ಭೋಪಾಲ : ಕುರ್ ಕುರೆ ಕೊಡಿಸಿ ಎಂದು ಕೇಳಿದ್ದಕ್ಕೆ ತನ್ನ ತಾಯಿ ಮತ್ತು ಅಕ್ಕ ತನಗೆ ಹೊಡೆದಿದ್ದಾರೆ ಎಂದು 8 ವರ್ಷದ ಬಾಲಕನೊಬ್ಬ ಪೊಲೀಸರಿಗೆ ದೂರು ನೀಡಿದ ಅಪರೂಪದ ಘಟನೆ ಮಧ್ಯಪ್ರದೇಶದ ಸಿಂಗ್ರೌಲಿಯ ಚಿತರ್‌ವೈ ಕಲಾ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಬಾಲಕ ಕುರ್‌ಕುರೆ ಪ್ಯಾಕೆಟ್ ಖರೀದಿ ಮಾಡಲು ತಾಯಿಯ ಬಳಿ 20 ರೂ. ಕೊಡುವಂತೆ ಕೇಳಿದ್ದಾನೆ. ಅದಕ್ಕೆ ತಾಯಿ ಬೇಡ ಎಂದು ಗದರಿ ಹೇಳಿದ್ದಾಳೆ. ಬಾಲಕ ಹಠ ಮಾಡಿದಾಗ ತಾಯಿ ಮತ್ತು ಬಾಲಕನ ಅಕ್ಕ ಹೊಡೆದಿದ್ದಾರೆ. ಇದರಿಂದ ನೊಂದ ಬಾಲಕ ಅಮ್ಮನ ಮೊಬೈಲ್ ತೆಗೆದುಕೊಂಡು ಪೊಲೀಸ್ ತುರ್ತು ಸಂಖ್ಯೆ 112ಗೆ ಕರೆ ಮಾಡಿದ್ದಾನೆ. ಫೋನ್ ಕರೆ ಸ್ವೀಕರಿಸಿದ ಪೊಲೀಸ್ ಸಿಬ್ಬಂದಿ ವಿಚಾರಿಸಿದಾಗ ಬಾಲಕ ಚಿಪ್ಸ್ ಪ್ಯಾಕೆಟ್ ಕೊಡಿಸಿ ಎಂದಿದ್ದಕ್ಕೆ ಅಮ್ಮ ಮತ್ತು ಅಕ್ಕ ಸೇರಿ ನನಗೆ ಹಗ್ಗದಿಂದ ಕಟ್ಟಿ ಹಾಕಿ ಹೊಡೆದಿದ್ದಾರೆ ಎಂದು ಬಾಲಕ ದೂರಿದ್ದಾನೆ.
ಮಗುವಿನ ದೂರನ್ನು ಫೋನ್‌ನಲ್ಲಿ ಕೇಳಿ ಕರ್ತವ್ಯದಲ್ಲಿದ್ದ ಪೊಲೀಸರು ಸಹ ಆಶ್ಚರ್ಯಚಕಿತರಾದರು. ಮಗು ಫೋನ್‌ನಲ್ಲಿ ಅಳಲು ಪ್ರಾರಂಭಿಸಿದಾಗ, ಪೊಲೀಸರು ಆತನನ್ನು ಪ್ರೀತಿಯಿಂದ ಸಮಾಧಾನಪಡಿಸಿದರು ಮತ್ತು ಬಾಲಕನನ್ನು ಭೇಟಿಯಾಗುವುದಾಗಿ ಭರವಸೆ ನೀಡಿದರು. ಸದ್ಯ ಬಾಲಕನ ಈ ಕರೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಾಲಕ ದೂರಿನ ಬಗ್ಗೆ ಹೇಳುತ್ತಿರುವಾಗ ಪೊಲೀಸ್ ಅಧಿಕಾರಿಯೊಬ್ಬರು ಶಾಂತವಾಗಿ ಅವನಿಗೆ ಧೈರ್ಯ ತುಂಬುತ್ತಿರುವುದನ್ನು ವಿಡಿಯೋದಲ್ಲಿ ಕೇಳಬಹುದಾಗಿದೆ.ಅಲ್ಲದೆ, ಪೊಲೀಸ್ ಅಧಿಕಾರಿ ಬಾಲಕನಿಗೆ ಸಮಾಧಾನ ಮಾಡಿದ್ದಾರೆ. ಹಾಗೂ ಬಾಲಕನ ಅಮ್ಮನಿಗೆ ಮಗುವನ್ನು ಹೊಡೆಯಬೇಡಿ ಎಂದು ಹೇಳಿದ್ದಾರೆ. ನಂತರ ಆ ಬಾಲಕನ ಮನೆಗೆ ಹೋಗಿ ತಾವೇ ಕುರ್‌ಕುರೆ ಪ್ಯಾಕೆಟ್‌ಗಳನ್ನು ಕೊಟ್ಟು ಬಾಲಕನಿಗೆ ಅಚ್ಚರಿ ನೀಡಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ