ಸುಳಿವು ಸಿಗದ ಕೊಲೆ ಪ್ರಕರಣ ಭೇದಿಸಿದ ಪೊಲೀಸರು ; ಬೀಡಿ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ…!

  ರಾಯಪುರದ ಅಭನ್‌ಪುರದ ಅಮನೇರ್ ಗ್ರಾಮದಲ್ಲಿ ನಡೆದಿದ್ದ ‘ಬ್ಲೈಂಡ್ ಮರ್ಡರ್’ (ಸುಳಿವು ಇಲ್ಲದ ಕೊಲೆ) ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ವಾರದ ಆರಂಭದಲ್ಲಿ ಗೋದಾ ಸೇತುವೆ ಬಳಿಯ ಚರಂಡಿಯಲ್ಲಿ ಪತ್ತೆಯಾಗಿದ್ದ 26 ವರ್ಷದ ಸೋನು ಪಾಲ್ ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳಾದ ಸುಮಂತ ಬಾಂದೇ (26), ಅಜಯ ರಾತ್ರೆ (24), ಮತ್ತು ಗುಲ್ಶನ್ ಗಾಯಕವಾಡ (26) ಅವರು ವಿಚಾರಣೆ ವೇಳೆ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತಲೆ ಮತ್ತು ಮುಖದ ಮೇಲೆ ತೀವ್ರ ಗಾಯಗಳು
ಶುಕ್ರವಾರದಂದು ಈ ಘಟನೆ ಮೊದಲು ವರದಿಯಾದಾಗ ಇದು ‘ಬ್ಲೈಂಡ್ ಮರ್ಡರ್’ ಎಂಬುದಾಗಿ ಕಂಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಚರಂಡಿಯಲ್ಲಿ ವ್ಯಕ್ತಿಯೊಬ್ಬನ ದೇಹ ಪತ್ತೆಯಾಗಿದ್ದು, ಆತನ ತಲೆ ಮತ್ತು ಮುಖದ ಮೇಲೆ ತೀವ್ರವಾದ ಗಾಯಗಳಾಗಿದ್ದವು.
ಸತ್ತವನು ಮೊನಚು ಇಲ್ಲದ ವಸ್ತುವಿನಿಂದ ತೀವ್ರ ಹಲ್ಲೆಗೆ ಒಳಗಾಗಿದ್ದ ಚಿಹ್ನೆಗಳನ್ನು ಹೊಂದಿದ್ದರು. ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್‌ಗಳು 103 ಮತ್ತು 3(5) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

ಪ್ರಕರಣ ಭೇದಿಸಿದ್ದು ಹೇಗೆ?
ಹಿರಿಯ ಪೊಲೀಸ್ ಅಧೀಕ್ಷಕರಾದ (SSP) ಡಾ. ಲಾಲ ಉಮೇಶ್‌ ಸಿಂಗ್ ಅವರು ಹೆಚ್ಚುವರಿ ಎಸ್‌ಪಿ (ನವ ರಾಯಪುರ) ವಿವೇಕ ಶುಕ್ಲಾ, ಹೆಚ್ಚುವರಿ ಎಸ್‌ಪಿ (ಅಪರಾಧ) ಸಂದೀಪ ಮಿತ್ತಲ್ ಮತ್ತು ಡಿಎಸ್‌ಪಿ ಸಂಜಯ ಸಿಂಗ್ ನೇತೃತ್ವದಲ್ಲಿ ಉನ್ನತ ಮಟ್ಟದ ತಂಡವನ್ನು ರಚಿಸಿ ಪ್ರಕರಣವನ್ನು ಭೇದಿಸುವಂತೆ ನಿರ್ದೇಶನ ನೀಡಿದ್ದರು.
ತಂಡವು ಮೊದಲು ಕೊಲೆಯಾದ ವ್ಯಕ್ತಿಯ ಗುರುತು ಪತ್ತೆ ಹಚ್ಚುವ, ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸುವ ಮತ್ತು ಸ್ಥಳೀಯರನ್ನು ವಿಚಾರಣೆ ಮಾಡುವ ಮೂಲಕ ತನಿಖೆಯನ್ನು ಪ್ರಾರಂಭಿಸಿತು. ತಾಂತ್ರಿಕ ವಿಶ್ಲೇಷಣೆ ಮತ್ತು ಸ್ಥಳೀಯ ವಿಚಾರಣೆಗಳ ಮೂಲಕ, ಮೃತ ವ್ಯಕ್ತಿಯನ್ನು ಅಭನ್‌ಪುರದಲ್ಲಿರುವ ಗಟಾಪಾರಾ ಗ್ರಾಮದ ಮಹೇಶ ಪಾಲ್ ಅವರ ಮಗ ಸೋನು ಪಾಲ್ ಎಂದು ಗುರುತಿಸಲಾಯಿತು.
ತನಿಖಾಧಿಕಾರಿಗಳು ಮೃತನ ಕೊನೆಯ ಚಲನವಲಗಳನ್ನು ಪರಿಶೀಲಿಸಿದಾಗ, ಸಾವಿಗೆ ಮುನ್ನ ರಾತ್ರಿ ಅಭನ್‌ಪುರದಲ್ಲಿರುವ ಒಂದು ಮದ್ಯದ ಅಂಗಡಿಯ ಹೊರಗೆ ಮದ್ಯಪಾನ ಮಾಡುತ್ತಿದ್ದನೆಂದು ತಿಳಿದುಬಂದಿದೆ. ಅಲ್ಲಿಯೇ ನಡೆದ ಒಂದು ಸಣ್ಣ ಜಗಳ ಮಾರಕ ತಿರುವು ಪಡೆದಿತ್ತು ಎಂಬುದು ತಿಳಿದುಬಂತು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಉಪವಾಸ ಸತ್ಯಾಗ್ರಹದ 21ನೇ ದಿನ : ಜಂತರ್ ಮಂತರ್‌ನಿಂದ ಸೋನಂ ವಾಂಗ್ಚುಕ್‌ರನ್ನು ಆಸ್ಪತ್ರೆಗೆ ಕರೆದೊಯ್ದ ಪೊಲೀಸರು

ಬೀಡಿ ವಿಚಾರಕ್ಕೆ ಜಗಳ, ಕೊಲೆಯಲ್ಲಿ ಅಂತ್ಯ
ಗುರುವಾರದಂದು ಬೀಡಿ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಜಗಳದಿಂದ ಪಾಲ್‌ ಅವರನ್ನು ಮೂವರು ಆರೋಪಿಗಳು ಕೊಲೆ ಮಾಡಿದ್ದಾರೆ ಎಂಬುದು ವಿಚಾರಣೆಯಿಂದ ಗೊತ್ತಾಗಿದೆ.
ಪ್ರಕರಣದಲ್ಲಿ ತೊಡಗಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಎನ್‌ಡಿಟಿವಿ ಜೊತೆ ಮಾತನಾಡಿ, “ಆರೋಪಿಗಳು ಮತ್ತು ಮೃತ ವ್ಯಕ್ತಿ ಪ್ರತ್ಯೇಕವಾಗಿ ಮದ್ಯ ಸೇವಿಸುತ್ತಿದ್ದರು. ಸೋನು ಪಾಲ್ (ಕೊಲೆಯಾದ ವ್ಯಕ್ತಿ) ಅವರ ಬಳಿ ಬೀಡಿ ಕೇಳಿದ್ದಾನೆ. ಅವರು ನಿರಾಕರಿಸಿದಾಗ, ಆತ ವಾಗ್ವಾದ ಶುರುಮಾಡಿದ್ದಾನೆ. ನಂತರ ಅವರು ಡ್ರಗ್ಸ್ ಕೊಡುವ ನೆಪದಲ್ಲಿ ಆತನನ್ನು ಗೋದಾ ಸೇತುವೆ ಬಳಿಯ ಚರಂಡಿ ಬಳಿ ಕರೆದುಕೊಂಡು ಹೋಗಿದ್ದಾರೆ” ಎಂದು ತಿಳಿಸಿದರು. ಈ ಮೂವರು ಪಾಲ್‌ಗೆ ಕೈಗಳಿಂದ ಮತ್ತು ಲೋಹದ ಬಳೆಯಿಂದ ಹಲ್ಲೆ ನಡೆಸಿ, ನಂತರ ಕಲ್ಲಿನಿಂದ ಆತನ ತಲೆಯನ್ನು ಜಜ್ಜಿ ದೇಹವನ್ನು ಚರಂಡಿಗೆ ಎಸೆದಿದ್ದಾರೆ ಎಂದು ಆ ಅಧಿಕಾರಿಯು ಹೇಳಿದರು. “ಬೀಡಿಗಾಗಿ ಆದ ಜಗಳ ಈ ಘೋರ ದುರಂತದಲ್ಲಿ ಕೊನೆಗೊಂಡಿದೆ” ಎಂದು ಎಸ್‌ಎಸ್‌ಪಿ ಸಿಂಗ್ ಹೇಳಿದ್ದಾರೆ.
ಸಣ್ಣ ಜಗಳಗಳು ಹೇಗೆ ಅಸಂಬದ್ಧ ಕೊಲೆಗಳಲ್ಲಿ ಅಂತ್ಯಗೊಳ್ಳಬಹುದು ಎನ್ನುವುದಕ್ಕೆ ಈ ಅಪರಾಧ ಒಂದು ಭಯಾನಕ ಉದಾಹರಣೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಆರೋಪಿಗಳಿಗೆ ಮತ್ತು ಕೊಲೆಯಾದವನಿಗೆ ಯಾವುದೇ ಪೂರ್ವದ್ವೇಷ ಇರಲಿಲ್ಲ ಎಂದು ತನಿಖೆಯಿಂದ ತಿಳಿದುಬಂದಿದೆ.

ಪ್ರಮುಖ ಸುದ್ದಿ :-   ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯ; ಕಕ್ಷೆ ತಲುಪಿದ ಸ್ಕೈರೂಟ್‌ನ ಖಾಸಗಿ ರಾಕೆಟ್ ‘ವಿಕ್ರಂ-1’

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement