ಹೊನ್ನಾವರ: ಖ್ಯಾತ ಜಾನಪದ ತಜ್ಞ, ನಾಟಕಕಾರ, ಕವಿ, ಸಾಹಿತಿ ಡಾ. ಎನ್.ಆರ್. ನಾಯಕ (90) (Dr. N.R. Nayak) ಅವರು ಭಾನುವಾರ ನಿಧನರಾಗಿದ್ದಾರೆ.
ವಯೋಸಹಜ ಅಸ್ವಸ್ತತೆಯಿಂದ ಮೂರ್ನಾಲ್ಕು ದಿನಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಇವರು ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.
ಅವರಿಗೆ ಇಬ್ಬರು ಗಂಡು ಮಕ್ಕಳು, ಒಬ್ಬರು ಮಗಳು ಇದ್ದಾರೆ. ಪತ್ನಿ, ಜಾನಪದ ವಿದ್ವಾಂಸೆ ಡಾ.ಶಾಂತಿ ನಾಯಕ ಆಗಸ್ಟ್ 15 ರಂದು ನಿಧನರಾಗಿದ್ದರು.
ಎನ್.ಆರ್. ನಾಯಕ ಅವರು 1935 ಜೂನ್ 28 ರಂದು ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಭಾವಿಕೇರಿಯಲ್ಲಿ ಜನಿಸಿದರು. ಇವರ ಪೂರ್ಣ ಹೆಸರು ನಾರಾಯಣ ರಾಮ ನಾಯಕ. ವಿದ್ಯಾರ್ಥಿ ದೆಸೆಯಿಂದಲೇ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಇವರು ಬಿ.ಎ. ಪದವಿ ಪಡೆದರು. ಅಧ್ಯಾಪಕರಾಗಿ ವೃತ್ತಿ ಆರಂಭಿಸಿದ ಇವರು ಸಾಹಿತ್ಯ ಕೃಷಿಯಲ್ಲಿಯು ತೊಡಗಿಸಿಕೊಂಡು, ಹಲವಾರು ಕೃತಿಗಳನ್ನು ರಚಿಸಿದ್ದಾರೆ.
ಹೊನ್ನಾವರ ಎಸ್‌ಡಿಎಂ ಕಾಲೇಜಿನ ಪ್ರಾಧ್ಯಾಪಕರಾಗಿ, ಪ್ರಾಚಾರ್‍ಯರಾಗಿ ನಿವೃತ್ತರಾಗಿದ್ದರು. ಡಾ.ಎನ್.ಆರ್. ನಾಯಕ ಜಾನಪದ ತಜ್ಞರಷ್ಟೇ ಅಲ್ಲ. ಅವರು ಕವಿ, ನಾಟಕಕಾರ, ಸಂಘಟಕ, ಅತ್ಯುತ್ತಮ ಆಡಳಿತಗಾರರಾಗಿ ಹೆಸರು ಗಳಿಸಿದ್ದರು.
ಜನಪದ ಸಾಹಿತ್ಯದಲ್ಲಿ ಅಪಾರ ಆಸಕ್ತಿಯನ್ನು ಹೊಂದಿದ್ದ ಅವರು ಸುಗ್ಗಿ ಕುಣಿತ, ಗುಮಟೆ ಪಾಂಗು, ಯಕ್ಷಗಾನ ಇತ್ಯಾದಿಗಳ ಬಗ್ಗೆ ಅಧ್ಯಯನ ನಡೆಸಿದ್ದರು.
ತಮ್ಮ ಜಾನಪದ ಪ್ರಕಾಶನದಿಂದ 1983ರಲ್ಲಿ ‘ಜಾನಪದ ದೀಪಾರಾಧನೆ’ ಎನ್ನುವ ಸಾಂಸ್ಕೃತಿಕ ಸಂಸ್ಥೆ ಹುಟ್ಟುಹಾಕಿದ್ದರು. ಅವರ ‘ಕೂಸಾಯ್ತು ನಮ್ಮ ಕೊಮರಾಗೆ’(1983), ಗಾಮೊಕ್ಕಲ ಮಹಾಭಾರತ(1992), ಸುಗ್ಗಿ ಹಬ್ಬ(1999) ಕೃತಿಗಳಿಗೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯಿಂದ ಬಹುಮಾನ ದೊರೆತಿದೆ. ಇವರ ‘ಹೇಳ್ತೇವೋ ಗುಮ್ಟೆ ಪದನಾವಾ’, ಉತ್ತರ ಕನ್ನಡ ಜಿಲ್ಲೆಯ ಜನಪದ ಆಟಗಳು’, ‘ಜೇಂಗೊಡ’, ‘ಕನ್ನಡ ಬಯಲಾಟ ಪರಂಪರೆ’ ಕೃತಿಗಳು ವಿಶ್ವವಿದ್ಯಾಲಯಗಳ ಪಠ್ಯ ಪುಸ್ತಕಗಳಾಗಿ ಮನ್ನಣೆ ಪಡೆದಿವೆ. ಉತ್ತರ ಕನ್ನಡ ಜಿಲ್ಲಾ ಪ್ರಥಮ ಜಾನಪದ ಸಮ್ಮೇಳನ, ಜಿಲ್ಲಾ ಏಳನೇ ಕನ್ನಡ ಸಾಹಿತ್ಯ ಸಮ್ಮೇಳನ, ಅಖಿಲ ಕರ್ನಾಟಕ 27ನೇ ಜಾನಪದ ಸಮ್ಮೇಳನ, ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಜಾನಪದ ಗೋಷ್ಠಿಗಳ ಅಧ್ಯಕ್ಷತೆ ವಹಿಸಿದ್ದರು.
ಗಾಮೊಕ್ಕಲ ಮಹಾಭಾರತ, ಹಾಲಕ್ಕಿ ಒಕ್ಕಲಿಗರು, ವಿಮೋಚನೆ(ನಾಟಕ ಕೃತಿ), ಚಿಂತನ ತರಂಗ, ಕೋಪ ನರಕದ ಬಾಗಿಲು, ಹುತ್ತವ ಬಡಿದರೆ ಹಾವು ಸಾಯಬಲ್ಲದೆ, ನ್ಯಾಯಾನ್ಯಾಯ ವಿವೇಚನೆ, ಬಾನುಲಿ ಅಲೆಗಳು, ಶರಣರ ಬೆಳಕಿನ ಪಥ, ಜಾನಪದ ಜಗಲಿಯಲ್ಲಿ(ಆತ್ಮಕಥನ), ಕಲಿಕೆಯ ಗುಡಿಲಲ್ಲಿ(ಅನುಭವ ಕಥನಗಳು), ಗಂಗೋತ್ರಿ, ಕರ್ನಾಟಕ ಬುಡಕಟ್ಟುಗಳು, ಗುಣ ಗೌರವ, ನಿಲಾಂಜನ, ಸೌಹಾರ್ದ ಸಂಗಮ(ಸಂಪಾದಕತ್ವದ ಕೃತಿಗಳು), ಕಾದು ಅರಳು(1981), ಹಂಸಪಥ(2001), ಕಾಡು ಹಾಡು(2005), ನೂರು ಪದ ನೂರು ಹದ(2007), ಮುರುಡ ಅರಳು(2009), ದೀಪಾರಾಧನೆ, ಕಲಶ(ಅಭಿನಂದನಾ ಗ್ರಂಥಗಳು) ಕೃತಿಗಳನ್ನು ರಚಿಸಿದ್ದಾರೆ.
ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯಿಂದ ‘ಜಾನಪದ ತಜ್ಞ’(1993), ಕರ್ನಾಟಕ ಸರಕಾರ ರಾಜ್ಯೋತ್ಸವ ಪ್ರಶಸ್ತಿ(2003), ಗೌರೀಶ ಕಾಯ್ಕಿಣಿ ಪ್ರತಿಷ್ಠಾನ ಪ್ರಶಸ್ತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ದೆಹಲಿಯ ಕರ್ನಾಟಕ ಸಂಘದಿಂದ ಪ್ರಶಸ್ತಿ, ಗೊರುಚ ಪ್ರಶಸ್ತಿ, ವಿ.ಸಿ.ಸನ್ಮಾನ, ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿ, ಜಿ. ನಾರಾಯಣ ಅಡಿಗ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಡಾ.ಎನ್.ಆರ್.ನಾಯಕ ಅವರ ನಿಧನಕ್ಕೆ ಗಣ್ಯರು, ಸಾಹಿತಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ