ನವದೆಹಲಿ: ದೆಹಲಿಯಲ್ಲಿ ಬಿಹಾರ ಪೊಲೀಸರ ಸಹಯೋಗದೊಂದಿಗೆ ನಡೆದ ಪ್ರಮುಖ ಎನ್‌ಕೌಂಟರ್‌ನಲ್ಲಿ ನಾಲ್ವರು ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್‌ಗಳು ಹತರಾಗಿದ್ದಾರೆ. ಈ ಘಟನೆ ಗುರುವಾರ ಮುಂಜಾನೆ ದೆಹಲಿಯ ರೋಹಿಣಿಯಲ್ಲಿ ನಡೆದಿದೆ. ದೆಹಲಿ ಪೊಲೀಸರ ಪ್ರಕಾರ, ಗುರುವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಬಹದ್ದೂರ್ ಶಾ ರಸ್ತೆಯಲ್ಲಿ ಗುಂಡಿನ ಚಕಮಕಿ ಆರಂಭವಾಯಿತು.
ಹತರಾದವರನ್ನು ರಂಜನ್ ಪಾಠಕ್ (25), ಬಿಮಲೇಶ್ ಮಹತೋ (25), ಮನೀಶ ಪಾಠಕ್ (33) ಮತ್ತು ಅಮನ್ ಠಾಕೂರ್ (21) ಎಂದು ಗುರುತಿಸಲಾಗಿದೆ. ರಂಜನ್ ಪಾಠಕ್, ಬಿಮಲೇಶ ಮಹತೋ ಮತ್ತು ಮನೀಶ ಪಾಠಕ್ ಅವರು ಬಿಹಾರದ ಸೀತಾಮರ್ಹಿಯ ನಿವಾಸಿಗಳಾಗಿದ್ದರೆ, ಅಮನ್ ಠಾಕೂರ್ ದೆಹಲಿಯ ಕರಾವಲ್ ನಗರದವನಾಗಿದ್ದಾನೆ.
ವರದಿಗಳ ಪ್ರಕಾರ, ರಂಜನ್ ಪಾಠಕ್ ‘ಸಿಗ್ಮಾ & ಕಂಪನಿ’ ಗ್ಯಾಂಗ್‌ನ ಮುಖ್ಯಸ್ಥನಾಗಿದ್ದು, ಈತನ ಸಾವಿನೊಂದಿಗೆ ಆ ಗ್ಯಾಂಗ್‌ನ ಹಾವಳಿ ಕೊನೆಗೊಂಡಿದೆ ಎಂದು ಪರಿಗಣಿಸಲಾಗಿದೆ. ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ದೆಹಲಿ ಎನ್‌ಕೌಂಟರ್ ವಿವರಗಳು
ಗ್ಯಾಂಗ್‌ಸ್ಟರ್‌ಗಳು ಮತ್ತು ದೆಹಲಿ ಹಾಗೂ ಬಿಹಾರ ಪೊಲೀಸ್ ತಂಡಗಳ ನಡುವೆ ವಾಯುವ್ಯ ದೆಹಲಿಯಲ್ಲಿ ಗುರುವಾರ ಮುಂಜಾನೆ 2:20ಕ್ಕೆ (ಅಕ್ಟೋಬರ್ 23) ಗುಂಡಿನ ಚಕಮಕಿ ನಡೆಯಿತು. ದೆಹಲಿ ಪೊಲೀಸ್ ಮೂಲಗಳ ಪ್ರಕಾರ, ಪಾರಾಗಲು ಯತ್ನಿಸಿದ ಗ್ಯಾಂಗ್ ಸದಸ್ಯರನ್ನು ತಡೆಯಲು ಪೊಲೀಸರು ಪ್ರಯತ್ನಿಸಿದಾಗ ಗುಂಡಿನ ದಾಳಿ ಆರಂಭವಾಯಿತು. ಗ್ಯಾಂಗ್ ಸದಸ್ಯರು ಮೊದಲು ಪೊಲೀಸರ ಮೇಲೆ ಗುಂಡು ಹಾರಿಸಿದ್ದು, ಪ್ರತಿಯಾಗಿ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ವರು ಹತರಾಗಿದ್ದಾರೆ.
ಯಾವುದು ಈ ಸಿಗ್ಮಾ ಗ್ಯಾಂಗ್?
ಪೊಲೀಸರ ಪ್ರಕಾರ, ‘ಸಿಗ್ಮಾ ಗ್ಯಾಂಗ್’ ಹಲವು ವರ್ಷಗಳಿಂದ ಬಿಹಾರದಾದ್ಯಂತ ಸುಲಿಗೆ ಮತ್ತು ಕಾಂಟ್ರಾಕ್ಟ್ ಕಿಲ್ಲಿಂಗ್ (ಹಣಕ್ಕಾಗಿ ಕೊಲೆ) ಗಳಲ್ಲಿ ತೊಡಗಿಸಿಕೊಂಡು ದೊಡ್ಡ ಜಾಲವನ್ನು ನಿರ್ಮಿಸಿತ್ತು. ಹತರಾದ ಈ ನಾಲ್ವರು ಬಿಹಾರದಲ್ಲಿ ಕೊಲೆ, ಸುಲಿಗೆ ಮತ್ತು ಸಂಘಟಿತ ಅಪರಾಧ ಚಟುವಟಿಕೆಗಳು ಸೇರಿದಂತೆ ಅನೇಕ ಹೀನ ಅಪರಾಧಗಳಲ್ಲಿ ಬೇಕಾಗಿದ್ದವರು ಎಂದು ದೆಹಲಿ ಪೊಲೀಸರು ದೃಢಪಡಿಸಿದ್ದಾರೆ.
ಗ್ಯಾಂಗ್‌ನ ಅತ್ಯಂತ ಅಪಾಯಕಾರಿ ಸದಸ್ಯ
ರಂಜನ್ ಪಾಠಕ್ ಗ್ಯಾಂಗ್‌ನ ಅತ್ಯಂತ ಅಪಾಯಕಾರಿ ವ್ಯಕ್ತಿ ಎಂದು ಪರಿಗಣಿಸಲಾಗಿತ್ತು. ಪಾಠಕ್ ಸಾಮಾಜಿಕ ಮಾಧ್ಯಮ ಮತ್ತು ಆಡಿಯೋ ಸಂದೇಶಗಳ ಮೂಲಕ ಪೊಲೀಸರಿಗೆ ಬಹಿರಂಗವಾಗಿ ಸವಾಲು ಹಾಕುತ್ತಿದ್ದನು ಎಂದು ದೆಹಲಿ ಪೊಲೀಸರು ಬಹಿರಂಗಪಡಿಸಿದ್ದಾರೆ. ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ ಈ ಗ್ಯಾಂಗ್ ಹೂಡಿದ್ದ ದೊಡ್ಡ ಸಂಚಿನ ಸುಳಿವು ಈ ಕಾರ್ಯಾಚರಣೆಗೆ ಕಾರಣವಾಯಿತು. ಬಿಹಾರ ಚುನಾವಣೆಗಳಿಗೆ ಸಂಬಂಧಿಸಿದ ಯೋಜನೆಯ ವಿವರಗಳನ್ನು ಒಳಗೊಂಡಿದ್ದ ಆಡಿಯೊ ಕ್ಲಿಪ್ ಅನ್ನು ಪೊಲೀಸರು ಇತ್ತೀಚೆಗೆ ಪತ್ತೆಹಚ್ಚಿದ್ದರು.
‘ಸಿಗ್ಮಾ ಗ್ಯಾಂಗ್’ ಸುಮಾರು ಏಳು ವರ್ಷಗಳಿಂದ ಸಕ್ರಿಯವಾಗಿತ್ತು ಮತ್ತು ಬಿಹಾರದಲ್ಲಿ ಪೊಲೀಸ್ ಕ್ರಮದಿಂದ ತಪ್ಪಿಸಿಕೊಳ್ಳಲು ದೆಹಲಿಯಲ್ಲಿ ಮತ್ತೆ ಸಂಘಟಿತವಾಗುತ್ತಿತ್ತು ಎನ್ನಲಾಗಿದೆ. ಕಾರ್ಯಾಚರಣೆಯ ಮೊದಲು ಪೊಲೀಸರು ಅವರ ಚಲನವಲನಗಳನ್ನು ಹಲವಾರು ದಿನಗಳಿಂದ ಟ್ರ್ಯಾಕ್ ಮಾಡುತ್ತಿದ್ದರು. ಎನ್‌ಕೌಂಟರ್ ನಂತರ, ಆ ಪ್ರದೇಶವನ್ನು ಸುತ್ತುವರಿಯಲಾಗಿದ್ದು, ಸಾಕ್ಷ್ಯಗಳನ್ನು ಸಂಗ್ರಹಿಸಲು ವಿಧಿವಿಜ್ಞಾನ (Forensic) ತಂಡಗಳನ್ನು ಕರೆಸಲಾಯಿತು.


ನಿಮ್ಮ ಕಾಮೆಂಟ್ ಬರೆಯಿರಿ