ಮಾಲೆಗಾಂವ್ ಸ್ಫೋಟ : ಪ್ರಜ್ಞಾ ಠಾಕೂರ್‌, ಕರ್ನಲ್ ಪುರೋಹಿತ ಸೇರಿ ಎಲ್ಲ ಆರೋಪಿಗಳು ಖುಲಾಸೆ

ಮುಂಬೈ: ಮಹಾರಾಷ್ಟ್ರದ ಮಾಲೆಗಾಂವ್‌ನಲ್ಲಿ ಆರು ಜನರು ಸಾವಿಗೀಡಾದ ಮತ್ತು ನೂರಕ್ಕೂ ಹೆಚ್ಚು ಜನರಿಗೆ ಗಾಯಗೊಂಡ ಪ್ರಬಲ ಬಾಂಬ್ ಸ್ಫೋಟದ ಘಟನೆಯ ಸುಮಾರು 17 ವರ್ಷಗಳ ನಂತರ, ಮುಂಬೈನ ವಿಶೇಷ ನ್ಯಾಯಾಲಯವು ಇಂದು, ಗುರುವಾರ (ಜುಲೈ ೩೧) ಬಿಜೆಪಿಯ ಮಾಜಿ ಸಂಸದೆ ಪ್ರಜ್ಞಾ ಠಾಕೂರ್ ಮತ್ತು ಮಾಜಿ ಸೇನಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಪ್ರಸಾದ ಶ್ರೀಕಾಂತ ಪುರೋಹಿತ್ ಸೇರಿದಂತೆ ಪ್ರಕರಣದ ಎಲ್ಲಾ ಏಳು ಆರೋಪಿಗಳನ್ನು ಖುಲಾಸೆಗೊಳಿಸಿದೆ.
ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್, ಆಗ ಮಿಲಿಟರಿ ಗುಪ್ತಚರದಲ್ಲಿ ಸೇವೆ ಸಲ್ಲಿಸುತ್ತಿದ್ದ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಪ್ರಸಾದ ಶ್ರೀಕಾಂತ ಪುರೋಹಿತ್,.ಮೇಜರ್ (ನಿವೃತ್ತ) ರಮೇಶ್ ಉಪಾಧ್ಯಾಯ, ಅಜಯ್ ರಹಿರ್ಕರ, ಸುಧಾಕರ ದ್ವಿವೇದಿ, ಸುಧಾಕರ ಚತುರ್ವೇದಿ, ಸಮೀರ ಕುಲಕರ್ಣಿ ಅವರನ್ನು ಖುಲಾಸೆಗಳಿಸಲಾಗಿದೆ. ಈ ಏಳು ಮಂದಿಯೂ ಜಾಮೀನಿನ ಮೇಲೆ ಹೊರಗಿದ್ದರು.

ರಂಜಾನ್ ಮಾಸದಲ್ಲಿ ಮುಂಬೈನಿಂದ ಸುಮಾರು 200 ಕಿ.ಮೀ ದೂರದಲ್ಲಿರುವ ಮಾಲೇಗಾಂವ್‌ ಪಟ್ಟಣದ ಭಿಕ್ಕು ಚೌಕ್ ಬಳಿ ಸೆಪ್ಟೆಂಬರ್ 29, 2008 ರ ರಾತ್ರಿ ಸ್ಫೋಟ ಸಂಭವಿಸಿತ್ತು.
ಎನ್‌ಐಎಗೆ ನಿಯೋಜಿಸಲಾದ ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ಎ.ಕೆ. ಲಹೋಟಿ, ಪ್ರಕರಣದಲ್ಲಿನ ಆರೋಪಗಳನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಮತ್ತು ಎಲ್ಲಾ ಏಳು ಆರೋಪಿಗಳು ಅನುಮಾನದ ಲಾಭಕ್ಕೆ ಅರ್ಹರು ಎಂದು ಇಂದು, ಗುರುವಾರ ತೀರ್ಪು ಪ್ರಕಟಿಸುವಾಗ ಹೇಳಿದ್ದಾರೆ. ಸ್ಫೋಟದಲ್ಲಿ ಬಳಸಲಾದ ಮೋಟಾರ್‌ ಸೈಕಲ್ ಪ್ರಜ್ಞಾ ಠಾಕೂರ್‌ಗೆ ಸೇರಿದೆ ಎಂದು ಪ್ರಾಸಿಕ್ಯೂಷನ್‌ಗೆ ಸಾಬೀತುಪಡಿಸಲು ಸಾಧ್ಯವಾಗಲಿಲ್ಲ. ಎಂಜಿನ್ ಸಂಖ್ಯೆ ಸ್ಪಷ್ಟವಾಗಿಲ್ಲ ಮತ್ತು ಚಾಸಿಸ್ ಸಂಖ್ಯೆಯನ್ನು ಅಳಿಸಿಹಾಕಲಾಗಿದೆ ಎಂದು ಹೇಳಿದರು.
ಲೆಫ್ಟಿನೆಂಟ್‌ ಕರ್ನಲ್‌ ಪುರೋಹಿತ ಅವರು ಕಾಶ್ಮೀರದಿಂದ ಆರ್‌ಡಿಎಕ್ಸ್‌‌ ಪಡೆದು ಬಾಂಬ್‌ ತಯಾರಿಸುತ್ತಿದ್ದರು ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ನ್ಯಾಯಾಲಯ ಹೇಳಿದೆ. ಏಳು ಆರೋಪಿಗಳು ಸಂಚು ರೂಪಿಸಿದ್ದರು ಎಂಬ ಪ್ರಾಸಿಕ್ಯೂಷನ್ ಹೇಳಿಕೆಯನ್ನು ನ್ಯಾಯಾಲಯ ತಿರಸ್ಕರಿಸಿತು. ಅಲ್ಲದೆ ಸ್ಫೋಟದಲ್ಲಿ ಆರು ಜನ ಸಾವಿಗೀಡಾಗಿದ್ದಾರೆ ಎಂಬ ಪ್ರಾಸಿಕ್ಯೂಷನ್‌ ವಾದ ಪುರಸ್ಕರಿಸಿದ ನ್ಯಾಯಾಲಯ 101 ಜನರು ಗಾಯಗೊಂಡಿದ್ದಾರೆ ಎಂಬ ವಾದವನ್ನು ಒಪ್ಪಲಿಲ್ಲ. ನ್ಯಾಯಾಲಯಕ್ಕೆ ಸಲ್ಲಿಸಲಾದ ವೈದ್ಯಕೀಯ ಪ್ರಮಾಣಪತ್ರಗಳಲ್ಲಿ ಕೆಲವನ್ನು ತಿರುಚಲಾಗಿರುವುದರಿಂದ ಅದು 95 ಜನರಿಗೆ ಮಾತ್ರ ಗಾಯವಾಗಿದೆ ಎಂದು ಅದು ಹೇಳಿತು.

ಪ್ರಮುಖ ಸುದ್ದಿ :-   ಜೂನ್ 22ರ ವರೆಗೆ ದೇಶಾದ್ಯಂತ ಟೆಲಿಗ್ರಾಂ ಬಂದ್‌ ; ನೀಟ್ ಮರುಪರೀಕ್ಷೆ ಅಕ್ರಮ ತಡೆಗೆ ಕ್ರಮ : ತೊಂದರೆಗೆ ಕ್ಷಮೆ ಕೋರಿದ ಎನ್‌ಟಿಎ

ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಆರಂಭದಲ್ಲಿ ಪ್ರಕರಣದ ತನಿಖೆ ನಡೆಸಿ, ಪ್ರಜ್ಞಾ ಸಿಂಗ್ ಠಾಕೂರ್, ಲೆಫ್ಟಿನೆಂಟ್ ಕರ್ನಲ್ ಪ್ರಸಾದ ಪುರೋಹಿತ್, ಮೇಜರ್ (ನಿವೃತ್ತ) ರಮೇಶ ಉಪಾಧ್ಯಾಯ, ಸಮೀರ ಕುಲಕರ್ಣಿ, ಅಜಯ ರಹಿರ್ಕರ್, ಸುಧಾಕರ ಚತುರ್ವೇದಿ ಮತ್ತು ಸುಧಾಕರ ದ್ವಿವೇದಿ ಸೇರಿದಂತೆ 12 ಜನರನ್ನು ಬಂಧಿಸಿತ್ತು.
ಅಭಿನವ್ ಭಾರತ್ ಗುಂಪು ಸ್ಫೋಟಕ್ಕೆ ಸಂಚು ರೂಪಿಸಿತ್ತು ಎಂದು ಎಟಿಎಸ್ ಆರೋಪಿಸಿತ್ತು. ನಂತರ 2010ರಲ್ಲಿ, ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ವರ್ಗಾಯಿಸಲಾಗಿತ್ತು. ಅದು 2016ರಲ್ಲಿ ಪೂರಕ ಆರೋಪಪಟ್ಟಿ ಸಲ್ಲಿಸಿತ್ತು. ಠಾಕೂರ್ ಸೇರಿದಂತೆ ಕೆಲವು ಆರೋಪಿಗಳ ವಿರುದ್ಧ ಸಾಕಷ್ಟು ಪುರಾವೆಗಳಿಲ್ಲ ಎಂದು ಹೇಳಿದ್ದ ಎನ್‌ಐಎ, ಮೋಕಾ ಕಾಯಿದೆ ಅನ್ವಯಿಸದಂತೆ ಶಿಫಾರಸು ಮಾಡಿತ್ತು. ಆದರೆ ವಿಶೇಷ ನ್ಯಾಯಾಲಯ ಏಳು ಆರೋಪಿಗಳಾದ ಏಳು ಆರೋಪಿಗಳಾದ ಪ್ರಜ್ಞಾ ಠಾಕೂರ್, ಕರ್ನಲ್‌ ಪ್ರಸಾದ ಪುರೋಹಿತ, ಉಪಾಧ್ಯಾಯ, ಕುಲಕರ್ಣಿ, ರಹಿರ್ಕರ್, ಚತುರ್ವೇದಿ ಮತ್ತು ದ್ವಿವೇದಿ ಅವರನ್ನು ಐಪಿಸಿ, ಯುಎಪಿಎ ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯಡಿ ವಿಚಾರಣೆಗೆ ಒಳಪಡಿಸುವಂತೆ ಡಿಸೆಂಬರ್ 2017 ರಲ್ಲಿ ತೀರ್ಪು ನೀಡಿತ್ತು.
ರಾಕೇಶ ಧವ್ಡೆ ಮತ್ತು ಜಗದೀಶ ಮ್ಹಾತ್ರೆ ಎಂಬ ಆರೋಪಿಗಳು ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಪ್ರತ್ಯೇಕ ವಿಚಾರಣೆ ಎದುರಿಸಬೇಕೆಂದು ನ್ಯಾಯಾಲಯ ನಿರ್ದೇಶಿಸಿತ್ತು. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಇತರ ಮೂವರನ್ನು ಖುಲಾಸೆಗೊಳಿಸಲಾಯಿತು.

ಪ್ರಮುಖ ಸುದ್ದಿ :-   ಪತ್ನಿಗೆ ವಿಡಿಯೋ ಕಾಲ್‌ ಮಾಡಿ ಕ್ಯಾಮರಾ ಮುಂದೆಯೇ ಮಗಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ತಂದೆ...!

ಕೊನೆಗೆ ಏಳು ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಲಾಯಿತು. ವಿಚಾರಣೆ ಡಿಸೆಂಬರ್ 2018 ರಲ್ಲಿ ಪ್ರಾರಂಭವಾಯಿತು. ಪ್ರಾಸಿಕ್ಯೂಷನ್ 323 ಸಾಕ್ಷಿಗಳನ್ನು ವಿಚಾರಣೆ ನಡೆಸಿತು, ಅವರಲ್ಲಿ 34 ಮಂದಿ ಮಾಫಿ ಸಾಕ್ಷಿಗಳಾಗಿದ್ದರು. 30 ಕ್ಕೂ ಹೆಚ್ಚು ಸಾಕ್ಷಿಗಳು ಸಾಕ್ಷ್ಯ ಹೇಳುವ ಮೊದಲೇ ಮೃತಪಟ್ಟಿದ್ದರು.
ಆರೋಪಿಗಳಲ್ಲಿ ಒಬ್ಬನಾದ ಸುಧಾಕರ ದ್ವಿವೇದಿ, ಯಾವುದೇ ಸ್ಫೋಟ ಸಂಭವಿಸಿಲ್ಲ ಎಂದು ವಾದಿಸಿದ್ದ. ಇದರಿಂದಾಗಿ ಪ್ರಾಸಿಕ್ಯೂಷನ್ 100 ಕ್ಕೂ ಹೆಚ್ಚು ಸಾಕ್ಷಿಗಳ ವಿಚಾರಣೆ ನಡೆಸಿತ್ತು. 7 ವರ್ಷಗಳ ವಿಚಾರಣೆಯ ಅವಧಿಯಲ್ಲಿ ಐದು ನ್ಯಾಯಾಧೀಶರು ಪ್ರಕರಣದ ವಿಚಾರಣೆ ನಡೆಸಿದರು. ನ್ಯಾಯಾಧೀಶ ಲಹೋಟಿ 2023 ರಲ್ಲಿ ಅಧಿಕಾರ ವಹಿಸಿಕೊಂಡರು ಮತ್ತು ತಿಂಗಳುಗಳ ವಾದಗಳ ನಂತರ ಪ್ರಕರಣದ ಅಂತಿಮ ವಾದಗಳು ಏಪ್ರಿಲ್ 2024ರಲ್ಲಿ ಮುಕ್ತಾಯಗೊಂಡಿದ್ದವು. ನ್ಯಾಯಾಲಯ ಏಪ್ರಿಲ್ 19 ರಂದು ತೀರ್ಪು ಕಾಯ್ದಿರಿಸಿತ್ತು.
ಆರೋಪಿಗಳ ಮೇಲೆ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಮತ್ತು ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ವಿಭಾಗಗಳ ಅಡಿಯಲ್ಲಿ ಪಿತೂರಿ, ಕೊಲೆ, ಕೊಲೆ ಯತ್ನ, ದ್ವೇಷವನ್ನು ಉತ್ತೇಜಿಸುವುದು ಮತ್ತು ಸ್ವಯಂಪ್ರೇರಣೆಯಿಂದ ನೋವುಂಟುಮಾಡುವುದು ಸೇರಿದಂತೆ ಆರೋಪಗಳನ್ನು ಹೊರಿಸಲಾಗಿತ್ತು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement