
ಲಕ್ನೋ: 10 ವರ್ಷಗಳ ಹಿಂದೆ ತನ್ನ ತಾಯಿಯನ್ನು ಒಬ್ಬ ವ್ಯಕ್ತಿ ಅವಮಾನಿಸಿ ಥಳಿಸಿದ್ದ ಕಾರಣಕ್ಕೆ ಈಗ ಆ ವ್ಯಕ್ತಿಯ ಕೊಲೆ (Murder) ಮಾಡುವ ಮೂಲಕ ಮಗ ಸೇಡು ತೀರಿಸಿಕೊಂಡಿದ್ದಾನೆ. ಈ ಘಟನೆ ಉತ್ತರ ಪ್ರದೇಶದ ಲಕ್ನೋನಲ್ಲಿ ನಡೆದಿದೆ. ಇದೊಂದು ಬಾಲಿವುಡ್ನ ಚಿತ್ರಕಥೆಯಂತೆ ತೋರುತ್ತದೆ. ಸೇಡಿನ ಕಿಚ್ಚು ಥಳಿತದ ಘಟನೆ ನಡೆದ 10 ವರ್ಷಗಳ ನಂತರ ಆರೋಪಿ ಸೋನು ಕಶ್ಯಪ್ ಎಂಬಾತ ಮನೋಜ ಎಂಬವನನ್ನು ಹುಡುಕಿ ಹತ್ಯೆಗೈಯ್ಯಲು ಕಾರಣವಾಯಿತು.
10 ವರ್ಷಗಳ ಹಿಂದೆ ಮನೋಜ ಎಂಬ ವ್ಯಕ್ತಿ ಮಹಿಳೆಗೆ ಹೊಡೆದಾಗ ಆಕೆಯ ಪುತ್ರ ಸೋನು ಕಶ್ಯಪಗೆ ಕೇವಲ 11 ವರ್ಷ. ಅಂದಿನಿಂದ ಮನೋಜನನ್ನು ಹುಡುಕುತ್ತಾ ಮುಂದಿನ 10 ವರ್ಷಗಳ ಕಾಲ ಲಕ್ನೋದ ಬೀದಿಗಳಲ್ಲಿ ಅಲೆದಾಡಿದ ಸೋನು ಕಶ್ಯಪ ಕೊನೆಗೂ ಮನೋಜನನ್ನು ಹುಡುಕಿ ತನ್ನ ಸೇಡು ತೀರಿಸಿಕೊಂಡ, ಆದರೆ ಸೇಡಿನ ಹಿಂದೆ ಬಿದ್ದು ಈಗ ಜೈಲು ಪಾಲಾಗಿದ್ದಾನೆ.
ಕೊಲೆಯ ನಂತರ ಜಬರ್‌ದಸ್ತ್ ಪಾರ್ಟಿ ನೀಡುವುದಾಗಿ ಭರವಸೆ ನೀಡಿ ತನ್ನ ಸ್ನೇಹಿತರನ್ನೂ ಮನೋಜ ಕೊಲೆಯ ಸಂಚಿನಲ್ಲಿ ಭಾಗಿಯಾಗುವಂತೆ ಮಾಡಿದ್ದ. ಅವರು ಚೆನ್ನಾಗಿ ರೂಪಿಸಿದ ಯೋಜನೆಯನ್ನು ಕಾರ್ಯಗತಗೊಳಿಸಿ ಎಳೆನೀರು ಮಾರಾಟಗಾರ ಮನೋಜನನ್ನು ಕೊಲೆ ಮಾಡಿದರು. ಆದರೆ ಸಾಮಾಜಿಕ ಮಾಧ್ಯಮ ಪೋಸ್ಟ್ ಒಂದು ಪೊಲೀಸರಿಗೆ ಅವರನ್ನು ಸೆರೆ ಹಿಡಿಯಲು ಸುಳಿವು ನೀಡಿತು. ಬಂಧಿತ ಆರೋಪಿಗಳನ್ನು ಸೋನು (21), ರಂಜೀತ್, ಆದಿಲ್, ಸಲಾಂ ಮತ್ತು ರೆಹಮತ್ ಅಲಿ ಎಂದು ಗುರುತಿಸಲಾಗಿದೆ.

ಪ್ರತೀಕಾರದ ಸಂಚು…
ಮನೋಜ ಎಂಬಾತ ಸುಮಾರು 10 ವರ್ಷಗಳ ಹಿಂದೆ ನಡೆದ ವಿವಾದವೊಂದರಲ್ಲಿ ಸೋನುವಿನ ತಾಯಿಯನ್ನು ಥಳಿಸಿ ಆ ಪ್ರದೇಶದಿಂದ ಪರಾರಿಯಾಗಿದ್ದ. ತನ್ನ ತಾಯಿಗೆ ಆದ ಅವಮಾನದಿಂದ ಕೋಪಗೊಂಡಿದ್ದ ಸೋನು ಆತನನ್ನು ಹುಡುಕಲು ಪ್ರಾರಂಭಿಸಿದ್ದ. ಸಮಯ ಕಳೆದುಹೋಯಿತು, ಆದರೂ ಆತ ತನ್ನ ಹಟ ಬಿಡಲಿಲ್ಲ. ಸುಮಾರು ಮೂರು ತಿಂಗಳ ಹಿಂದೆ, ಸೋನು ಕೊನೆಗೂ ಮನೋಜ ಎಲ್ಲಿದ್ದಾನೆಂದು ಪತ್ತೆ ಹಚ್ಚಿದ. ಮನೋಜ ಲಕ್ನೋ ನಗರದ ಮುನ್ಶಿ ಪುಲಿಯಾ ಪ್ರದೇಶದಲ್ಲಿರುವುದನ್ನು ಈತ ಕಂಡುಕೊಂಡ. ಅಲ್ಲಿಂದಲೇ ಸೇಡು ತೀರಿಸಿಕೊಳ್ಳಲು ಸಂಚಿನ ಯೋಜನೆ ಪ್ರಾರಂಭವಾಯಿತು.
ಮನೋಜನ ದೈನಂದಿನ ವೇಳಾಪಟ್ಟಿ ಹೇಗೆ ಇರುತ್ತದೆ ಎಂದು ತಿಳಿದುಕೊಂಡ. ನಂತರ ಸೋನು ಅವನನ್ನು ಕೊಲ್ಲಲು ಒಂದು ನಿಖರವಾದ ಯೋಜನೆ ಸಿದ್ಧಪಡಿಸಿದ. ಆದರೆ ಅವನಿಗೆ ಸಂಪನ್ಮೂಲಗಳು ಬೇಕಾಗಿದ್ದವು. ಹೀಗಾಗಿ ಕೊಲೆಯ ನಂತರ ಭರ್ಜರಿ ಪಾರ್ಟಿ ಕೊಡುವುದಾಗಿ ಭರವಸೆ ನೀಡಿ, ಕೊಲೆಯ ಸಂಚಿನಲ್ಲಿ ತನ್ನ ನಾಲ್ವರು ಸ್ನೇಹಿತರನ್ನು ಭಾಗಿಯಾಗುವಂತೆ ಮಾಡಿದ. ಮೇ 22 ರಂದು, ಮನೋಜ ತನ್ನ ಅಂಗಡಿಯನ್ನು ಮುಚ್ಚಿ ಹೋಗುವ ಸಮಯದಲ್ಲಿ ಒಬ್ಬನೇ ಇರುವ ಸಮಯ ನೋಡಿ ಸೋನು ಹಾಗೂ ಆತನ ಸಹಚರರು ಮನೋಜನ ಮೇಲೆ ಕಬ್ಬಿಣದ ರಾಡ್‌ಗಳಿಂದ ಹಲ್ಲೆ ಮಾಡಿದರು, ಅರ್ಧ ಸತ್ತಂತಾಗಿದ್ದ ಆತನನ್ನು ಅಲ್ಲೇ ಬಿಟ್ಟು ಹೋದರು. ನಂತರ ಮನೋಜ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಸಮಯದಲ್ಲಿ ಮೃತಪಟ್ಟ.
ಆದರೆ ಪೊಲೀಸರಿಗೆ ಕೊಲೆಗಾರರನ್ನು ಹುಡುಕುವುದು ಕಷ್ಟವಾಯಿತು. ಆರೋಪಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದರೂ, ಪೊಲೀಸರಿಗೆ ಅವರನ್ನು ಹುಡುಕಲು ಸಾಧ್ಯವಾಗಲಿಲ್ಲ.
ಏತನ್ಮಧ್ಯೆ, ಕೊಲೆ ನಡೆದ ನಂತರ, ಸೋನು ಮತ್ತು ಆತನ ಸ್ನೇಹಿತರಿಗೆ ಅದು ಪಾರ್ಟಿ ಸಮಯವಾಗಿತ್ತು. ಆತನ ತಾನು ನೀಡಿದ ಭರವಸೆಯಂತೆ ತನ್ನ ಸ್ನೇಹಿತರಿಗಾಗಿ ಅದ್ದೂರಿ ಎಣ್ಣೆ ಪಾರ್ಟಿ ನೀಡಿದ. ಮದ್ಯದ ಅಮಲು ಹೆಚ್ಚಾಯಿತು. ಮದ್ಯದ ಅಮಲಿನಲ್ಲಿಯೇ ಅವರು ಪಾರ್ಟಿ ಮಾಡಿದ್ದ ಕೆಲವು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಆಯಿತು. ಇದು ಇವರನ್ನು ಹುಡುಕುತ್ತಿದ್ದ ಪೊಲೀಸರಿಗೆ ಶಂಕಿತರ ಮೇಲೆ ಗಮನ ಹರಿಸಲು ಸಹಾಯ ಮಾಡಿತು.
ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬರುವ ಐದು ಶಂಕಿತರಲ್ಲಿ ಒಬ್ಬನನ್ನು ಸಾಮಾಜಿಕ ಮಾಧ್ಯಮದ ಫೋಟೋಗಳಲ್ಲಿ ಪೊಲೀಸರು ಗುರುತಿಸಿದರು. ಹೆಚ್ಚಿನ ಹುಡುಕಾಟದ ನಂತರ ಆತನ ಸಾಮಾಜಿಕ ಮಾಧ್ಯಮ ಪ್ರೊಫೈಲ್‌ಗಳು ಪೊಲೀಸರಿಗೆ ಸಿಕ್ಕವು. ಕೊಲೆಯ ಸಮಯದಲ್ಲಿ ಆತ ಧರಿಸಿದ್ದ ಕಿತ್ತಳೆ ಬಣ್ಣದ ಟೀ ಶರ್ಟ್ ಅನ್ನು ಆತ ಸಾಮಾಜಿಕ ಮಾಧ್ಯಮದಲ್ಲಿದ್ದ ಫೋಟೋದಲ್ಲಿಯೂ ಧರಿಸಿರುವುದು ಕಂಡುಬಂದಿತು. ತಕ್ಷಣವೇ ಕಾರ್ಯಪ್ರವೃತ್ತರಾದ ಆತನನ್ನು ಬಂಧಿಸಿದರು. ನಂತರ ಇದು ಎಲ್ಲರ ಬಂಧನಕ್ಕೂ ಕಾರಣವಾಯಿತು. ಸೇಡಿನ ಹಿಂದೆ ಬಿದ್ದ ಸೋನು ಹಾಗೂ ಕೊಲೆ ಮಾಡಲು ಸಹಾಯ ಮಾಡಿದ ಆರೋಪದ ಮೇಲೆ ಈತನ ಸ್ನೇಹಿತರು ಈಗ ಕಂಬಿಯ ಹಿಂದೆ ಇದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ