ವೀಡಿಯೊಗಳು…| ಅಕ್ರಮ ವಲಸಿಗರ ಕೈ-ಕಾಲಿಗೆ ಸರಪಳಿ ಹಾಕಿ ದೇಶದಿಂದ ಹೊರಹಾಕುತ್ತಿರುವ ಅಮೆರಿಕ ; ವೀಡಿಯೊ ಹಂಚಿಕೊಂಡ ಶ್ವೇತಭವನ…!

ನವದೆಹಲಿ: ಡೊನಾಲ್ಡ್‌ ಟ್ರಂಪ್‌ (Donald Trump) ಸರ್ಕಾರವು ಅಕ್ರಮ ವಲಸಿಗರ (Illegal Migrants) ಕೈ ಮತ್ತು ಕಾಲುಗಳಿಗೆ ಸರಪಳಿ ತೊಡಿಸಿ ಅಮೆರಿಕದಿಂದ (USA) ಹೊರದಬ್ಬುತ್ತಿರುವ ವೀಡಿಯೊವನ್ನು ಬಿಡುಗಡೆ ಮಾಡಿದೆ.
ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸ ಶ್ವೇತಭವನದ (White House) ಖಾತೆಯಿಂದ ಈ ವಿವಾದಾತ್ಮಕ ವೀಡಿಯೊವನ್ನು ಪೋಸ್ಟ್ ಮಾಡಲಾಗಿದ್ದು, ಅಕ್ರಮ ವಲಸಿಗರನ್ನು ಸಂಕೋಲೆಯಿಂದ ಬಂಧಿಸಿ ಸಿಯಾಟಲ್‌ನಿಂದ ಗಡೀಪಾರು ಮಾಡುವ ವಿಮಾನಕ್ಕೆ ಕರೆದೊಯ್ಯುವ ವೀಡಿಯೊ ಹಂಚಿಕೊಳ್ಳಲಾಗಿದೆ.
ಎಕ್ಸ್‌ನಲ್ಲಿನ ಪೋಸ್ಟ್‌ ಮಾಡಲಾದ 41-ಸೆಕೆಂಡ್‌ಗಳ ಕ್ಲಿಪ್ ಗೆ “ASMR: ಇಲ್ಲೀಗಲ್‌ ಏಲಿಯನ್ ಡಿಪೋರ್ಟೇಶನ್ ಫ್ಲೈಟ್” ಎಂದು ಬರೆಯಾಗಿದೆ. ಕೈ-ಕಾಲುಗಳಿಗೆ ಹಾಕಲಾದ ಸರಪಳಿಗಳು ಮತ್ತು ಕಫ್‌ಗಳ ಕ್ಲೋಸ್-ಅಪ್‌ಗಳನ್ನು ವೀಡಿಯೊದಲ್ಲಿ ನೋಡಬಹುದು. ಒಬ್ಬ ವ್ಯಕ್ತಿಯ ಕೈಕಾಲುಗಳಿಗೆ ಕೋಳಗಳನ್ನು ಒಟ್ಟಿಗೆ ಜೋಡಿಸಿರುವುದನ್ನು ಕ್ಲೋಸ್-ಅಪ್ ನಲ್ಲಿ ತೋರಿಸುತ್ತದೆ, ಆತ ವಿಮಾನವೊಂದಕ್ಕೆ ಮೆಟ್ಟಿಲುಗಳ ಮೂಲಕ ನಡೆದುಕೊಂಡು ಹೋಗುತ್ತಿರುವಾಗ ಆ ವ್ಯಕ್ತಿಯ ಕಾಲುಗಳನ್ನು ಸರಪಳಿಯಲ್ಲಿ ಬಂಧಿಸಿರುವುದು ಕಂಡುಬರುತ್ತದೆ. ಆದರೆ, ವೀಡಿಯೋದಲ್ಲಿ ಯಾವುದೇ ವ್ಯಕ್ತಿಯ ಮುಖ ಕಾಣಿಸಿಲ್ಲ.

ಶ್ವೇತಭವನಕ್ಕಿಂತ ಮೊದಲು, ಅಮೆರಿಕದ ವಲಸೆ ಮತ್ತು ಕಸ್ಟಮ್ಸ್ ಎನ್‌ಫೋರ್ಸ್‌ಮೆಂಟ್ ಏಜೆನ್ಸಿಯ ಸಿಯಾಟಲ್ ಕಚೇರಿಯಿಂದ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ, ಅದು “ತೆರವು ಮಾಡುವ ವಿಮಾನʼ (Removal Flight)” ಎಂದು ಶೀರ್ಷಿಕೆ ನೀಡಿದೆ ಮತ್ತು “ದಾಖಲೆಯಿಲ್ಲದ ವಿದೇಶಿಯರ ಗುಂಪನ್ನು ಸಿಯಾಟಲ್‌ನಿಂದ ತಮ್ಮ ದೇಶಗಳಿಗೆ ಹಿಂದಿರುಗುವ ಪ್ರಕ್ರಿಯೆಯ ಭಾಗವಾಗಿ ವಿಮಾನ ಹಾರಾಟ ಮಾಡಲಾಗುತ್ತಿದೆ ಎಂದು ಹೇಳಿದೆ.
ಆದಾಗ್ಯೂ, ಶ್ವೇತಭವನವು ಹಂಚಿಕೊಂಡ ವೀಡಿಯೊವು ವಿಭಿನ್ನ ಕ್ಲಿಪ್‌ ಹೊಂದಿದ್ದು, ಸಂಕೋಲೆಯಲ್ಲಿರುವ ವಲಸಿಗನ ಹಿಂದೆ ಅಧಿಕಾರಿಯೊಬ್ಬರು ನಿಂತಿರುವುದನ್ನು ತೋರಿಸುತ್ತದೆ.
ಪ್ರಯಾಣದ ಉದ್ದಕ್ಕೂ ತಮ್ಮ ಕೈ ಮತ್ತು ಕಾಲುಗಳಿಗೆ ಕೋಳ ತೊಡಿಸಲಾಗಿದೆ ಮತ್ತು ಫೆಬ್ರವರಿ 5 ರಂದು ಅಮೃತಸರದಲ್ಲಿ ಬಂದಿಳಿದ ನಂತರವೇ ಅವುಗಳನ್ನು ಬಿಚ್ಚಲಾಗಿದೆ ಎಂದು ಅಮೆರಿಕದಿಂದ ಗಡೀಪಾರಾಗಿ ಬಂದ ಕೆಲವು ಭಾರತೀಯರು ಆರೋಪಿಸಿದ ನಂತರ ಭಾರತದಲ್ಲಿ ಈ ಬಗ್ಗೆ ಕೋಲಾಹಲ ಉಂಟಾಗಿರುವುದರ ನಡುವೆಯೇ ಈ ವೀಡಿಯೊ ಬಂದಿದೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಎರಡನೇ ಅವಧಿಯಲ್ಲಿ ಪ್ರಮುಖವಾಗಿ ದಾಖಲೆರಹಿತ ವಲಸಿಗರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಅಮೆರಿಕ ಚುನಾವಣೆಯಲ್ಲಿ ಟ್ರಂಪ್‌ ದೇಶದಲ್ಲಿ ಅಪರಾಧ ಚಟುವಟಿಕೆ ಹೆಚ್ಚಾಗಲು ಅಕ್ರಮ ವಲಸಿಗರು ಕಾರಣ, ಅಕ್ರಮ ವಲಸಿಗರನ್ನು ದೇಶದಿಂದ ಹೊರದಬ್ಬುತ್ತೇವೆ ಎಂದು ವಾಗ್ದಾನ ಮಾಡಿದ್ದರು. ಜನವರಿ 20 ರಂದು ಅವರು ಅಧಿಕಾರ ವಹಿಸಿಕೊಂಡ ನಂತರ, ಫೆಡರಲ್ ಏಜೆನ್ಸಿಗಳು ದೇಶಾದ್ಯಂತ ದೊಡ್ಡ ಪ್ರಮಾಣದ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದು, ಅಕ್ರಮ ವಲಸಿಗರ ಬಂಧನಗಳು ಮತ್ತು ಗಡೀಪಾರುಗಳನ್ನು ತೀವ್ರಗೊಳಿಸಿವೆ.
ಇಲ್ಲಿಯವರೆಗೆ, ಭಾರತೀಯ ಗಡೀಪಾರು ಮಾಡಿದವರನ್ನು ಹೊತ್ತೊಯ್ಯುವ ಮೂರು ವಿಮಾನಗಳು ಅಮೃತಸರದಲ್ಲಿ ಬಂದಿಳಿದಿವೆ, ಫೆಬ್ರವರಿ 5 ರಂದು 104 ಜನರು, ಫೆಬ್ರವರಿ 15 ರಂದು 116 ಜನರನ್ನು ಮತ್ತು ಫೆಬ್ರವರಿ 16 ರಂದು 114 ಜನರನ್ನು ಭಾರತಕ್ಕೆ ವಾಪಸ್ ಕಳುಹಿಸಲಾಗಿದೆ.

ಪ್ರಮುಖ ಸುದ್ದಿ :-   ಹೈದರಾಬಾದ್‌ ಕ್ರಿಕೆಟ್‌ ಸ್ಟೇಡಿಯಂ ಸ್ಟ್ಯಾಂಡ್‌ ನಿಂದ ಮೊಹಮ್ಮದ್ ಅಜರುದ್ದೀನ್ ಹೆಸರು ತೆಗೆದುಹಾಕಲು ಆದೇಶ...

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement