ನವದೆಹಲಿ: ಇರಾಕಿನ ಗುಪ್ತಚರ ಮತ್ತು ಭದ್ರತಾ ಪಡೆಗಳ ಸಮನ್ವಯದಲ್ಲಿ, ಇರಾಕ್‌ನ ಅಲ್ ಅನ್ಬರ್ ಪ್ರಾಂತ್ಯದಲ್ಲಿ ನಡೆಸಿದ ವೈಮಾನಿಕ ದಾಳಿಯಲ್ಲಿ “ಅಬು ಖದೀಜಾ” ಎಂದೂ ಕರೆಯಲ್ಪಡುವ ಇಸ್ಲಾಮಿಕ್ ಸ್ಟೇಟ್ (ISIS)ನ ನಂ.2 ನಾಯಕನಾದ ಅಬ್ದುಲ್ಲಾ ಮಕ್ಕಿ ಮುಸ್ಲಿಹ್ ಅಲ್-ರಿಫಾಯಿಯನ್ನು ಕೊಂದಿರುವುದಾಗಿ ಅಮೆರಿಕ ಘೋಷಿಸಿದೆ.
ಅಬು ಖದೀಜಾ ಇಸ್ಲಾಮಿಕ್ ಸ್ಟೇಟ್ (ISIS) ಭಯೋತ್ಪಾದಕ ಗುಂಪಿನ ಜಾಗತಿಕ ಕಾರ್ಯಾಚರಣೆಗಳ ಮುಖ್ಯಸ್ಥನಾಗಿದ್ದ ಮತ್ತು ಜಾಗತಿಕವಾಗಿ ಐಸಿಸ್‌ನ ಎರಡನೇ-ಕಮಾಂಡ್ ಸ್ಥಾನವನ್ನು ಹೊಂದಿದ್ದ. ಮಾರ್ಚ್ 13 ರಂದು ನಡೆದ ದಾಳಿಯಲ್ಲಿ ಮತ್ತೊಬ್ಬ ಐಸಿಸ್ ಸದಸ್ಯ ಕೂಡ ಸಾವಿಗೀಡಾಗಿದ್ದಾನೆ ಎಂದು ಅಮೆರಿಕ ಹೇಳಿದೆ. ಅಮೆರಿಕ ಮಿಲಿಟರಿ ಅಧಿಕಾರಿಗಳ ಪ್ರಕಾರ, ಅಬು ಖದೀಜಾ ವಿಶ್ವಾದ್ಯಂತ ಭಯೋತ್ಪಾದಕ ಗುಂಪಿನ ಲಾಜಿಸ್ಟಿಕ್ಸ್, ಯೋಜನೆ ಮತ್ತು ಹಣಕಾಸು ನಿರ್ವಹಣೆ ನೋಡಿಕೊಳ್ಳುತ್ತಿದ್ದ.
ವೈಮಾನಿಕ ದಾಳಿಯ ನಂತರ, ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಮತ್ತು ಇರಾಕಿನ ಪಡೆಗಳು ಸ್ಥಳಕ್ಕೆ ಆಗಮಿಸಿ ಅಬು ಖದೀಜಾ ಮತ್ತು ಇತರ ಐಸಿಸ್ (ISIS) ಹೋರಾಟಗಾರರ ಸಾವನ್ನು ದೃಢಪಡಿಸಿದವು.
ಸೆಂಟ್‌ಕಾಮ್ ಪ್ರಕಾರ, ಇಬ್ಬರೂ ಸ್ಫೋಟಗೊಳ್ಳದ ಆತ್ಮಾಹುತಿ ಬಟ್ಟೆಗಳನ್ನು ಧರಿಸಿದ್ದರು ಮತ್ತು ಅನೇಕ ಶಸ್ತ್ರಾಸ್ತ್ರಗಳೊಂದಿಗೆ ಶಸ್ತ್ರಸಜ್ಜಿತರಾಗಿದ್ದರು. ಹಿಂದಿನ ದಾಳಿಯಿಂದ ಸಂಗ್ರಹಿಸಿದ ಮಾದರಿಗಳನ್ನು ಬಳಸಿಕೊಂಡು ಡಿಎನ್‌ಎ ಹೊಂದಾಣಿಕೆಯ ಮೂಲಕ ಅಬು ಖದೀಜಾನ ಗುರುತನ್ನು ದೃಢಪಡಿಸಲಾಯಿತು. ಹಿಂದಿನ ದಾಳಿಯಲ್ಲಿ ಆತ ಸೆರೆಹಿಡಿಯುವುದರಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದ.
“ಇಡೀ ಜಾಗತಿಕ ಐಸಿಸ್ ಸಂಘಟನೆಯಲ್ಲಿ ಅಬು ಖದೀಜಾ ಅತ್ಯಂತ ಪ್ರಮುಖ ಸದಸ್ಯರಲ್ಲಿ ಒಬ್ಬನಾಗಿದ್ದ. ನಾವು ಭಯೋತ್ಪಾದಕರನ್ನು ಕೊಲ್ಲುವುದನ್ನು ಮುಂದುವರಿಸುತ್ತೇವೆ ಮತ್ತು ನಮ್ಮ ತಾಯ್ನಾಡಿಗೆ ಮತ್ತು ಅಮೆರಿಕ, ಮಿತ್ರರಾಷ್ಟ್ರಗಳ ಸಿಬ್ಬಂದಿಗೆ ಬೆದರಿಕೆ ಹಾಕುವ ಅವರ ಸಂಘಟನೆಗಳನ್ನು ನಾಶಪಡಿಸುವುದನ್ನು ನಾವು ಮುಂದುವರಿಸುತ್ತೇವೆ” ಎಂದು ಅಮೆರಿಕ ಸೆಂಟ್ರಲ್ ಕಮಾಂಡ್ ಕಮಾಂಡರ್ ಜನರಲ್ ಮೈಕೆಲ್ ಎರಿಕ್ ಕುರಿಲ್ಲಾ ಹೇಳಿದ್ದಾರೆ.
ಇರಾಕಿನ ಪ್ರಧಾನಿ ಮೊಹಮ್ಮದ್ ಶಿಯಾ ಅಲ್-ಸುಡಾನಿ ಅವರು, ಅಬು ಖದೀಜಾ “ಇರಾಕ್ ಮತ್ತು ವಿಶ್ವದ ಅತ್ಯಂತ ಅಪಾಯಕಾರಿ ಭಯೋತ್ಪಾದಕರಲ್ಲಿ ಒಬ್ಬ. ಅಮೆರಿಕ ನೇತೃತ್ವದ ಒಕ್ಕೂಟದ ಬೆಂಬಲದೊಂದಿಗೆ ಕಾರ್ಯಾಚರಣೆ ನಡೆಸಲಾಗಿದೆ ಎಂದು ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ದೃಢಪಡಿಸಿದ್ದಾರೆ.
ಅಬು ಖದೀಜಾ ಐಸಿಸ್ ಗುಂಪಿನ ವಿದೇಶಿ ಕಾರ್ಯಾಚರಣೆಗಳನ್ನು ನಿರ್ದೇಶಿಸುವ ಜವಾಬ್ದಾರಿ ಹೊಂದಿದ್ದ. 2017 ರಲ್ಲಿ ಇರಾಕ್‌ನಲ್ಲಿ ಐಸಿಸ್ ಪ್ರಾದೇಶಿಕ ಸೋಲಿನ ಹೊರತಾಗಿಯೂ, ಗುಂಪು ಅಲ್ಲಲ್ಲಿ ಸಕ್ರಿಯವಾಗಿ ಉಳಿದಿವೆ, ಇರಾಕಿನ ಭದ್ರತಾ ಪಡೆಗಳ ವಿರುದ್ಧ ವಿರಳ ದಾಳಿಗಳನ್ನು ನಡೆಸುತ್ತವೆ.
“ಇಂದು ಇರಾಕ್‌ನಲ್ಲಿ ಐಸಿಸ್‌ನ ಪರಾರಿಯಾಗಿದ್ದ ನಾಯಕನನ್ನು ಕೊಲ್ಲಲಾಯಿತು. ನಮ್ಮ ನಿರ್ಭೀತ ಯುದ್ಧವೀರರು ಪಟ್ಟುಬಿಡದೆ ಆತನನ್ನು ಬೇಟೆಯಾಡಿದರು. ಇರಾಕ್ ಸರ್ಕಾರ ಮತ್ತು ಕುರ್ದಿಷ್ ಪ್ರಾದೇಶಿಕ ಸರ್ಕಾರದ ಸಮನ್ವಯದಲ್ಲಿ ಐಸಿಸ್‌ನ ಮತ್ತೊಬ್ಬ ಸದಸ್ಯನೊಂದಿಗೆ ಆತನನ್ನು ಕೊನೆಗೊಳಿಸಲಾಯಿತು” ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸಾಮಾಜಿಕ ವೇದಿಕೆಯಲ್ಲಿ ಬರೆದಿದ್ದಾರೆ.
ಇರಾಕಿ ಪಡೆಗಳು ಮತ್ತು ಅಮೆರಿಕ ಬೆಂಬಲಿತ ಅಂತಾರಾಷ್ಟ್ರೀಯ ಒಕ್ಕೂಟದ ನೇತೃತ್ವದ ವರ್ಷಗಳ ಮಿಲಿಟರಿ ಕಾರ್ಯಾಚರಣೆಗಳ ನಂತರ, 2017 ರ ವೇಳೆಗೆ ಇರಾಕ್‌ನಲ್ಲಿ ಮತ್ತು 2019 ರ ವೇಳೆಗೆ ಸಿರಿಯಾದಲ್ಲಿ ಐಸಿಸ್ (ISIS) ಅನ್ನು ಬಹುತೇಕ ತೊಡೆದು ಹಾಕಲಾಯಿತು. ಆದರೂ, ಐಸಿಸ್ ಎರಡೂ ದೇಶಗಳ ದೂರದ ಪ್ರದೇಶಗಳಲ್ಲಿ ಅಲ್ಲಲ್ಲಿ ಸಕ್ರಿಯವಾಗಿದೆ.
ಭಯೋತ್ಪಾದನಾ ನಿಗ್ರಹದ ನಿಟ್ಟಿನಲ್ಲಿ ಇರಾಕಿ ಪಡೆಗಳಿಗೆ ತರಬೇತಿ ನೀಡಲು ಸರಿಸುಮಾರು 2,500 US ಸೈನಿಕರು ಇರಾಕ್‌ನಲ್ಲಿ ನೆಲೆಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ