಬೆನ್ನು ಸೇರಿ ಆರು ಕಡೆಗಳಲ್ಲಿ ಗಾಯಗಳಾಗಿವೆ. ಅದರಲ್ಲೂ ಬೆನ್ನಿನ ಭಾಗಕ್ಕೆ ಸೈಫ್​ಗೆ ತೀವ್ರವಾಗಿ ಗಾಯವಾಗಿತ್ತು. ಚಾಕುವಿನ ಚೂರು ಕೂಡ ಅವರ ಬೆನ್ನಿನಲ್ಲೇ ಉಳಿದುಕೊಂಡು ಬಿಟ್ಟಿತ್ತು. ಅದನ್ನು ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದ್ದಾರೆ.
ದಾಳಿಯ ಎರಡು ಗಂಟೆಗಳ ಮೊದಲು ಸೈಫ್‌ ಅಲಿ ಖಾನ್ ಅವರ ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳು ಯಾರೊಬ್ಬರೂ ಆವರಣಕ್ಕೆ ಪ್ರವೇಶಿಸುವುದನ್ನು ಸೆರೆಹಿಡಿಯಲಿಲ್ಲ, ಅಂದರೆ ನಟನ ಮೇಲೆ ದಾಳಿ ಮಾಡಿದ ವ್ಯಕ್ತಿ ಮೊದಲೇ ಕಟ್ಟಡಕ್ಕೆ ಪ್ರವೇಶಿಸಿದ್ದ ಎಂದು ಪೊಲೀಸರು ಊಹಿಸಿದ್ದಾರೆ. ಪರಾರಿಯಾಗಿರುವ ದಾಳಿಕೋರನನ್ನು ಗುರುತಿಸಲು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡುತ್ತಿದ್ದಾರೆ.

ಪ್ರಮುಖ ಸುದ್ದಿ :-   ಬೆಟ್ಟಿಂಗ್ ಆ್ಯಪ್‌ ಪ್ರಚಾರ : ನಟರಾದ ರಾಣಾ ದಗ್ಗುಬಾಟಿ, ವಿಜಯ ದೇವರಕೊಂಡ, ಪ್ರಕಾಶರಾಜ ಸೇರಿ 25 ಸೆಲೆಬ್ರಿಟಿಗಳ ವಿರುದ್ಧ ಪ್ರಕರಣ ದಾಖಲು

ಯಶಸ್ವಿ ಸರ್ಜರಿ
ಸೈಫ್‌ ಆಲಿ ಖಾನ್‌ ಅವರಿಗೆ 6 ಕಡೆ ಗಾಯಗಳಾಗಿದ್ದು, ಸರ್ಜರಿ ನಡೆಸಲಾಗಿದೆ. ಬೆಳಿಗ್ಗೆ 5:30ಕ್ಕೆ ಆರಂಭವಾದ ಶಸ್ತ್ರಚಿಕಿತ್ಸೆ ಹಲವು ಗಂಟೆಗಳ ಕಾಲ ನಡೆಯಿತು. ಸರ್ಜರಿ ಸರ್ಜರಿ ವೇಳೆ ಸೈಫ್​ ಅವರ ದೇಹದಲ್ಲಿ ಚಾಕುವಿನ ಚೂರನ್ನು ಹೊರ ತೆಗೆದಿದ್ದಾರೆ. ಸೈಫ್ ಅಲಿ ಖಾನ್​ಗೆ ಚಾಕು ಇರಿತ ಪ್ರಕರಣದಲ್ಲಿ ಮನೆಯಲ್ಲಿ ಕೆಲಸದವರನ್ನೂ ತನಿಖೆಗೆ ಒಳಪಡಿಸಲಾಗಿದೆ.
ಸೈಫ್ ಅವರು ‘ಸದ್ಗುರು ಶರಣ’ ಅಪಾರ್ಟ್​ಮೆಂಟ್​ನಲ್ಲಿ ವಾಸವಿದ್ದು 5 ಬೆಡ್​ರೂಂ ಮನೆ ಹೊಂದಿದ್ದಾರೆ. ಸ್ವಿಮ್ಮಿಂಗ್ ಪೂಲ್, ಥಿಯೇಟರ್​ ಮೊದಲಾದ ವ್ಯವಸ್ಥೆ ಹೊಂದಿರುವ ಈ ಐಷರಾಮಿ ಮನೆಯ ಬೆಲೆ ಸುಮಾರು 48 ಕೋಟಿ ರೂ. ಎನ್ನಲಾಗಿದೆ. ಕಳ್ಳ ಪೈಪ್ ಮೂಲಕ ಸೈಫ್ ಮನೆ ಪ್ರವೇಶಿಸಿದ್ದಾನೆ ಎನ್ನಲಾಗಿದೆ..
ನಟನ ಮೇಲಿನ ದಾಳಿಯು ಚಿತ್ರರಂಗದಲ್ಲಿ ಭೀತಿಗೆ ಕಾರಣವಾಗಿದೆ. ಎನ್‌ಡಿಎ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ತೀವ್ರ ವಾಗ್ದಾಳಿ ನಡೆಸಿದ್ದು, ಸೆಲೆಬ್ರಿಟಿಗಳ ಮೇಲೆ ಈ ರೀತಿ ದಾಳಿ ನಡೆಸಿದರೆ ಸಾಮಾನ್ಯ ಜನರು ಎಷ್ಟು ಸುರಕ್ಷಿತ ಎಂದು ಪ್ರಶ್ನಿಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement