ಮುಂಬೈ: ನಟ ಸೈಫ್ ಅಲಿ ಖಾನ್ ಅವರ ಮೇಲೆ ಚಾಕು ದಾಳಿ ನಡೆಯುವ ಎರಡು ಗಂಟೆಗಳ ಮೊದಲು ಸೈಫ್ ಅಲಿಖಾನ್ ಅವರ ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಯಾರೊಬ್ಬರೂ ಆವರಣಕ್ಕೆ ಪ್ರವೇಶಿಸುವುದು ಕಂಡುಬಂದಿಲ್ಲ, ಅಂದರೆ ನಟನ ಮೇಲೆ ದಾಳಿ ಮಾಡಿದವರು ಮೊದಲೇ ಕಟ್ಟಡಕ್ಕೆ ಪ್ರವೇಶಿಸಿ ಕಾಯುತ್ತಿದ್ದಿರಬಹುದೇನೋ ಎಂದು ಪೊಲೀಸ್ ಮೂಲಗಳು ಉಲ್ಲೇಖಿಸಿದ ವರದಿಯೊಂದು ಹೇಳಿದೆ.
ವರದಿ ಪ್ರಕಾರ, ಹಲ್ಲೆಕೋರನನ್ನು ಗುರುತಿಸಲು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡುತ್ತಿದ್ದಾರೆ, ಮನೆಯೊಳಗೆ ನುಗ್ಗಿದ್ದ ಹಲ್ಲೆಕೋರ ಗಲಾಟೆಯ ಸಮಯದಲ್ಲಿ 54 ವರ್ಷದ ಸೈಫ್ ಅಲಿ ಖಾನ್ ಅವರಿಗೆ ಆರು ಬಾರಿ ಇರಿದು ಪರಾರಿಯಾಗಿದ್ದಾನೆ. ಅತ ಕಳ್ಳತನಕ್ಕೆ ನುಗ್ಗಿರಬಹುದು ಎಂದು ಅಂದಾಜಿಸಲಾಗಿದೆ.
ಗುರುವಾರ ಬೆಳಗಿನ ಜಾವ 2:30ರ ಸುಮಾರಿಗೆ ಈ ದಾಳಿ ನಡೆದಿದೆ ಎಂದು ವರದಿಯಾಗಿದ್ದು, ಮಧ್ಯರಾತ್ರಿಯ ನಂತರ ಯಾರೊಬ್ಬರೂ ಒಳಗೆ ಪ್ರವೇಶಿಸಿರುವುದನ್ನು ಸಿಸಿಟಿವಿ ದೃಶ್ಯಾವಳಿಗಳು ತೋರಿಸಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ದಾಳಿಕೋರ ಮೊದಲೇ ನಟನ ಮನೆಗೆ ನುಗ್ಗಿ ಒಳಗೆ ಅಡಗಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಲವು ಸೆಲೆಬ್ರಿಟಿಗಳು ವಾಸವಾಗಿರುವ ಬಾಂದ್ರಾದಲ್ಲಿ ನಡೆದಿರುವ ಹೈ-ಪ್ರೊಫೈಲ್ ದಾಳಿಯು ಮುಂಬೈ ಪೊಲೀಸರ ನಿದ್ದೆಗೆಡಿಸಿದೆ. “ನಟ ಸೈಫ್ ಅಲಿ ಖಾನ್ ಅವರ ನಿವಾಸಕ್ಕೆ ಅಪರಿಚಿತ ವ್ಯಕ್ತಿಯೊಬ್ಬ ನುಗ್ಗಿದ್ದಾನೆ. ನಂತರ ಆತನನ್ನು ತಡೆಯಲು ಮುಂದಾದಾಗ ನಟ ಸೈಫ್ ಅಲಿ ಖಾನ್ ಮತ್ತು ಒಳನುಗ್ಗಿದ ವ್ಯಕ್ತಿ ಮಧ್ಯೆ ಜಗಳವಾಗಿದೆ. ಈ ವೇಳೆ ದಾಳಿಕೋರ ನಟನಿಗೆ ಚಾಕುವಿನಿಂದ ಇರಿದಿದ್ದಾನೆ. ಸೈಫ್ ಅಲಿ ಖಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತನಿಖೆ ನಡೆಯುತ್ತಿದೆ” ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸೈಫ್ ಅಲಿ ಖಾನ್ ಅವರಿಗೆ ಆರು ಇರಿತದ ಗಾಯಗಳಾಗಿವೆ, ಅವುಗಳಲ್ಲಿ ಎರಡು ಆಳವಾದ ಮತ್ತು ಅವುಗಳಲ್ಲಿ ಒಂದು ಬೆನ್ನುಮೂಳೆಯ ಬಳಿ ಆಗಿದೆ ಎಂದು ಹೇಳಲಾಗಿದ್ದು, ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ.
ಮಾಧ್ಯಮದವರು ಮತ್ತು ಅಭಿಮಾನಿಗಳು ತಾಳ್ಮೆಯಿಂದ ಇರುವಂತೆ ನಟರ ತಂಡವು ಹೇಳಿಕೆಯಲ್ಲಿ ವಿನಂತಿಸಿದೆ. “ಇದು ಪೊಲೀಸ್ ವಿಷಯವಾಗಿದೆ. ನಾವು ಪರಿಸ್ಥಿತಿಯ ಬಗ್ಗೆ ನಿಮಗೆ ತಿಳಿಸುತ್ತೇವೆ ಎಂದು ಹೇಳಿಕೆ ತಿಳಿಸಿದೆ.
ಮುಂಬೈನ ಕಾನೂನು ಮತ್ತು ಸುವ್ಯವಸ್ಥೆ ಕುರಿತು ರಾಜ್ಯ ಸರ್ಕಾರದ ಮೇಲೆ ಶಿವಸೇನಾ (ಯುಬಿಟಿ) ಸಂಸದೆ ಪ್ರಿಯಾಂಕಾ ಚತುರ್ವೇದಿ ವಾಗ್ದಾಳಿ ನಡೆಸಿದ್ದಾರೆ. ನಟ ಸೈಫ್ ಅಲಿ ಖಾನ್ ಮೇಲಿನ ದಾಳಿಯು ಮುಂಬೈ ಪೊಲೀಸರ ಮೇಲೆ ಮತ್ತೊಮ್ಮೆ ಪ್ರಶ್ನೆಗಳು ಏಳುವಂತೆ ಮಾಡಿದೆ ಎಂದು ಹೇಳಿದ್ದಾರೆ.
“ಬಾಬಾ ಸಿದ್ದಿಕ್ ಅವರ ಆಘಾತಕಾರಿ ಹತ್ಯೆಯ ನಂತರ ಅವರ ಕುಟುಂಬವು ಇನ್ನೂ ನ್ಯಾಯಕ್ಕಾಗಿ ಕಾಯುತ್ತಿದೆ. ಸಲ್ಮಾನ್ ಖಾನ್ ಬುಲೆಟ್ ಪ್ರೂಫ್ ಮನೆಯಲ್ಲಿ ವಾಸಿಸುಂತೆ ಆಗಿದೆ. ಈಗ ಬಾಂದ್ರಾದಲ್ಲಿ ಸೈಫ್ ಅಲಿಖಾನ್ ಮೇಲೆ ಚಾಕುವಿನಿಂದ ದಾಳಿ ನಡೆದಿದೆ. ಅತಿ ಹೆಚ್ಚು ಸೆಲೆಬ್ರಿಟಿಗಳನ್ನು ಹೊಂದಿರುವ ಪ್ರದೇಶ, ಇಲ್ಲಿ ಸಾಕಷ್ಟು ಭದ್ರತೆ ಇರಬೇಕು. ಸೆಲೆಬ್ರಿಟಿಗಳು ಸುರಕ್ಷಿತವಾಗಿಲ್ಲದಿದ್ದರೆ, ಇನ್ನು ಜನಸಾಮಾನ್ಯರ ಪರಿಸ್ಥಿತಿ ಏನು ಎಂದು ಅವರು ಪ್ರಶ್ನಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ