ತಮ್ಮ ಮನೆಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಹಿರಿಯ ಐಪಿಎಸ್ ಅಧಿಕಾರಿ

ಚಂಡೀಗಢ: ಹರಿಯಾಣ ಕೇಡರ್‌ನ ಹಿರಿಯ ಐಪಿಎಸ್ ಅಧಿಕಾರಿ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ವೈ ಪೂರಣ್‌ಕುಮಾರ ಅವರು ಮಂಗಳವಾರ (ಅಕ್ಟೋಬರ್ 7) ಚಂಡೀಗಢದಲ್ಲಿರುವ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆರಂಭಿಕ ವರದಿಗಳ ಪ್ರಕಾರ, ಅವರು ಸ್ವತಃ ಗುಂಡು ಹಾರಿಸಿಕೊಂಡು ಸಾವಿಗೀಡಾಗಿದ್ದಾರೆ ಎಂದು ಹೇಳಲಾಗಿದೆ.
ಘಟನೆ ವರದಿಯಾದ ಕೂಡಲೇ ಚಂಡೀಗಢ ಪೊಲೀಸರು ಮತ್ತು ಹರಿಯಾಣದ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಪೂರಣ್‌ಕುಮಾರ ಅವರ ಮೃತದೇಹವನ್ನು ಅವರ ನಿವಾಸದಿಂದ ವಶಕ್ಕೆ ತೆಗೆದುಕೊಳ್ಳಲಾಗಿದೆ ಮತ್ತು ಈ ಕೃತ್ಯದಲ್ಲಿ ಅವರ ಸೇವಾ ಆಯುಧವನ್ನು ಬಳಸಲಾಗಿದೆ ಎಂದು ನಂಬಲಾಗಿದೆ. ಅವರ ನಿರ್ಧಾರದ ಹಿಂದಿನ ಸಂದರ್ಭಗಳು ಮತ್ತು ಸಂಭವನೀಯ ಕಾರಣಗಳನ್ನು ಕಂಡುಹಿಡಿಯಲು ಅಧಿಕಾರಿಗಳು ತನಿಖೆಯನ್ನು ಪ್ರಾರಂಭಿಸಿದ್ದಾರೆ.

ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಕನ್ವರದೀಪ್ ಕೌರ್ ಮಾತನಾಡಿ, “ಐಪಿಎಸ್ ಅಧಿಕಾರಿಯ ಸಾವಿನ ಘಟನೆ ಮಧ್ಯಾಹ್ನ 1:30 ರ ಸುಮಾರಿಗೆ ಸಂಭವಿಸಿದೆ ಎಂದು ವರದಿಯಾಗಿದೆ ಮತ್ತು ಪ್ರಸ್ತುತ ತನಿಖೆ ನಡೆಯುತ್ತಿದೆ. ಅವರ ಸಾವಿನ ಸುತ್ತಲಿನ ಸಂದರ್ಭಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಅಧಿಕಾರಿಗಳು ಅವರ ಕುಟುಂಬದ ಸದಸ್ಯರನ್ನು ಪ್ರಶ್ನಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಪೂರಣ್‌ಕುಮಾರ ಅವರ ಮೊಬೈಲ್ ಫೋನ್ ಮತ್ತು ಇತರ ವಸ್ತುಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದು, ಸುಳಿವುಗಳನ್ನು ಸಂಗ್ರಹಿಸುತ್ತಿದ್ದಾರೆ. ಕುಟುಂಬವು ಯಾವುದೇ ಪ್ರತಿಕ್ರಿಯೆಗಳನ್ನು ನೀಡಿಲ್ಲ ಮತ್ತು ಅಧಿಕಾರಿಗಳು ಪ್ರಾಥಮಿಕ ವಿಧಿವಿಜ್ಞಾನ ಮತ್ತು ಬ್ಯಾಲಿಸ್ಟಿಕ್ ವರದಿಗಳಿಗಾಗಿ ಕಾಯುತ್ತಿದ್ದಾರೆ.

ಪ್ರಮುಖ ಸುದ್ದಿ :-   ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯ; ಕಕ್ಷೆ ತಲುಪಿದ ಸ್ಕೈರೂಟ್‌ನ ಖಾಸಗಿ ರಾಕೆಟ್ ‘ವಿಕ್ರಂ-1’

ಕುಟುಂಬ ಮತ್ತು ವೃತ್ತಿಪರ ಹಿನ್ನೆಲೆ
ಎಡಿಜಿಪಿ ವೈ ಪೂರಣ್‌ಕುಮಾರ ಹರಿಯಾಣದಲ್ಲಿ ವರ್ಷಗಳ ಕಾಲ ವಿಶಿಷ್ಟ ಸೇವೆ ಸಲ್ಲಿಸಿದ ಹಿರಿಯ ಐಪಿಎಸ್ ಅಧಿಕಾರಿಯಾಗಿದ್ದರು. ಅವರ ಪತ್ನಿ ಐಎಎಸ್ ಅಧಿಕಾರಿ ಅಮ್ನೀತ್ ಪಿ ಕುಮಾರ ಕೂಡ ಪ್ರಸ್ತುತ ರಾಜ್ಯ ಆಡಳಿತದಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ಅಧಿಕಾರಿ. ಘಟನೆಯ ಸಮಯದಲ್ಲಿ, ಅಮ್ನೀತಕುಮಾರ ವಿದೇಶದಲ್ಲಿದ್ದಾರೆ, ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರೊಂದಿಗೆ ಜಪಾನಿಗೆ ಅಧಿಕೃತ ನಿಯೋಗದಲ್ಲಿ ಇದ್ದಾರೆ. ಅವರು ಶೀಘ್ರವೇ ಭಾರತಕ್ಕೆ ಮರಳುವ ನಿರೀಕ್ಷೆಯಿದೆ.
ಪೂರಣ್‌ಕುಮಾರ ಅವರ ಶ್ರೇಣಿಯ ಹಿರಿಯ ಅಧಿಕಾರಿಯ ಅಕಾಲಿಕ ನಿಧನಕ್ಕೆ ಹಿರಿಯ ಅಧಿಕಾರಿಗಳು ಮತ್ತು ಸಹೋದ್ಯೋಗಿಗಳು ಸಂತಾಪ ಸೂಚಿಸಿದ್ದಾರೆ, ಅವರನ್ನು ಶಿಸ್ತುಬದ್ಧ ಮತ್ತು ಸಮರ್ಪಿತ ಅಧಿಕಾರಿ ಎಂದು ಸ್ಮರಿಸಿದ್ದಾರೆ. ವಿವರವಾದ ಆಂತರಿಕ ವರದಿಯ ನಂತರ ಹರಿಯಾಣ ಸರ್ಕಾರ ಅಧಿಕೃತ ಹೇಳಿಕೆಯನ್ನು ನೀಡುವ ನಿರೀಕ್ಷೆಯಿದೆ.

 

5 / 5. 3

ನಿಮ್ಮ ಕಾಮೆಂಟ್ ಬರೆಯಿರಿ

advertisement