ಮುಂಬೈ : 67ನೇ ‘ಮಹಾರಾಷ್ಟ್ರ ಕೇಸರಿ’ ಕುಸ್ತಿ ಸ್ಪರ್ಧೆಯ ಅಂತಿಮ ಪಂದ್ಯವು ಆಘಾತಕಾರಿ ಘಟನೆಗೆ ಸಾಕ್ಷಿಯಾಗಿದೆ. ಸೋತ ಕುಸ್ತಿಪಟು ರೆಫರಿಯ ಎದೆಯ ಮೇಲೆ ಒದ್ದ ಘಟನೆ ನಡೆದಿದೆ. ಮತ್ತು ಇನ್ನೊಬ್ಬ ಕುಸ್ತಿಪಟು ಅಂಕಗಳನ್ನು ಕಳೆದುಕೊಂಡಿದ್ದಕ್ಕಾಗಿ ರೆಫರಿಯನ್ನು ನಿಂದಿಸಿದ ವಿದ್ಯಮಾನವೂ ನಡೆದಿದೆ.
ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ ಪವಾರ್ ಮತ್ತು ಕೇಂದ್ರ ಸಚಿವ ಮುರಳೀಧರ ಮೊಹೋಲ್ ಅವರ ಸಮ್ಮುಖದಲ್ಲಿ ಭಾನುವಾರ ಅಹಲ್ಯಾನಗರದಲ್ಲಿ ಪಂದ್ಯಾವಳಿ ನಡೆಯಿತು. ಮ್ಯಾಟ್ ವಿಭಾಗದ ಸೆಮಿಫೈನಲ್‌ನಲ್ಲಿ ಪುಣೆ ಮೂಲದ ಕುಸ್ತಿಪಟು ಪೃಥ್ವಿರಾಜ ಮೊಹೋಲ್ ಅವರನ್ನು ವಿಜೇತ ಎಂದು ಘೋಷಿಸಿದ ನಂತರ, ಅವರ ಎದುರಾಳಿ ಶಿವರಾಜ ರಕ್ಷೆ ತೀರ್ಪನ ಬಗ್ಗೆ ಆಕ್ಷೇಪಿಸಿ ತೀರ್ಪುಗಾರರ ಎದೆಗೆ ಒದ್ದು ನಿಂದಿಸಿದ್ದಾನೆ.
ಎರಡು ಬಾರಿ ಮಹಾರಾಷ್ಟ್ರ ಕೇಸರಿ ವಿಜೇತರಾದ ರಕ್ಷೆ, ಮೊಹೋಲ್‌ನ ಬಾಡಿ ಸ್ಲ್ಯಾಮ್ ಕೌಶಲ್ಯದ ವೇಳೆ ತಮ್ಮ ಭುಜಗಳು ನೆಲವನ್ನು ಮುಟ್ಟಲಿಲ್ಲ ಎಂದು ವಾದಿಸಿದ್ದಾರೆ. “ಇದರ ಹೊರತಾಗಿಯೂ ನಾನು ಸೋತಿದ್ದೇನೆ ಎಂದು ರೆಫರಿ ತೀರ್ಪು ನೀಡಿದರು. ನಾನು ನನ್ನ ಪ್ರಕರಣವನ್ನು ವಾದಿಸುವಾಗ ನನ್ನನ್ನು ನಿಂದಿಸಲಾಯಿತು ಮತ್ತು ಅದಕ್ಕಾಗಿಯೇ (ಒದೆತ) ಹೀಗೆ ಮಾಡಿದ್ದೇನೆ ಎಂದು ರಕ್ಷೆ ಹೇಳಿಕೊಂಡಿದ್ದಾರೆ.
ಮೂರು ವರ್ಷಗಳ ಕಾಲ ಕುಸ್ತಿ ಸಂಸ್ಥೆಯಿಂದ ಅಮಾನತುಗೊಂಡಿರುವ ರಕ್ಷೆ, ತೀರ್ಪುಗಾರರ ವಿರುದ್ಧವೂ ಇದೇ ರೀತಿಯ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ತೀರ್ಪಿನ ಬಗ್ಗೆ ನ್ಯಾಯಾಲಯಕ್ಕೆ ಹೋಗುವುದಾಗಿ ತಿಳಿಸಿದ್ದಾರೆ.
ಮಹಾರಾಷ್ಟ್ರ ಕುಸ್ತಿ ಸಂಸ್ಥೆಯ ಕಾರ್ಯಾಧ್ಯಕ್ಷ ಸಂದೀಪ ಭೋಂಡ್ವೆ ಮಾತನಾಡಿ, ‘ಆನ್ ಬೌಟ್’ ರೆಫರಿ ರಕ್ಷೆ ಬಿದ್ದಿರುವುದನ್ನು ದೃಢಪಡಿಸಿದ್ದಾರೆ ಮತ್ತು ಸೈಡ್ ರೆಫರಿಗಳು ಮತ್ತು ಮ್ಯಾಟ್ ಚೇರ್‌ಮ್ಯಾನ್ ಈ ನಿರ್ಧಾರವನ್ನು ಬೆಂಬಲಿಸಿದ್ದಾರೆ. “ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್‌ನ ಆರ್ಟಿಕಲ್ 31 ರ ಅಡಿಯಲ್ಲಿ ರಕ್ಷೆಯ ಸವಾಲನ್ನು ಸ್ವೀಕರಿಸಲಾಗಿಲ್ಲ. ಈ ಘಟನೆಯ ನಂತರ, ರೆಫರಿಗಳು ಭಯಭೀತರಾಗಿದ್ದಾರೆ ಮತ್ತು ಭವಿಷ್ಯದಲ್ಲಿ ಅಂತಹ ಪಂದ್ಯಾವಳಿಗಳಲ್ಲಿ ತೀರ್ಪು ನೀಡಲು ಅವರು ಮುಂದೆ ಬರುವುದಿಲ್ಲ” ಎಂದು ಭೋಂಡ್ವೆ ಹೇಳಿದರು.
ಮೊಹೋಲ್ ಮತ್ತು ಮಹೇಂದ್ರ ಗಾಯಕ್ವಾಡ ನಡುವಿನ ಅಂತಿಮ ಪಂದ್ಯದಲ್ಲಿ, ಗಾಯಕ್ವಾಡ್ 16 ಸೆಕೆಂಡ್‌ಗಳು ಉಳಿದಿರುವಂತೆಯೇ ಪಂದ್ಯದಿಂದ ಹೊರನಡೆದರು. ನಂತರ ತೀರ್ಪುಗಾರರನ್ನು ನಿಂದಿಸಿದರು, ಇದಕ್ಕಾಗಿ ಅವರನ್ನು ನಿಯಂತ್ರಣ ಪ್ರಾಧಿಕಾರವು ಮೂರು ವರ್ಷಗಳವರೆಗೆ ಅಮಾನತುಗೊಳಿಸಿತು.
“16 ಸೆಕೆಂಡುಗಳು ಉಳಿದಿರುವಾಗ ಗಾಯಕ್‌ವಾಡ್ ನಿರ್ಗಮಿಸಿದರು ಏಕೆಂದರೆ ಈ ಕಡಿಮೆ ಸಮಯದಲ್ಲಿ ತನ್ನ ಎದುರಾಳಿಯೊಂದಿಗೆ ಅಂಕಗಳ ಅಂತರವನ್ನು ತಗ್ಗಿಸಲು ಸಾಧ್ಯವಾಗುವುದಿಲ್ಲ ಎಂದು ಅವರಿಗೆ ತಿಳಿದಿತ್ತು. ರಕ್ಷೆ ಮತ್ತು ಗಾಯಕ್ವಾಡ ಇಬ್ಬರನ್ನೂ ಮೂರು ವರ್ಷಗಳ ಕಾಲ ಅಮಾನತುಗೊಳಿಸಲಾಗಿದೆ. ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸದಂತೆ ಅವರನ್ನು ನಿಷೇಧಿಸಲಾಗಿದೆ” ಎಂದು ಭೋಂಡ್ವೆ ಹೇಳಿದ್ದಾರೆ.
ಮೊಹೋಲ್ ಅವರು ಅಸ್ಕರ್ ‘ಮಹಾರಾಷ್ಟ್ರ ಕೇಸರಿ’ ಪ್ರಶಸ್ತಿಯನ್ನು ಗೆದ್ದರು, ಇದು ತಮ್ಮ ಕುಸ್ತಿ ವೃತ್ತಿಜೀವನದ ಅತ್ಯಂತ ದೊಡ್ಡ ಕ್ಷಣವಾಗಿದೆ ಎಂದು ಹೇಳಿದರು.
“ರೆಫರಿಗಳ ನಿರ್ಧಾರಗಳ ಬಗ್ಗೆ ನಾನು ಏನನ್ನೂ ಹೇಳಲಾರೆ. ತೀರ್ಪುಗಾರರ ತೀರ್ಮಾನವೇ ಅಂತಿಮ. ನಾನು ಕುಸ್ತಿಪಟು ಮತ್ತು ನಾನು ನನ್ನ ಕೆಲಸವನ್ನು ಮಾಡಿದ್ದೇನೆ” ಎಂದು ಮೊಹೋಲ್ ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ