
ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿ-ಕುಮಟಾ ಹೆದ್ದಾರಿಯ ದೇವಿಮನೆ ಘಟ್ಟದ ದೇವಸ್ಥಾನದ ಬಳಿ ಭಾನುವಾರ ಭೂ ಕುಸಿತ ಉಂಟಾಗಿದೆ ಎಂದು ವರದಿಯಾಗಿದೆ. ನಿರಂತರವಾಗಿ ವಿಪರೀತ ಮಳೆ ಸುರಿಯುತ್ತಿರುವುದರಿಂದ ಭೂ ಕುಸಿತವಾಗಿದೆ.
ದೇವಿ ಮನೆಯ ಕ್ಷೇತ್ರ ಪಾಲೇಶ್ವರ ದೇವಸ್ಥಾನಕ್ಕೆ ಇಳಿಯುವ ಮೆಟ್ಟಿಲುಗಳಿಗೆ ಸಮೀಪದಲ್ಲಿ ಭೂ ಕುಸಿತ ಉಂಟಾಗಿದೆ. ದೇವಸ್ಥಾನದ ಮೆಟ್ಟಿಲುಗಳಿಂದ ಸುಮಾರು 20-25 ಅಡಿಗಳಷ್ಟು ದೂರದಲ್ಲಿ ಭೂ ಕುಸಿತ ಉಂಟಾಗಿದ್ದು, ದೇವಸ್ಥಾನದ ಮುಂದುಗಡೆಯೇ ಆಗಿದೆ. ರಸ್ತೆ ಬದಿಯ ಅಪಾರ ಪ್ರಮಾಣದ ಗುಡ್ಡ ಕುಸಿದು ಕಲ್ಲು-ಮಣ್ಣುಗಳು ಘಟ್ಟದ ಕೆಳಕ್ಕೆ ಕಂದಕಕ್ಕೆ ಜಾರಿದೆ.
ಘಟ್ಟದ ರಸ್ತೆಗೆ ಹೊಂದಿಕೊಂಡೇ ಭೂ ಕುಸಿತ ಉಂಟಾಗಿದೆ ಎನ್ನಲಾಗಿದೆ. ಘಟ್ಟದ ಪ್ರದೇಶದಲ್ಲಿ ಮಳೆಯ ಅಬ್ಬರ ಇದೇರೀತಿ ಮುಂದುವರಿದರೆ ಮತ್ತಷ್ಟು ಕುಸಿಯುವ ಭೀತಿ ಎದುರಾಗಿದೆ.

ಶಿರಸಿ-ಕುಮಟಾ ಹೆದ್ದಾರಿಯಲ್ಲಿ ರಸ್ತೆ ನಿರ್ಮಾಣವಾಗುತ್ತಿರುವುದರಿಂದ ಈಗಾಗಲೇ ಭಾರಿ ವಾಹನಗಳ ಸಂಚಾರಕ್ಕೆ ನಿಷೇಧಹೇರಲಾಗಿದೆ. ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದ್ದರೂ ಕೆಲ ದಿನಗಳ ಹಿಂದೆ ದೇವಿಮನೆ ಘಟ್ಟದಲ್ಲಿ ಭೂ ಕುಸಿತ ಸಂಭವಿಸಿ ರಸ್ತೆ ಮೇಲೆಯೇ ಕಲ್ಲು ಮಣ್ಣುಗಳು ಬಂದು ಬಿದ್ದು ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಹೀಗಾಗಿ ಈಗ ಸಂಜೆ 6ರಿಂದ ಬೆಳಗ್ಗೆ 6 ಗಂಟೆ ವರೆಗೆ ಲಘು ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಲಘು ವಾಹನಗಳಿಗೆ ಬೆಳಿಗ್ಗೆ ೬ರಿಂದ ಸಂಜೆ 6ರ ವರೆಗೆ ಮಾತ್ರ ಸಂಚರಿಸಲು ಅವಕಾಶ ನೀಡಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ