ದಕ್ಷಿಣ ಕ್ಯಾಲಿಫೋರ್ನಿಯಾದ ಅತಿದೊಡ್ಡ ಹಿಂದೂ ದೇವಾಲಯಗಳಲ್ಲಿ ಒಂದಾದ ಬಾಪ್ಸ್ (BAPS) ಶ್ರೀ ಸ್ವಾಮಿನಾರಾಯಣ ಮಂದಿರದಲ್ಲಿ ಭಾರತ ವಿರೋಧಿ ಬರಹಗಳನ್ನು ಬರೆದು, ಮಂದಿರಕ್ಕೆ ಹಾನಿ ಮಾಡಿದ ಘಟನೆ ಭಾನುವಾರ ನಡೆದಿದೆ. ಇದು ಅಮೆರಿಕದಲ್ಲಿ ಹಿಂದೂ ಸಮುದಾಯದ ವಿರುದ್ಧ ದ್ವೇಷದ ಅಪರಾಧಗಳ ಮತ್ತೊಂದು ಉದಾಹರಣೆಯಾಗಿದೆ.
ಕ್ಯಾಲಿಫೋರ್ನಿಯಾದ ಬೋಚಸನ್ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆಯ ದೇವಾಲಯಕ್ಕೆ ಹಾನಿ ಮಾಡಲಾಗಿದೆ.
ಬೋಚಸನ್ವಾಸಿ ಅಕ್ಷರ ಪುರುಷೋತ್ತಮ್ ಸ್ವಾಮಿನಾರಾಯಣ ಸಂಸ್ಥೆಯ(BAPS) ಸಾರ್ವಜನಿಕ ವ್ಯವಹಾರ ವಿಭಾಗವು ಕ್ಯಾಲಿಫೋರ್ನಿಯಾದ ಚಿನೋ ಹಿಲ್ಸ್‌ನಲ್ಲಿರುವ ತಮ್ಮ ದೇವಾಲಯಕ್ಕೆ ಹಾನಿ ಮಾಡಿರುವುದನ್ನು ದೃಢಪಡಿಸಿದೆ. ಈ ದಾಳಿಯನ್ನು ವಿಭಜನೆ ಮತ್ತು ದ್ವೇಷವನ್ನು ಬಿತ್ತುವ ಪ್ರಯತ್ನ ಎಂದು ಅದು ಖಂಡಿಸಿದೆ.
ಇಂತಹ ಘಟನೆಗಳ ನಡುವೆಯೂ ಹಿಂದೂ ಸಮುದಾಯ ದೃಢವಾಗಿ ನಿಲ್ಲುತ್ತದೆ. ನಾವು ಎಂದಿಗೂ ದ್ವೇಷವನ್ನು ಬೇರುಬಿಡಲು ಬಿಡುವುದಿಲ್ಲ. ನಮ್ಮ ಮಾನವೀಯತೆ ಮತ್ತು ನಂಬಿಕೆಯು ಶಾಂತಿ ಮತ್ತು ಸಹಾನುಭೂತಿ ಮೇಲುಗೈ ಸಾಧಿಸುತ್ತದೆ ಎಂದು ಭಾವಿಸಿದ್ದೇವೆ ಎಂದು ಸಂಘಟನೆ ಒತ್ತಿ ಹೇಳಿದೆ.
ವಿಧ್ವಂಸಕ ಕೃತ್ಯವು ಲಾಸ್ ಏಂಜಲೀಸ್‌ನಲ್ಲಿ ನಿಗದಿಯಾಗಿರುವ ‘ಖಾಲಿಸ್ತಾನ್ ಜನಾಭಿಪ್ರಾಯ ಸಂಗ್ರಹಣೆ’ ಕಾರ್ಯಕ್ರಮಕ್ಕೆ ಕೆಲವೇ ದಿನಗಳ ಮೊದಲು ನಡೆದಿದೆ. ಈ ಘಟನೆಯು ಹಿಂದೂ ಸಮುದಾಯಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಅನೇಕರು ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಧಾರ್ಮಿಕ ಸಂಸ್ಥೆಗಳ ರಕ್ಷಣೆ ನೀಡಬೇಕು. ಹಾಗೂ ಕಾನೂನು ಜಾರಿ ಸಂಸ್ಥೆಗಳು ತ್ವರಿತ ಕ್ರಮ ಕೈಗೊಳ್ಳಬೇಕೆಂದು ಹಿಂದೂ ಸಂಘಟನೆಗಳು ಮತ್ತು ಸಮುದಾಯದ ಮುಖಂಡರು ಒತ್ತಾಯಿಸಿದ್ದಾರೆ.
ಭಾರತದ ಖಂಡನೆ…
ಅಮೆರಿಕದ ಕ್ಯಾಲಿಫೋರ್ನಿಯಾದ ಹಿಂದೂ ದೇವಾಲಯದಲ್ಲಿ ನಡೆದ ವಿಧ್ವಂಸಕ ಕೃತ್ಯವನ್ನು ಭಾರತ ಖಂಡಿಸಿದೆ. ಕಾನೂನು ಜಾರಿ ಸಂಸ್ಥೆಗಳು ಹೊಣೆಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ. ಇಂತಹ ಕೃತ್ಯಗಳನ್ನು “ಹೇಯ” ಎಂದು ಬಣ್ಣಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ ಜೈಸ್ವಾಲ್, ಸ್ಥಳೀಯ ಅಧಿಕಾರಿಗಳು ಪೂಜಾ ಸ್ಥಳಗಳಿಗೆ ಸಾಕಷ್ಟು ಭದ್ರತೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಲಾಸ್ ಏಂಜಲೀಸ್‌ನ ಚಿನೋ ಹಿಲ್ಸ್‌ನಲ್ಲಿರುವ ದೇವಾಲಯವನ್ನು ವಿರೂಪಗೊಳಿಸಿರುವ ಕುರಿತು ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಜೈಸ್ವಾಲ್, ಕ್ಯಾಲಿಫೋರ್ನಿಯಾದ ಚಿನೋ ಹಿಲ್ಸ್‌ನಲ್ಲಿರುವ ಹಿಂದೂ ದೇವಾಲಯದ ವಿಧ್ವಂಸಕ ಕೃತ್ಯಗಳ ಬಗ್ಗೆ ವರದಿಗಳನ್ನು ನೋಡಿದ್ದೇವೆ. ಇಂತಹ ಹೇಯ ಕೃತ್ಯಗಳನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ