“ಅನ್ಯಾಯ, ನ್ಯಾಯಸಮ್ಮತವಲ್ಲದ್ದು ಮತ್ತು ಅಸಮಂಜಸ…” : ಟ್ರಂಪ್ ಭಾರತದ ಮೇಲೆ 50% ಸುಂಕದ ಘೋಷಿಸಿದ ನಂತರ ಭಾರತದ ಪ್ರತಿಕ್ರಿಯೆ…

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಷ್ಯಾದ ತೈಲ ಆಮದಿನ ಮೇಲೆ ಮತ್ತೆ ಶೇ. 25 ರಷ್ಟು ಸುಂಕ ವಿಧಿಸಲು ನಿರ್ಧರಿಸಿದ ನಂತರ ಭಾರತವು ತನ್ನ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಬದ್ಧವಾಗಿರುವುದಾಗಿ ಸ್ಪಷ್ಟಪಡಿಸಿದೆ. ಅಲ್ಲದೆ, ಹೆಚ್ಚುವರಿ ಸುಂಕವು “ಅನ್ಯಾಯ, ನ್ಯಾಯಸಮ್ಮತವಲ್ಲ ಮತ್ತು ಅಸಮಂಜಸ” ಎಂದು ಹೇಳಿದೆ ಮತ್ತು “ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ” ಎಂದು ಪ್ರಕಟಿಸಿದೆ.
ರಷ್ಯಾದಿಂದ ತೈಲ ಆಮದು ಮುಂದುವರಿಸಿದ್ದಕ್ಕಾಗಿ ಅಮೆರಿಕದ ಅಧ್ಯಕ್ಷ ಟ್ರಂಪ್‌ ವಿಧಿಸಿದ ಹೆಚ್ಚುವರಿ “ದಂಡ”ವು ಅಮೆರಿಕಕ್ಕೆ ಭಾರತೀಯ ರಫ್ತಿನ ಮೇಲಿನ ಒಟ್ಟು ಸುಂಕವನ್ನು ಶೇಕಡಾ 50 ಕ್ಕೆ ಏರಿಸುತ್ತದೆ. ಇದು ಚೀನಾದ ಮೇಲಿನ ಸುಂಕಕ್ಕಿಂತ ಶೇಕಡಾ 20 ರಷ್ಟು ಮತ್ತು ಪಾಕಿಸ್ತಾನಕ್ಕಿಂತ ಶೇಕಡಾ 31 ರಷ್ಟು ಹೆಚ್ಚು. ಈ ಸುಂಕವು 21 ದಿನಗಳ ನಂತರ ಜಾರಿಗೆ ಬರಲಿದೆ.

ಭಾರತದ ಪ್ರತಿಕ್ರಿಯೆ
ಟ್ರಂಪ್‌ ಹೆಚ್ಚುವರಿ ಸುಂಕ ಘೋಷಿಸಿದ ಕೆಲವೇ ಗಂಟೆಗಳಲ್ಲಿ, ವಿದೇಶಾಂಗ ಸಚಿವಾಲಯವು ತನ್ನ ಹೇಳಿಕೆಯಲ್ಲಿ,ಅಮೆರಿಕವು “ಇತ್ತೀಚಿನ ದಿನಗಳಲ್ಲಿ ರಷ್ಯಾದಿಂದ ಭಾರತದ ತೈಲ ಆಮದು ಮಾಡಿಕೊಂಡಿರುವುದನ್ನು ಗುರಿಯಾಗಿಸಿಕೊಂಡಿದೆ” ಎಂದು ಹೇಳಿದೆ.
“ನಮ್ಮ ಆಮದುಗಳು ಮಾರುಕಟ್ಟೆ ಅಂಶಗಳನ್ನು ಆಧರಿಸಿವೆ ಮತ್ತು ಭಾರತದ 140 ಕೋಟಿ ಜನರಿಗೆ ಇಂಧನ ಕೈಗೆಟಕುವುದನ್ನು ಖಚಿತಪಡಿಸಿಕೊಳ್ಳುವ ಒಟ್ಟಾರೆ ಉದ್ದೇಶದಿಂದ ಇದು ಮುನ್ನಡೆಸಲ್ಪಟ್ಟಿವೆ ಎಂಬ ಅಂಶ ಸೇರಿದಂತೆ ಈ ವಿಷಯಗಳ ಬಗ್ಗೆ ನಾವು ಈಗಾಗಲೇ ನಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದೇವೆ. ಆದ್ದರಿಂದ ಹಲವಾರು ಇತರ ದೇಶಗಳು ತಮ್ಮ ಸ್ವಂತ ರಾಷ್ಟ್ರೀಯ ಹಿತಾಸಕ್ತಿ ಹಿನ್ನೆಲೆಯಲ್ಲಿ ತೆಗೆದುಕೊಂಡ ಕ್ರಮಗಳಂತೆ ತಾನು ತೆಗೆದುಕೊಂಡ ಕ್ರಮಗಳಿಗೆ ಹೆಚ್ಚುವರಿ ಸುಂಕಗಳನ್ನು ವಿಧಿಸಲು ಅಮೆರಿಕ ಆಯ್ಕೆ ಮಾಡಿಕೊಂಡಿರುವುದು ಅತ್ಯಂತ ದುರದೃಷ್ಟಕರ ಎಂದು ಭಾರತ ಹೇಳಿದೆ.

ಪ್ರಮುಖ ಸುದ್ದಿ :-   ಉದ್ಧವ್‌ಗೆ ಭಾರಿ ಹಿನ್ನಡೆ ; ಶಿಂಧೆ ಬಣದ ಜೊತೆ ಶಿವಸೇನೆ(ಯುಬಿಟಿ) 6 ಸಂಸದರ ವಿಲೀನಕ್ಕೆ ಲೋಕಸಭೆ ಸ್ಪೀಕರ್ ಅನುಮೋದನೆ

“ಈ ಕ್ರಮಗಳು ಅನ್ಯಾಯ, ನ್ಯಾಯಸಮ್ಮತವಲ್ಲ ಮತ್ತು ಅಸಮಂಜಸ ಎಂದು ನಾವು ಪುನರುಚ್ಚರಿಸುತ್ತೇವೆ. ಭಾರತ ತನ್ನ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ” ಎಂದು ಹೇಳಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಈ ತಿಂಗಳ ಆರಂಭದಲ್ಲಿ, ಅಮೆರಿಕ ಭಾರತದ ಮೇಲೆ ಶೇಕಡಾ 25 ರಷ್ಟು ಸುಂಕವನ್ನು ಘೋಷಿಸಿದಾಗ, ಇದರ ಪರಿಣಾಮಗಳನ್ನು ಅಧ್ಯಯನ ಮಾಡುತ್ತಿರುವುದಾಗಿ ಮತ್ತು ನ್ಯಾಯಯುತ ವ್ಯಾಪಾರ ಒಪ್ಪಂದ ಪಡೆಯಲು ಬದ್ಧವಾಗಿದೆ ಎಂದು ಸರ್ಕಾರ ಹೇಳಿತ್ತು. ಅಲ್ಲದೆ,”ಯುರೋಪ್-ರಷ್ಯಾ ವ್ಯಾಪಾರವು ಕೇವಲ ಇಂಧನವನ್ನು ಮಾತ್ರವಲ್ಲದೆ ರಸಗೊಬ್ಬರಗಳು, ಗಣಿಗಾರಿಕೆ ಉತ್ಪನ್ನಗಳು, ರಾಸಾಯನಿಕಗಳು, ಕಬ್ಬಿಣ ಮತ್ತು ಉಕ್ಕು ಮತ್ತು ಯಂತ್ರೋಪಕರಣಗಳು ಮತ್ತು ಸಾರಿಗೆ ಉಪಕರಣಗಳನ್ನು ಸಹ ಒಳಗೊಂಡಿದೆ. ಅಮೆರಿಕವು ತನ್ನ ಪರಮಾಣು ಉದ್ಯಮಕ್ಕಾಗಿ ರಷ್ಯಾದಿಂದ ಯುರೇನಿಯಂ ಹೆಕ್ಸಾಫ್ಲೋರೈಡ್, ಅದರ ವಿದ್ಯುತ್ ಸ್ಥಾವರ ಉದ್ಯಮಕ್ಕಾಗಿ ಪಲ್ಲಾಡಿಯಮ್, ರಸಗೊಬ್ಬರಗಳು ಮತ್ತು ರಾಸಾಯನಿಕಗಳನ್ನು ಆಮದು ಮಾಡಿಕೊಳ್ಳುವುದನ್ನು ಮುಂದುವರೆಸಿದೆ” ಎಂದು ಸಚಿವಾಲಯ ಈ ಮೊದಲು ಅಮೆರಿಕಕ್ಕೆ ಈ ಮೊದಲು ತೀಕ್ಷ್ಣ ಪ್ರತಿಕ್ರಿಯೆ ನೀಡಿತ್ತು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement