ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಸಾರ್ವಜನಿಕರ ತೀವ್ರ ವಿರೋಧ

ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗೇರುಸೊಪ್ಪಾ ಶ್ರೀ ಗುತ್ತಿಕನ್ನಿಕಾ ನಗರದೇವಿ ದೇವಾಲಯದ ಸಭಾಭವನದಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಕುರಿತು ನಡೆದ ಸಾರ್ವಜನಿಕ ಆಕ್ಷೇಪಣೆ ಸಭೆಯಲ್ಲಿ ಸಾರ್ವಜನಿಕರು ಯೋಜನೆಯ ವಿರುದ್ಧ ತಮ್ಮ ಬಲವಾದ ವಿರೋಧ ವ್ಯಕ್ತಪಡಿಸಿದರು.
ಈ ಸಭೆ ಕೇವಲ ಒಂದು ಕಾಟಾಚಾರದ ಪ್ರಕ್ರಿಯೆ ಎಂಬಂತೆ ನಡೆಸಲಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಗೇರುಸೊಪ್ಪಾ ಬಂಗಾರಮಕ್ಕಿ ವೀರಾಂಜನೇಯ ದೇವಸ್ಥಾನದ ಮಾರುತಿ ಗುರೂಜಿ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಗೆ “ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಬೇಡಿಕೆ ಇಟ್ಟಿದ್ದೆವು, ಆದರೆ ಜಿಲ್ಲೆಗೆ ಬೇಕಾದ ಯೋಜನೆಗಳನ್ನು ನೀಡದೆ ಪರಿಸರಕ್ಕೆ ಮಾರಕವಾಗುವ ಯೋಜನೆಗಳನ್ನು ನಮ್ಮ ಮೇಲೆ ಹೇರಲಾಗುತ್ತಿದೆ” ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಈ ಯೋಜನೆ ಅನುಷ್ಠಾನವಾದರೆ ಪಶ್ಚಿಮ ಘಟ್ಟದ ಅತ್ಯಂತ ಸೂಕ್ಷ್ಮ ಪರಿಸರ ಮತ್ತು ಸ್ಥಳೀಯ ಸಮುದಾಯಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಈ ಶರಾವತಿ ಕಣಿವೆಯೂ ಅಪರೂಪದ ಸಿಂಹ ಬಾಲದ ಮಂಗಗಳ ವನ್ಯಜೀವಿ ಧಾಮದ ವ್ಯಾಪ್ತಿಗೆ ಸೇರಿದ್ದು, ಇದು ಅತಿ ಸೂಕ್ಷ್ಮ ಪರಿಸರ ಪ್ರದೇಶವಾಗಿದೆ. ಯೋಜನೆಯಿಂದ ಸುಮಾರು 16,000ಕ್ಕೂ ಹೆಚ್ಚು ಮರಗಳನ್ನು ಕಡಿಯಬೇಕಾಗುತ್ತದೆ ಎಂಬ ವರದಿಗಳಿವೆ. ಈ ಪ್ರದೇಶವು ಜೀವ ವೈವಿಧ್ಯ ಹಾಗೂ ಪರಿಸರದ ದೃಷ್ಟಿಯಿಂದ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದ್ದು, ಯೋಜನೆಗಾಗಿ ಸುರಂಗಗಳನ್ನು ನಿರ್ಮಿಸುವುದರಿಂದ ಭೂ ಕುಸಿತದ ಅಪಾಯ ಹೆಚ್ಚಾಗುತ್ತದೆ. ಹಿಂದಿನ ಶರಾವತಿ ಜಲವಿದ್ಯುತ್ ಯೋಜನೆಯಿಂದಾಗಿ ಈಗಾಗಲೇ ಸ್ಥಳಾಂತರಗೊಂಡ ಹೆನ್ನಿ, ಮರಾಠಿ ಕೇರಿ ಮತ್ತು ಇತರ ಹಳ್ಳಿಗಳ ನಿವಾಸಿಗಳು ಮತ್ತೊಮ್ಮೆ ಸ್ಥಳಾಂತರದ ಆತಂಕ ಎದುರಿಸುತ್ತಿದ್ದಾರೆ. ಇವರಿಗೆ ಈವರೆಗೂ ಸರಿಯಾದ ಪರಿಹಾರ ಅಥವಾ ಪುನರ್ವಸತಿ ನೀಡಿಲ್ಲ. ಈಗ ಮತ್ತೊಂದು ಯೋಜನೆ ಜಾರಿಗೆ ಮುಂದಾಗಿದ್ದಾರೆ. ಯೋಜನೆಯು ಅಪೂರ್ಣ ಮತ್ತು ದೋಷಪೂರಿತ ಪರಿಸರ ಪರಿಣಾಮ ಮೌಲ್ಯಮಾಪನ (EIA) ವರದಿಗಳ ಆಧಾರದ ಮೇಲೆ ನಡೆಯುತ್ತಿದೆ ಎಂದು ಕೆಲವು ಎನ್‌ಜಿಒಗಳು ದೂರಿವೆ ಎಂದು ಹೇಳಿದರು.

ವೆಚ್ಚ ಮತ್ತು ಪರಿಸರ ಹಾನಿ ಬಗ್ಗೆ ಪ್ರಶ್ನೆ
ಈ ಯೋಜನೆಯ ಅಂದಾಜು ವೆಚ್ಚ ಸುಮಾರು 10,240 ಕೋಟಿ ರೂ ಎಂದು ಅಂದಾಜಿಸಲಾಗಿದೆ. ಉದ್ದೇಶಿತ ಯೋಜನೆಯು 2000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ ಎನ್ನಲಾಗಿದ್ದು, ಪ್ರತಿ ಮೆಗಾವ್ಯಾಟ್‌ಗೆ ಸುಮಾರು 5.12 ಕೋಟಿ ರೂ. ವೆಚ್ಚವಾಗಲಿದೆ. ಈ ಯೋಜನೆಯನ್ನು ಸಂಪೂರ್ಣ ಅವೈಜ್ಞಾನಿಕ ಎಂದು ಹೇಳಿದ ಮಾರುತಿ ಗುರೂಜಿ , “ನಾವು ಅಭಿವೃದ್ಧಿ ವಿರೋಧಿಗಳಲ್ಲ, ಆದರೆ ಪ್ರಕೃತಿ ನಾಶ ಮಾಡುವ ಅಭಿವೃದ್ಧಿಯ ವಿರುದ್ಧವಾಗಿ ಖಂಡಿತವಾಗಿಯೂ ಇದ್ದೇವೆ” ಎಂದರು.
ಈ ಯೋಜನೆಗೆ ಪರ್ಯಾಯವಾಗಿ, ಕಡಿಮೆ ವೆಚ್ಚದಲ್ಲಿ ಮತ್ತು ಪರಿಸರಕ್ಕೆ ಹಾನಿಯಾಗದಂತೆ ಬ್ಯಾಟರಿ ಶಕ್ತಿ ಸಂಗ್ರಹ ಯೋಜನೆಗಳಂತಹ ತಂತ್ರಜ್ಞಾನ ಅಳವಡಿಸಬಹುದಾದ ಯೋಜನೆಗಳಿವೆ ಎಂದರು.
ಶಾಸಕ ದಿನಕರ ಶೆಟ್ಟಿ ಮಾತನಾಡಿ, “ನಮ್ಮ ಜಿಲ್ಲೆ ತ್ಯಾಗದ ಹಣೆಪಟ್ಟಿ ಹೊತ್ತುಕೊಂಡಿದೆ. ಈಗ ಮತ್ತೊಂದು ಯೋಜನೆಯನ್ನು ನಮ್ಮ ಮೇಲೆ ಹೇರಲಾಗುತ್ತಿದೆ. ನಾವು ಯಾವುದೇ ಪರಿಸ್ಥಿತಿಯಲ್ಲಿ ಈ ಯೋಜನೆಯನ್ನು ವಿರೋಧಿಸುತ್ತೇವೆ” ಎಂದರು. ನಮ್ಮ ಜಿಲ್ಲೆಗೆ “ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಬೇಡಿಕೆ ಇದ್ದರೂ, ಯಾವುದೇ ಸರ್ಕಾರ ಅಥವಾ ಪಕ್ಷ ಅದರ ಬಗ್ಗೆ ಕಾಳಜಿ ವಹಿಸಿಲ್ಲ. ಅನೇಕ ಯೋಜನೆಗಳಿಗಾಗಿ ನಾವು ತ್ಯಾಗ ಮಾಡಿದ್ದೇವೆ, ಆದರೆ ಜಿಲ್ಲೆಗೆ ಯಾವುದೇ ಪ್ರಯೋಜನವಾಗಿಲ್ಲ. ಈಗ ಯಾರಿಗೂ ಬೇಡವಾದ ಮತ್ತೊಂದು ಯೋಜನೆಯನ್ನು ನಮ್ಮ ಮೇಲೆ ಹೇರಲಾಗುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಮುಖ ಸುದ್ದಿ :-   ಉಪವಾಸ ಸತ್ಯಾಗ್ರಹದ 21ನೇ ದಿನ : ಜಂತರ್ ಮಂತರ್‌ನಿಂದ ಸೋನಂ ವಾಂಗ್ಚುಕ್‌ರನ್ನು ಆಸ್ಪತ್ರೆಗೆ ಕರೆದೊಯ್ದ ಪೊಲೀಸರು

ಭಾರತೀಯ ಕಿಸಾನ ಸಂಘದ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಶಿವರಾಮ ಗಾಂವ್ಕರ ಮಾತನಾಡಿ, “ಕೆಪಿಸಿ (KPC)ಯವರು ನಮ್ಮ ಜಿಲ್ಲೆಯ ಸುಮಾರು 40,000 ಎಕರೆ ಅರಣ್ಯ ನಾಶ ಮಾಡಿದ್ದಾರೆ. ಈಗ ಶರಾವತಿ ಪಂಪ್ಡ್‌ ಸ್ಟೋರೇಜ್‌ ಹೆಸರಿನಲ್ಲಿ ಮತ್ತೆ ಅತ್ಯಂತ ಸೂಕ್ಷ್ಮಪರಿಸರದ ಪ್ರದೇಶವಾದ ಶರಾವತಿಯ ಒಡಲಿಗೆ ಕೈಹಾಕಿದ್ದಾರೆ. ಜನಸಾಮಾನ್ಯರು ಒಂದು ಬೇಲಿ ಗಿಡ ಕಡಿದರೆ ಪ್ರಕರಣ ದಾಖಲಿಸುವ ಅರಣ್ಯ ಇಲಾಖೆ, ಇಂತಹ ಯೋಜನೆಗಳಿಗೆ ಹೇಗೆ ಒಪ್ಪಿಗೆ ನೀಡುತ್ತದೆ ಎಂದು ಪ್ರಶ್ನಿಸಿದರು.
ಈ ಪ್ರದೇಶ ಅಭಯಾರಣ್ಯದ ಪ್ರದೇಶದಲ್ಲಿಯೇ ಇದೆ. ಅರಣ್ಯ ಇಲಾಖೆ ಎಲ್ಲದಕ್ಕೂ “ಕಾದಿಟ್ಟ ಅರಣ್ಯ” ಎಂದು ಹೇಳುತ್ತದೆ. ಆದರೆ ಸರ್ಕಾರ ಹಾಗೂ ಅರಣ್ಯ ಇಲಾಖೆ ನಡೆ ನೋಡಿದರೆ ಕಾದಿಟ್ಟ ಅರಣ್ಯಗಳು ನಿಜಕ್ಕೂ ಜನರು ಹಾಗೂ ಪ್ರಾಣಿಗಳ ರಕ್ಷಣೆಗಾಗಿ ಮಾತ್ರ ಇವೆಯೇ ಅಥವಾ ಕಂಪನಿಗಳ ಹಿತಾಸಕ್ತಿ ಕಾಪಾಡಲು ಇವೆಯೇ ಎಂಬ ಅನುಮಾನ ಬರುತ್ತಿದೆ ಎಂದು ಹೇಳಿದರು.
ಜೆಡಿಎಸ್‌ಮುಖಂಡ ಸೂರಜ ನಾಯ್ಕ ಸೋನಿ ಮಾತನಾಡಿ, “ಈ ಯೋಜನೆಯಿಂದಾಗುವ ಅನಾನುಕೂಲಗಳು ಸಾಮಾನ್ಯ ಜನರಿಗೂ ಅರ್ಥವಾಗುತ್ತವೆ. ಆದರೆ ಸರ್ಕಾರಕ್ಕೆ ಏಕೆ ಅರ್ಥವಾಗುತ್ತಿಲ್ಲ ಎಂದು ಪ್ರಶ್ನಿಸಿದರು. ವಿದ್ಯುತ್ ಉತ್ಪಾದನೆಗೆ ಇರುವ ಪರ್ಯಾಯ ತಂತ್ರಜ್ಞಾನಗಳನ್ನು ಬಳಸಿ, ಕಡಿಮೆ ವೆಚ್ಚದಲ್ಲಿ ಹೆಚ್ಚಿನ ವಿದ್ಯುತ್ ಉತ್ಪಾದಿಸಬಹುದು ಎಂದು ಅವರು ಸಲಹೆ ನೀಡಿದರು.
ರೈತ ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ,ಮಾಜಿ ಸಚಿವ ಶಿವಾನಂದ ನಾಯ್ಕ, ಮಾಜಿ ಶಾಸಕ ಸುನೀಲ ನಾಯ್ಕ, ಪರಿಸರ ವಿಜ್ಞಾನಿ ಪ್ರೊ. ಸುಭಾಸಚಂದ್ರನ್‌, ಪರಿಸರ ತಜ್ಞರು, ರೈತ ಸಂಘಟನೆಯ ಪ್ರಮುಖರು ಮಾತನಾಡಿ ಯೋಜನೆಗೆ ಖಂಡನೆ ವ್ಯಕ್ತಪಡಿಸಿದರು.
ಗೊಂದಲ ಮತ್ತು ಆಕ್ರೋಶ

ಮನೆಮನೆಗೆ ಯೋಜನೆಯ ಕನ್ನಡದ ಡಿಪಿಆರ್‌ ಪ್ರತಿ ನೀಡದೆ  ಯಾಕೆ ಸಭೆ ನಡೆಸುತ್ತಿದ್ದೀರಿ…?
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಸಂಬಂಧಿಸಿದಂತೆ ಕೆಪಿಸಿಎಲ್ ಎಕ್ಸಿಕ್ಯೂಟಿವ್ ಎಂಜಿನಿಯರ್ ವಿಜಯಕುಮಾರ್ ಅವರು ಪಿಪಿಟಿ ಮೂಲಕ ಯೋಜನೆಯ ಕುರಿತು ವಿವರಿಸಿದರು.
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಪರಿಸರ ಮತ್ತು ಅರಣ್ಯ, ಪರಿಸರ ಬದಲಾವಣೆ ಸಚಿವಾಲಯ ಹಾಗೂ ರಿವರ್ ವ್ಯಾಲಿ ಪ್ರಾಜೆಕ್ಟ್‌ಗಳ ತಜ್ಞರ ಮೌಲ್ಯಮಾಪನ ಸಮಿತಿಯಿಂದ ಟಿಒಆರ್ (Terms of reference) ಅನ್ನು ಅನುಮೋದಿಸಿದೆ. ತಳಕಳಲೆ ಮತ್ತು ಗೇರುಸೊಪ್ಪ ಜಲಾಶಯದ ಮಧ್ಯೆ ಸುರಂಗ ಮಾರ್ಗದ ಮೂಲಕ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತದೆ. ಹೊಸ ಜಲಾಶಯ ನಿರ್ಮಿಸುವ ಅಗತ್ಯ ಇಲ್ಲ. ಯೋಜನೆಗೆ ಅಗತ್ಯವಿರುವ ಅರಣ್ಯ ಭೂಮಿ- 54.155 ಹೆಕ್ಟೇರ್ ಮತ್ತು ಖಾಸಗಿ ಭೂಮಿ 24.31 ಹೆಕ್ಟೇರ್. ಈ ಯೋಜನೆಗೆ ಒಟ್ಟಾರೆ ಕೇವಲ 0.37 ಟಿಎಂಸಿ ನೀರು ಮಾತ್ರ ಅಗತ್ಯವಿದೆ. ಮಳೆಗಾಲದಲ್ಲಿ ಗೇರುಸೊಪ್ಪ ಜಲಾಶಯದಿಂದ 0.37 ಟಿಎಂಸಿ ನೀರನ್ನು ಪಂಪ್ ಮೂಲಕ ತಳಕಳಲೆ ಜಲಾಶಯಕ್ಕೆ ಎತ್ತುವಳಿ ಮಾಡಲಾಗುತ್ತದೆ. ಬಳಿಕ ಈ ನೀರನ್ನೇ ಮರುಬಳಕೆ ಮಾಡಿ ವರ್ಷ ಪೂರ್ತಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಸುರಂಗ ನಿರ್ಮಾಣ ಸೇರಿದಂತೆ ಕಾಮಗಾರಿ ವೇಳೆ ಪರಿಸರ ಇಲಾಖೆ, ಅರಣ್ಯ ಇಲಾಖೆ, ಜಿಯಾಲಜಿಕಲ್ ಸರ್ವೇ ಆಫ್ ಇಂಡಿಯಾ ಸೇರಿದಂತೆ ವಿವಿಧ ಇಲಾಖೆಗಳು ಶಿಫಾರಸು ಮಾಡುವ ನಿಯಂತ್ರಿತ ಸ್ಫೋಟಗಳೊಂದಿಗೆ ಕಾಮಗಾರಿ ನಿರ್ವಹಿಸುವುದರಿಂದ ಭೂಕುಸಿತ, ಭೂಕಂಪಗಳಂತಹ ಅಪಾಯಗಳು ಸಂಭವಿಸುವ ಸಾಧ್ಯತೆ ಇಲ್ಲ ಎಂದು ಪ್ರತಿಪಾದಿಸಿದರು.

ಅವರ ಸುದೀರ್ಘ ವಿವರಣೆಗೆ ಅಸಮಾಧಾನಗೊಂಡ ಸಾರ್ವಜನಿಕರು ಕೇವಲ ನಿಮ್ಮ ವಿವರಣೆ ಹೇಳುವುದಲ್ಲ, ನಮ್ಮ ಮಾತನ್ನೂ ಆಲಿಸಿ ಎಂದರು. ಕೆಲಕಾಲ ಗೊಂದಲ ಸೃಷ್ಟಿಯಾಯಿತು. ಈ ವೇಳೆ ಗೇರುಸೊಪ್ಪಾ ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಮಾರುತಿ ಗೂರುಜಿ ಮಾತನಾಡಿ, ನೀವು ಜನರ ಧ್ವನಿ ಹತ್ತಿಕ್ಕುವ ಕೆಲಸ ಮಾಡಬೇಡಿ. ನೀವು ಕನ್ನಡದಲ್ಲಿ ಡಿಪಿಆರ್ ಅನ್ನು ಪ್ರತಿ ಮನೆಗೆ ಹಂಚಿ ನಂತರ ಸಭೆ ನಡೆಸಬೇಕಿತ್ತು. ಅದನ್ನು ಮಾಡದೆ ಸಭೆ ನಡೆಸುತ್ತಿರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಯೋಜನೆಯಿಂದ ಎಷ್ಟು ಹಾನಿ ಆಗಲಿದೆ ಎಂಬ ಮಾಹಿತಿ ನಿಮಗೆ ಇದೆಯೇ ಎಂದು ಜಿಲ್ಲಾಧಿಕಾರಿಯವರನ್ನು ಪ್ರಶ್ನಿಸಿದರು. 2000 ಮೆಗಾವ್ಯಾಟ್ ಉತ್ಪಾದಿಸಿ ಎಲ್ಲಿಗೆ ಕೊಡುತ್ತಿರಿ?. ಹಗರಣದ ಆರೋಪವಿರುವ ಸಂಸ್ಥೆಯೊಂದರ ಮಾಲೀಕರು ಈ ಯೋಜನೆಯ ಗುತ್ತಿಗೆದಾರರು ಎಂಬೆಲ್ಲ ಮಾಹಿತಿಗಳಿವೆ. ಈ ಬಗ್ಗೆ ಸತ್ಯ ಏನು ಎನ್ನುವುದು ಬಹಿರಂಗವಾಗಲಿ. ಒಂದೊಮ್ಮೆ ಜಾಗ ಅಗೆಯಲು ಬಂದರೆ ನನ್ನ ಎದೆಯ ಮೇಲೆ ಜೆಸಿಬಿ ಹತ್ತಿಸಿ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಹೆರಂಗಡಿಯ ಗ್ರಾಮಸ್ಥ ಶ್ರೀಧರ ನಾಯ್ಕ ಎಂಬವರು ಮಾತನಾಡಿ, ಕೆಪಿಸಿಯವರು ಗೇರುಸೊಪ್ಪಾದಲ್ಲಿ ಅಣೆಕಟ್ಟು ನಿರ್ಮಿಸುವಾಗ ಹೊನ್ನಾವರ ತಾಲೂಕಿನ ಜನತೆಗೆ ಉಚಿತ ವಿದ್ಯುತ್ ನೀಡುತ್ತೇವೆ ಎಂದು ಹೇಳಿದ್ದರು. ನಂತರ ಉಚಿತವಾಗಿ ಕೊಡುವುದು ದೂರದ ಮಾತಾಯಿತು. ದುಪ್ಪಟ್ಟು ಬಿಲ್ ಬರುತ್ತಿದೆ ಎಂದರು.
ಸಭೆ ನಡೆದ ಸ್ಥಳ ಕಿರಿದಾಗಿದ್ದರಿಂದ ಬಹುತೇಕ ಜನರಿಗೆ ಸಭೆಯಲ್ಲಿ ಏನು ಚರ್ಚೆ ಆಗುತ್ತಿದೆ ಎನ್ನುವುದು ಸರಿಯಾಗಿ ಕೇಳಲಿಲ್ಲ. ಕೆಲವರು ಆಸನ ಸಿಗದೆ ನಿಂತು ಸಭೆ ಆಲಿಸುವಂತಾಯಿತು‌. ಈ ಸಭೆ ಕೇವಲ ಜನರ ಕಣ್ಣಿಗೆ ಮಣ್ಣೆರಚುವ ಪ್ರಯತ್ನ ಎಂದು ಸಾರ್ವಜನಿಕರು ಆರೋಪಿಸಿದರು.
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರುದ್ಧ ಶರಾವತಿ ನದಿಯ ಎರಡೂ ಪಕ್ಕದ ಜನರು ಸೇರಿದಂತೆ ವಿವಿಧೆಡಯಿಂದ ಸಾವಿರಾರು ಜನರು ಆಗಮಿಸಿ ತಮ್ಮ ಲಿಖಿತ ತಕರಾರು ಸಲ್ಲಿಸಿದರು. ಕಾಲೇಜು ವಿದ್ಯಾರ್ಥಿಗಳು ಸಹ ಪಾಲ್ಗೊಂಡಿರುವುದು ವಿಶೇಷವಾಗಿತ್ತು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement