ಕನ್ನಡದ ಹಿರಿಯ ನಟಿ ಬಿ. ಸರೋಜಾದೇವಿ ಇನ್ನಿಲ್ಲ

ಬೆಂಗಳೂರು: ಕನ್ನಡದ ಹಿರಿಯ ನಟಿ ಬಿ. ಸರೋಜಾದೇವಿ (87) ಇಂದು ವಿಧಿವಶರಾಗಿದ್ದಾರೆ. ಸ್ಯಾಂಡಲ್‌ವುಡ್‌ನ ಅಭಿನಯ ಶಾರದೆ ಎಂದು ಹೆಸರು ಪಡೆದಿದ್ದ ಇವರು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ಇವರು ಹಲವು ಭಾಷೆಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದ ಇವರು ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಸರೋಜಾದೇವಿ ಅವರು 1955 ರಿಂದ 1984 ರವರೆಗೆ ಸತತವಾಗಿ 161 ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದರು. ಮಹಾಕವಿ ಕಾಳಿದಾಸ, ಕಿತ್ತೂರು ಚೆನ್ನಮ್ಮ, ಅಣ್ಣಾ ತಮ್ಮ, ಭಕ್ತ ಕನಕದಾಸ, ಬಾಳೇ ಬಂಗಾರ, ನಾಗಕನ್ಯೆ, ಬೆಟ್ಟದ ಹೂವು, ಕಸ್ತೂರಿ ನಿವಾಸ ಸೇರಿದಂತೆ ಅನೇಕ ಕನ್ನಡ ಚಿತ್ರಗಳಲ್ಲಿ ನಟಿಸಿದ್ದರು. ನಾಡೋಡಿ ಮನ್ನನ್, ಕರ್ಪೂರ ಕರಸಿ, ಪಾಂಡುರಂಗ ಮಹಾತ್ಯಂ, ತಿರುಮಣಂ ತಮಿಳು ಚಿತ್ರಗಳಲ್ಲಿ ಅಭಿನಯಿಸಿದ್ದರು. ಕೊನೆಯದಾಗಿ 2020 ರಲ್ಲಿ ಪುನೀತ ರಾಜಕುಮಾರ ಅಭಿನಯದ ನಟ ಸಾರ್ವಭೌಮ ಚಿತ್ರದಲ್ಲಿ ನಟಿಸಿದ್ದರು.

ಸರೋಜಾದೇವಿ ಅವರು 1969ರಲ್ಲಿ ಪದ್ಮಶ್ರೀ ಮತ್ತು 1992ರಲ್ಲಿ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು. ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಮತ್ತು ತಮಿಳುನಾಡಿನಿಂದ ಕಲೈಮಾಮಣಿ ಪ್ರಶಸ್ತಿಯನ್ನು ಪಡೆದಿದ್ದಾರೆ.
1938ರ ಜನವರಿ 7ರಂದು ಬೆಂಗಳೂರಿನಲ್ಲಿ ಜನಿಸಿದರು. ಅವರ ತಂದೆ ಬೈರಪ್ಪ ಪೊಲೀಸ್ ಅಧಿಕಾರಿಯಾಗಿದ್ದರು. ತಾಯಿ ರುದ್ರಮ್ಮಾ. ಬಾಲ್ಯದಿಂದಲೇ ಕಲೆ ಹಾಗೂ ನೃತ್ಯದಲ್ಲಿ ಆಸಕ್ತಿ ಹೊಂದಿದ್ದ ಇವರಿಗೆ ತಂದೆಯ ಪ್ರೋತ್ಸಾಹ ದೊರಕಿತ್ತು. ಚಿತ್ರರಂಗಕ್ಕೆ ಬರಲು ತಂದೆಯಿಂದಲೇ ಬೆಂಬಲ ಸಿಕ್ಕಿತ್ತು. ಸರೋಜಾ ದೇವಿ ಅವರು 1967ರಲ್ಲಿ ಹರ್ಷ ಅವರನ್ನು ವಿವಾಹ ಆದರು. 1986ರಲ್ಲಿ ಪತಿ ನಿಧನ ಹೊಂದಿದರು. ಸರೋಜಾದೇವಿ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಆರೂವರೆ ದಶಕಗಳ ಕಾಲ ಅವರು ಚಿತ್ರರಂಗದಲ್ಲಿ ಇದ್ದ ಅವರು ಕಳೆದ ಕೆಲವು ವರ್ಷಗಳಿಂದ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು.

ಪ್ರಮುಖ ಸುದ್ದಿ :-   ಇಂದು ಸಿಎಂ ಆಗಿ ಡಿಕೆ ಶಿವಕುಮಾರ ಪ್ರಮಾಣ ವಚನ: ಪರಮೇಶ್ವರ ಡಿಸಿಎಂ ; 13 ಶಾಸಕರಿಗೆ ಸಚಿವ ಸ್ಥಾನ ; ಪಟ್ಟಿ ಇಲ್ಲಿದೆ

1955ರಲ್ಲಿ ತಮ್ಮ 17ನೇ ವಯಸ್ಸಿನಲ್ಲಿಯೇ ಕನ್ನಡ ಚಿತ್ರರಂಗದ ಭೀಷ್ಮ ಹೊನ್ನಪ್ಪ ಭಾಗವತರ್ ಅವರ `ಮಹಾಕವಿ ಕಾಳಿದಾಸ’ ಚಿತ್ರದಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ನಂತರ ಇವರ ನಟನೆಯನ್ನು ನೋಡಿ ಅನೇಕ ಅವಕಾಶಗಳು ದೊರೆತವು. ಕನ್ನಡ ಮಾತ್ರವಲ್ಲದೆ, ಹಿಂದಿ, ತಮಿಳು, ತೆಲಗು ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದಾರೆ. ಅವರ ವೃತ್ತಿ ಬದುಕಿನಲ್ಲಿ ಸುಮಾರು 200ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದರು. ಮೇರು ನಟರಾದ ರಾಜಕುಮಾರ, ಕಲ್ಯಾಣಕುಮಾರ ಮೊದಲಾದವರ ಜೊತೆ ಪಾತ್ರಗಳನ್ನು ಮಾಡಿದ್ದಾರೆ. ‘ಅಮರ ಶಿಲ್ಪಿ ಜಕಣಾಚಾರಿ’, ‘ಮಲ್ಲಮ್ಮನ ಪವಾಡ’, ಭಾಗ್ಯವಂತರು, ‘ಬಬ್ರುವಾಹನ’ ಕಥಾಸಂಗಮ ಮುಂತಾದ ಕನ್ನಡ ಸಿನಿಮಾಗಳಲ್ಲಿ ಸರೋಜಾ ದೇವಿ ನಟನೆ ಮೂಲಕ ಹೆಸರು ಮಾಡಿದ್ದಾರೆ. ತಮಿಳಿನಲ್ಲಿ ‘ಪಾಟ್ಟಾಲಿ ಮುತ್ತು’, ‘ಪಡಿಕಥ ಮೇಥೈ’, ‘ಕಲ್ಯಾಣ ಪರಿಸು’, ತೆಲುಗಿನಲ್ಲಿ ‘ಪಂಡರಿ ಭಕ್ತಲು’, ‘ದಕ್ಷಯಜ್ಞಂ’, ಹಿಂದಿಯಲ್ಲಿ ‘ಆಶಾ’, ‘ಮೆಹಂದಿ ಲಗಾ ಕೆ ರಖನಾ’ ಮೊದಲಾದ ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement