’24 ಗಂಟೆಗಳ ಒಳಗೆ ಅಮೆರಿಕಕ್ಕೆ ಹಿಂತಿರುಗಿʼ : ಟ್ರಂಪ್‌ ಶುಲ್ಕ ಹೆಚ್ಚಿಸಿದ ನಂತರ H-1B ವೀಸಾ ಹೊಂದಿರುವವರಿಗೆ ಮೆಟಾ, ಮೈಕ್ರೋಸಾಫ್ಟ್ ಕಂಪನಿಗಳ ಸೂಚನೆ

ವಾಷಿಂಗ್ಟನ್‌ : ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಲಸಿಗರ ವಿರುದ್ಧ ಹೊಸ ನಿರ್ಬಂಧಗಳನ್ನು ಘೋಷಿಸಿದ ನಂತರ, ಮೆಟಾ ಮತ್ತು ಮೈಕ್ರೋಸಾಫ್ಟ್ ಸೇರಿದಂತೆ ಪ್ರಮುಖ ಟೆಕ್‌ ಕಂಪನಿಗಳು ಶನಿವಾರ ಬೆಳಿಗ್ಗೆ ತುರ್ತು ಸಭೆ ನಡೆಸಿ, ತಮ್ಮ H-1B ವೀಸಾ ಹೊಂದಿದ ಉದ್ಯೋಗಿಗಳಿಗೆ ಕನಿಷ್ಠ 14 ದಿನಗಳ ಕಾಲ ಅಮೆರಿಕ ತೊರೆಯಬೇಡಿ ಎಂದು ಸೂಚಿಸಿವೆ.
ಮರು ಪ್ರವೇಶ ನಿರಾಕರಣೆಯಾಗುವ ಸಾಧ್ಯತೆಯಿಂದ ತಪ್ಪಿಸಿಕೊಳ್ಳಲುಈ ಕಂಪನಿಗಳು ಅಮೆರಿಕದ ಹೊರಗಿರುವ ತಮ್ಮ ಉದ್ಯೋಗಿಗಳಿಗೆ 24 ಗಂಟೆಗಳೊಳಗೆ ಅಮೆರಿಕಕ್ಕೆ ಮರಳುವಂತೆ ಮನವಿ ಮಾಡಿವೆ.
ಮೆಟಾ ಕಂಪನಿಯು ತನ್ನ H-1B ಮತ್ತು H4 ಸ್ಟೇಟಸ್ ಹೊಂದಿರುವ ಉದ್ಯೋಗಿಗಳಿಗೆ ಕನಿಷ್ಠ ಎರಡು ವಾರಗಳ ಕಾಲ ಅಮೆರಿಕದಲ್ಲಿ ಉಳಿಯುವಂತೆ ಸಲಹೆ ನೀಡಿದ್ದು, ಪ್ರಾಯೋಗಿಕ ಪರಿಣಾಮಗಳು ಸ್ಪಷ್ಟವಾಗುವವರೆಗೆ ಕಾಯುವಂತೆ ಹೇಳಿದೆ. ಅಮೆರಿಕದ ಹೊರಗಿರುವವರಿಗೆ 24 ಗಂಟೆಗಳೊಳಗೆ ಅಮೆರಿಕಕ್ಕೆ ವಾಪಸ್‌ ಬರುವುದನ್ನು ಪರಿಗಣಿಸುವಂತೆ ಸೂಚಿಸಲಾಗಿದೆ.
ಮೈಕ್ರೋಸಾಫ್ಟ್ ತನ್ನ ಉದ್ಯೋಗಿಗಳಿಗೆ ಅಮೆರಿಕದಲ್ಲಿಯೇ ಉಳಿಯುವಂತೆ ಸೂಚಿಸಿದ್ದು, ಅಮೆರಿಕಕ್ಕೆ ಮರು ಪ್ರವೇಶ ನಿರಾಕರಿಸುವುದನ್ನು ತಪ್ಪಿಸಿಕೊಳ್ಳಲು ಈ ಕ್ರಮ ಅಗತ್ಯ ಎಂದು ತಿಳಿಸಿದೆ. ಹೊರಗಿರುವವರಿಗೆ “ಸಾಧ್ಯವಾದಷ್ಟು ಶೀಘ್ರವಾಗಿ ಮರಳಿ ಅಮೆರಿಕಕ್ಕೆ ಬರಲು” ಮನವಿ ಮಾಡಿದೆ.
H-1B ವೀಸಾ ಕಾರ್ಯಕ್ರಮವು ಅಮೆರಿಕದಲ್ಲಿ ವಿಶೇಷ ಉದ್ಯೋಗ ಕ್ಷೇತ್ರಗಳಲ್ಲಿ (ಹೆಚ್ಚಾಗಿ ತಂತ್ರಜ್ಞಾನ ಕ್ಷೇತ್ರ) ಉದ್ಯೋಗ ಹೊಂದಿರುವ ವಿದೇಶಿಗರಿಗೆ ಮೀಸಲಾಗಿದೆ. ಇದರಲ್ಲಿ ಸಾಫ್ಟ್‌ವೇರ್ ಎಂಜಿನಿಯರ್‌ಗಳು, ತಂತ್ರಜ್ಞಾನ ನಿರ್ವಾಹಕರು ಹಾಗೂ ಇತರ ಐಟಿ (IT) ತಜ್ಞರು ಸೇರಿರುತ್ತಾರೆ. ಈ ವೀಸಾ ಮೂರು ವರ್ಷಗಳ ವರೆಗೆ ಮಾನ್ಯವಿದ್ದು, ನಂತರ ಮತ್ತೊಮ್ಮೆ ಮೂರು ವರ್ಷಗಳವರೆಗೆ ನವೀಕರಿಸಬಹುದಾಗಿದೆ.
ಗುರುವಾರ ಅಧ್ಯಕ್ಷ ಟ್ರಂಪ್ ಅವರು H-1B ವೀಸಾ ಶುಲ್ಕವನ್ನು ವರ್ಷಕ್ಕೆ $1,00,000 ಗೆ ಹೆಚ್ಚಿಸಿದರು. ಈ ನಿರ್ಧಾರ ತಂತ್ರಜ್ಞಾನ ಕಂಪನಿಗಳಿಂದ ಉದ್ಯೋಗ ಪಡೆದಿರುವ ಅನೇಕ ಭಾರತೀಯರಿಗೆ ತೀವ್ರ ಪರಿಣಾಮ ಬೀರುವ ಸಾಧ್ಯತೆ ಇದೆ.
ವೈಟ್ ಹೌಸ್‌ನಲ್ಲಿ ಘೋಷಣೆಯಾದ ಪ್ರಕಾರ, “ಅಮೆರಿಕನ್ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಪ್ರೋತ್ಸಾಹ ನೀಡುವುದು” ಈ ಕ್ರಮದ ಉದ್ದೇಶವಾಗಿದೆ. ಆದರೆ, ಕಂಪನಿಗಳು “ವಿಶಿಷ್ಟ ಪ್ರತಿಭೆಗಳ” ನೇಮಕಾತಿಗೆ ಮಾರ್ಗವೊಂದನ್ನು ಹೊಂದಿರಬೇಕು ಎಂಬ ಉದ್ದೇಶವನ್ನೂ ಸರ್ಕಾರ ವ್ಯಕ್ತಪಡಿಸಿದೆ.
ಈ ಕ್ರಮಗಳು ಕಾನೂನು ಹಂತದಲ್ಲಿ ಅನುಮೋದನೆ ಪಡೆದರೆ, ಇದು ವೀಸಾ ಶುಲ್ಕದಲ್ಲಿ ಅಪಾರ ಹೆಚ್ಚಳವನ್ನು ತರುತ್ತದೆ. ತಂತ್ರಜ್ಞಾನ ವಲಯದ ನಿಪುಣರಿಗೆ ವೀಸಾ ಶುಲ್ಕ $215 ರಿಂದ ನೇರವಾಗಿ $1,00,000 ಗೆ ಏರಲಿದೆ. ಹೂಡಿಕೆದಾರರ ವೀಸಾ (Investor Visa) ಗಳಿಗೆ ವಾರ್ಷಿಕ ಶುಲ್ಕ $10,000 ರಿಂದ $200000 ಗೆ ಏರಲಿದೆ.

ಪ್ರಮುಖ ಸುದ್ದಿ :-   ಟ್ರಂಪ್ ಹತ್ಯೆ ಮಾಡಿದವರಿಗೆ ₹96 ಕೋಟಿ ಬಹುಮಾನ ನೀಡುವುದಾಗಿ ಘೋಷಿಸಿದ ಇರಾನ್ ಬೆಂಬಲಿತ ಇರಾಕಿನ ಬಂಡುಕೋರರ ಗುಂಪು

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement