ವೀಡಿಯೊ..| ಜಗನ್ನಾಥ ರಥಯಾತ್ರೆಯ ವೇಳೆ ಹುಚ್ಚೆದ್ದು ಓಡಿದ ಆನೆಗಳು ; ಭಯಭೀತರಾಗಿ ಓಡಿದ ಭಕ್ತರು

ಅಹಮದಾಬಾದ್‌ನಲ್ಲಿ ನಡೆದ ಜಗನ್ನಾಥ ರಥಯಾತ್ರೆ ಮೆರವಣಿಗೆಗೆ ಕರೆತರಲಾದ ಆನೆಗಳ ಗುಂಪು ಇದ್ದಕ್ಕಿದ್ದಂತೆ ನಿಯಂತ್ರಣ ತಪ್ಪಿದ್ದರಿಂದ ಕೆಲಕಾಲ ಆತಂಕ ನಿರ್ಮಾಣವಾಗಿತ್ತು. ಅನಿರೀಕ್ಷಿತ ಘಟನೆಯಿಂದಾಗಿ ಹಲವಾರು ಭಕ್ತರು ಮತ್ತು ಪಕ್ಕದಲ್ಲಿದ್ದವರು ಹೆದರಿಕೊಂಡು ಅಲ್ಲಿಂದ ಓಡಿಹೋದರು. ಆನೆಗಳು ಜನರಿಂದ ತುಂಬಿಹೋಗಿದ್ದ ರಸ್ತೆಗಳಿಗೆ ನುಗ್ಗಿತ್ತು. ಜನರು ಸುರಕ್ಷತೆಗಾಗಿ ಅಲ್ಲಿಂದ ಓಡುತ್ತಿದ್ದರು.
ಸುದ್ದಿ ಸಂಸ್ಥೆ ಪಿಟಿಐ ಹಂಚಿಕೊಂಡಿರುವ ಭಯಾನಕ ಕ್ಷಣದ ವೀಡಿಯೊ ಅವ್ಯವಸ್ಥೆ ಹಾಗೂ ಆತಂಕದ ಬಗ್ಗೆ ತೋರಿಸುತ್ತದೆ. ಆನೆಗಳು ಗೊಂದಲದಿಂದ ಅತ್ತ ಇತ್ತ ಹೋಗುತ್ತಿರುವಾಗ ಮಾವುತರು ಆನೆಗಳನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಒಂದು ಆನೆ ನೇರವಾಗಿ ಜನಸಂದಣಿಯತ್ತ ನುಗ್ಗಿ, ಕಿರಿದಾದ ಹಾದಿಗಳು ಮತ್ತು ಜನದಟ್ಟಣೆಯ ಬೀದಿಗಳಲ್ಲಿ ಮುಂದಕ್ಕೆ ಸಾಗಿತು. ಜನರು ಸುರಕ್ಷತೆಗಾಗಿ ಓಡಿಹೋಗಬೇಕಾಯಿತು. ಇಷ್ಟು ವರ್ಷದ ರಥಯಾತ್ರೆಯಲ್ಲಿ ಇದೇ ಮೊದಲ ಬಾರಿಗೆ ಇಂಥದ್ದೊಂದು ಘಟನೆ ನಡೆದಿದೆ. ಕೊನೆಗೂ ಆನೆಗಳನ್ನು ನಿಯಂತ್ರಣಕ್ಕೆ ತರಲಾಯಿತು.

ಅಹಮದಾಬಾದ್‌ನಲ್ಲಿ ನಡೆದ 148 ನೇ ಜಗನ್ನಾಥ ರಥಯಾತ್ರೆ ಶುಕ್ರವಾರ ಬೆಳಿಗ್ಗೆ ಪ್ರಾರಂಭವಾಯಿತು, ಭಗವಾನ್ ಜಗನ್ನಾಥ, ಅವರ ಸಹೋದರ ಬಲಭದ್ರ ಮತ್ತು ಸಹೋದರಿ ಸುಭದ್ರಾಳ ದರ್ಶನಕ್ಕಾಗಿ ಸಾವಿರಾರು ಭಕ್ತರು ಜಮಾಯಿಸಿದ್ದರು. ಸಂಪ್ರದಾಯದ ಪ್ರಕಾರ, ಖಲಾಸಿ ಸಮುದಾಯದ ಸದಸ್ಯರು ಜಮಾಲಪುರದ 400 ವರ್ಷಗಳಷ್ಟು ಹಳೆಯದಾದ ಜಗನ್ನಾಥ ದೇವಾಲಯದಿಂದ ಮೂರು ಅಲಂಕರಿಸಲ್ಪಟ್ಟ ರಥಗಳನ್ನು ಶಾಸ್ತ್ರೋಕ್ತವಾಗಿ ಎಳೆದರು.
ಮೆರವಣಿಗೆಯಲ್ಲಿ 18 ಆನೆಗಳು, ಸುಮಾರು 100 ಅಲಂಕೃತ ಟ್ರಕ್‌ಗಳು, 30 ಅಖಾಡಗಳು (ಸ್ಥಳೀಯ ಜಿಮ್‌ಗಳು) ಮತ್ತು ‘ಭಜನೆ ಮಂಡಳಿಗಳು’ ಪಾಲ್ಗೊಂಡಿವೆ. ಶತಮಾನಗಳಷ್ಟು ಹಳೆಯದಾದ ಸಂಪ್ರದಾಯವನ್ನು ವೀಕ್ಷಿಸಲು ಅಂದಾಜು ಲಕ್ಷಾಂತರ ಭಕ್ತರು ಬೀದಿಗಳಲ್ಲಿ ಸಾಲುಗಟ್ಟಿ ನಿಲ್ಲುತ್ತಾರೆ.

ಸುಮಾರು 23,800 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಹೆಚ್ಚುವರಿಯಾಗಿ, 41 ಡ್ರೋನ್‌ಗಳು, 96 ಸ್ಥಿರ ಕ್ಯಾಮೆರಾಗಳು, 25 ಕಾವಲು ಗೋಪುರಗಳು ಮತ್ತು ಪೊಲೀಸ್ ಕಮಾಂಡ್ ಸೆಂಟರ್‌ಗೆ ನೇರವಾಗಿ ಸಂಪರ್ಕ ಹೊಂದಿದ 2,872 ಬಾಡಿ ಕ್ಯಾಮೆರಾಗಳ ಮೂಲಕ ಭದ್ರತೆಯನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ. ಭವ್ಯ ಮೆರವಣಿಗೆಯು ಹಳೆಯ ನಗರದ ಮೂಲಕ 16 ಕಿಲೋಮೀಟರ್ ಮಾರ್ಗವನ್ನು ಕ್ರಮಿಸಿ, ರಾತ್ರಿ 8 ಗಂಟೆಯ ಹೊತ್ತಿಗೆ ದೇವಾಲಯಕ್ಕೆ ಮರಳುವ ನಿರೀಕ್ಷೆಯಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ತಮ್ಮ ಕುಟುಂಬದೊಂದಿಗೆ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಚಿನ್ನದ ಪೊರಕೆಯಿಂದ ರಸ್ತೆಯನ್ನು ಸ್ವಚ್ಛಗೊಳಿಸುವ ಸಾಂಕೇತಿಕ ಆಚರಣೆಯಾದ ‘ಪಹಿಂದ್ ವಿಧಿ’ಯನ್ನು ನೆರವೇರಿಸಿದರು.

ಪ್ರಮುಖ ಸುದ್ದಿ :-   ವೀಡಿಯೊ..| ಭಾರತದ ರಕ್ಷಣಾ ವ್ಯವಸ್ಥೆಗಳ ಬಗ್ಗೆ ಚೀನಾ ಗುಪ್ತಚರ ಮಾಹಿತಿ ನೀಡಿದ್ದನ್ನು ಒಪ್ಪಿಕೊಂಡ ಪಾಕಿಸ್ತಾನದ ರಕ್ಷಣಾ ಸಚಿವ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement