ಪಾಕ್‌ ಸೇನೆ ಸುಳ್ಳಾಟ ಬಯಲು | ಸಾಯಿಸಿದ್ದೇವೆ ಎಂದ ಪಾಕಿಸ್ತಾನ ; ಬದುಕಿದ್ದೇನೆ ಎಂದು ವೀಡಿಯೊ ಮೂಲಕ ತಿಳಿಸಿದ ಟಿಟಿಪಿ ಮುಖ್ಯಸ್ಥ

ಇಸ್ಲಾಮಾಬಾದ್: ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನದ (TTP) ಮುಖ್ಯಸ್ಥ ನೂರ್ ವಲಿ ಮೆಹಸೂದ್ ಸಾವಿನ ಬಗ್ಗೆ ಪಾಕಿಸ್ತಾನದ ಸೇನೆಯು ಹಬ್ಬಿಸಿದ್ದ ಇಡೀ ಕಥೆಯು ಸಂಪೂರ್ಣ ಸುಳ್ಳು ಎಂಬುದು ಒಂದು ವೀಡಿಯೊ ಮೂಲಕ ಸಾಬೀತಾಗಿದೆ.
ಅಕ್ಟೋಬರ್ 9 ರಂದು ಕಾಬೂಲ್‌ನಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಮೆಹಸೂದ್ ಹತ್ಯೆಯಾಗಿದ್ದಾನೆ ಎಂದು ಇಸ್ಲಾಮಾಬಾದ್ ಹೇಳಿಕೊಂಡಿತ್ತು. ಆದರೆ, ಈ ಕುಖ್ಯಾತ ಭಯೋತ್ಪಾದಕ ಸತ್ತಿಲ್ಲ, ಅವನು ಜೀವಂತವಾಗಿದ್ದಾನೆ. ಅಷ್ಟೇ ಅಲ್ಲ, ಪಾಕಿಸ್ತಾನದ ಸೇನೆಯು ನಡೆಸುತ್ತಿರುವ ಸುಳ್ಳು ಮಾಹಿತಿ ಕಾರ್ಯಾಚರಣೆಯನ್ನು (disinformation operation) ಆತನೇ ಬಯಲು ಮಾಡಿದ್ದಾನೆ.
ಪಾಕಿಸ್ತಾನದೊಳಗಿನ ಒಂದು ಅಜ್ಞಾತ ಸ್ಥಳದಿಂದ ಹೊರಹೊಮ್ಮಿರುವ ವೀಡಿಯೊದಲ್ಲಿ ಟಿಟಿಪಿ (TTP) ಮುಖ್ಯಸ್ಥ ಮೆಹಸೂದ್, “ಪಾಕಿಸ್ತಾನಿ ನಾಗರಿಕರು ಮತ್ತು ಅಂತಾರಾಷ್ಟ್ರೀಯ ಸಮುದಾಯವನ್ನು ವಂಚಿಸಲು ಪಾಕಿಸ್ತಾನದ ಸೇನೆಯು ತನ್ನ ಸಾವಿನ ಬಗ್ಗೆ ಉದ್ದೇಶಪೂರ್ವಕವಾಗಿ ಸುಳ್ಳು ಮಾಹಿತಿಯನ್ನು ಹರಡಿದೆ” ಎಂದು ಆರೋಪಿಸಿದ್ದಾನೆ. ಇದು ಭಯೋತ್ಪಾದನೆಯ ವಿರುದ್ಧ ಪಾಕಿಸ್ತಾನವು ಗೆಲ್ಲುತ್ತಿದೆ ಎಂಬ ಭ್ರಮೆಯನ್ನು ಮೂಡಿಸಲು ನಡೆಸಲಾದ ಲೆಕ್ಕಾಚಾರದ ಪ್ರಚಾರ ಅಭಿಯಾನ ಎಂದು ಆತ ಕರೆದಿದ್ದಾನೆ. ಆದರೆ ವಾಸ್ತವವಾಗಿ ಪರಿಸ್ಥಿತಿ ಇದಕ್ಕೆ ಸಂಪೂರ್ಣ ವಿರುದ್ಧವಾಗಿದೆ ಎಂದಿದ್ದಾನೆ.
ವೀಡಿಯೊದಲ್ಲಿ, ಪಾಕಿಸ್ತಾನದ ಪ್ರಮುಖ ಪ್ರದೇಶಗಳ ಮೇಲೆ ಟಿಟಿಪಿ (TTP) ನಿಯಂತ್ರಣ ಹೊಂದಿದೆ ಎಂಬುದಕ್ಕೆ ತನ್ನ ಬಳಿ ದೃಶ್ಯ ಪುರಾವೆಗಳಿವೆ ಎಂದು ಮೆಹಸೂದ್ ಹೇಳಿಕೊಂಡಿದ್ದಾನೆ.

ಪ್ರಮುಖ ಸುದ್ದಿ :-   ಟ್ರಂಪ್ ಹತ್ಯೆ ಮಾಡಿದವರಿಗೆ ₹96 ಕೋಟಿ ಬಹುಮಾನ ನೀಡುವುದಾಗಿ ಘೋಷಿಸಿದ ಇರಾನ್ ಬೆಂಬಲಿತ ಇರಾಕಿನ ಬಂಡುಕೋರರ ಗುಂಪು

ಯಾರು ಈ ನೂರ್ ವಲಿ ಮೆಹಸೂದ್?
ಅಮೆರಿಕದ ಡ್ರೋನ್ ದಾಳಿಯಲ್ಲಿ ತನ್ನ ಹಿಂದಿನ ನಾಯಕರು ಸಾವಿಗೀಡಾದ ನಂತರ 2018 ರಲ್ಲಿ ಟಿಟಿಪಿ ನಾಯಕತ್ವವನ್ನು ನೂರ್ ವಲಿ ಮೆಹಸೂದ್ ವಹಿಸಿಕೊಂಡಿದ್ದಾನೆ. ಅಂದಿನಿಂದ ಆತ ಈ ಭಯೋತ್ಪಾದಕ ಸಂಘಟನೆಯನ್ನು ಪುನರುಜ್ಜೀವನಗೊಳಿಸಿ, ಒಡೆದ ಬಣಗಳನ್ನು ಒಂದುಗೂಡಿಸಿ, ಬಂಡಾಯವನ್ನು ಪುನಃ ಪ್ರಾರಂಭಿಸಿದ್ದಾನೆ. ಈತನ ನಾಯಕತ್ವದಲ್ಲಿ, ಪಾಕಿಸ್ತಾನದಾದ್ಯಂತ, ವಿಶೇಷವಾಗಿ ಅಫ್ಘಾನಿಸ್ತಾನದ ಗಡಿಯಲ್ಲಿರುವ ವಾಯುವ್ಯ ಬುಡಕಟ್ಟು ಪ್ರದೇಶದಲ್ಲಿ ಭಯೋತ್ಪಾದಕ ದಾಳಿಗಳು ಇತ್ತೀಚಿನ ದಿನಗಳಲ್ಲಿ ತೀವ್ರವಾಗಿ ಹೆಚ್ಚಾಗಿವೆ.
ಮೆಹಸೂದ್‌ನ ನೇತೃತ್ವದಲ್ಲಿ, ಟಿಟಿಪಿ ಭಯೋತ್ಪಾದಕ ಸಂಘಟನೆಯು ಪಾಕಿಸ್ತಾನ ಸೇನೆ ಮತ್ತು ನಾಗರಿಕರ ಮೇಲೆ ದಾಳಿಗಳನ್ನು ತೀವ್ರಗೊಳಿಸಿದ್ದು, 2014 ರ ಪೇಶಾವರ ಶಾಲೆಯ ಸಾಮೂಹಿಕ ಹತ್ಯಾಕಾಂಡದ ಕರಾಳ ನೆನಪುಗಳನ್ನು ಮತ್ತೆ ತಂದಿದೆ. ಆ ದಾಳಿಯಲ್ಲಿ 130 ಕ್ಕೂ ಹೆಚ್ಚು ಮುಗ್ಧ ಮಕ್ಕಳು ಹತ್ಯೆಯಾಗಿದ್ದರು.

ಪಾಕಿಸ್ತಾನಕ್ಕೆ ಜಾಗತಿಕ ಮುಜುಗರ
ಮೆಹಸೂದ್‌ ಪ್ರತ್ಯಕ್ಷನಾಗಿರುವುದು ಪಾಕಿಸ್ತಾನಕ್ಕೆ ಜಾಗತಿಕ ಮುಜುಗರವನ್ನು ತಂದಿದೆ. ಈ ನಡುವೆ, ಪಾಕಿಸ್ತಾನವು ಯಾವುದೇ ಆಧಾರವಿಲ್ಲದೆ ಟಿಟಿಪಿಗೆ ಭಾರತ ಬೆಂಬಲ ನೀಡುತ್ತಿದೆ ಎಂದು ಪದೇ ಪದೇ ಆರೋಪಿಸುತ್ತಿದೆ. ಈ ಆರೋಪವನ್ನು ಭಾರತವು ಸ್ಪಷ್ಟವಾಗಿ ನಿರಾಕರಿಸಿದೆ. ಮೆಹಸೂದ್‌ನ ಪುನರಾಗಮನವು ತನ್ನದೇ ನೆಲದಲ್ಲಿ ಭಯೋತ್ಪಾದನೆಯನ್ನು ನಿಯಂತ್ರಿಸುವಲ್ಲಿ ಪಾಕಿಸ್ತಾನದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ ಮತ್ತು ತನ್ನ ಗಡಿಗಳನ್ನು ಮೀರಿ ಭಯೋತ್ಪಾದಕರಿಗೆ ಆಶ್ರಯ ನೀಡಿ ಪ್ರೋತ್ಸಾಹಿಸುವ ದೇಶದ ಬೂಟಾಟಿಕೆಯನ್ನು ಬಯಲು ಮಾಡಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಪ್ರಮುಖ ಸುದ್ದಿ :-   ಟ್ರಂಪ್ ಹತ್ಯೆ ಮಾಡಿದವರಿಗೆ ₹96 ಕೋಟಿ ಬಹುಮಾನ ನೀಡುವುದಾಗಿ ಘೋಷಿಸಿದ ಇರಾನ್ ಬೆಂಬಲಿತ ಇರಾಕಿನ ಬಂಡುಕೋರರ ಗುಂಪು

ಅಫ್ಘಾನಿಸ್ತಾನ-ಪಾಕಿಸ್ತಾನ ಘರ್ಷಣೆಗಳು
ಟಿಟಪಿ ಮುಖ್ಯಸ್ಥ ನೂರ್ ವಲಿ ಮೆಹಸೂದ್‌ನನ್ನು ಗುರಿಯಾಗಿಸಿಕೊಂಡು ಇಸ್ಲಾಮಾಬಾದ್ ಅಕ್ಟೋಬರ್ 9 ರಂದು ಕಾಬೂಲ್, ಖೋಸ್ಟ್ ಮತ್ತು ಜಲಾಲಾಬಾದ್‌ ಮೇಲೆ ವೈಮಾನಿಕ ದಾಳಿ ನಡೆಸಿದ ನಂತರ ಅಫ್ಘಾನಿಸ್ತಾನ-ಪಾಕಿಸ್ತಾನದ ನಡುವೆ ತೀವ್ರ ಘರ್ಷಣೆಗಳ ಭುಗಿಲೆದ್ದಿದೆ. ಅಫ್ಘಾನ್ ತಾಲಿಬಾನ್ ಅಕ್ಟೋಬರ್ 11 ಮತ್ತು 12 ರ ನಡುವೆ ಪಾಕಿಸ್ತಾನದ ಅನೇಕ ಗಡಿ ಪೋಸ್ಟ್‌ಗಳ ಮೇಲೆ ಸಂಘಟಿತ ದಾಳಿಗಳನ್ನು ಪ್ರಾರಂಭಿಸಿತು. ನಂತರ ಪಾಕಿಸ್ತಾನವು ಕಂದಹಾರ್ ಮತ್ತು ಹೆಲ್ಮಂಡ್‌ನಲ್ಲಿ ಡ್ರೋನ್ ದಾಳಿಗಳನ್ನು ನಡೆಸಿ, ಡಜನ್ಗಟ್ಟಲೆ ಹೋರಾಟಗಾರರನ್ನು ಹತ್ಯೆ ಮಾಡುವ ಮೊದಲು ತಾಲಿಬಾನ್ ಹಲವು ಸ್ಥಳಗಳನ್ನು ವಶಪಡಿಸಿಕೊಂಡಿತ್ತು.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement