ದೇಶದಲ್ಲೇ ಅತಿದೊಡ್ಡ ಸೈಬರ್‌ ವಂಚನೆ ; ₹58 ಕೋಟಿ ಮೊತ್ತದ ‘ಡಿಜಿಟಲ್ ಅರೆಸ್ಟ್’ ಪ್ರಕರಣ ಭೇದಿಸಿದ ಪೊಲೀಸರು…!

ಮುಂಬೈ : ಮುಂಬೈನಲ್ಲಿ ನಡೆದ ಬರೋಬ್ಬರಿ 58.13 ಕೋಟಿ ರೂಪಾಯಿ ಮೌಲ್ಯದ ‘ವರ್ಚುವಲ್ ಅರೆಸ್ಟ್’ (ಕಲ್ಪಿತ ಬಂಧನ) ಹಗರಣವನ್ನು ಮಹಾರಾಷ್ಟ್ರ ಸೈಬರ್ ಪೊಲೀಸರು ಭೇದಿಸಿದ್ದು, ಈ ಸಂಬಂಧ ಏಳು ಜನರನ್ನು ಬಂಧಿಸಿದ್ದಾರೆ. ಇದು ದೇಶದಲ್ಲಿ ಇತ್ತೀಚೆಗೆ ವರದಿಯಾದ ಇಂತಹ ಅತಿ ದೊಡ್ಡ ಸೈಬರ್‌ ವಂಚನೆ ಪ್ರಕರಣ ಎಂದು ಹೇಳಲಾಗಿದೆ.
ಮುಂಬೈನ 72 ವರ್ಷದ ಹಿರಿಯ ನಾಗರಿಕರೊಬ್ಬರಿಗೆ ಆರೋಪಿಗಳು ಅಂತಾರಾಷ್ಟ್ರೀಯ ಸಂಖ್ಯೆಯಿಂದ ಕರೆ ಮಾಡಿ, ತಮ್ಮನ್ನು ಟ್ರೈ(TRAI) ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದರು. ಅವರ ಮೊಬೈಲ್ ಸಂಖ್ಯೆಯನ್ನು ಅಕ್ರಮ ಸಂದೇಶಗಳಿಗಾಗಿ ಬಳಸಲಾಗಿದೆ ಎಂದು ಹಿರಿಯ ನಾಗರಿಕರಿಗೆ ತಿಳಿಸಲಾಯಿತು.
ನಂತರ ಕರೆಯನ್ನು ಮುಂಬೈ ಅಪರಾಧ ವಿಭಾಗದ (Crime Branch) ಅಧಿಕಾರಿಯಂತೆ ನಟಿಸಿದ ಇನ್ನೊಬ್ಬ ವ್ಯಕ್ತಿಗೆ ವರ್ಗಾಯಿಸಲಾಯಿತು. ಆತ, ದೂರುದಾರರ ಬ್ಯಾಂಕ್ ಖಾತೆಗಳನ್ನು ಅಕ್ರಮ ಹಣ ವರ್ಗಾವಣೆ (Money Laundering) ಮಾಡಲು ಬಳಸಲಾಗುತ್ತಿದೆ ಎಂದು ಸುಳ್ಳು ಆರೋಪ  ಬೆದರಿಸಿದರು.

ಆರೋಪಿಗಳು ವೀಡಿಯೊ ಕರೆಗಳ ಮೂಲಕ ಒಂದು ಅತ್ಯಾಧುನಿಕವಾದ ನಕಲಿ ಪೊಲೀಸ್ ಠಾಣೆ ಮತ್ತು ನ್ಯಾಯಾಲಯದ ವಿಚಾರಣೆಯನ್ನು ಸೃಷ್ಟಿಸಿದರು. ಇತರ ಆರೋಪಿಗಳು ಪೊಲೀಸರು ಮತ್ತು ನ್ಯಾಯಾಧೀಶರಂತೆ ನಟಿಸಿ, ಆ ಹಿರಿಯ ನಾಗರಿಕರಿಗೆ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಮನವರಿಕೆ ಮಾಡಿದರು.
ನಕಲಿ ಪೊಲೀಸ್ ಅಧಿಕಾರಿಯು ನಂತರ, ‘ಡಿಜಿಟಲ್ ಅರೆಸ್ಟ್’ ತಪ್ಪಿಸಲು ಒಂದು ನಿರ್ದಿಷ್ಟ :ಸರ್ಕಾರಿ ಖಾತೆʼ ಎಂದು ವಿವರಿಸಿದ ವಂಚಕರು ಆ ಖಾತೆಗೆ ಹಣವನ್ನು ವರ್ಗಾಯಿಸಬೇಕು ಎಂದು ಹಿರಿಯ ನಾಗರಿಕರಿಗೆ ಒತ್ತಾಯಿಸಿದರು. ಹಣವನ್ನು “ಪರಿಶೀಲನಾ ಪ್ರಕ್ರಿಯೆಯ” ನಂತರ ಹಿಂದಿರುಗಿಸಲಾಗುವುದು ಎಂದು ನಂಬಿಸಿದರು. ತೀವ್ರ ಮಾನಸಿಕ ಒತ್ತಡಕ್ಕೊಳಗಾದ ಆ ಹಿರಿಯ ನಾಗರಿಕರು, 40 ದಿನಗಳ ಅವಧಿಯಲ್ಲಿ ಒಟ್ಟು 58,13,50,000 ರೂಪಾಯಿಗಳನ್ನು ವಂಚಕರು ಸೂಚಿಸಿದ ಖಾತೆಗೆ ವರ್ಗಾಯಿಸಿದ್ದಾರೆ.

ಪ್ರಮುಖ ಸುದ್ದಿ :-   ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯ; ಕಕ್ಷೆ ತಲುಪಿದ ಸ್ಕೈರೂಟ್‌ನ ಖಾಸಗಿ ರಾಕೆಟ್ ‘ವಿಕ್ರಂ-1’

ಆದರೆ ನಂತರ ಅವರಿಗೆ ತಾನು ಮೋಸ ಹೋಗಿದ್ದೇನೆ ಎಂದು ಅರಿವಾದ ನಂತರ ಹಿರಿಯ ನಾಗರಿಕರು ದೂರು ದಾಖಲಿಸಿದರು.ದೂರು ದಾಖಲಾದ ನಂತರ, ಮಹಾರಾಷ್ಟ್ರ ಸೈಬರ್ ವಿಭಾಗವು ತನಿಖೆಯನ್ನು ಪ್ರಾರಂಭಿಸಿ, ತಾಂತ್ರಿಕ ಮತ್ತು ಆರ್ಥಿಕ ವಹಿವಾಟು ನಡೆದ ಮಾರ್ಗಗಳನ್ನು ಹಿಂಬಾಲಿಸಿತು. ವಂಚನೆಗೆ ಬಳಸಲಾದ ಸಂಖ್ಯೆಗಳ CDR, SDR, CAF, ಮತ್ತು IPDR ಗಳನ್ನು ಪರಿಶೀಲಿಸಿದಾಗ, ಕರೆಗಳು VPN ಮತ್ತು TOR ನೆಟ್‌ವರ್ಕ್‌ಗಳ ಮೂಲಕ ವಿದೇಶಿ IP ವಿಳಾಸಗಳಿಂದ ಬಂದಿರುವುದು ತಿಳಿದುಬಂತು.
ತನಿಖಾಧಿಕಾರಿಗಳು ಬ್ಯಾಂಕಿಂಗ್ ವಹಿವಾಟುಗಳು, ಕೆವೈಸಿ ದಾಖಲೆಗಳು ಮತ್ತು ಅನೇಕ ಲಿಂಕ್ ಮಾಡಲಾದ ಖಾತೆಗಳನ್ನು ಪರಿಶೀಲಿಸಿದರು. ಈ ವೇಳೆ, 13 ಹಂತಗಳಲ್ಲಿ ಹರಡಿರುವ 6,500ಕ್ಕೂ ಹೆಚ್ಚು ‘ಮನಿ ಮ್ಯೂಲ್’ (Money Mule) ಖಾತೆಗಳ ಸಂಕೀರ್ಣ ಜಾಲವು ಬಯಲಾಯಿತು. ಹೆಚ್ಚಿನ ಖಾತೆಗಳು ನಕಲಿ ಕಂಪನಿಗಳ ಹೆಸರಿನಲ್ಲಿ ತೆರೆಯಲಾದ ಚಾಲ್ತಿ ಖಾತೆಗಳಾಗಿದ್ದು, ಇವು ಹೆಚ್ಚಿನ ಹಣಕಾಸು ವಹಿವಾಟುಗಳ ಮೇಲಿನ ಪರಿಶೀಲನೆ ತಪ್ಪಿಸಲು ಉದ್ದೇಶದಿಂದ ಸೃಷ್ಟಿಸಲಾದ ಖಾತೆಗಳಾಗಿತ್ತು.

ಸೈಬರ್ ಪೊಲೀಸರು ಈ ಖಾತೆಗಳ ಅಂತಿಮ ಫಲಾನುಭವಿಗಳನ್ನು ಪತ್ತೆಹಚ್ಚಿ, ಏಳು ಜನರನ್ನು ಬಂಧಿಸಿದ್ದಾರೆ. ಬಂಧಿತರೆಲ್ಲರೂ ಈ ಹಣಕಾಸು ಜಾಲದೊಂದಿಗೆ ನೇರವಾಗಿ ಸಂಪರ್ಕ ಹೊಂದಿದ್ದು, ಅವರೇ ‘ಮನಿ ಮ್ಯೂಲ್’ ಖಾತೆಗಳನ್ನು ತೆರೆದ ಅಥವಾ ನಿರ್ವಹಿಸಿ, ಆರಂಭಿಕ ಹಂತದ ವಹಿವಾಟುಗಳಲ್ಲಿ ಹಣವನ್ನು ಪಡೆದ ಅಥವಾ ಈ ಸಿಂಡಿಕೇಟ್‌ಗಾಗಿ ಖಾತೆಗಳನ್ನು ನಿರ್ವಹಿಸುವ ಮೂಲಕ ಹಣದ ಚಲನೆಗೆ ಸಹಾಯ ಮಾಡಿದವರಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಶೇಖ್ ಶಾಹಿದ್ ಅಬ್ದುಲ್ ಸಲಾಮ್ (19), ಜಾಫರ್ ಅಕ್ಬರ್ ಸೈಯದ್ (33), ಅಬ್ದುಲ್ ನಾಸಿರ್ ಅಬ್ದುಲ್ ಕರೀಂ ಖುಲ್ಲಿ (51), ಅರ್ಜುನ್ ಫೋಜಿರಾಮ್ ಕಡವಾಸರಾ (52), ಜೇತಾರಾಮ (35), ಇಮ್ರಾನ್ ಇಸ್ಮಾಯಿಲ್ ಶೇಖ್ (22), ಮತ್ತು ಮೊಹಮ್ಮದ್ ನವೀದ್ ಶೇಖ್ (26) ಎಂದು ಗುರುತಿಸಲಾಗಿದೆ.
ಆದರೆ, ಈ ಬೃಹತ್ ಹಗರಣದ ಮುಖ್ಯ ಸೂತ್ರಧಾರನನ್ನು ಪೊಲೀಸರು ಇನ್ನೂ ಪತ್ತೆಹಚ್ಚಿಲ್ಲ. ಅಲ್ಲದೆ, ವಂಚನೆಯಿಂದ ಹಣ ವರ್ಗಾವಣೆ ಮಾಡಿದ ವಿಷಯದಲ್ಲಿ ಸಂತ್ರಸ್ತರ ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕರ ನಿರ್ಲಕ್ಷ್ಯ ಅಥವಾ ಸಂಕೀರ್ಣತೆ ಇದೆಯೇ ಎಂಬುದನ್ನು ಸಹ ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಪ್ರಮುಖ ಸುದ್ದಿ :-   ಮೊದಲು ಹಾಲಿನಲ್ಲಿ ನಿದ್ದೆ ಮಾತ್ರೆ...ನಂತರ ಹಾಸಿಗೆ ಮೇಲೆ ವಿಷದ ಹಾವು ! ಗಂಡನ ಕೊಲೆಗೆ ಪತ್ನಿಯ ಭಯಾನಕ ಸಂಚು...!

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement