ಬಿ-2 ಸ್ಟೆಲ್ತ್ ಬಾಂಬರ್‌ ಗಳು, ಬಂಕರ್-ಬಸ್ಟರ್ ಬಾಂಬ್ ಎಂದರೇನು ? ಇರಾನ್‌ ಪರಮಾಣು ಕೇಂದ್ರಗಳ ಮೇಲಿನ ದಾಳಿಗೆ ಅಮೆರಿಕ ಇದನ್ನೇ ಬಳಸಿದ್ದು ಯಾಕೆ..?

ವಾಷಿಂಗ್ಟನ್ : ಇಸ್ರೇಲ್ ಮತ್ತು ಇರಾನ್ ನಡುವಿನ ನಡೆಯುತ್ತಿರುವ ಸೇನಾ ಸಂಘರ್ಷದ ನಡುವೆ ಒಂದು ಅಭೂತಪೂರ್ವ ಕ್ರಮದಲ್ಲಿ, ಅಮೆರಿಕವು ಇರಾನ್‌ನ ಫೋರ್ಡೋ, ನಟಾಂಜ್ ಮತ್ತು ಎಸ್ಫಹಾನ್ ಸೇರಿದಂತೆ ಮೂರು ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ಬಾಂಬ್ ದಾಳಿ ನಡೆಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇದನ್ನು ಪ್ರಕಟಿಸಿದ್ದು, ಅವರು ಈ ಕಾರ್ಯಾಚರಣೆಯನ್ನು “ಅದ್ಭುತ ಮಿಲಿಟರಿ ಯಶಸ್ಸು” ಎಂದು ಬಣ್ಣಿಸಿದ್ದಾರೆ ಹಾಗೂ ಇದು ಅಮೆರಿಕ, ಇಸ್ರೇಲ್ ಮತ್ತು ಜಗತ್ತಿಗೆ ಐತಿಹಾಸಿಕ ಕ್ಷಣ ಎಂದು ಕರೆದಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಅಮೆರಿಕದ ಬಿ-2 ಸ್ಟೆಲ್ತ್ ಬಾಂಬರ್‌ಗಳನ್ನು ನಿಯೋಜಿಸಲಾಗಿತ್ತು ಎಂದು ಟ್ರಂಪ್ ಹೇಳಿದ್ದಾರೆ.
ಈ ಕಾರ್ಯಾಚರಣೆಗಾಗಿ ಅಮೆರಿಕವು ಬಿ-2 ಸ್ಟೆಲ್ತ್ ಬಾಂಬರ್‌ಗಳನ್ನು ನಿಯೋಜಿಸಿದೆ, ಅವು ಹೆಚ್ಚು ಭದ್ರವಾದ ಮತ್ತು ನೆಲದ ಒಳಗೆ ಆಳದಲ್ಲಿರುವ ನೆಲೆಗಳನ್ನು ಅಥವಾ ಕೇಂದ್ರಗಳನ್ನು ಗುರಿಯಾಗಿಸಿ ದಾಳಿ ಮಾಡುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ. ಬಿ-2 ಸ್ಟೆಲ್ತ್ ಬಾಂಬರ್‌ಗಳು ಯಾವುವು, ಅವು ಎಷ್ಟು ಮಾರಕವಾಗಬಹುದು ಮತ್ತು ಅವುಗಳನ್ನು ಶಕ್ತಿಯುತವಾಗಿಸಿದ್ದು ಯಾವುದು ಎಂಬುದರ ಕುರಿತು ಇಲ್ಲಿ ಒಂದು ಸಂಕ್ಷಿಪ್ತ ನೋಟವಿದೆ.

ಬಿ-2 ಸ್ಟೆಲ್ತ್ ಬಾಂಬರ್ ಎಂದರೇನು?
ಬಿ-2 ಸ್ಪಿರಿಟ್ ಸ್ಟೆಲ್ತ್ ಬಾಂಬರ್ ಅಮೆರಿಕ ಶಸ್ತ್ರಾಗಾರದಲ್ಲಿ ಅತ್ಯಂತ ಅತ್ಯಾಧುನಿಕ ಶಸ್ತ್ರಾಸ್ತ್ರಗಳಲ್ಲಿ ಒಂದಾಗಿದೆ, ನಿಖರವಾದ ದಾಳಿಗಳನ್ನು ನಡೆಸಿ ಶತ್ರುಗಳ ಆಧುವಿಕ ವಾಯು ರಕ್ಷಣಾ ವ್ಯವಸ್ಥೆಯನ್ನು ಭೇದಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. ಇದು GBU-57 ಮ್ಯಾಸಿವ್ ಆರ್ಡನೆನ್ಸ್ ಪೆನೆಟ್ರೇಟರ್ (MOP) ಬಾಂಬರ್‌ ಅನ್ನು ಹೊತ್ತೊಯ್ಯಬಲ್ಲದು. ಇದು ಹೆಚ್ಚು ಬಲಯುತವಾದ ಹಾಗೂ ಹೆಚ್ಚು ಸುರಕ್ಷಿತವಾದ ಭೂಗತ ಕೇಂದ್ರಗಳನ್ನು ಅಥವಾ ವ್ಯವಸ್ಥೆಗಳನ್ನು ನಾಶಮಾಡಲು ವಿನ್ಯಾಸಗೊಳಿಸಲಾದ 30,000 ಪೌಂಡ್‌ಗಳ ಬೃಹತ್ ಬಂಕರ್-ಬಸ್ಟರ್ ಬಾಂಬ್ ಆಗಿದೆ.
B-2 ಸ್ಪಿರಿಟ್ ಎಂಬುದು ನಾರ್ತ್ರೋಪ್ ಗ್ರಮ್ಮನ್ ಅಭಿವೃದ್ಧಿಪಡಿಸಿದ ಅಮೇರಿಕನ್ ಸ್ಟೆಲ್ತ್ ಬಾಂಬರ್ ವಿಮಾನವಾಗಿದೆ. ಇದನ್ನು ಸಾಮಾನ್ಯವಾಗಿ B-2 ಬಾಂಬರ್ ಎಂದು ಕರೆಯಲಾಗುತ್ತದೆ. ಇದು ಅತ್ಯುತ್ತಮ ಸ್ಟೆಲ್ತ್ ತಂತ್ರಜ್ಞಾನ, ದೀರ್ಘ ಹಾರಾಟದ ಶ್ರೇಣಿ ಮತ್ತು ಭಾರೀ ಶಸ್ತ್ರಾಸ್ತ್ರಗಳನ್ನು ಸಾಗಿಸುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ. ಇದನ್ನು ಮೊದಲು 1980 ರ ದಶಕದಲ್ಲಿ ವಿನ್ಯಾಸಗೊಳಿಸಲಾಯಿತು ಮತ್ತು 1997 ರಲ್ಲಿ ಪೂರ್ಣ ಸೇವೆಗೆ ಬಂದಿತು.
1989 ರಲ್ಲಿ ಅದರ ಮೊದಲ ಹಾರಾಟದ ನಂತರ, ಈ ವಿಮಾನವು ಯಾವುದೇ ಸನ್ನಿವೇಶದಲ್ಲಿ ವಿಶ್ವದ ಅತ್ಯಂತ ಬಾಳಿಕೆ ಬರುವ ವಿಮಾನಗಳಲ್ಲಿ ಒಂದಾಗಿದೆ, ಅದರ ತಯಾರಕ ನಾರ್ತ್ರೋಪ್ ಗ್ರಮ್ಮನ್ ಪ್ರಕಾರ, ಇದು ಅತ್ಯಂತ ಆಧುನಿಕ ಶತ್ರು ರಕ್ಷಣಾ ವ್ಯವಸ್ಥೆಗಳನ್ನು ಭೇದಿಸುವ ಸಾಮರ್ಥ್ಯವನ್ನು ಹೊಂದಿದೆ.

ಇರಾನ್‌ನ ಪರಮಾಣು ಕೇಂದ್ರಗಳ ಮೇಲೆ ದಾಳಿ ನಡೆಸಲು ಅಮೆರಿಕವು B-2 ಸ್ಟೆಲ್ತ್ ಬಾಂಬರ್‌ಗಳನ್ನು ಏಕೆ ಬಳಸಿತು…?
ಇರಾನ್‌ನ ಫೋರ್ಡೋ ಪರಮಾಣು ಪುಷ್ಟೀಕರಣ ಕೇಂದ್ರದಂತಹ ಹೆಚ್ಚು ಭದ್ರವಾದ ಮತ್ತು ಆಳವಾಗಿ ನೆಲದೊಳಗೆ ಇರುವ ಪರಮಾಣು ಸೌಲಭ್ಯಗಳನ್ನು ಭೇದಿಸುವ ವಿಶಿಷ್ಟ ಸಾಮರ್ಥ್ಯಗಳಿಂದಾಗಿ, ಇರಾನ್‌ನ ಪರಮಾಣು ತಾಣಗಳನ್ನು ಗುರಿಯಾಗಿಸಲು ಅಮೆರಿಕ ಬಿ-2 ಸ್ಟೆಲ್ತ್ ಬಾಂಬರ್‌ಗಳನ್ನು ಬಳಸಿತು. ಭೂಗತ ಪರಮಾಣು ಬಂಕರ್‌ಗಳನ್ನು ನಾಶಮಾಡಲು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾದ ಬಂಕರ್-ಬಸ್ಟರ್ ಬಾಂಬ್, 30,000 ಪೌಂಡ್‌ಗಳ ಜಿಬಿಯು-57 ಮ್ಯಾಸಿವ್ ಆರ್ಡನೆನ್ಸ್ ಪೆನೆಟ್ರೇಟರ್ (ಎಂಒಪಿ) ಅನ್ನು ಹೊತ್ತೊಯ್ಯುವ ಸಾಮರ್ಥ್ಯವಿರುವ ವಿಶ್ವದ ಕೆಲವೇ ವಿಮಾನಗಳಲ್ಲಿ ಈ ವಿಮಾನಗಳು ಸೇರಿವೆ.
ಬಂಡೆಗಳು ಮತ್ತು ಬಲವರ್ಧಿತ ಕಾಂಕ್ರೀಟ್ ಪದರಗಳ ಅಡಿಯಲ್ಲಿ ಅಥವಾ ಕೆಳಗಿರುವ ಕೇಂದ್ರಗಳು ಹಾಗೂ ನೆಲೆಗಳನ್ನು ಈ ಮಟ್ಟದ ನಿಖರತೆ ಮತ್ತು ಶಕ್ತಿಯನ್ನು ಬಳಸಿಕೊಂಡು ಮಾತ್ರ ತಟಸ್ಥಗೊಳಿಸಬಹುದು ಎಂದು ಅಮೆರಿಕ ಮತ್ತು ಇಸ್ರೇಲಿ ಅಧಿಕಾರಿಗಳು ನಿರ್ಧರಿಸಿದ್ದಾರೆ. ಬಿ-2 ನ ಸ್ಟೆಲ್ತ್ ವೈಶಿಷ್ಟ್ಯಗಳು ಇರಾನಿನ ಆಧುನಿಕ ವಾಯು ರಕ್ಷಣಾ ವ್ಯವಸ್ಥೆಗಳಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡುತ್ತದೆ, ಪೈಲಟ್‌ಗಳಿಗೆ ಅಪಾಯ ಕಡಿಮೆ ಮಾಡಿ ಕಾರ್ಯಾಚರಣೆಯ ಯಶಸ್ಸನ್ನು ಖಚಿತಪಡಿಸುತ್ತದೆ.

ಪ್ರಮುಖ ಸುದ್ದಿ :-   ವೀಡಿಯೊ..| 21 ಮಂದಿ ಪ್ರಯಾಣಿಸುತ್ತಿದ್ದ ಹಾಟ್ ಏರ್ ಬಲೂನ್ ಆಗಸದಲ್ಲೇ ಸ್ಫೋಟ ; 8 ಮಂದಿ ದಾರುಣ ಸಾವು: ಸ್ಫೋಟದ ದೃಶ್ಯ ಸೆರೆ

ಬಂಕರ್-ಬಸ್ಟರ್’ ಬಾಂಬ್‌ಗಳು ಯಾವುವು?
ಇರಾನಿನ ಪರಮಾಣು ಸೌಲಭ್ಯಗಳ ಮೇಲಿನ ದಾಳಿಯಲ್ಲಿ ಅಮೆರಿಕವು ಆರು ಬಿ -12 ಬಾಂಬರ್‌ಗಳನ್ನು ಬಳಸಿ ಒಂದು ಡಜನ್ ಜಿಬಿಯು -57 ಎ / ಬಿ ಬೃಹತ್ ಆರ್ಡ್‌ನೆನ್ಸ್ ಪೆನೆಟ್ರೇಟರ್ (ಎಂಒಪಿ) ಬಾಂಬ್‌ಗಳಿಂದ ದಾಳಿ ನಡೆಸಿತು. ಇದನ್ನು “ಬಂಕರ್ ಬಸ್ಟರ್ಸ್” ಎಂದು ಕರೆಯಲಾಗುತ್ತದೆ ಎಂದು ವರದಿಗಳು ತಿಳಿಸಿವೆ. ಇತರ ಎರಡು ಪರಮಾಣು ತಾಣಗಳ ಮೇಲೆ ಅಮೆರಿಕದ ಜಲಾಂತರ್ಗಾಮಿ ನೌಕೆಗಳಿಂದ ಹಾರಿಸಲಾದ 30 ಟೊಮಾಹಾಕ್ ಕ್ಷಿಪಣಿಗಳು ದಾಳಿ ಮಾಡಿದವು.
ಫಾಕ್ಸ್ ನ್ಯೂಸ್‌ನ ಸೀನ್ ಹ್ಯಾನಿಟಿ ಪ್ರಕಾರ, ಇರಾನ್‌ನ ಭೂಮಿ ಅಡಿಯಲ್ಲಿ ಆಳದಲ್ಲಿರುವ ಫೋರ್ಡೋ ಪರಮಾಣು ಸೌಲಭ್ಯವನ್ನು ಗುರಿಯಾಗಿಸಲು ಆರು ಬಂಕರ್-ಬಸ್ಟರ್ ಬಾಂಬ್‌ಗಳನ್ನು ಬಳಸಲಾಗಿದೆ ಎಂದು ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಹೇಳಿದ್ದಾರೆ.
ಫೋರ್ಡೋ ಪರಮಾಣು ತಾಣವು ಇರಾನ್‌ನಲ್ಲಿರುವ ಒಂದು ಭೂಮಿ ಅಡಿಯಲ್ಲಿರುವ ಭೂಗತ ಪರಮಾಣು ಸೌಲಭ್ಯವಾಗಿದ್ದು, ಪರ್ವತಗಳಲ್ಲಿ ನೆಲದಡಿ ಆಳದಲ್ಲಿ ನಿರ್ಮಿಸಲಾಗಿದೆ. ಇದನ್ನು ಇಸ್ರೇಲಿ ಕ್ಷಿಪಣಿಗಳಿಗೆ ತಲುಪಲು ಸಾಧ್ಯವಿಲ್ಲ ಎಂದು ಭಾವಿಸಲಾಗಿದೆ. 13,600 ಕೆಜಿ ತೂಕದ ಅಮೆರಿಕದ “ಬಂಕರ್-ಬಸ್ಟಿಂಗ್” ಬಾಂಬ್ ಮಾತ್ರ ಇರಾನಿನ ಫೋರ್ಡೋ ಪರಮಾಣು ಕೇಂದ್ರವನ್ನು ಹೊಡೆಯುವ ಸಾಮರ್ಥ್ಯವಿರುವ ಏಕೈಕ ಯುದ್ಧ ಶಸ್ತ್ರಾಸ್ತ್ರವಾಗಿದೆ. ಹೀಗಾಗಿ ಇದನ್ನು ಬಳಸುವಂತೆ ಇಸ್ರೇಲ್ ಅಮೆರಿಕಕ್ಕೆ ಮನವಿ ಮಾಡಿತ್ತು.

ಅಮೆರಿಕ ಮಿಲಿಟರಿಯ ಪ್ರಕಾರ, ಬೃಹತ್ ಆರ್ಡನೆನ್ಸ್ ಪೆನೆಟ್ರೇಟರ್ ಎಂದೂ ಕರೆಯಲ್ಪಡುವ ಜಿಬಿಯು -57 ಬಾಂಬ್‌, ಸ್ಫೋಟಗೊಳ್ಳುವ ಮೊದಲು 200 ಅಡಿ (60 ಮೀಟರ್) ಆಳದ ವರೆಗೆ ಭೇದಿಸಿಕೊಂಡು ಹೋಗುವಂತೆ ವಿನ್ಯಾಸಗೊಳಿಸಲಾಗಿದೆ. ಇದು ಇತರ ಕ್ಷಿಪಣಿ ಬಾಂಬ್‌ಗಳಿಗಿಂತ ಭಿನ್ನವಾಗಿದೆ.
ಅಮೆರಿಕ ವಾಯುಪಡೆಯ ಪ್ರಕಾರ, ಎಂಒಪಿ 6,000 ಪೌಂಡ್‌ಗಳ ಸ್ಫೋಟಕಗಳನ್ನು ಹೊಂದಿದ್ದು, ಇದು ಸುರಕ್ಷಿತ ಸ್ಥಳಗಳಲ್ಲಿ ಸಂಗ್ರಹಿಸಿ ಇಟ್ಟುಕೊಂಡಿರುವ ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳನ್ನು ತಲುಪುವ ಮತ್ತು ನಾಶಮಾಡುವ ಸಾಮರ್ಥ್ಯವನ್ನು ಹೊಂದಿದೆ. ಶನಿವಾರ ಈ ಬಾಂಬ್‌ ಅನ್ನು ಅಮೆರಿಕವು ಇರಾನ್‌ ವಿರುದ್ಧದ ಕಾರ್ಯಾಚರಣೆಯಲ್ಲಿ ಬಳಸಿದೆ.
ಅಮೆರಿಕದ ಅತ್ಯಂತ ಮುಂದುವರಿದ ಕಾರ್ಯತಂತ್ರದ ಶಸ್ತ್ರಾಸ್ತ್ರ ವೇದಿಕೆಗಳಲ್ಲಿ ಒಂದಾದ ಯುಎಸ್ ಬಿ-2 ಸ್ಪಿರಿಟ್ ಸ್ಟೆಲ್ತ್ ಬಾಂಬರ್‌ ವಿಮಾನಗಳು ಶನಿವಾರ ಇರಾನ್‌ನ ಪರಮಾಣು ನೆಲೆಗಳ ಮೇಲೆ ದಾಳಿಗಳಲ್ಲಿ ಭಾಗಿಯಾಗಿವೆ ಎಂದು ವರದಿಯಾಗಿದೆ. ಅವು GBU-57 ಬಾಂಬ್‌ಗಳನ್ನು ಸಾಗಿಸುವ ಸಾಮರ್ಥ್ಯವಿರುವ ಏಕೈಕ ವಿಮಾನಗಳಾಗಿವೆ.

B-2 ಬಾಂಬರ್‌ನ ವೈಶಿಷ್ಟ್ಯಗಳು….
B-2 ಸ್ಟೆಲ್ತ್ ಬಾಂಬರ್ ಅನ್ನು ರಾಡಾರ್ ಪತ್ತೆಹಚ್ಚುವುದು ಸಾಧ್ಯವಾಗದಂತೆ ವಿನ್ಯಾಸಗೊಳಿಸಲಾಗಿದೆ, ಅದರ ವಿಶಿಷ್ಟ ಹಾರುವ-ರೆಕ್ಕೆ ರಚನೆ ಮತ್ತು ರಾಡಾರ್ ಸಿಗ್ನಲ್‌ಗಳನ್ನು ಹೀರಿಕೊಳ್ಳುವಂತೆ ತಯಾರಿಸಲಾಗಿದೆ. ಇದರ ಆಕಾರ ಮತ್ತು ವಿಶೇಷ ಲೇಪನವು ಶತ್ರು ಟ್ರ್ಯಾಕಿಂಗ್ ವ್ಯವಸ್ಥೆಗಳಿಗೆ ಬಹುತೇಕ ಅಗೋಚರವಾಗಿರುತ್ತದೆ.
ಪರಮಾಣು ಬಾಂಬ್‌ಗಳು, ಸಾಂಪ್ರದಾಯಿಕ ಸ್ಫೋಟಕಗಳು ಮತ್ತು ನಿಖರ-ನಿರ್ದೇಶಿತ ಯುದ್ಧಸಾಮಗ್ರಿಗಳು ಸೇರಿದಂತೆ 18 ಟನ್‌ಗಳಷ್ಟು ಶಸ್ತ್ರಾಸ್ತ್ರಗಳನ್ನು ಸಾಗಿಸುವ ಸಾಮರ್ಥ್ಯವಿರುವ ಇದು ವಿಶ್ವದ ಅತ್ಯಂತ ಮಾರಕ ವಿಮಾನಗಳಲ್ಲಿ ಒಂದಾಗಿದೆ. B-2 ಬಾಂಬರ್‌ ಇಂಧನ ತುಂಬುವ ಅಗತ್ಯವಿಲ್ಲದೆ ಸುಮಾರು 11,000 ಕಿಲೋಮೀಟರ್ ದೂರದ ವರೆಗೆ ಹಾರಬಲ್ಲದು. ಯುದ್ಧ ಪಡೀತ ಪ್ರದೇಶದಲ್ಲಿ ಅದು ಆಕಾಶದಲ್ಲಿಯೇ ಇಂಧನ ತುಂಬಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ.
ಕೇವಲ ಇಬ್ಬರು ಪೈಲಟ್‌ ಸಿಬ್ಬಂದಿಯಿಂದ ನಿರ್ವಹಿಸಲ್ಪಡುವ ಇದು ಜಾಗತಿಕವಾಗಿ ಅತ್ಯಂತ ದುಬಾರಿ ಮಿಲಿಟರಿ ವಿಮಾನಗಳಲ್ಲಿ ಒಂದಾಗಿದೆ, ಸುಮಾರು 2 ಬಿಲಿಯನ್ USD ಬೆಲೆಯನ್ನು ಹೊಂದಿದೆ. ನಿರ್ಣಾಯಕವಾಗಿ, B-2 ಎರಡು ಬೃಹತ್ 15-ಟನ್ ಬಂಕರ್-ಬಸ್ಟರ್ ಬಾಂಬ್‌ಗಳನ್ನು ಸಾಗಿಸಬಲ್ಲದು, ಇದು ಅಮೆರಿಕದ ಬಳಿ ಮಾತ್ರ ಇದೆ.

ಪ್ರಮುಖ ಸುದ್ದಿ :-   ಇರಾನ್‌-ಇಸ್ರೇಲ್‌ ಯುದ್ಧದಲ್ಲಿ ಅಮೆರಿಕ ಎಂಟ್ರಿ ; ಇರಾನಿನ 3 ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ಬಾಂಬ್ ದಾಳಿ

B-2 ಬಾಂಬರ್ ಎಷ್ಟು ಅಪಾಯಕಾರಿ?
ಬಿ-2 ಬಾಂಬರ್‌ನ ರಹಸ್ಯ ಸಾಮರ್ಥ್ಯವು ಶತ್ರು ರಾಡಾರ್‌ಗಳು ಮತ್ತು ವಾಯು ರಕ್ಷಣಾ ವ್ಯವಸ್ಥೆಗಳಿಗೆ ಸಿಗದೆ ಸುರಕ್ಷಿತವಾಗಿ ಬಚಾವ್‌ ಆಗಲು ಅನುವು ಮಾಡಿಕೊಡುತ್ತದೆ, ಇದು ರಹಸ್ಯವಾಗಿ ದಾಳಿ ನಡೆಸಲು ಬಹಳ ನಂಬಿಗಸ್ಥ ವಿಮಾನ. ಇದರಲ್ಲಿ ಪರಮಾಣು ಮತ್ತು ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯಬಹುದು. ಈ ವಿಮಾನವು 11,000 ಕಿಲೋಮೀಟರ್‌ಗಳ ದೂರದ ವರೆಗೆ ಎಲ್ಲಿಯೂ ನಿಲ್ಲದೆ ಕ್ರಮಿಸಬಲ್ಲದು ಮತ್ತು ನಿಖರವಾದ ದಾಳಿಗಳನ್ನು ನಡೆಸುವ ಸಾಮರ್ಥ್ಯವನ್ನು ಹೊಂದಿದೆ. ಬಿ-2 ಬಾಂಬರ್‌ ಅನ್ನು ಕ್ಷಿಪ್ರ ಮತ್ತು ರಹಸ್ಯ ದಾಳಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ, ಇದು ಯುದ್ಧದಲ್ಲಿ ಗೇಮ್-ಚೇಂಜರ್ ಆಗಿದೆ. ಮಿಲಿಟರಿ ಕಮಾಂಡ್ ಸೆಂಟರ್‌ಗಳು, ವಾಯು ರಕ್ಷಣಾ ವ್ಯವಸ್ಥೆಗಳು ಮತ್ತು ನೆಲದಡಿಯ ಬಂಕರ್‌ಗಳಂತಹ ನಿರ್ಣಾಯಕ ತಾಣಗಳನ್ನು ನಾಶಮಾಡಲು ಇದು ಹೆಚ್ಚು ಸೂಕ್ತವಾಗಿದೆ.
ಬಿ-2 ಅನ್ನು ಕೊಸೊವೊ ಯುದ್ಧ (1999), ಅಫ್ಘಾನಿಸ್ತಾನ (2001), ಇರಾಕ್ ಯುದ್ಧ (2003) ಮತ್ತು ಲಿಬಿಯಾ (2011) ಗಳಲ್ಲಿ ಬಳಸಲಾಯಿತು. ಈಗ, 14 ವರ್ಷಗಳ ನಂತರ, ಇರಾನ್‌ನ ಪರಮಾಣು ನೆಲೆಗಳನ್ನು ನಾಶಮಾಡಲು ಇದನ್ನು ಬಳಸಲಾಗಿದೆ.
ಅಮೆರಿಕದ ಬಳಿ ಇವೆ 20 ಬಿ-2 ಬಾಂಬರ್‌ಗಳು…
ಬಿ-2 ಬಾಂಬರ್ ವಿಶ್ವದ ಅತ್ಯಂತ ದುಬಾರಿ ವಿಮಾನಗಳಲ್ಲಿ ಒಂದಾಗಿದೆ. ಒಂದು ವಿಮಾನದ ಬೆಲೆ ಸುಮಾರು 2 ಬಿಲಿಯನ್ ಅಮೆರಿಕನ್‌ ಡಾಲರ್. ಇದರ ನಿರ್ವಹಣೆ ಮತ್ತು ಬಳಕೆ ತುಂಬಾ ದುಬಾರಿಯಾಗಿದೆ. ಅಮೆರಿಕ ವಾಯುಪಡೆಯು ಕೇವಲ 20 ಬಿ-2 ವಿಮಾನಗಳನ್ನು ಹೊಂದಿದೆ. ಬಿ-2 ಬಾಂಬರ್ ತನ್ನ ರಹಸ್ಯ ತಂತ್ರಜ್ಞಾನ, ದೀರ್ಘ ವ್ಯಾಪ್ತಿ ಮತ್ತು ಭಾರೀ ಶಸ್ತ್ರಾಸ್ತ್ರಗಳನ್ನು ಒಯ್ಯುವ ಸಾಮರ್ಥ್ಯದಿಂದಾಗಿ ಅತ್ಯಂತ ಅಪಾಯಕಾರಿಯಾಗಿದೆ. ಆದಾಗ್ಯೂ, ಅದರ ಹೆಚ್ಚಿನ ವೆಚ್ಚ ಮತ್ತು ಸೀಮಿತ ಸಂಖ್ಯೆಯ ಕಾರಣದಿಂದಾಗಿ, ಇದನ್ನು ಪ್ರತಿ ಕಾರ್ಯಾಚರಣೆಯಲ್ಲಿಯೂ ಬಳಸಲಾಗುವುದಿಲ್ಲ.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement