ಧಾರವಾಡ | ಹಲ್ಲೆ ನಡೆಸಿ ಪರಾರಿಯಾಗಲು ಯತ್ನ ; ಇಬ್ಬರು ಕಳ್ಳತನದ ಆರೋಪಿಗಳಿಗೆ ಪೊಲೀಸರ ಗುಂಡೇಟು

ಧಾರವಾಡ: ನಗರದಲ್ಲಿ ಬೆಳ್ಳಂ ಬೆಳಗ್ಗೆ ಗುಂಡಿನ ಸದ್ದು ಕೇಳಿ ಬಂದಿದೆ. ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ಇಬ್ಬರ ಕಳ್ಳರ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಧಾರವಾಡದ ವಿದ್ಯಾಗಿರಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮುಜಾಮಿಲ್ ಸೌದಾಗಾರ​, ವಿಜಯ ಅಣ್ಣಿಗೇರಿ​ ಎಂಬವರು ಪೊಲೀಸರಿಂದ ಗುಂಡೇಟಿನಿಂದ ಗಾಯಗೊಂಡ ಆರೋಪಿಗಳಾಗಿದ್ದಾರೆ. ಇವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಧಾರವಾಡದ ಗಿರಿನಗರದ ಬಡಾವಣೆಯಲ್ಲಿ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದರು. ಬಳಿಕ ಅಲ್ಲಿಂದ ಪರಾರಿಯಾಗುತ್ತಿದ್ದಾಗ ಈ ಘಟನೆ ನಡೆದಿದೆ. ಪಿಎಸ್ಐ ಮಲ್ಲಿಕಾರ್ಜುನ ಹಾಗೂ ಕಾನ್ಸ್​ಟೇಬಲ್​ ಮಹ್ಮದ್​ ಇಸಾಕ್ ನಧಾಪ್​ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಕಳ್ಳರು ಯತ್ನಿಸಿದ್ದರು. ಹೀಗಾಗಿ ಆತ್ಮರಕ್ಷಣೆಗಾಗಿ ಮಲ್ಲಿಕಾರ್ಜುನ ಅವರು ಕಳ್ಳರ ಕಾಲಿಗೆ ಗುಂಡು ಹಾರಿಸಿದ್ದಾರೆ. ಗಾಯಾಳುಗಳು ಹಾಗೂ ಪೊಲೀಸರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸ್ ಕಮಿಷನರ್​ .ಎನ್​. ಶಶಿಕುಮಾರ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಘಟನೆ ಬಗ್ಗೆ ಮಾಹಿತಿ ನೀಡಿದ ಹುಬ್ಬಳ್ಳಿ-ಧಾರವಾರ ಮಹಾನಗರ ಪೊಲೀಸ್‌ ಆಯುಕ್ತ ಎನ್​. ಶಶಿಕುಮಾರ್ ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಧಾರವಾಡದ ವಿದ್ಯಾಗಿರಿ ಪೊಲೀಸ್​ ಠಾಣಾ ಸರಹದ್ದಿನಲ್ಲಿ ಪೊಲೀಸ್​​ ತರಬೇತಿ​ ಕಾಲೇಜು(ಪಿಟಿಸಿ) ಬಳಿ ದ್ವಿಚಕ್ರ ವಾಹನದಲ್ಲಿ ದೂರದರ್ಶನದ ಉದ್ಯೋಗಿಯೊಬ್ಬರು ರಾತ್ರಿ ಸುಮಾರು 9-10 ಗಂಟೆ ಸಮಯದಲ್ಲಿ ಬಸ್​ ಹಿಡಿಯಲು ಬರತ್ತಿದ್ದರು. ಈ ಸಂದರ್ಭ ಮೂರು ಜನ ಏಕಾಏಕಿ ಅಡ್ಡ ಹಾಕಿ ಹಲ್ಲೆ ನಡೆಸಿ ಅವರ ಬಳಿ ಇದ್ದ ಬೈಕ್​, ಹಣ ಕಿತ್ತುಕೊಳ್ಳಲು ಪ್ರಯತ್ನಿಸಿದ್ದರು. ಈ ವೇಳೆ, ಕಳ್ಳರಿಂದ ತಪ್ಪಿಸಿಕೊಂಡ ಅವರು ವೇಗವಾಗಿ ಬೈಕ್‌ ಓಡಿಸಿಕೊಂಡು ಬಂದು, ದರೋಡೆ ಪ್ರಯತ್ನದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು ಎಂದು ಶಶಿಕುಮಾರ ಘಟನೆ ಬಗ್ಗೆ ವಿವರಿಸಿದ್ದಾರೆ.

ಪ್ರಮುಖ ಸುದ್ದಿ :-   ವಿಡಿಯೊ | ದಾಂಡೇಲಿಯ ರೆಸಾರ್ಟ್‌ನಲ್ಲಿ ಜಿಪ್‌ಲೈನ್ ದುರಂತ: 40 ಅಡಿ ಎತ್ತರದಿಂದ ಬಿದ್ದು ಯುವಕನಿಗೆ ಗಂಭೀರ ಗಾಯ

ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಬುಧವಾರ ರಾತ್ರಿಯೇ, ಧಾರವಾಡ ನಗರದ ಮೂರು ಪೊಲೀಸ್​ ಠಾಣೆಯ ಇನ್ಸ್​ಪೆಕ್ಟರ್​, ಕ್ರೈಂ ಸಿಬ್ಬಂದಿ, ಹಾಗೂ ಉಳಿದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಅವರು ಅಲರ್ಟ್​ ಆಗಿ ಅಲ್ಲಲ್ಲಿ ಚೆಕ್​ ಪೋಸ್ಟ್​ಗಳನ್ನು ಹಾಕಿಕೊಂಡು ಕಳ್ಳರನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಈ ವೇಳೆ ಇಂದು, ಗುರುವಾರ ಬೆಳಗಿನ ಜಾವ 2-3ಗಂಟೆಗೆ ಸುಮಾರಿಗೆ ಓರ್ವ ಆರೋಪಿ ಹುಸೇನ್‌ ಸಾಬ್‌ ಕನವಳ್ಳಿ ಸಿಕ್ಕಿಬಿದ್ದಿದ್ದಾನೆ. ಕರ್ನಾಟಕ, ಗೋವಾ, ಮಹಾರಾಷ್ಟ್ರ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಈತನ ಮೇಲೆ 30-35ಕ್ಕಿಂತ ಅಧಿಕ ಕಳ್ಳತನ, ಇತರ ಪ್ರಕರಣಗಳು ದಾಖಲಾಗಿರುವುದು ಕಂಡು ಬಂದಿದೆ. ಈತನ ವಿಚಾರಣೆ ನಡೆಸಿದಾಗ ೀತ ಜತೆ ಅಪರಾಧ ಎಸೆಗುವಾಗ ಇದ್ದವರ ಬಗ್ಗೆ, ಅವರು ತಂಗಿದ್ದ ಜಾಗದ ಮಾಹಿತಿ ನೀಡಿದ್ದಾನೆ ಎಂದು ಪೊಲೀಸ್‌ ಆಯುಕ್ತರು ತಿಳಿಸಿದರು.

ನಂತರ ಈತನ ಹೇಳಿದ ಜಾಗ ತೋರಿಸಲು ಈತನನ್ನು ಕರೆದುಕೊಂಡು ಹೋಗಲಾಯಿತು. ಅಲ್ಲಿ ದ್ವಿಚಕ್ರ ವಾಹನಗಳು ಹಾಗೂ ಇಬ್ಬರು ವ್ಯಕ್ತಿಗಳು ಓಡಾಡಿಕೊಂಡಿರುವುದು ಕಂಡು ಬರುತ್ತದೆ. ಪೊಲೀಸರು ಅವರನ್ನು ಹಿಡಿಯಲು ಹೋದ ಸಂದರ್ಭದಲ್ಲಿ ಆರೋಪಿ ಹುಸೇನ್​ ಸಾಬ್​ ಕನವಳ್ಳಿ ಪೊಲೀಸರನ್ನು ತಳ್ಳಿ ತಪ್ಪಿಸಿಕೊಂಡು ಓಡಿಹೋಗಿದ್ದಾನೆ. ಅಲ್ಲಿದ್ದ ಇಬ್ಬರನ್ನು ಪೊಲೀಸರು ಬಂಧಿಸಲು ಮುಂದಾದಾಗ ಆರೋಪಿಗಳು ಕೈಗೆ ಸಿಕ್ಕಿದ ಕಲ್ಲು, ಇತರ ವಸ್ತುಗಳನ್ನು ಪೊಲೀಸರತ್ತ ಎಸೆದು ಹಲ್ಲೆ ಮಾಡಿದ್ದಾರೆ. ಹೀಗಾಗಿ ಪೊಲೀಸರು ಮೊದಲು 3 ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಆದರೂ ಅವರು ತಪ್ಪಿಸಿಕೊಳ್ಳಲು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದಾಗ ಆತ್ಮರಕ್ಷಣೆಗಾಗಿ ಇಬ್ಬರು ಆರೋಪಿಗಳ ಕಾಲಿಗೆ ಶೂಟ್​ ಮಾಡಲಾಗಿದೆ. ನಂತರ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಅವರನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ಪೊಲೀಸ್​ ಸಿಬ್ಬಂದಿಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು. ಮೊದಲು ಪೊಲೀಸ್​ ವಶದಲ್ಲಿದ್ದಾಗ ತಪ್ಪಿಸಿಕೊಂಡಿರುವ ಹುಸೇನ್​ ಸಾಬ್ ಕನವಳ್ಳಿಯ ಪತ್ತೆಗೆ ಹುಡುಕಾಟ ನಡೆಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಮೂರು ತಿಂಗಳ ಬಳಿಕ ಸಮಾಧಿ ಅಗೆದು ತಾಯಿಯ ಶವವನ್ನು ಬೈಕ್​ನಲ್ಲಿ ತಂದ ಮಕ್ಕಳು...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement