
ಆಘಾತಕಾರಿ ವೀಡಿಯೊ ಇಂಟರ್ನೆಟ್‌ನಲ್ಲಿ ಕಾಣಿಸಿಕೊಂಡಿದ್ದು, ಬೈಕು ಸಿಂಕ್ ಹೋಲ್‌ಗೆ ಕಣ್ಮರೆಯಾಗುವ ಭಯಾನಕ ದೃಶ್ಯ ಈ ವೀಡಿಯೊದಲ್ಲಿ ಸೆರೆಯಾಗಿದೆ. . ಈ ಭೀಕರ ಅಪಘಾತವು ದಕ್ಷಿಣ ಕೊರಿಯಾದಲ್ಲಿ ಸಂಭವಿಸಿದೆ ಎಂದು ಹೇಳಲಾಗಿದ್ದು, ರಸ್ತೆಯಲ್ಲಿ ಇದ್ದಕ್ಕಿದ್ದಂತೆ ಸೃಷ್ಟಿಯಾದ ದೊಡ್ಡ ಕುಳಿ ಮೋಟಾರ್ಸೈಕ್ಲಿಸ್ಟ್ ಅನ್ನು ನುಂಗಿದ ಘಟನೆ ನಡೆದು 18 ಗಂಟೆಗಳ ನಂತರ ತೀವ್ರವಾಗಿ ಗಾಯಗೊಂಡಿದ್ದ ಸವಾರ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಈ ಭಯಾನಕ ಘಟನೆಯು ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್‌ನಲ್ಲಿ ಸಂಭವಿಸಿದ್ದು, ಬೈಕಿನ ಮುಂದೆ ವೇಗವಾಗಿ ಸಾಗುತ್ತಿದ್ದ ಕಾರು ಇದ್ದಕ್ಕಿದ್ದಂತೆ ಸೃಷ್ಟಿಯಾದ ಈ ಬೃಹತ್ ಕುಳಯಿಂದ ಪಾರಾದ ಮೈ ಜುಂಎನ್ನುವ ದೃಶ್ಯ ವೀಡಿಯೊದಲ್ಲಿ ದಾಖಲಾಗಿದೆ. ಆದರೆ ದುರದೃಷ್ಟವಶಾತ್, ಮೋಟರ್ಸೈಕ್ಲಿಸ್ಟ್ ಅಷ್ಟೊಂದು ಅದೃಷ್ಟಶಾಲಿಯಾಗಿರಲಿಲ್ಲ, ಏಕೆಂದರೆ ಆತ ಇದ್ದಕ್ಕಿದ್ದಂತೆ ರಸ್ತೆಯ ಮಧ್ಯದಲ್ಲಿ ಸೃಷ್ಟಿಯಾದ ದೈತ್ಯ ಕುಳಿಯೊಳಗೆ ನೇರವಾಗಿ ಬಿದ್ದಿದ್ದಾನೆ. ಇದ್ದಕ್ಕಿದ್ದಂತೆ ಈ ಕುಳಿ ಸೃಷಿಯಾಗಲು ಕಾರಣವೇನು ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ.

ದಿ ಚೋಸನ್ ಡೈಲಿ ಪ್ರಕಾರ, ಮತ್ತೊಂದು ವಾಹನದಿಂದ ತೆಗೆದ ಡ್ಯಾಶ್‌ಕ್ಯಾಮ್ ವೀಡಿಯೊದಲ್ಲಿ ಪಾರ್ಕ್ ಎಂದು ಗುರುತಿಸಲಾದ ಬೈಕರ್ ಅನಿರೀಕ್ಷಿತ ದೈತ್ಯ ಕುಳಿಯೊಳಗೆ ಹೋಗುವುದು ರೆಕಾರ್ಡ್ ಆಗಿದೆ. ಆತನ ಮುಂದಿದ್ದ ಕಾರು ಕುಳಿಯೊಳಗೆ ಬೀಳುವುದರಲ್ಲಿತ್ತು. ಆದರೆ ಅದು ಹೇಗೋ ಬೌನ್ಸ್ ಆಗಿ ಅದರಿಂದ ಪಾರಾಗಿ ಮುಂದಕ್ಕೆ ಹೋಗಿದೆ.
ಗ್ಯಾಂಗ್‌ಡಾಂಗ್ ವಾರ್ಡ್‌ನ ಅಗ್ನಿಶಾಮಕ ಅಧಿಕಾರಿಯೊಬ್ಬರು ಬೈಕರ್ ಸಾವಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ ” 30 ರ ಹರೆಯದ ಬೈಕರ್, ಬೆಳಿಗ್ಗೆ 11:22 ಕ್ಕೆ ಹೃದಯ ಸ್ತಂಭನ ಉಂಟಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ” ಎಂದು ಕೊರಿಯಾ ಟೈಮ್ಸ್ ವರದಿ ಮಾಡಿದೆ.
ಸುಮಾರು ಎರಡು ಗಂಟೆಗಳ ನಂತರ ಹುಡುಕಾಟ ನಡೆಸಿದ ತಂಡವು ಮೋಟಾರ್‌ಸೈಕಲ್ ಅನ್ನು ಪತ್ತೆ ಮಾಡಿದೆ. ಆ ಕ್ಷಣದಲ್ಲಿ ಸವಾರ ಎಲ್ಲಿಯೂ ಕಾಣದ ಕಾರಣ, ಮರುದಿನ ಬೆಳಿಗ್ಗೆ ಅಧಿಕಾರಿಗಳು ಮತ್ತೆ ಹುಡುಕಾಟ ಪ್ರಾರಂಭಿಸಿದರು. 20 ಮೀಟರ್ ಅಗಲ ಮತ್ತು 20 ಮೀಟರ್ ಆಳದ ಸಿಂಕ್‌ಹೋಲ್‌ಗೆ ಬಿದ್ದ ಸುಮಾರು 18 ಗಂಟೆಗಳ ನಂತರ, ಆತ ಹೃದಯ ಸ್ತಂಭನದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊರಿಯಾ ಟೈಮ್ಸ್ ಪ್ರಕಾರ, ಘಟನೆಯು ಗ್ಯಾಂಗ್‌ಡಾಂಗ್ ವಾರ್ಡ್‌ನ ಪ್ರಾಥಮಿಕ ಶಾಲೆಯ ಸಮೀಪ ಸಂಭವಿಸಿದೆ. ಘಟನೆಯ ನಂತರ ಸುರಕ್ಷತೆಯ ದೃಷ್ಟಿಯಿಂದ ನಾಲ್ಕು ಸ್ಥಳೀಯ ಶಾಲೆಗಳನ್ನು ಮುಚ್ಚಲಾಗಿದೆ. ಈ ಪ್ರದೇಶದಲ್ಲಿ ನೀರು ಮತ್ತು ಅನಿಲ ಪೂರೈಕೆಯನ್ನು ಸಹ ಸ್ಥಗಿತಗೊಳಿಸಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ