ವಾಷಿಂಗ್ಟನ್: ಇತ್ತೀಚಿನ ವಾರಗಳಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಾಲ್ಕು ಕರೆಗಳನ್ನು ಸ್ವೀಕರಿಸಲು ಪ್ರಧಾನಿ ನರೇಂದ್ರ ಮೋದಿ ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ. ಮೂಲಗಳನ್ನು ಉಲ್ಲೇಖಿಸಿ ಜರ್ಮನ್ ಪತ್ರಿಕೆ ಫ್ರಾಂಕ್‌ಫರ್ಟರ್ ಆಲ್ಗೆಮೈನ್ ಜೈಟಂಗ್ (ಎಫ್‌ಎಝಡ್) ಪತ್ರಿಕೆ ವರದಿ ಮಾಡಿದೆ. ಇದು “ಅವರು [ಮೋದಿ] ಅಸಮಾಧಾನಗೊಂಡಿದ್ದು, ಮೋದಿ ಟ್ರಂಪ್ ಕರೆ ಸ್ವೀಕರಿಸದೇ ಇರುವುದು ಟ್ರಂಪ್‌ಗೆ ನೀಡಿದ ಎಚ್ಚರಿಕೆ ಹಾಗೂ ಪ್ರತಿಭಟನೆಯಾಗಿದೆ ಎಂದು ವರದಿ ಸೂಚಿಸುತ್ತದೆ.
ಜಪಾನಿನ ಪತ್ರಿಕೆ ನಿಕೈ ಏಷ್ಯಾ ಕೂಡ ಇದೇ ರೀತಿಯ ವರದಿಯನ್ನು ಮಾಡಿದ್ದು, ಪ್ರಧಾನಿ ಮೋದಿ ಟ್ರಂಪ್ ಅವರ ಕರೆಗಳನ್ನು ಸ್ವೀಕರಿಸಿಲ್ಲ ಎಂದು ಹೇಳಿದ್ದು, ಇದು “ಟ್ರಂಪ್ ಅವರ ಹತಾಶೆಯನ್ನು ಹೆಚ್ಚಿಸುತ್ತಿದೆ” ಎಂದು ಹೇಳಿದೆ.
ಸುಂಕ ಬೆದರಿಕೆ
ಅಮೆರಿಕ ಅಧ್ಯಕ್ಷ ಟ್ರಂಪ್ ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇ. 50 ಕ್ಕೆ ದ್ವಿಗುಣಗೊಳಿಸಿದ ನಂತರ ಭಾರತದ ಮತ್ತು ಅಮೆರಿಕ ನಡುವಿನ ಸಂಬಂಧಗಳು ಉದ್ವಿಗ್ನಗೊಂಡಿವೆ, ಇದು ಬ್ರೆಜಿಲ್ ಹೊರತುಪಡಿಸಿ ಬೇರೆ ಯಾವುದೇ ದೇಶಕ್ಕೆ ಅಮೆರಿಕ ವಿಧಿಸಿದ ಅತ್ಯಧಿಕ ಸುಂಕವಾಗಿದೆ. ಭಾರತವು ರಷ್ಯಾದ ಕಚ್ಚಾ ತೈಲವನ್ನು ಖರೀದಿಸುತ್ತಿರುವ ಕಾರಣಕ್ಕೆ ಅಮೆರಿಕವು ವಿಧಿಸಿದ ಶೇ. 25 ರಷ್ಟು ಹೆಚ್ಚುವರಿ ಸುಂಕವನ್ನು ಇದು ಒಳಗೊಂಡಿದೆ.
ಅಮೆರಿಕದ ಒತ್ತಡದ ವಿರುದ್ಧ ದೃಢವಾಗಿ ನಿಲ್ಲಲು ಭಾರತ ಸಿದ್ಧವಾಗಿದೆ ಎಂದು ಪ್ರತಿಪಾದಿಸಿದೆ, ಪ್ರಧಾನಿ ನರೇಂದ್ರ ಮೋದಿ ದೇಶದ ರೈತರ ಹಿತಾಸಕ್ತಿಗಳ ಜೊತೆ “ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ” ಎಂದು ಭರವಸೆ ನೀಡಿದ್ದಾರೆ.
ಅಮೆರಿಕ-ಭಾರತ ವ್ಯಾಪಾರ ಸಂಘರ್ಷದಲ್ಲಿ ಭಾರತವು ಅಮೆರಿಕದ ಒತ್ತಡಕ್ಕೆ ಮಣಿಯುವುದಿಲ್ಲ ಎಂಬುದನ್ನು ತೋರಿಸುತ್ತದೆ ಎಂದು ಜರ್ಮನ್ ಪಬ್ಲಿಕೇಶನ್ ವರದಿ ಮಾಡಿದೆ. ಟ್ರಂಪ್ ಅವರೊಂದಿಗೆ ಮಾತನಾಡಲು ಇಷ್ಟವಿಲ್ಲದಿರುವುದು ಪ್ರಧಾನಿ ಮೋದಿಯವರು ಅಮೆರಿಕ ಅಧ್ಯಕ್ಷರ ಕ್ರಮಗಳಿಂದ ಎಷ್ಟರ ಮಟ್ಟಿಗೆ ಕಿರಿಕಿರಿಗೊಂಡಿದ್ದಾರೆ ಎಂಬುದನ್ನು ತೋರಿಸುತ್ತದೆ ಎಂದು ಎಫ್‌ಎಝಡ್ (FAZ) ಪತ್ರಿಕೆ ವರದಿ ಮಾಡಿದೆ.
ಪಾಕಿಸ್ತಾನದ ಪಾತ್ರ
ಭಾರತದ ಗ್ರಹಿಕೆಯಲ್ಲಿ ಟ್ರಂಪ್ ಅವರ ಇಮೇಜ್ ಗಣನೀಯವಾಗಿ ಬದಲಾಗಿದೆ, ವಿಶೇಷವಾಗಿ ಪಾಕಿಸ್ತಾನದೊಂದಿಗಿನ ಸಂಬಂಧಗಳನ್ನು ಬಲಪಡಿಸುವ ಅವರ ಯೋಜನೆಗಳ ಕುರಿತು ಅವರ ಹೇಳಿಕೆಗಳ ನಂತರ ಇದು ಬದಲಾಗಿದೆ ಎಂದು ಪತ್ರಿಕೆ ಗಮನಿಸಿದೆ.
ಮೇ ತಿಂಗಳಿನಿಂದ, ಭಾರತ ಮತ್ತು ಪಾಕಿಸ್ತಾನದ ನಡುವಿನ ಹೋರಾಟವನ್ನು ನಿಲ್ಲಿಸಲು ತನು ಅವರ ಮಧ್ಯಸ್ಥಿಕೆ ವಹಿಸಿದ್ದೆ ಎಂದು ಟ್ರಂಪ್ ಪದೇ ಪದೇ ಹೇಳುತ್ತಲೇ ಬಂದಿದ್ದು, ಆದರೆ ಭಾರತ ನಿರಾಕರಿಸುತ್ತಲೇ ಬಂದಿದೆ. ಅಮೆರಿಕ ಅಧ್ಯಕ್ಷರ ” ಸುಂಕ ಚಾಲಿತ ರಾಜತಾಂತ್ರಿಕ ಶೈಲಿ” ಎರಡು ರಾಷ್ಟ್ರಗಳ ಸಂಬಂಧಗಳಲ್ಲಿ ಮತ್ತೊಂದು ಒತ್ತಡದ ಅಂಶವಾಗಿದೆ ಎಂದು ಜಪಾನಿನ ಮಾಧ್ಯಮ ವರದಿ ತಿಳಿಸಿದೆ.
ಚೀನಾ ಯೋಜನೆಗಳು
ಎಫ್‌ಎಝಡ್ (FAZ) ಜೊತೆ ಮಾತನಾಡುತ್ತಾ, ವಿಶ್ಲೇಷಕ ಮಾರ್ಕ್ ಫ್ರೇಜಿಯರ್ ಕೂಡ ಚೀನಾವನ್ನು ನಿಯಂತ್ರಿಸುವಲ್ಲಿ ಭಾರತವು ಕೇಂದ್ರ ಪಾತ್ರ ವಹಿಸುವ ಇಂಡೋ-ಪೆಸಿಫಿಕ್ ಜೋಡಣೆಯ ಅಮೆರಿಕದ ಕಲ್ಪನೆಯು “ಒಡೆಯುತ್ತಿದೆ” ಎಂದು ಹೇಳಿದ್ದಾರೆ.
ಭಾರತ ಮತ್ತು ಅಮೆರಿಕ ಕಳೆದ ಎರಡು ದಶಕಗಳಲ್ಲಿ ಚೀನಾವನ್ನು ಎದುರಿಸುವ ಕಾರ್ಯತಂತ್ರದ ಪ್ರಯತ್ನದಲ್ಲಿ ಹತ್ತಿರವಾಗಿವೆ. ಆದರೆ ಟ್ರಂಪ್ ಅವರ ದಂಡನಾತ್ಮಕ ಸುಂಕಗಳು ಜಾರಿಯಲ್ಲಿರುವಾಗ, ಒಂದು ಕಾಲದಲ್ಲಿ ಗಟ್ಟಿಯಾಗಿದ್ದ ಪಾಲುದಾರಿಕೆಯು ಸಡಲಿವಾಗುವ ಲಕ್ಷಣಗಳನ್ನು ತೋರಿಸುತ್ತಿದೆ. ಚೀನಾ ಮತ್ತು ರಷ್ಯಾ ಇಬ್ಬರೂ ಈ ವಿದ್ಯಮಾನವನ್ನು ಸ್ವಾಗತಿಸಿರುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.
ಅಮೆರಿಕದ ನ್ಯೂಯಾರ್ಕ್‌ನ ನ್ಯೂ ಸ್ಕೂಲ್‌ನಲ್ಲಿರುವ ಭಾರತ-ಚೀನಾ ಸಂಸ್ಥೆಯ ಸಹ-ನಿರ್ದೇಶಕ ಫ್ರೇಜಿಯರ್, ಭಾರತವು ಚೀನಾ ವಿರುದ್ಧ ಅಮೆರಿಕ ಪರವಾಗಿ ನಿಲ್ಲುವ ಉದ್ದೇಶವನ್ನು ಎಂದಿಗೂ ಹೊಂದಿರಲಿಲ್ಲ ಎಂದು ಹೇಳಿದ್ದಾರೆ. ಜಾಗತಿಕ ಸಂಸ್ಥೆಗಳಲ್ಲಿ ಪ್ರಭಾವವನ್ನು ವಿಸ್ತರಿಸುವಲ್ಲಿ ಭಾರತ ಮತ್ತು ಚೀನಾ ಸಾಮಾನ್ಯ ಆಸಕ್ತಿಗಳನ್ನು ಹಂಚಿಕೊಳ್ಳುತ್ತವೆ ಎಂದು ಅವರು ಹೇಳಿದ್ದಾರೆ.
ಇದಲ್ಲದೆ, ಚೀನಾದ ಹೂಡಿಕೆ ಮತ್ತು ತಂತ್ರಜ್ಞಾನವು ಭಾರತೀಯ ಉದ್ಯಮವನ್ನು ಉತ್ತೇಜಿಸಬಹುದು, ಆದರೆ ಭಾರತವು ಚೀನಾದ ಜಾಗತಿಕ ಆರ್ಥಿಕ ಮತ್ತು ಭೌಗೋಳಿಕ ರಾಜಕೀಯ ಸ್ಥಾನವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಬಹುದು ಎಂದು ಫ್ರೇಜಿಯರ್ ಹೇಳಿದ್ದಾರೆ.
“ಭಾರತದ ಬದಲಾದ ನೀತಿಯು ಕೇವಲ ಅಮೆರಿಕದ ಸುಂಕಗಳಿಗೆ ಪ್ರತಿಕ್ರಿಯೆಯಾಗಿ ಮಾತ್ರವಲ್ಲ, ಅದು ಕಾರ್ಯತಂತ್ರವಾಗಿದೆ, ಅಮೆರಿಕ ಹಿಂದೆ ಸರಿಯುವುದರೊಂದಿಗೆ, ಭಾರತ ಮತ್ತು ಚೀನಾ ಜಾಗತಿಕ ಪ್ರಭಾವ ಮತ್ತು ಕೈಗಾರಿಕಾ ಬೆಳವಣಿಗೆಯಲ್ಲಿ ಆಸಕ್ತಿಗಳನ್ನು ಹಂಚಿಕೊಳ್ಳುತ್ತವೆ” ಎಂದು ಅವರು ಹೇಳಿದ್ದಾರೆ.
ಪ್ರಧಾನಿ ಮೋದಿ ಆಗಸ್ಟ್ ಕೊನೆಯಲ್ಲಿ ಚೀನಾಕ್ಕೆ ಭೇಟಿ ನೀಡಲಿದ್ದಾರೆ, ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯಲ್ಲಿ ಅಧಿಕೃತವಾಗಿ ಭಾಗವಹಿಸಲಿದ್ದಾರೆ. ಇದು ಪ್ರಧಾನಿಯವರ ಮೊದಲ ಚೀನಾ ಭೇಟಿಯಾಗಲಿದ್ದು, ಅಮೆರಿಕ-ಚೀನಾ ಸಂಬಂಧಗಳ ಅನಿರೀಕ್ಷಿತ ಪಥವನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಭಾರತ-ಚೀನಾ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಪ್ರಯತ್ನವೆಂದು ವ್ಯಾಪಕವಾಗಿ ನೋಡಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ