ಸಂಭಲ್ : ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ವರದಿಯಾಗಿದ್ದು, ಬಿಜೆಪಿಯ ಹಿರಿಯ ನಾಯಕರೊಬ್ಬರು ಸೋಮವಾರ “ನಿಗೂಢ ರೀತಿಯಲ್ಲಿ” ಸಾವಿಗೀಡಾಗಿದ್ದಾರೆ. ಅವರನ್ನು ವಿಷಪೂರಿತ ಚುಚ್ಚುಮದ್ದಿನ ಮೂಲಕ ಕೊಲೆ ಮಾಡಲಾಗಿದೆ ಎಂಬ ಆರೋಪಗಳು ಹೊರಬಿದ್ದಿವೆ.
ವರದಿಗಳ ಪ್ರಕಾರ, ಮೃತ ಬಿಜೆಪಿ ನಾಯಕ ಗುಲ್ಫಾಮ್ ಸಿಂಗ್ ಯಾದವ್ (60) ಮಧ್ಯಾಹ್ನ 1 ಗಂಟೆ ಸುಮಾರಿಗೆ ದಫ್ತಾರಾ ಗ್ರಾಮದ ತನ್ನ ಫಾರ್ಮ್‌ನ ನಿವಾಸದಲ್ಲಿ ಹಾಸಿಗೆಯ ಮೇಲೆ ಕುಳಿತಿದ್ದಾಗ ಈ ಘಟನೆ ಸಂಭವಿಸಿದೆ. ಮೋಟಾರ್ ಸೈಕಲ್‌ನಲ್ಲಿ ಬಂದ ಮೂವರು ಅಪರಿಚಿತ ವ್ಯಕ್ತಿಗಳು ಯಾದವ್ ಅವರ ಬಳಿಗೆ ಬಂದರು ಮತ್ತು ಅವರಲ್ಲಿ ಒಬ್ಬ ಅವರ ಹೊಟ್ಟೆಗೆ ವಿಷಕಾರಿ ಪದಾರ್ಥವನ್ನು ಚುಚ್ಚಿದರು ಎಂದು ಆರೋಪಿಸಲಾಗಿದೆ. ಆತನ ಕುಟುಂಬಸ್ಥರು ಇದಕ್ಕೆ ಪ್ರತಿಕ್ರಿಯಿಸುವ ಮುನ್ನವೇ ದುಷ್ಕರ್ಮಿಗಳು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ.
ಘಟನೆಯ ನಂತರ ಸ್ಥಳೀಯರು ಹಾಗೂ ಕುಟುಂಬದ ಸದಸ್ಯರು ಯಾದವ್ ಅವರನ್ನು ಅಲಿಗಢ್‌ಗೆ ಒಯ್ದರು. ಆದರೆ ಅವರು ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸರ್ಕಲ್ ಆಫೀಸರ್ (ಗುನ್ನೂರ್) ದೀಪಕ ತಿವಾರಿ ಘಟನೆಯ ಬಗ್ಗೆ ವಿವರ ನೀಡಿದರು. “ಗುಲ್ಫಾಮ್ ಸಿಂಗ್ ಯಾದವ್ ಅವರು, ಜುನವಾಯಿ ಪೊಲೀಸ್ ಠಾಣಾ ವ್ಯಾಪ್ತಿಯ ದಫ್ತಾರಾ ಗ್ರಾಮದ ತಮ್ಮ ಜಮೀನಿನಲ್ಲಿದ್ದ ಮನೆಯಲ್ಲಿ ಕುಳಿತಿದ್ದಾಗ ಮೋಟಾರ್ ಸೈಕಲ್‌ನಲ್ಲಿ ಬಂದ ಮೂವರು ವ್ಯಕ್ತಿಗಳು ಆತನಿಗೆ ಚುಚ್ಚುಮದ್ದು ನೀಡಿ ಪರಾರಿಯಾಗಿದ್ದಾರೆ ಎಂದು ಹೇಳಿದ್ದಾರೆ.
“ಯಾದವ್ ಅವರನ್ನು ಚಿಕಿತ್ಸೆಗಾಗಿ ಅಲಿಗಢಕ್ಕೆ ಕರೆದೊಯ್ಯಲಾಗುತ್ತಿತ್ತು, ಆದರೆ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ. ಇದುವರೆಗೆ ಯಾದವ್ ಅವರ ಕುಟುಂಬದಿಂದ ಯಾವುದೇ ಔಪಚಾರಿಕ ದೂರು ಬಂದಿಲ್ಲ. ಪ್ರಕರಣದ ತನಿಖೆಗಾಗಿ ಪೊಲೀಸ್ ತಂಡವನ್ನು ನಿಯೋಜಿಸಲಾಗಿದೆ” ಎಂದು ಅವರು ತಿಳಿಸಿದರು.
ಮೂವರು ವ್ಯಕ್ತಿಗಳು ಯಾದವ್ ಅವರನ್ನು ಭೇಟಿ ಮಾಡುವ ನೆಪದಲ್ಲಿ ಬಂದರು. ಅವರ ಜೊತೆಯಲ್ಲಿ ಕುಳಿತು ಆರೋಗ್ಯ ವಿಚಾರಿಸಿ, ನೀರು ಕೊಡುವಂತೆ ಕೇಳಿದರು. ನೀರು ಕೊಟ್ಟ ನಂತರ ಅದನ್ನು ಕುಡಿದಿದ್ದಾರೆ. ಯಾದವ್ ಈ ಮೂವರಿಗೆ ನೀರು ಕೊಟ್ಟ ನಂತರ ಹಾಸಿಗೆಯ ಮೇಲೆ ಮಲಗಿದರು. ಈ ಮೂವರು ಅಪರಿಚಿತರು ಈ ಅವಕಾಶವನ್ನು ಬಳಸಿಕೊಂಡರು ಮತ್ತು ಅವರಲ್ಲಿ ಒಬ್ಬ ಯಾದವ್ ಅವರ ಹೊಟ್ಟೆಗೆ ವಿಷಕಾರಿ ಇಂಜೆಕ್ಷನ್ ಚುಚ್ಚಿದರು ಎಂದು ವರದಿಯೊಂದು ತಿಳಿಸಿದೆ.
ಬಿಜೆಪಿ ನಾಯಕನ ಆರೋಗ್ಯ ಹದಗೆಡುತ್ತಿದ್ದಂತೆ ನೋವಿನಿಂದ ಕಿರುಚಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಗುಲ್ಫಾಮ್ ಸಿಂಗ್ ಯಾದವ್ ಯಾರು?
ಸಕ್ರಿಯ ರಾಜಕೀಯದಲ್ಲಿ ಮೂರು ದಶಕಗಳ ಅನುಭವ ಹೊಂದಿರುವ ಗುಲ್ಫಾಮ್ ಸಿಂಗ್ ಯಾದವ್ ಅವರನ್ನು ಆ ಪ್ರದೇಶದಲ್ಲಿ ಉನ್ನತ ರಾಜಕೀಯ ವ್ಯಕ್ತಿ ಎಂದು ಪರಿಗಣಿಸಲಾಗಿದೆ. 2004 ರಲ್ಲಿ, ಅವರು ಸಮಾಜವಾದಿ ಪಕ್ಷದ ಉನ್ನತ ನಾಯಕ ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ವಿರುದ್ಧ ಬಿಜೆಪಿ ಟಿಕೆಟ್‌ನಲ್ಲಿ ಗುನ್ನೌರ್ ವಿಧಾನಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಗುಲ್ಫಾಮ್ ಯಾದವ್ ಅವರು ಹಿಂದುಳಿದ ವರ್ಗಗಳ ಆಯೋಗದ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು ಮತ್ತು ರಾಜ್ಯ ಕಾರ್ಯಕಾರಿ ಸದಸ್ಯ, ಪ್ರಾದೇಶಿಕ ಉಪಾಧ್ಯಕ್ಷ (ಪಶ್ಚಿಮ ಯುಪಿ), ಆರ್‌ಎಸ್‌ಎಸ್‌ನ ಜಿಲ್ಲಾ ಕಾರ್ಯವಾಹ ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಬಿಜೆಪಿಯೊಳಗೆ ಹಲವಾರು ಪ್ರಮುಖ ಸ್ಥಾನಗಳನ್ನು ನಿರ್ವಹಿಸಿದ್ದಾರೆ. ಯಾದವ್ ಅವರ ಪತ್ನಿ ಜವಿತ್ರಿ ದೇವಿ ಕೂಡ ಸ್ಥಳೀಯ ರಾಜಕೀಯದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದು, ಗ್ರಾಮ ಮುಖ್ಯಸ್ಥರಾಗಿ ಸತತ ಮೂರನೇ ಬಾರಿಗೆ ಸೇವೆ ಸಲ್ಲಿಸುತ್ತಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ