ಪತ್ರಿಕಾಗೋಷ್ಠಿ ನಡೆಸುತ್ತಿದ್ದಾಗಲೇ ಕಾಂಗ್ರೆಸ್‌ ಸಂಸದರನ್ನು ಬಂಧಿಸಿದ ಪೊಲೀಸರು…

ಲಕ್ನೋ: ಅತ್ಯಾಚಾರ ಪ್ರಕರಣದಲ್ಲಿ ಕಾಂಗ್ರೆಸ್ ಸಂಸದ ರಾಕೇಶ್ ರಾಥೋಡ್ ಅವರನ್ನು ಗುರುವಾರ ಬಂಧಿಸಲಾಗಿದೆ. ಉತ್ತರ ಪ್ರದೇಶದ ಸೀತಾಪುರದ ಲೋಕಸಭಾ ಸಂಸದ ರಾಥೋಡ್ ಅವರನ್ನು ಅವರ ಮನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದಾಗಲೇ ಬಂಧಿಸಲಾಯಿತು.
ಸಂಸದ ರಾಥೋಡ್ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊತ್ತಿದ್ದು, ಅವರ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿತ್ತು. ಕೊತ್ವಾಲಿ ನಗರ ಪೊಲೀಸರು ರಾಥೋಡ್ ಅವರನ್ನು ಅವರ ನಿವಾಸದಲ್ಲಿ ಬಂಧಿಸಿದ್ದಾರೆ. ಆ ವೇಳೆ ಅವರು ಪ್ರಕರಣದ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಇದಕ್ಕೂ ಮುನ್ನ ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠವು ಅತ್ಯಾಚಾರ ಆರೋಪದ ಆರೋಪಿಯಾಗಿರುವ ಕಾಂಗ್ರೆಸ್ ಸಂಸದರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬುಧವಾರ ತಿರಸ್ಕರಿಸಿತ್ತು.

ಸೀತಾಪುರದಿಂದ ರಾಥೋಡ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಜೇಶ ಸಿಂಗ್ ಚೌಹಾಣ ಅವರಿದ್ದ ಏಕಸದಸ್ಯ ಪೀಠ ಅರ್ಜಿಯನ್ನು ತಿರಸ್ಕರಿಸಿ ಆದೇಶ ನೀಡಿತ್ತು. ದೂರುದಾರರು 4 ವರ್ಷಗಳ ನಂತರ ಈ ಪ್ರಕರಣ ದಾಖಲಿಸಿದ್ದು, ತಮ್ಮ ಕಕ್ಷಿದಾರರನ್ನು ಈ ಪ್ರಕರಣದಲ್ಲಿ ತಪ್ಪಾಗಿ ಸಿಲುಕಿಸಲಾಗಿದೆ ಎಂದು ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ದೂರುದಾರರ ಪರ ವಾದ ಮಂಡಿಸಿದ ವಕೀಲರು, ಕಾಂಗ್ರೆಸ್ ಸಂಸದ ರಾಕೇಶ ರಾಥೋಡ್ ಅವರು ಪ್ರಬಲ ನಾಯಕರಾಗಿದ್ದು, ಭಯದಿಂದ ತಮ್ಮ ಕಕ್ಷಿದಾರರು ತಡವಾಗಿ ಪ್ರಕರಣ ದಾಖಲಿಸಿದ್ದಾರೆ ಎಂದು ವಾದಿಸಿದರು.

ಪ್ರಮುಖ ಸುದ್ದಿ :-   ವೀಡಿಯೊ | ಸರ್ಕಾರಿ ಆಸ್ಪತ್ರೆಯಲ್ಲಿ ವೃದ್ಧ ವ್ಯಕ್ತಿ ಮೇಲೆ ಹಲ್ಲೆ ನಡೆಸಿ, ದರದರನೆ ಎಳೆದೊಯ್ದ ವೈದ್ಯ...!

ಶರಣಾಗತಿಗೆ ಕಾಲಾವಕಾಶ ಕೋರಲಾಗಿತ್ತು
ರಾಥೋಡ್ ಅವರ ವಕೀಲರು ಶರಣಾಗತಿಗಾಗಿ ನ್ಯಾಯಾಲಯದಿಂದ ಸಮಯ ಕೋರಿದರು, ಅದರ ಮೇಲೆ ನ್ಯಾಯಾಲಯವು ಸಂಸದರಿಗೆ ಎರಡು ವಾರಗಳಲ್ಲಿ ಸೆಷನ್ಸ್ ನ್ಯಾಯಾಲಯದಲ್ಲಿ ಶರಣಾಗುವಂತೆ ಸೂಚಿಸಿತು. ರಾಥೋಡ್ ಅವರು ಈ ಹಿಂದೆ ಸೀತಾಪುರದ ಸೆಷನ್ಸ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದರು, ಅದನ್ನು ತಿರಸ್ಕರಿಸಲಾಗಿತ್ತು. ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ಪೊಲೀಸರು ಜನವರಿ 17 ರಂದು ರಾಥೋಡ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ಮದುವೆಯ ನೆಪದಲ್ಲಿ ರಾಥೋಡ್ ಕಳೆದ ನಾಲ್ಕು ವರ್ಷಗಳಿಂದ ತನ್ನನ್ನು ಲೈಂಗಿಕವಾಗಿ ಶೋಷಿಸಿದ್ದಾರೆ ಎಂದು ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾಳೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement