ಲಕ್ನೋ: ಮಹಿಳೆಯೊಬ್ಬರು ತನ್ನ ಸಾಕು ಬೆಕ್ಕು ಸತ್ತ ನಂತರ ಅದರ ಶವದ ಜೊತೆ ಎರಡು ದಿನ ಕಾಲ ಕಳೆದ ಬಳಿಕ ನೇಣಿಗೆ ಶರಣಾದ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ನಡೆದಿದೆ.
35 ವರ್ಷದ ಮಹಿಳೆ ಪೂಜಾ ಎಂಬವರು ತನ್ನ ಪ್ರೀತಿಯ ಮುದ್ದಿನ ಬೆಕ್ಕಿನ ಸಾವಿನಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಸನ್‌ಪುರ ಪಟ್ಟಣದ ರಾಹ್ರಾ ರಸ್ತೆಯಲ್ಲಿರುವ ಶಿವನ ದೇವಸ್ಥಾನದ ಬಳಿ ಅವರು ವಾಸವಿದ್ದರು. ತನ್ನ ಮುದ್ದಿನ ಬೆಕ್ಕು ಸತ್ತ ನಂತರ ಅದರ ಮೃತ ದೇಹದ ಜೊತೆ ಎರಡು ದಿನ ಕಳೆದಿದ್ದಾರೆ. ನಂತರ ಶನಿವಾರ ಸಂಜೆ ತನ್ನ ಮನೆಯ ಮೂರನೇ ಮಹಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕುಟುಂಬ ಸದಸ್ಯರ ಪ್ರಕಾರ, ನಾಲ್ವರು ಸಹೋದರ-ಸಹೋದರಿಯರಲ್ಲಿ ಹಿರಿಯವಳು ಪೂಜಾ. ಎಂಟು ವರ್ಷಗಳ ಹಿಂದೆ ಪೂಜಾ ಅವರು ದೆಹಲಿಯ ವ್ಯಕ್ತಿ ಜೊತೆ ವಿವಾಹವಾಗಿದ್ದರು. ಆದಾಗ್ಯೂ, ಮದುವೆ ಎರಡು ವರ್ಷಗಳ ನಂತರ ವಿಚ್ಛೇದನದಲ್ಲಿ ಕೊನೆಗೊಂಡಿತು ಮತ್ತು ಪೂಜಾ ತನ್ನ ತಾಯಿ ಗಜ್ರಾ ದೇವಿ ಜೊತೆ ತನ್ನ ತವರು ಮನೆಯಲ್ಲಿ ವಾಸಿಸುತ್ತಿದ್ದರು. ತನ್ನ ಒಂಟಿತನದ ನೋವನ್ನು ದೂರ ಮಾಡಲು, ಪೂಜಾ ಸಾಕು ಬೆಕ್ಕೊಂದನ್ನು ಸಾಕಿದ್ದರು. ಆದರೆ ಅದು ಗುರುವಾರ ಮೃತಪಟ್ಟಿತ್ತು. ಪೂಜಾ ತಾಯಿ ಬೆಕ್ಕಿನ ಶವವನ್ನು ಹೂಳಲು ಸೂಚಿಸಿದಾಗ, ಪೂಜಾ ನಿರಾಕರಿಸಿದ್ದಾರೆ.
ಅದಕ್ಕೆ “ಪುನಃ ಜೀವ ಬರುತ್ತದೆ ಎಂದು ಹೇಳಿ ಶವವನ್ನು ಹಾಗೆಯೇ ಇಟ್ಟುಕೊಂಡರು. ಪೂಜಾ ಎರಡು ದಿನಗಳ ಕಾಲ ಬೆಕ್ಕಿನ ಶವದ ಜೊತೆಯೇ ಇದ್ದರು. ಆಕೆಯ ತಾಯಿ ಮತ್ತು ಇತರ ಕುಟುಂಬ ಸದಸ್ಯರು ಬೆಕ್ಕಿನ ಶವ ಹೂಳಲು ಮನವೊಲಿಸಲು ಪ್ರಯತ್ನಿಸಿದರು, ಆದರೆ ಪೂಜಾ ಮಾತ್ರ ತನ್ನ ನಿರ್ಧಾರದಲ್ಲಿ ದೃಢವಾಗಿದ್ದರು. ಬೆಕ್ಕು ಸಾವಿಗೀಡಾಗಿ ಎರಡು ದಿನ ಕಳೆದ ನಂತರ ಬೆಕ್ಕು ಪುನಃ ಎಚ್ಚರಗೊಳ್ಳುವುದಿಲ್ಲ ಎಂದು ಅರಿವಾದ ನಂತರ ತಾನೂ ಸಾಯುವ ನಿರ್ಧಾರ ಮಾಡಿದರು.
ಆತ್ಮಹತ್ಯೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿದರು. ಅಧಿಕಾರಿಗಳು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ