ಆಘಾತಕಾರಿ ವೀಡಿಯೊ…| ಟ್ರಕ್ ಡಿಕ್ಕಿ ಹೊಡೆದು ಮೃತಪಟ್ಟ ಪತ್ನಿ ಶವವನ್ನು ಬೈಕಿಗೆ ಕಟ್ಟಿಕೊಂಡು ಒಯ್ದ ಪತಿ….!

ನಾಗ್ಪುರ: ದಾರಿಹೋಕರು ಯಾರೂ ಸಹಾಯಕ್ಕೆ ಬಾರದ ಕಾರಣ ವ್ಯಕ್ತಿಯೊಬ್ಬ ತನ್ನ ಮೃತ ಪತ್ನಿಯ ಶವವನ್ನು ಮೋಟಾರ್ ಸೈಕಲ್‌ಗೆ ಕಟ್ಟಿ ಒಯ್ಯುತ್ತಿದ್ದ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿರುವುದು ವರದಿಯಾಗಿದೆ. ಭಾನುವಾರ ಮಧ್ಯಾಹ್ನದ ಸುಮಾರಿಗೆ ದಿಯೋಲಾಪರ್ ಪೊಲೀಸ್ ವ್ಯಾಪ್ತಿಯ ಮೊರ್ಫಾಟಾ ಬಳಿಯ ನಾಗ್ಪುರ-ಜಬಲ್‌ಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ.
ಗಯಾರ್ಸಿ ಅಮಿತ ಯಾದವ್ ಎಂದು ಗುರುತಿಸಲಾದ ಮಹಿಳೆಗೆ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದು ತಕ್ಷಣವೇ ಅವರು ಮೃತಪಟ್ಟಿದ್ದಾರೆ. ಸಹಾಯಕ್ಕಾಗಿ ಪದೇ ಪದೇ ಕೂಗಿಕೊಂಡರೂ ವಾಹನ ಸವಾರರು ಹಾಗೂ ರಸ್ತೆಯಲ್ಲಿ ಹೋಗುವವರು ಯಾರೂ ಸ್ಪಂದಿಸದ ಕಾರಣ ತಾನು ಅಸಹಾಯಕನಾದೆ ಎಂದು ಅವರ ಪತಿ ಅಮಿತ ಯಾದವ್ ಹೇಳಿದ್ದಾರೆ.
ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯವರಾದ ಈ ದಂಪತಿ ಕಳೆದ ಒಂದು ದಶಕದಿಂದ ನಾಗ್ಪುರದ ಕೊರಾಡಿ ಬಳಿಯ ಲೋನಾರಾದಲ್ಲಿ ವಾಸಿಸುತ್ತಿದ್ದರು.

ಲೋನಾರಾದಿಂದ ದಿಯೋಲಾಪರ್ ಮೂಲಕ ಮಧ್ಯಪ್ರದೇಶದ ಕರಣಪುರಕ್ಕೆ ದಂಪತಿ ಪ್ರಯಾಣಿಸುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ತನ್ನ ಪತ್ನಿಯ ಶವವನ್ನು ಮಧ್ಯಪ್ರದೇಶದ ತಮ್ಮ ಸ್ಥಳೀಯ ಗ್ರಾಮಕ್ಕೆ ಸಾಗಿಸಲು ಯಾವುದೇ ವಾಹನ ಅಥವಾ ಸಹಾಯ ಸಿಗದ ಕಾರಣ, ದಿಗ್ಭ್ರಮೆಗೊಂಡ ಅಮಿತ್ ಯಾದವ್‌ ಅವರು ಶವವನ್ನು ತನ್ನ ದ್ವಿಚಕ್ರ ವಾಹನಕ್ಕೆ ಕಟ್ಟಿಕೊಂಡು ತನ್ನ ಊರಿಗೆ ತೆರಳುವ ಹತಾಶ ನಿರ್ಧಾರ ತೆಗೆದುಕೊಳ್ಳಬೇಕಾಯಿತು.
ಅಮಿತ್ ತನ್ನ ಪತ್ನಿಯ ದೇಹವನ್ನು ತನ್ನ ಬೆನ್ನಿಗೆ ಹಾಗೂ ಮೋಟರ್‌ ಸೈಕಲ್‌ಗೆ ಕಟ್ಟಿ ಬೈಕ್‌ ಸವಾರಿ ಮಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಇದು ಆಘಾತ ಮತ್ತು ಟೀಕೆಗೆ ಗುರಿಯಾಗಿದೆ. ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿದ ವರದಿಗಳು ಆರಂಭದಲ್ಲಿ ಯಾರೂ ಸಹಾಯ ಮಾಡಲು ನಿಲ್ಲಲಿಲ್ಲ ಎಂದು ಹೇಳಿವೆ. ಆದಾಗ್ಯೂ, ಅವರು ಶವವನ್ನು ಆ ರೀತಿಯಲ್ಲಿ ಹೊತ್ತುಕೊಂಡು ಹೋಗುವುದನ್ನು ನೋಡಿದ ನಂತರ, ಹಲವಾರು ಅವರಿಗೆ ಸಹಾಯ ಮಾಡಲು ಮುಂದೆ ಬಂದರು. ಆದರೆ ಅಮಿತ್, ಜಗಳ ಅಥವಾ ತೊಂದರೆಗೆ ಹೆದರಿ ವಾಹನ ನಿಲ್ಲಿಸಲಿಲ್ಲ ಎನ್ನಲಾಗಿದೆ.

ವರದಿಗಳ ಪ್ರಕಾರ, ವೈರಲ್ ವೀಡಿಯೊ ಚಿತ್ರೀಕರಿಸಿದ್ದಾರೆ ಎಂದು ಹೇಳಲಾದ ಹೆದ್ದಾರಿ ಪೊಲೀಸರು ಆರಂಭದಲ್ಲಿ ಅವರಿಗೆ ಬೈಕ್‌ ನಿಲ್ಲಿಸಲು ಸೂಚಿಸಿದರು, ಆದರೂ ಅಮಿತ್‌ ಬೈಕ್‌ ಚಲಾಯಿಸುವುದನ್ನು ಮುಂದುವರಿಸಿದರು. ಅಂತಿಮವಾಗಿ ಅವರನ್ನು ತಡೆದು ನಿಲ್ಲಿಸಲಾಯಿತು. ಮತ್ತು ಪೊಲೀಸರು ಗ್ಯಾರ್ಸಿಯ ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ನಾಗ್ಪುರದ ಆಸ್ಪತ್ರೆಗೆ ಕಳುಹಿಸಲಾಯಿತು.
ಪೊಲೀಸರು ಅಪಘಾತದಿಂದ ಸಾವು ಎಂದು ಪ್ರಕರಣ ದಾಖಲಿಸಿದ್ದು, ಶವಪರೀಕ್ಷೆಯ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ದಂಪತಿ ನಾಗ್ಪುರದ ಲೋನಾರಾದಲ್ಲಿ ವಾಸಿಸುತ್ತಿದ್ದರು ಆದರೆ ಮೂಲತಃ ಮಧ್ಯಪ್ರದೇಶದ ಸಿಯೋನಿಯವರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಹ್ಯಾರಿಯರ್ ಕಾರು, ನಕಲಿ ಎನ್‌ಎಸ್‌ಜಿ ಕಮಾಂಡೋಗಳು ! ಸೇನೆಯ ಬ್ರಿಗೇಡಿಯರ್ ಸೋಗಿನಲ್ಲಿ ಓಡಾಡುತ್ತಿದ್ದ ಯುವಕ ಬಲೆಗೆ ಬಿದ್ದಿದ್ದೇ ರೋಚಕ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement