ಬೆಂಕಿ ಹೊತ್ತಿಕೊಂಡು ಉರಿದ ಬಸ್‌ : 19 ಜನರು ಸಜೀವ ದಹನ

ಜೈಪುರ : ರಾಜಸ್ಥಾನದ ಜೈಸಲ್ಮೇರ್‌ನಿಂದ ಜೋಧಪುರಕ್ಕೆ ಪ್ರಯಾಣಿಸುತ್ತಿದ್ದ ಖಾಸಗಿ ಬಸ್ಸಿನಲ್ಲಿ ಮಂಗಳವಾರ ಮಧ್ಯಾಹ್ನ ಸಂಭವಿಸಿದ ಭೀಕರ ದುರಂತದಲ್ಲಿ 19 ಜನರು ಸಜೀವ ದಹನವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಟ್ಟು 57 ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಬಸ್, ಮಧ್ಯಾಹ್ನ ಸುಮಾರು 3 ಗಂಟೆಗೆ ಜೈಸಲ್ಮೇರ್‌ನಿಂದ ಹೊರಟಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಸ್ ಜೈಸಲ್ಮೇರ್-ಜೋಧಪುರ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ, ಅದರ ಹಿಂಭಾಗದಿಂದ ಹೊಗೆ ಕಾಣಿಸಿಕೊಂಡಿದೆ. ತಕ್ಷಣ ಚಾಲಕ ಬಸ್ಸನ್ನು ರಸ್ತೆಯ ಬದಿಗೆ ನಿಲ್ಲಿಸಿದ್ದರೂ, ಕೆಲವೇ ಕ್ಷಣಗಳಲ್ಲಿ ಇಡೀ ವಾಹನಕ್ಕೆ ಬೆಂಕಿ ವ್ಯಾಪಿಸಿದೆ. ಸ್ಥಳೀಯರು ಮತ್ತು ದಾರಿಹೋಕರು ತಕ್ಷಣವೇ ಧಾವಿಸಿ ಬಂದು ರಕ್ಷಣಾ ಕಾರ್ಯದಲ್ಲಿ ನೆರವಾದರು. ಅಗ್ನಿಶಾಮಕ ದಳ ಮತ್ತು ಪೊಲೀಸರಿಗೆ ಮಾಹಿತಿ ನೀಡಲಾಯಿತು. ಅವರು ತಕ್ಷಣ ಆಗಮಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ, ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಕಾಣಿಸಿಕೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ.

ದುರಂತದ ವಿಪರ್ಯಾಸವೆಂದರೆ, ಅಪಘಾತಕ್ಕೀಡಾದ ಬಸ್ಸನ್ನು ಕೇವಲ ಐದು ದಿನಗಳ ಹಿಂದೆ ಖರೀದಿಸಲಾಗಿತ್ತು ಎಂದು ವರದಿಯಾಗಿದೆ. ಸುದ್ದಿ ತಿಳಿದ ರಾಜಸ್ಥಾನದ ಮುಖ್ಯಮಂತ್ರಿ ಭಜನಲಾಲ ಶರ್ಮಾ ಅವರು ಘಟನಾ ಸ್ಥಳಕ್ಕೆ ಆಗಮಿಸಿದರು. ಮುಖ್ಯಮಂತ್ರಿ ಕಚೇರಿಯ ಅಧಿಕಾರಿಗಳು ತಿಳಿಸಿದಂತೆ, ಅವರು ಅಪಘಾತದಲ್ಲಿ ಸುಟ್ಟು ಹೋಗಿರುವ ಬಸ್ಸಿನ ಸ್ಥಳವನ್ನು ಪರಿಶೀಲಿಸಿದರು.
ನಾಲ್ವರು ಮಹಿಳೆಯರು ಮತ್ತು ಇಬ್ಬರು ಮಕ್ಕಳೂ ಸೇರಿದಂತೆ ಹದಿನೈದು ಪ್ರಯಾಣಿಕರು ಗಂಭೀರ ಸುಟ್ಟ ಗಾಯಗಳಿಗೆ ಒಳಗಾಗಿದ್ದು, ಕೆಲವರಿಗೆ ಶೇ. 70 ರಷ್ಟು ಸುಟ್ಟ ಗಾಯಗಳಾಗಿವೆ. ಅವರನ್ನು ತಕ್ಷಣವೇ ಮೂರು ಆಂಬ್ಯುಲೆನ್ಸ್‌ಗಳ ಮೂಲಕ ಜೈಸಲ್ಮೇರ್‌ನ ಜವಾಹರ್ ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜೋಧಪುರಕ್ಕೆ ಸ್ಥಳಾಂತರಿಸಲಾಯಿತು.

ಪ್ರಮುಖ ಸುದ್ದಿ :-   8 ವರ್ಷಗಳ ಪ್ರೇಮದಲ್ಲಿ ಬಿರುಕು ; ಯುವತಿ ಆತ್ಮಹತ್ಯೆ, ಮೃತದೇಹಕ್ಕೆ ಪ್ರಿಯಕರ ಮಂಗಳಸೂತ್ರ ಕಟ್ಟಬೇಕು ಎಂದು ಕುಟುಂಬಸ್ಥರ ಪಟ್ಟು...

https://x.com/i/status/1978154641788403800

ಅಪಘಾತದ ಮಾಹಿತಿ ದೊರೆತ ಕೂಡಲೇ ಜೈಸಲ್ಮೇರ್ ಜಿಲ್ಲಾಡಳಿತವು ತಕ್ಷಣವೇ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಪ್ರಾರಂಭಿಸಿತು. ಗಾಯಗೊಂಡವರಿಗೆ ತುರ್ತು ವೈದ್ಯಕೀಯ ನೆರವು ಸಿಗುವಂತೆ ನೋಡಿಕೊಳ್ಳಲು ಜಿಲ್ಲಾಧಿಕಾರಿ ಪ್ರತಾಪ ಸಿಂಗ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಗಾಯಾಳುಗಳ ತುರ್ತು ಸಾಗಾಟಕ್ಕೆ ಅನುಕೂಲವಾಗುವಂತೆ, ಪೊಲೀಸರ ಬೆಂಗಾವಲಿನೊಂದಿಗೆ ಎಂಟು ಆಂಬ್ಯುಲೆನ್ಸ್‌ಗಳಿಗಾಗಿ ರಾಷ್ಟ್ರೀಯ ಹೆದ್ದಾರಿ 125ರಲ್ಲಿ ‘ಗ್ರೀನ್ ಕಾರಿಡಾರ್’ ಅನ್ನು ರಚಿಸಲಾಯಿತು.
ಬಸ್ ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ಅನೇಕ ಸಂತ್ರಸ್ತರು ಗುರುತು ಹಿಡಿಯಲು ಸಾಧ್ಯವಾಗದಷ್ಟು ಸುಟ್ಟು ಹೋಗಿದ್ದಾರೆ ಎಂದು ಜಿಲ್ಲಾಧಿಕಾರಿ ಖಚಿತಪಡಿಸಿದ್ದಾರೆ. ಗುರುತು ಪತ್ತೆಗೆ ನೆರವಾಗಲು ಜೋಧಪುರದಿಂದ ಡಿಎನ್‌ಎ ಮತ್ತು ವಿಧಿವಿಜ್ಞಾನ ತಂಡಗಳು ಆಗಮಿಸಿವೆ. “ಅಹಮದಾಬಾದ್ ವಿಮಾನ ಅಪಘಾತದಲ್ಲಿ ಅನುಸರಿಸಿದಂತೆಯೇ, ಮೃತರ ಗುರುತನ್ನು ಡಿಎನ್‌ಎ ಪರೀಕ್ಷೆಯ ಮೂಲಕ ದೃಢೀಕರಿಸಲಾಗುವುದು. ಆನಂತರವಷ್ಟೇ ಮೃತದೇಹಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗುವುದು” ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

3 / 5. 2

ನಿಮ್ಮ ಕಾಮೆಂಟ್ ಬರೆಯಿರಿ

advertisement