ನವದೆಹಲಿ: ನವದೆಹಲಿ: ಪಾಕಿಸ್ತಾನದ ಪ್ರಕ್ಷುಬ್ಧ ಪ್ರದೇಶವಾದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಪ್ರತ್ಯೇಕತಾವಾದಿ ಉಗ್ರಗಾಮಿಗಳು ಮಂಗಳವಾರ ಪೇಶಾವರಕ್ಕೆ ಹೋಗುವ ರೈಲಿನ ಮೇಲೆ ದಾಳಿ ಮಾಡಿ ರೈಲನ್ನೇ ಹೈಜಾಕ್ ಮಾಡಿದ್ದಾರೆ. ಅವರು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು 182 ಪ್ರಯಾಣಿಕರನ್ನು ಒತ್ತೆಯಾಳಾಗಿ ಇರಿಸಿಕೊಂಡದ್ದಾರೆ ಎಂದು ವರದಿಯಾಗಿದೆ.
20 ಪಾಕಿಸ್ತಾನಿ ಸೇನಾ ಸಿಬ್ಬಂದಿ ಸಾವಿಗೀಡಾಗಿದ್ದಾರೆ ಎಂದು ವರದಿಗಳಿವೆ. ಒಂದು ಹೇಳಿಕೆಯಲ್ಲಿ, ಉಗ್ರಗಾಮಿ ಪ್ರತ್ಯೇಕತಾವಾದಿ ಗುಂಪು ಬಲೂಚ್ ಲಿಬರೇಶನ್ ಆರ್ಮಿ (BLA) ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ರೈಲನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗಿದೆ. ಮತ್ತು ನೂರಾರು ಪ್ರಯಾಣಿಕರನ್ನು ಒತ್ತೆಯಾಳಾಗಿ ಇರಿಸಿಕೊಳ್ಳಲಾಗಿದೆ. 11 ಪಾಕಿಸ್ತಾನಿ ಸೇನಾ ಸಿಬ್ಬಂದಿ ಸಾವಿಗೀಡಾಗಿದ್ದಾರೆ ಎಂದು ಪಾಕಿಸ್ತಾನದಿಂದ ಬಲೂಚಿಸ್ತಾನವನ್ನು ಸ್ವತಂತ್ರಗೊಳಿಸಲು ಬಯಸುತ್ತಿರುವ ಬಲೂಚ್ ಲಿಬರೇಶನ್ ಆರ್ಮಿ (BLA) ಹೇಳಿಕೆಯಲ್ಲಿ ತಿಳಿಸಿದೆ. “ಬಲೂಚ್ ವಿಮೋಚನಾ ಸೇನೆಯು ಮಶ್ಕಾಫ್, ಧಾದರ್, ಬೋಲನ್‌ನಲ್ಲಿ ನಿಖರವಾದ ಯೋಜಿತ ಕಾರ್ಯಾಚರಣೆಯನ್ನು ನಡೆಸಿದೆ, ಅಲ್ಲಿ ನಮ್ಮ ಸ್ವಾತಂತ್ರ್ಯ ಹೋರಾಟಗಾರರು ರೈಲ್ವೆ ಹಳಿಯನ್ನು ಸ್ಫೋಟಿಸಿದ್ದಾರೆ, ಜಾಫರ್ ಎಕ್ಸ್‌ಪ್ರೆಸ್ ಅನ್ನು ನಿಲ್ಲಿಸಿ ಎಲ್ಲಾ ಪ್ರಯಾಣಿಕರನ್ನು ಒತ್ತೆಯಾಳಾಗಿ ಇರಿಸಿಕೊಂಡ ನಂತರ ಹೋರಾಟಗಾರರು ರೈಲನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡರು ಎಂದು ಅದು ಹೇಳಿದೆ.
ಪಾಕಿಸ್ತಾನದ ಪ್ರಾಂತೀಯ ಸರ್ಕಾರವು ಭಯೋತ್ಪಾದಕರು ಇದರಲ್ಲಿ ಒಳಗೊಂಡಿರಬಹುದು ಎಂದು ಶಂಕಿಸಿದೆ ಮತ್ತು ಸ್ಥಳೀಯ ಮಾಧ್ಯಮಗಳ ಪ್ರಕಾರ ತುರ್ತು ಕ್ರಮಗಳಿಗೆ ಮುಂದಾಗಿದೆ. “ಕ್ವೆಟ್ಟಾದಿಂದ ಪೇಶಾವರಕ್ಕೆ ಹೋಗುತ್ತಿದ್ದ ಜಾಫರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ತೀವ್ರವಾದ ಗುಂಡಿನ ದಾಳಿಯ ವರದಿಗಳಿವೆ” ಎಂದು ಬಲೂಚಿಸ್ತಾನ್ ಸರ್ಕಾರದ ವಕ್ತಾರ ಶಾಹಿದ್ ರಿಂಡ್ ಅವರ ಹೇಳಿಕೆಯನ್ನು ಡಾನ್ ಪತ್ರಿಕೆ ಉಲ್ಲೇಖಿಸಿದೆ. ಘಟನೆಯು ಸಂಭವನೀಯ ಭಯೋತ್ಪಾದಕ ಘಟನೆಯಾಗಿರಬಹುದು ಎಂದು ವಕ್ತಾರರು ಹೇಳಿದ್ದಾರೆ.
ದಾಳಿಯಲ್ಲಿ 11 ಸೇನಾ ಸಿಬ್ಬಂದಿ ಸಾವಿಗೀಡಾಗಿದ್ದಾರೆ ಮತ್ತು ನೂರಾರು ಪ್ರಯಾಣಿಕರು ಬಿಎಲ್‌ಎ ವಶದಲ್ಲಿದ್ದಾರೆ ಎಂದು ಬಿಎಲ್‌ಎ ಹೇಳಿದೆ. ಪಾಕಿಸ್ತಾನ ಯಾವುದೇ ಸೇನಾ ಕಾರ್ಯಾಚರಣೆಗೆ ಯತ್ನಿಸಿದರೆ ಎಲ್ಲಾ ಪ್ರಯಾಣಿಕರನ್ನು ಹತ್ಯೆ ಮಾಡಲಾಗುವುದು ಎಂದು ಅದು ಎಚ್ಚರಿಕೆ ನೀಡಿದೆ.
“ಈ ಕಾರ್ಯಾಚರಣೆಯನ್ನು ಮಜೀದ್ ಬ್ರಿಗೇಡ್, STOS ಮತ್ತು ಫತೇಹ್ ಸ್ಕ್ವಾಡ್ – ಎಂಬ ಬಿಎಲ್‌ಎ (BLA)ಯ ವಿಶೇಷ ಘಟಕಗಳು ಜಂಟಿಯಾಗಿ ನಡೆಸುತ್ತಿವೆ ಎಂದು ಅದು ತಿಳಿಸಿದೆ.
ಮಂಗಳವಾರ ನಡೆದ ಗುಂಡಿನ ದಾಳಿಯಲ್ಲಿ ರೈಲು ಚಾಲಕ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮತ್ತು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ರೈಲು ಕ್ವೆಟ್ಟಾದಿಂದ ಪೇಶಾವರಕ್ಕೆ ತೆರಳುತ್ತಿದ್ದಾಗ ಗುಂಡಿನ ದಾಳಿ ನಡೆದಿದೆ.
ಸೆರೆಯಲ್ಲಿ 100 ಭದ್ರತಾ ಸಿಬ್ಬಂದಿ
ಮತ್ತೊಂದು ಹೇಳಿಕೆಯಲ್ಲಿ, ಜಾಫರ್ ಎಕ್ಸ್‌ಪ್ರೆಸ್ ದಾಳಿಯ ನಂತರ ಪಾಕಿಸ್ತಾನಿ ಮಿಲಿಟರಿಯ ನೆಲದ ದಾಳಿಯನ್ನು “ಸಂಪೂರ್ಣವಾಗಿ ಹಿಮ್ಮೆಟ್ಟಿಸಲಾಗಿದೆ ಎಂದು ಬಿಎಲ್‌ಎ ಹೇಳಿದೆ. ಆದಾಗ್ಯೂ, ಸೇನೆಯು ವೈಮಾನಿಕ ದಾಳಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಲು ಪ್ರಾರಂಭಿಸಿದೆ.
ವೈಮಾನಿಕ ಬಾಂಬ್ ದಾಳಿಯನ್ನು ತಕ್ಷಣವೇ ನಿಲ್ಲಿಸದಿದ್ದರೆ, ಎಲ್ಲಾ ಒತ್ತೆಯಾಳುಗಳು ದುರಂತದ ಪರಿಣಾಮಗಳನ್ನು ಎದುರಿಸಲಿದ್ದಾರೆ ಎಂದು ಬಿಎಲ್‌ಎ ಎಚ್ಚರಿಸಿದೆ
ನಾಗರಿಕರ ಬಿಡುಗಡೆ
ನಂತರದ ಹೇಳಿಕೆಯಲ್ಲಿ, ಬಿಎಲ್‌ಎ (BLA) ಗುಂಪು ಮಿಲಿಟರಿ ಸಿಬ್ಬಂದಿ ಸೇರಿದಂತೆ 182 ಒತ್ತೆಯಾಳುಗಳನ್ನು ಇರಿಸಿಕೊಳ್ಳಲಾಗಿದೆ. ಆದರೆ ಮಹಿಳೆಯರು, ಮಕ್ಕಳು, ವೃದ್ಧರು ಮತ್ತು ಬಲೂಚ್ ನಾಗರಿಕರು ಸೇರಿದಂತೆ ಎಲ್ಲಾ ನಾಗರಿಕ ಪ್ರಯಾಣಿಕರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಲಾಗಿದೆ ಎಂದು ಬಿಎಲ್‌ಎ ಹೇಳಿದೆ.
ತೀವ್ರ ಘರ್ಷಣೆಯಲ್ಲಿ ಒಟ್ಟು 11 ಪಾಕಿಸ್ತಾನಿ ಭದ್ರತಾ ಸಿಬ್ಬಂದಿ ಸಾವಿಗೀಡಾಗಿದ್ದಾರೆ ಮತ್ತು ಡ್ರೋನ್ ಅನ್ನು ಹೊಡೆದುರುಳಿಸಲಾಗಿದೆ. ಒತ್ತೆಯಾಳುಗಳಲ್ಲಿ ಪಾಕಿಸ್ತಾನಿ ಸೇನೆ, ಪೊಲೀಸ್, ಐಎಸ್‌ಐ ಮತ್ತು ಎಟಿಐಎಫ್‌ನ ಸಿಬ್ಬಂದಿ ಇದ್ದಾರೆ, ಅವರೆಲ್ಲರೂ ರಜೆಯ ಮೇಲಿದ್ದರು. ಮಿಲಿಟರಿ ಕಾರ್ಯಾಚರಣೆಗೆ ಮುಂದಾದರೆ ಎಲ್ಲಾ ಒತ್ತೆಯಾಳುಗಳನ್ನು ಹತ್ಯೆ ಮಾಡಲಾಗುವುದು ಎಂದು ಬಿಎಲ್‌ಎ ಬೆದರಿಕೆ ಹಾಕಿದೆ.
ರಕ್ಷಣಾ ಪ್ರಯತ್ನ
ರಕ್ಷಣಾ ತಂಡಗಳು ಮತ್ತು ಭದ್ರತಾ ಪಡೆಗಳು ಘಟನಾ ಸ್ಥಳಕ್ಕೆ ತಲುಪಿದ್ದು, ಉಗ್ರರ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ. ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ಪ್ರಕಾರ, ದಾಳಿಯಲ್ಲಿ ಗಂಭೀರ ಗಾಯಗೊಂಡ ರೈಲು ಚಾಲಕನಿಗೆ ಸಹಾಯ ಮಾಡಲು ತುರ್ತು ಪರಿಹಾರ ತಂಡವನ್ನು ಕಳುಹಿಸಲಾಗಿದೆ.
ಒಂಬತ್ತು ಬೋಗಿಗಳನ್ನು ಒಳಗೊಂಡಿರುವ ಈ ರೈಲಿನಲ್ಲಿ ಸುಮಾರು 500 ಮಂದಿ ಪ್ರಯಾಣಿಕರಿದ್ದರು ಎಂದು ರೈಲ್ವೆ ನಿಯಂತ್ರಕ ಮುಹಮ್ಮದ್ ಕಾಶಿಫ್ ತಿಳಿಸಿದ್ದಾರೆ. “ಸುರಂಗ ಸಂಖ್ಯೆ 8 ರಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳು ರೈಲನ್ನು ನಿಲ್ಲಿಸಿದರು. ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸಂಪರ್ಕಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ” ಎಂದು ಅವರು ಡಾನ್‌ಗೆ ತಿಳಿಸಿದ್ದಾರೆ.
ಬಲೂಚಿಸ್ತಾನ್ ಪಾಕಿಸ್ತಾನದ ಅತಿದೊಡ್ಡ ಪ್ರಾಂತ್ಯವಾಗಿದೆ, ದೇಶದ ಒಟ್ಟು ಭೂಪ್ರದೇಶದ ಸುಮಾರು 44 ಪ್ರತಿಶತವನ್ನು ಒಳಗೊಂಡಿದೆ, ಇದು ಕಡಿಮೆ ಜನಸಂಖ್ಯೆ ಹೊಂದಿರುವ ಪ್ರಾಂತ್ಯವಾಗಿದ್ದು, ಇಲ್ಲಿ ವಿಶ್ವದ ಅತಿದೊಡ್ಡ ಬಂದರುಗಳಲ್ಲಿ ಒಂದಾದ ಗ್ರಾದರ್ ಬಂದರು ಇದೆ. ಇದು ಆಯಕಟ್ಟಿನ ದೃಷ್ಟಿಯಿಂದ ಪ್ರಾದೇಶಿಕ ಮತ್ತು ಜಾಗತಿಕ ವ್ಯಾಪಾರ ಮಾರ್ಗಗಳಿಗೆ ಮಹತ್ವದ್ದಾಗಿದೆ ಎಂದು ಪಾಕಿಸ್ತಾನ ಹೇಳುತ್ತದೆ.
ಪಾಕಿಸ್ತಾನದ ನೈಋತ್ಯ ಪ್ರದೇಶದಲ್ಲಿ ನೆಲೆಗೊಂಡಿರುವ ಬಲೂಚಿಸ್ತಾನ್ ಈಶಾನ್ಯಕ್ಕೆ ಖೈಬರ್ ಪಖ್ತುನ್ಖ್ವಾ, ಪೂರ್ವಕ್ಕೆ ಪಂಜಾಬ್ ಮತ್ತು ಆಗ್ನೇಯಕ್ಕೆ ಸಿಂಧ್ ಪ್ರಾಂತ್ಯಗಳೊಂದಿಗೆ ಗಡಿಗಳನ್ನು ಹಂಚಿಕೊಂಡಿದೆ. ಇದು ಪಶ್ಚಿಮಕ್ಕೆ ಇರಾನ್ ಮತ್ತು ಉತ್ತರಕ್ಕೆ ಅಫ್ಘಾನಿಸ್ತಾನದ ಗಡಿಯನ್ನು ಹೊಂದಿದೆ. ಅದರ ದಕ್ಷಿಣದ ಗಡಿಯು ಅರೇಬಿಯನ್ ಸಮುದ್ರವಿದೆ.
ನಿಮ್ಮ ಕಾಮೆಂಟ್ ಬರೆಯಿರಿ