
ಪಾಟ್ನಾ : ಬಿಹಾರದಲ್ಲಿ ರಾಜ್ಯ ಗುರುತಿನ ನೋಂದಣಿ (State Identification Registry-SIR ) ಉಪಕ್ರಮದ ಅಡಿಯಲ್ಲಿ ನಾಗರಿಕ ದಾಖಲೆಗಳನ್ನು ಪರಿಷ್ಕರಣೆ ನಡೆಸುತ್ತಿರುವ ಅಭಿಯಾನದ ಭಾಗವಾಗಿ, ನಿವಾಸಿಗಳಿಗೆ ತಮ್ಮ ಅಧಿಕೃತ ದಾಖಲೆಗಳನ್ನು ಪರಿಶೀಲಿಸಲು ಮತ್ತು ಸರಿಪಡಿಸಲು ಸೂಚಿಸಲಾಗಿದೆ. ಆದಾಗ್ಯೂ, ಈ ಪರಿಷ್ಕರಣೆಯ ಪ್ರಕ್ರಿಯೆಯ ವೇಳೆ ಅಪನಂಬಿಕೆಗೆ ಕಾರಣವಾದ ವಿಲಕ್ಷಣ ನಿವಾಸಿ ಪ್ರಮಾಣ ಪತ್ರ ನೀಡಿರುವುದು ಕಂಡುಬಂದಿದೆ.
‘ಡಾಗ್ ಬಾಬು’ ಹೆಸರಿನಲ್ಲಿ ನೀಡಲಾದ ಗುರುತಿನ ಪುರಾವೆಯೂ ಆಗಿರುವ ನಿವಾಸ ಪ್ರಮಾಣ ಪತ್ರವು ಪಾಟ್ನಾ ಬಳಿಯ ಮಸೌರ್ಹಿ ಪಟ್ಟಣದ ಆರ್‌ಟಿಪಿಎಸ್ (ಸಾರ್ವಜನಿಕ ಸೇವೆಗಳ ಹಕ್ಕು) ಪೋರ್ಟಲ್‌ನಲ್ಲಿ ಕಾಣಿಸಿಕೊಂಡಿದೆ. ನಿವಾಸ ಪ್ರಮಾಣ ಪತ್ರದ ದಾಖಲೆಯಲ್ಲಿ ವ್ಯಕ್ತಿಯ ಹೆಸರು ʼಡಾಗ್ ಬಾಬುʼ, ತಂದೆಯ ಹೆಸರು ‘ಕುತ್ತಾ ಬಾಬು’, ತಾಯಿ ‘ಕುತ್ತಿಯಾ ದೇವಿ’ ಎಂದು ಪಟ್ಟಿ ಮಾಡಲಾಗಿದೆ ಮತ್ತು ಪ್ರಮಾಣಪತ್ರಕ್ಕೆ ನಾಯಿಯ ಭಾವಚಿತ್ರವನ್ನು ಅಂಟಿಸಲಾಗಿದೆ. ಅದರಲ್ಲಿ ಉಲ್ಲೇಖಿಸಲಾದ ವಿಳಾಸವು ಕೌಲಿಚಕ್, ವಾರ್ಡ್ ಸಂಖ್ಯೆ 15, ನಗರ ಪರಿಷತ್ ಮಸೌರ್ಹಿ ಎಂದು ಇದೆ.
ಇನ್ನೂ ಆಘಾತಕಾರಿಯೆಂದರೆ, ಪ್ರಮಾಣಪತ್ರವು ಕಂದಾಯ ಅಧಿಕಾರಿಯ ಡಿಜಿಟಲ್ ಸಹಿಯನ್ನು ಹೊಂದಿದೆ (ಪ್ರಮಾಣಪತ್ರ ಸಂಖ್ಯೆ: BRCCO/2025/15933581), ಇದು ದಾಖಲೆಯು ಅಧಿಕೃತವಾಗಿದೆ ಮತ್ತು ಡಿಜಿಟಲ್ ಆಗಿ ಮಾರ್ಪಡಿಸಿದ ವಂಚನೆಯಲ್ಲ ಎಂದು ದೃಢಪಡಿಸುತ್ತದೆ.

ಡಿಜಿಟಲ್ ಸಹಿ ದುರುಪಯೋಗದ ಬಗ್ಗೆ ಆತಂಕ…
‘ಡಾಗ್ ಬಾಬು’ ಪ್ರಮಾಣಪತ್ರದ ವೈರಲ್ ಚಿತ್ರವು ತ್ವರಿತವಾಗಿ ವ್ಯಾಪಕ ಗಮನ ಸೆಳೆಯಿತು, ಇದು ವ್ಯವಸ್ಥೆಯಲ್ಲಿನ ಸ್ಪಷ್ಟ ಲೋಪದೋಷಗಳನ್ನು ಬಹಿರಂಗಪಡಿಸಿತು. ಅಂತಹ ಅಸಂಬದ್ಧ ದಾಖಲೆಯನ್ನು ಹೇಗೆ ತಯಾರಿಸಲಾಗಿದೆ ಮತ್ತು ದೃಢೀಕರಿಸಲಾಗಿದೆ ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆಗೆ ಮುಂದಾಗಿದ್ದಾರೆ. “ಮಸೌರ್ಹಿ ವಲಯದಲ್ಲಿ ‘ಡಾಗ್ ಬಾಬು’ ಹೆಸರಿನಲ್ಲಿ ನಿವಾಸ ಪ್ರಮಾಣಪತ್ರವನ್ನು ನೀಡಿದ ಪ್ರಕರಣ ಬೆಳಕಿಗೆ ಬಂದಿದೆ. ವಿಷಯ ಗಮನಕ್ಕೆ ಬಂದ ಕೂಡಲೇ ಪ್ರಮಾಣಪತ್ರವನ್ನು ರದ್ದುಗೊಳಿಸಲಾಗಿದೆ” ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
“ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಅರ್ಜಿದಾರರು, ಕಂಪ್ಯೂಟರ್ ಆಪರೇಟರ್ ಮತ್ತು ಪ್ರಮಾಣಪತ್ರವನ್ನು ನೀಡಿದ ಅಧಿಕಾರಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗುತ್ತಿದೆ. ಮಸೌರ್ಹಿಯ ಉಪವಿಭಾಗಾಧಿಕಾರಿಗೆ ಸಂಪೂರ್ಣ ತನಿಖೆ ನಡೆಸಿ 24 ಗಂಟೆಗಳ ಒಳಗೆ ವರದಿಯನ್ನು ಸಲ್ಲಿಸಲು ಸೂಚಿಸಲಾಗಿದೆ. ತಪ್ಪಿತಸ್ಥರೆಂದು ಕಂಡುಬಂದವರ ವಿರುದ್ಧ ಕಠಿಣ ಇಲಾಖಾ ಮತ್ತು ಶಿಸ್ತು ಕ್ರಮ ಕೈಗೊಳ್ಳಲಾಗುವುದು” ಎಂದು ಅದು ಹೇಳಿದೆ.
ಈಗ ಅಂತಹ ಪ್ರಮಾಣಪತ್ರವನ್ನು ಹೇಗೆ ತಯಾರಿಸಲಾಗಿದೆ ಎಂಬುದನ್ನು ಪತ್ತೆ ಮಾಡಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಕಂದಾಯ ಅಧಿಕಾರಿಗೆ ನಿಯೋಜಿಸಲಾದ ನಿರ್ದಿಷ್ಟ ಡಾಂಗಲ್ ಬಳಸಿ ಮಾತ್ರ ಡಿಜಿಟಲ್ ಸಹಿಗಳನ್ನು ಪ್ರವೇಶಿಸಬಹುದಾದ್ದರಿಂದ, ಡಾಂಗಲ್ ಅನ್ನು ಆಂತರಿಕವಾಗಿ ದುರುಪಯೋಗಪಡಿಸಿಕೊಳ್ಳಲಾಗಿದೆಯೇ ಅಥವಾ ಆರ್‌ಟಿಪಿಎಸ್ ವ್ಯವಸ್ಥೆಯಲ್ಲಿ ಈ ಅಸಮರ್ಪಕ ಕಾರ್ಯಸಂಭವಿಸಿದೆಯೇ ಎಂಬ ಪ್ರಶ್ನೆಗಳು ಎದ್ದಿವೆ.
ಪ್ರಾಥಮಿಕ ಪರಿಶೀಲನೆಗಳು ದೆಹಲಿಯ ಮಹಿಳೆಗೆ ಮೂಲತಃ ಲಿಂಕ್ ಮಾಡಲಾದ ಪ್ರಮಾಣಪತ್ರ ಸಂಖ್ಯೆಯನ್ನು ಸೂಚಿಸುತ್ತವೆ. ಆಕೆಯ ಆಧಾರ್ ವಿವರಗಳು ಮತ್ತು ಆಕೆಯ ಪತಿಯ ಐಡಿಯನ್ನು ನಮೂದಿಗೆ ಲಗತ್ತಿಸಲಾಗಿದೆ. ಇದು ಅಪ್‌ಲೋಡ್ ಮಾಡಿದ ದಾಖಲೆಗಳ ತಿರುಚುವಿಕೆ ಅಥವಾ ಕುಶಲತೆಯ ಸಾಧ್ಯತೆಯನ್ನು ಸೂಚಿಸುತ್ತದೆ.
‘ತಮಾಷೆಯಲ್ಲ, ಆದರೆ ಗಂಭೀರ ದುಷ್ಕೃತ್ಯ’
ಮಾಧ್ಯಮಗಳೊಂದಿಗೆ ಮಾತನಾಡಿದ ವೃತ್ತ ಅಧಿಕಾರಿ ಪ್ರಭಾತ ರಂಜನ್ ಈ ಘಟನೆಯನ್ನು ಗಂಭೀರ ಆಡಳಿತಾತ್ಮಕ ದುಷ್ಕೃತ್ಯದ ಪ್ರಕರಣ ಎಂದು ಹೇಳಿದ್ದಾರೆ. ಇದು ಕೇವಲ ತಮಾಷೆಯಲ್ಲ. “ಡಾಂಗಲ್ ಅನ್ನು ಹೇಗೆ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬುದನ್ನು ತನಿಖೆಯಿಂದ ನಿರ್ಧರಿಸಲಾಗುತ್ತದೆ. ಆರ್‌ಟಿಪಿಎಸ್ ಆಪರೇಟರ್‌ನಿಂದ ಕಂದಾಯ ಇಲಾಖೆ ಸಿಬ್ಬಂದಿಯವರೆಗೆ ಭಾಗಿಯಾಗಿರುವವರ ವಿರುದ್ಧ ಕ್ರಮ ಖಚಿತ” ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಎಫ್‌ಐಆರ್ ದಾಖಲಿಸಲಾಗುವುದು ಎಂದು ದೃಢಪಡಿಸಿದ್ದಾರೆ.
ಮೊದಲ ಪ್ರಕರಣವಲ್ಲ
ಇದು ಒಂದೇ ಘಟನೆಯಲ್ಲ. ಮುಂಗೇರ್‌ನಲ್ಲಿ ಇದೇ ರೀತಿಯ ಪ್ರಕರಣವನ್ನು ಮೊದಲು ವರದಿ ಮಾಡಲಾಗಿತ್ತು, ಅಲ್ಲಿ ‘ಸೋನಾಲಿಕಾ ಟ್ರ್ಯಾಕ್ಟರ್’ಗೆ ನಿವಾಸ ಪ್ರಮಾಣಪತ್ರವನ್ನು ನೀಡಲಾಗಿತ್ತು. ಇಂತಹ ಪ್ರಕರಣಗಳು ಆನ್‌ಲೈನ್‌ನಲ್ಲಿ ವ್ಯಾಪಕ ಟೀಕೆ ಮತ್ತು ಅಪಹಾಸ್ಯಕ್ಕೆ ಗುರಿಯಾಗಿವೆ.
ಕೇವಲ ಎರಡು ವಾರಗಳ ಹಿಂದೆ, ಮುಂಗೇರ್ ಜಿಲ್ಲೆಯಲ್ಲಿ ‘ಸೋನಾಲಿಕಾ ಟ್ರ್ಯಾಕ್ಟರ್’ ಹೆಸರಿನಲ್ಲಿ ಪ್ರಮಾಣ ಪತ್ರ ನೀಡಲಾಗಿತ್ತು. ಅರ್ಜಿದಾರರ ಫೋಟೋ ಬದಲಿಗೆ, ಪ್ರಮಾಣಪತ್ರವು ಸೋನಾಲಿಕಾ ಟ್ರ್ಯಾಕ್ಟರ್‌ನ ಚಿತ್ರವನ್ನು ಹೊಂದಿತ್ತು.
ಈಗ ಅನೇಕರು ಆರ್‌ಟಿಪಿಎಸ್ ಪೋರ್ಟಲ್‌ನ ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ಪ್ರಶ್ನಿಸುತ್ತಿದ್ದಾರೆ, ಸುಳ್ಳು ನೋಂದಣಿ ಸ್ವೀಕರಿಸುವ ದುರ್ಬಲತೆಯನ್ನು ಗಮನಿಸಿದರೆ ಅದಕ್ಕೆ ಡಿಜಿಟಲ್ ಫೈರ್‌ವಾಲ್ ಅಥವಾ ‘ಎಂಟಿ-ವೈರಸ್’ ಬೇಕಾಗಬಹುದು ಎಂದು ಸೂಚಿಸುತ್ತಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ