ಕೆಲವು ಘಟನೆಗಳು ಪವಾಡವೇನೋ ಎಂದು ಅನಿಸುವ ರೀತಿಯಲ್ಲಿ ಸಂಭವಿಸುತ್ತವೆ. ಇಂಥದ್ದೇ ಒಂದು ವಿದ್ಯಮಾನದಲ್ಲಿ ಹಳೆಯ ಕಾಗದ ವ್ಯಕ್ತಿಯೊಬ್ಬರು ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಲು ಕಾರಣವಾಗಿದೆ…!! ಈ ಹಳೆಯ ಕಾಗದ ತುಂಡಿನಿಂದ ಹೀಗಾಗುತ್ತದೆ ಎಂದು ಆ ವ್ಯಕ್ತಿಯೂ ಊಹಿಸಿರಲಿಲ್ಲ.
ಬಹುತೇಕ ಎಲ್ಲರ ತಮ್ಮ ಮನೆಗಳ ಸುತ್ತಲೂ ಸಣ್ಣ ಸಣ್ಣ ಕಾಗದದ ಚೂರುಗಳು ಅಥವಾ ಹರಿದ ಕಾಗದಗಳು ಅಲ್ಲಿಲ್ಲಿ ಬಿದ್ದಿರುತ್ತದೆ, ಕೆಲವೊಮ್ಮೆ ಹಾಸಿಗೆಯ ಕೆಳಗೆ, ಕೆಲವೊಮ್ಮೆ ಸೋಫಾದ ಕೆಳಗೆ, ಕೆಲವೊಮ್ಮೆ ಯಾವುದೋ ಮನೆಯ ಮೂಲೆಯಲ್ಲಿ ಅಥವಾ ಮನೆಯ ಹಿಂಬದಿಗೆ ಹೀಗೆ ಎಲ್ಲೆಂದರಲ್ಲಿ ಬಿದ್ದಿರುತ್ತದೆ. ಆದಾಗ್ಯೂ, ನಿಷ್ಪ್ರಯೋಜಕವೆಂದು ಎಸೆದ ಕಾಗದದ ಚೂರುಗಳು ಅದೃಷ್ಟ ಬದಲಾಯಿಸುವುದು ಬಹಳ ಅಪರೂಪ. ಆದರೆ ಇಲ್ಲೊಬ್ಬರ ಮನೆಯಲ್ಲಿದ್ದ ‘ಕಸ’ವೆಂದು ಎಸೆದಿದ್ದ ಕಾಗದ ಆತನಿಗೆ ಬಹಳ ಅದೃಷ್ಟ ತಂದಿದೆ…
ಈ ಘಟನೆ ಚಿಲಿಯ ನಿವಾಸಿ ಎಕ್ಸೆಕ್ವಿಯಲ್ ಹಿನೊಜೊಸಾ ಎಂಬ ವ್ಯಕ್ತಿಯ ಜೀವನದಲ್ಲಿ ಸಂಭವಿಸಿದೆ. ಅವರು ತಮ್ಮ ತಂದೆಯ ಮರಣದ 10 ವರ್ಷಗಳ ನಂತರ, ತಮ್ಮ ತಂದೆ ತಮಗೆ ಈ ರೀತಿಯಲ್ಲಿ ಆಶೀರ್ವಾದ ಮಾಡುತ್ತಾರೆ ಎಂದು ಊಹಿಸಿರಲಿಲ್ಲ.ಹಿನೊಜೊಸಾ ಅವರ ತಂದೆ 1960-70ರ ದಶಕದಲ್ಲಿ ಮನೆ ಖರೀದಿಸುವ ಉದ್ದೇಶದಿಂದ ಸುಮಾರು 1.4 ಲಕ್ಷ ರೂ.ಗಳನ್ನು ಬ್ಯಾಂಕಿನಲ್ಲಿ ಠೇವಣಿ ಇಟ್ಟಿದ್ದರು. ಕಾಲಾನಂತರದಲ್ಲಿ ಅವರು ನಿಧನರಾದರು ಮತ್ತು ಅವರ ಕುಟುಂಬದ ಯಾರೊಬ್ಬರಿಗೂ ಈ ಬ್ಯಾಂಕ್ ಠೇವಣಿ ಬಗ್ಗೆ ತಿಳಿದಿರಲಿಲ್ಲ.
ಆದರೆ ಒಂದು ದಿನ ಮನೆಯನ್ನು ಸ್ವಚ್ಛಗೊಳಿಸುವಾಗ ಹಿನೋಜೋಸಾಗೆ 62 ವರ್ಷ ಹಳೆಯ ಹರಿದ ಬ್ಯಾಂಕ್ ಪಾಸ್ ಪುಸ್ತಕ ಸಿಕ್ಕಿತು. ಅದರಲ್ಲಿ ತಂದೆ ಬ್ಯಾಂಕಿನಲ್ಲಿ ಹಣ ಇಟ್ಟಿರುವುದು ಗೊತ್ತಾಯಿತು. ಆದರೆ ದುರಾದೃಷ್ಟಕ್ಕೆ ಪಾಸ್ ಪುಸ್ತಕಕ್ಕೆ ಸಂಬಂಧಿಸಿದ ಬ್ಯಾಂಕ್ ಬಹಳ ಹಿಂದೆಯೇ ಮುಚ್ಚಿಹೋಗಿತ್ತು. ಇದರಿಂದಾಗಿ ಪಾಸ್ ಪುಸ್ತಕದಿಂದ ಯಾವುದೇ ಪ್ರಯೋಜನವಿಲ್ಲ ಎಂದು ಹಿನೋಜೋಸಾ ಆರಂಭದಲ್ಲಿ ಭಾವಿಸಿದ್ದರು.
ಆದರೆ, ನಂತರದಲ್ಲಿ ಆ ಪಾಸ್ ಪುಸ್ತಕದಲ್ಲಿದ್ದ ‘ಸರ್ಕಾರ ಗ್ಯಾರಂಟಿ’ ಎಂಬ ಪದಗಳು ಅವರ ಗಮನ ಸೆಳೆಯಿತು. ಸರ್ಕಾರ ಗ್ಯಾರಂಟಿ ಎಂದರೆ ಬ್ಯಾಂಕ್ ವಿಫಲವಾದರೆ, ಸರ್ಕಾರವು ಹಣವನ್ನು ಹಿಂದಿರುಗಿಸುತ್ತದೆ ಎಂದು ಖಾತ್ರಿ ಕೊಡುವುದು ಎಂದು ಭಾವಿಸಿದ ಅವರು ಬ್ಯಾಂಕಿನಲ್ಲಿಟ್ಟ ಈ ಹಣಕ್ಕೆ ಸರ್ಕಾರವೇ ಖಾತ್ರಿಯಾಗಿದ್ದರಿಂದ ಅದು ಹಣವನ್ನು ಮರುಪಾವತಿಸುತ್ತದೆ ಎಂದು ಹಿನೋಜೋಸಾ ಆಶಿಸಿದರು.
ಹೀಗಾಗಿ ಅವರು ಸರ್ಕಾರ ಅಧಿಕಾರಿಗಳಿಗೆ ಪಾಸ್ ಪುಸ್ತಕ ನೀಡಿ ಬ್ಯಾಂಕಿನಲ್ಲಿಟ್ಟ ಈ ಹಣಕ್ಕೆ ಸರ್ಕಾರವೇ ಗ್ಯಾರಂಟಿ ನೀಡಿದ್ದರಿಂದ ಹಣವನ್ನು ನೀಡುವಂತೆ ಕೇಳಿದ್ದಾರೆ. ಆದರೆ ಸರ್ಕಾರವು ಆರಂಭದಲ್ಲಿ ಹಣ ಕೊಡಲು ನಿರಾಕರಿಸಿತು. ನಂತರ ಹಿನೋಜೋಸಾ ಕಾನೂನು ಹೋರಾಟವನ್ನು ನಡೆಸಿದರು. ಅಂತಿಮವಾಗಿ, ನ್ಯಾಯಾಲಯವು ಸರ್ಕಾರವು ಬಡ್ಡಿ ಸಮೇತ ಹಿನೋಜೋಸಾಗೆ ಹಣವನ್ನು ನೀಡಬೇಕು ಎಂದು ಆದೇಶಿಸಿತು. ಪರಿಣಾಮವಾಗಿ, ಸರ್ಕಾರವು $1.2 ಮಿಲಿಯನ್ (10.28 ಕೋಟಿ ರೂ.) ಮರುಪಾವತಿಸಲು ಒಪ್ಪಿಕೊಂಡಿತು, ಇದರಿಂದಾಗಿ ಅವರು ರಾತ್ರೋರಾತ್ರಿ ಕೋಟ್ಯಧಿಪತಿಯಾದರು. ಬಹಳ ಹಿಂದೆಯೇ ಮುಚ್ಚಿಹೋಗಿದ್ದ ಹಾಗೂ ಎಲ್ಲೋ ಮೂಲೆಯಲ್ಲಿ ಕಸದೊಟ್ಟಿಗೆ ಬಿದ್ದಿದ್ದ ಬ್ಯಾಂಕಿನ ಪಾಸ್ ಪುಸ್ತಕ ಅವರ ಅದೃಷ್ಟದ ಬಾಗಿಲನ್ನೇ ತೆರೆಯಿತು..!
ನಿಮ್ಮ ಕಾಮೆಂಟ್ ಬರೆಯಿರಿ