
ಕಾಬೂಲ್: ಪಾಕಿಸ್ತಾನದ ಇತ್ತೀಚಿನ ವೈಮಾನಿಕ ದಾಳಿಗೆ ಪ್ರತ್ಯುತ್ತರವಾಗಿ ತಾಲಿಬಾನ್ ಪಡೆಗಳು ನಡೆಸಿದ ಪ್ರತಿದಾಳಿಯಲ್ಲಿ ಕನಿಷ್ಠ 58 ಪಾಕಿಸ್ತಾನಿ ಸೈನಿಕರನ್ನು ಕೊಲ್ಲಲಾಗಿದ್ದು, 30ಕ್ಕೂ ಹೆಚ್ಚು ಸೈನಿಕರು ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ವಕ್ತಾರ ಝಬೀಹುಲ್ಲಾ ಮುಜಾಹಿದ್ ಭಾನುವಾರ ಹೇಳಿಕೆ ನೀಡಿದ್ದಾರೆ.
ಡ್ಯುರಾಂಡ್ ಲೈನ್ ಬಳಿಯ ಬೆಹರಾಂಪುರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಪ್ರತಿದಾಳಿಯ ನಂತರ ಪಾಕಿಸ್ತಾನಕ್ಕೆ ತೀವ್ರ ಎಚ್ಚರಿಕೆ ನೀಡಿರುವ ಮುಜಾಹಿದ್, “ಯಾವುದೇ ದಾಳಿಗೆ ನಾವು ಉತ್ತರ ನೀಡದೆ ಸುಮ್ಮನಿರುವುದಿಲ್ಲ” ಎಂದು ಘೋಷಿಸಿದ್ದಾರೆ. ಅಲ್ಲದೆ, ಪಾಕಿಸ್ತಾನ ತನ್ನ ನೆಲದಲ್ಲಿ ಐಸಿಸ್ (ISIS) ಭಯೋತ್ಪಾದಕರಿಗೆ ಅಡಗಲು ಅವಕಾಶ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.
ಐಸಿಸ್‌ಗೆ ಆಶ್ರಯ ನೀಡುತ್ತಿರುವ ಪಾಕಿಸ್ತಾನ:
“ಪಾಕಿಸ್ತಾನವು ತನ್ನ ನೆಲದಲ್ಲಿ ಐಸಿಸ್ ಇರುವಿಕೆಯ ಬಗ್ಗೆ ಕಣ್ಣುಮುಚ್ಚಿ ಕುಳಿತಿದೆ. ಅಫ್ಘಾನಿಸ್ತಾನವು ತನ್ನ ವಾಯು ಮತ್ತು ಭೂ ಗಡಿಗಳನ್ನು ರಕ್ಷಿಸಿಕೊಳ್ಳುವ ಹಕ್ಕು ಹೊಂದಿದೆ ಮತ್ತು ಯಾವುದೇ ದಾಳಿಗೂ ಉತ್ತರ ನೀಡದೆ ಬಿಡುವುದಿಲ್ಲ. ಪಾಕಿಸ್ತಾನವು ಅಲ್ಲಿ ಅಡಗಿರುವ ಪ್ರಮುಖ ಐಸಿಸ್ ಸದಸ್ಯರನ್ನು ತನ್ನ ನೆಲದಿಂದ ಹೊರಹಾಕಬೇಕು ಅಥವಾ ಇಸ್ಲಾಮಿಕ್ ಎಮಿರೇಟ್ (ತಾಲಿಬಾನ್)ಗೆ ಒಪ್ಪಿಸಬೇಕು. ಐಸಿಸ್ ಗುಂಪು ಅಫ್ಘಾನಿಸ್ತಾನ ಸೇರಿದಂತೆ ವಿಶ್ವದ ಅನೇಕ ದೇಶಗಳಿಗೆ ಬೆದರಿಕೆಯಾಗಿದೆ” ಎಂದು ಮುಜಾಹಿದ್ ಹೇಳಿದ್ದಾರೆ.

ಉಗ್ರರಿಗೆ ಪಾಕ್‌ನಲ್ಲೇ ತರಬೇತಿ ಕೇಂದ್ರಗಳು:
ಇಸ್ಲಾಮಿಕ್ ಎಮಿರೇಟ್ ತನ್ನ ಭೂಪ್ರದೇಶದಿಂದ ಅಶಾಂತಿಯನ್ನು ಉಂಟುಮಾಡುವವರನ್ನು ಹೊರಹಾಕಿದೆ, ಆದರೆ ಅವರು ಪಾಶ್ತುಂಖ್ವಾದಲ್ಲಿ ಹೊಸ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ ಎಂದು ತಾಲಿಬಾನ್ ನಾಯಕ ಹೇಳಿದ್ದಾರೆ. “ಈ ಕೇಂದ್ರಗಳಿಗೆ ಕರಾಚಿ ಮತ್ತು ಇಸ್ಲಾಮಾಬಾದ್ ವಿಮಾನ ನಿಲ್ದಾಣಗಳ ಮೂಲಕ ಹೊಸ ನೇಮಕಾತಿಗಳನ್ನು ಮಾಡಿ ತರಲಾಗುತ್ತದೆ. ಅಫ್ಘಾನಿಸ್ತಾನದಲ್ಲಿನ ದಾಳಿಯ ಯೋಜನೆಗಳನ್ನು ಸಹ ಈ ಕೇಂದ್ರಗಳಿಂದಲೇ ರೂಪಿಸಲಾಗುತ್ತಿದೆ, ಇದಕ್ಕೆ ಪುರಾವೆಗಳಿವೆ” ಎಂದು ಅವರು ತಿಳಿಸಿದ್ದಾರೆ.
ಪ್ರತಿದಾಳಿಯ ಸಮರ್ಥನೆ:
ಪ್ರತಿದಾಳಿಯನ್ನು ಸಮರ್ಥಿಸಿಕೊಂಡಿರುವ ತಾಲಿಬಾನ್ ವಕ್ತಾರರು, “ಗಣನೀಯ ಪ್ರಮಾಣದ ಶಸ್ತ್ರಾಸ್ತ್ರಗಳು ಇಸ್ಲಾಮಿಕ್ ಎಮಿರೇಟ್ (ತಾಲಿಬಾನ್) ಪಡೆಗಳ ಕೈಗೆ ಸಿಕ್ಕಿವೆ. ಈ ಘರ್ಷಣೆಯಲ್ಲಿ ಇಸ್ಲಾಮಿಕ್ ಎಮಿರೇಟ್‌ನ 20ಕ್ಕೂ ಹೆಚ್ಚು ಸದಸ್ಯರು ಸಹ ಹತರಾಗಿದ್ದಾರೆ ಅಥವಾ ಗಾಯಗೊಂಡಿದ್ದಾರೆ. ಅಫ್ಘಾನಿಸ್ತಾನವು ತನ್ನ ವಾಯು ಮತ್ತು ಭೂ ಗಡಿಗಳನ್ನು ರಕ್ಷಿಸಿಕೊಳ್ಳುವ ಹಕ್ಕು ಹೊಂದಿದೆ ಮತ್ತು ಯಾವುದೇ ದಾಳಿಗೆ ಉತ್ತರ ನೀಡದೆ ಬಿಡುವುದಿಲ್ಲ,” ಎಂದಿದ್ದಾರೆ.ತಮ್ಮ ನೆಲದ ಮೇಲೆ ಆಕ್ರಮಣ ಮಾಡುವ ಅಥವಾ ವಾಯುಪ್ರದೇಶವನ್ನು ಉಲ್ಲಂಘಿಸುವ ಯಾರೇ ಆದರೂ “ಕಠಿಣ ಪ್ರತ್ಯುತ್ತರ ಎದುರಿಸಬೇಕಾಗುತ್ತದೆ” ಎಂದು ಮುಜಾಹಿದ್ ಎಚ್ಚರಿಸಿದ್ದಾರೆ.
ಕತಾರ್ ಮತ್ತು ಸೌದಿ ಅರೇಬಿಯಾದ ಮನವಿಯ ಮೇರೆಗೆ ದಾಳಿ ನಿಲ್ಲಿಸಿದ ತಾಲಿಬಾನ್:
ಖತರ್ ಮತ್ತು ಸೌದಿ ಅರೇಬಿಯಾದ ಮನವಿಯ ಮೇರೆಗೆ ವಾಯುದಾಳಿಗಳನ್ನು ನಿಲ್ಲಿಸಲಾಗಿದೆ ಎಂದು ಮುಜಾಹಿದ್ ತಿಳಿಸಿದ್ದಾರೆ.
ಕಾಬೂಲ್ ಮತ್ತು ಪಕ್ತಿಕಾ ಪ್ರಾಂತ್ಯಗಳಲ್ಲಿ ಪಾಕಿಸ್ತಾನ ಇತ್ತೀಚೆಗೆ ನಡೆಸಿದ ವೈಮಾನಿಕ ದಾಳಿಗೆ ಪ್ರತ್ಯುತ್ತರವಾಗಿ, ಅಫ್ಘಾನ್ ಪಡೆಗಳು ಕಳೆದ ರಾತ್ರಿ ಹೆಲ್ಮಂಡ್, ಕಂದಹಾರ್, ಜಾಬುಲ್, ಪಕ್ತಿಕಾ, ಪಕ್ಟಿಯಾ, ಖೋಸ್ಟ್, ನಂಗರ್‌ಹಾರ್ ಮತ್ತು ಕುನಾರ್ ಪ್ರಾಂತ್ಯಗಳಲ್ಲಿನ ಪಾಕಿಸ್ತಾನಿ ಪೋಸ್ಟ್‌ಗಳನ್ನು ಗುರಿಯಾಗಿಸಿ ದಾಳಿ ನಡೆಸಿವೆ. ಈ ಎಲ್ಲಾ ಪ್ರಾಂತ್ಯಗಳು ಪಾಕಿಸ್ತಾನ-ಅಫ್ಘಾನಿಸ್ತಾನ ಗಡಿಯುದ್ದಕ್ಕೂ ಇವೆ.


ನಿಮ್ಮ ಕಾಮೆಂಟ್ ಬರೆಯಿರಿ