ಪಾಕಿಸ್ತಾನಕ್ಕೆ ಮತ್ತೆ ಜಲಸಂಕಷ್ಟ…! ಈ ಬಾರಿ ತಾಲಿಬಾನ್‌ ಕ್ರಮದಿಂದ ಪಾಕಿಸ್ತಾನಕ್ಕೆ ಕೃಷಿ-ಕುಡಿಯುವ ನೀರಿಗೆ ಸಂಕಷ್ಟ..!!

ನವದೆಹಲಿ: ಭಾರತದ ಹೆಜ್ಜೆಯನ್ನೇ ಅನುಸರಿಸಲು ಮುಂದಾಗಿರುವ ಅಫ್ಘಾನಿಸ್ತಾನದ ತಾಲಿಬಾನ್‌ ಆಡಳಿತವು ಈ ವಾರ ಕುನಾರ್ ನದಿಯ ಅಡ್ಡಲಾಗಿ ‘ಎಷ್ಟು ಸಾಧ್ಯವೋ ಅಷ್ಟು ಬೇಗನೆ’ ಅಣೆಕಟ್ಟುಗಳನ್ನು ನಿರ್ಮಿಸುವ ಮೂಲಕ ಪಾಕಿಸ್ತಾನಕ್ಕೆ ನೀರಿನ ಲಭ್ಯತೆಯನ್ನು ನಿರ್ಬಂಧಿಸಲು ಮುಂದಾಗಿದೆ.
ಈ ಆದೇಶವನ್ನು ಸರ್ವೋಚ್ಚ ನಾಯಕ ಮೌಲ್ವಿ ಹಿಬತುಲ್ಲಾ ಅಖುಂದ್‌ಜಾದಾ ಅವರು ನೀಡಿದ್ದಾರೆ ಎಂದು ತಾಲಿಬಾನ್‌ನ ಹಂಗಾಮಿ ಜಲಸಂಪನ್ಮೂಲ ಸಚಿವರು ‘ಎಕ್ಸ್’ (X) ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ. ಸಚಿವರಾದ ಮುಲ್ಲಾ ಅಬ್ದುಲ್ ಲತೀಫ್ ಮನ್ಸೂರ್ ಅವರು ತಮ್ಮ ಪೋಸ್ಟ್‌ನಲ್ಲಿ, “ತಮ್ಮದೇ ನೀರನ್ನು ನಿರ್ವಹಿಸುವ ಹಕ್ಕು ಅಫ್ಘನ್ನರಿಗಿದೆ” ಎಂದಿದ್ದಾರೆ ಮತ್ತು ಈ ನಿರ್ಮಾಣ ಕಾರ್ಯವನ್ನು ವಿದೇಶಿ ಸಂಸ್ಥೆಗಳ ಬದಲಾಗಿ ದೇಶೀಯ ಸಂಸ್ಥೆಗಳೇ ನಡೆಸಲಿವೆ ಎಂದು ಹೇಳಿದ್ದಾರೆ.
ಪಾಕಿಸ್ತಾನವು ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ (TTP) ಸಂಘಟನೆಗೆ ಅಪ್ಘಾನಿಸ್ತಾನ ಸರ್ಕಾರ ಬೆಂಬಲಿಸುತ್ತಿದೆ ಎಂದು ಆರೋಪ ಮಾಡಿ ಅದನ್ನು ಭಯೋತ್ಪಾದಕ ಗುಂಪು ಎಂದು ಕರೆದಿರುವ ಹಿನ್ನೆಲೆಯಲ್ಲಿ ಹಾಗೂ ಈ ತಿಂಗಳು ಡುರಾಂಡ್ ಲೈನ್ (ಪಾಕಿಸ್ತಾನದೊಂದಿಗಿನ 2,600 ಕಿ.ಮೀ ಉದ್ದದ ವಿವಾದಿತ ಗಡಿ) ಉದ್ದಕ್ಕೂ ಪಾಕಿಸ್ತಾನ-ಅಪ್ಘಾನಿಸ್ತಾನದ ಮಧ್ಯೆ ಸಂಘರ್ಷದ ಮಧ್ಯದಲ್ಲಿ, ತಾಲಿಬಾನ್‌ ಸರ್ಕಾರದ ಈ ನಿರ್ಧಾರವು ಬಂದಿದೆ.

ಪಾಕಿಸ್ತಾನಕ್ಕೆ ನೀರಿನ ಹರಿವನ್ನು ಸೀಮಿತಗೊಳಿಸುವ ತಾಲಿಬಾನ್‌ನ ಈ ಕ್ರಮವು, ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತವು ತೆಗೆದುಕೊಂಡ ಹೆಜ್ಜೆಗಳನ್ನು ಹೋಲುತ್ತದೆ. ಪಹಲ್ಗಾಮ್‌ ಘಟನೆಯ ಇಪ್ಪತ್ತನಾಲ್ಕು ಗಂಟೆಗಳ ನಂತರ, ಭಾರತವು ಸಿಂಧೂ ನದಿ ಒಪ್ಪಂದವನ್ನು (Indus Waters Treaty – IWT) ಅಮಾನತುಗೊಳಿಸಿತ್ತು. ಇದು ಸಿಂಧೂ ಮತ್ತು ಅದರ ಉಪನದಿಗಳ ನೀರನ್ನು ಹಂಚಿಕೊಳ್ಳಲು ಭಾರತ ಹಾಗೂ ಪಾಕಿಸ್ತಾನವು 65 ವರ್ಷಗಳ ಹಿಂದೆ ಮಾಡಿಕೊಂಡ ಒಪ್ಪಂದವಾಗಿತ್ತು.
ಕುನಾರ್ ನದಿ ಮತ್ತು ಪಾಕ್ ಮೇಲಿನ ಪರಿಣಾಮ
ಸುಮಾರು 500 ಕಿ.ಮೀ.ಗಳಷ್ಟು ಹರಿಯುವ ಕುನಾರ್ ನದಿಯು ಪಾಕಿಸ್ತಾನದ ಖೈಬರ್ ಪಖ್ತುನ್‌ಖ್ವಾ ಪ್ರಾಂತ್ಯದ ಚಿತ್ರಾಲ್ ಜಿಲ್ಲೆಯಲ್ಲಿರುವ ಹಿಂದೂ ಕುಶ್ ಪರ್ವತಗಳಲ್ಲಿ ಉಗಮವಾಗುತ್ತದೆ. ನಂತರ ಅದು ದಕ್ಷಿಣಕ್ಕೆ ಹರಿದು ಅಫ್ಘಾನಿಸ್ತಾನದ ಕುನಾರ್ ಮತ್ತು ನಂಗರ್‌ಹಾರ್ ಪ್ರಾಂತ್ಯಗಳ ಮೂಲಕ ಸಾಗಿ ಕಾಬೂಲ್ ನದಿಯನ್ನು ಸೇರುತ್ತದೆ.

ಪ್ರಮುಖ ಸುದ್ದಿ :-   ಟ್ರಂಪ್ ಹತ್ಯೆ ಮಾಡಿದವರಿಗೆ ₹96 ಕೋಟಿ ಬಹುಮಾನ ನೀಡುವುದಾಗಿ ಘೋಷಿಸಿದ ಇರಾನ್ ಬೆಂಬಲಿತ ಇರಾಕಿನ ಬಂಡುಕೋರರ ಗುಂಪು

ಪೇಚ್ ನದಿಯ ನೀರಿನೊಂದಿಗೆ ಸೇರಿ ಬಲಗೊಂಡ ಈ ನದಿ (ಈಗ ಇದನ್ನು ಕಾಬೂಲ್ ನದಿ ಎನ್ನುತ್ತಾರೆ), ನಂತರ ಮತ್ತೆ ಪೂರ್ವಕ್ಕೆ ಪಾಕಿಸ್ತಾನದ ಕಡೆ ಹರಿದು, ಅಲ್ಲಿನ ಪಂಜಾಬ್ ಪ್ರಾಂತ್ಯದ ಅಟಾಕ್ ನಗರದ ಬಳಿ ಸಿಂಧೂ ನದಿಯನ್ನು ಸೇರುತ್ತದೆ. ಈ ಕಾಬೂಲ್ ನದಿಯು ಪಾಕಿಸ್ತಾನಕ್ಕೆ ಹರಿಯುವ ದೊಡ್ಡ ನದಿಗಳಲ್ಲಿ ಒಂದಾಗಿದ್ದು, ಸಿಂಧೂ ನದಿಯಂತೆಯೇ, ಇದು ಮುಖ್ಯವಾಗಿ ಗಡಿ ಪ್ರದೇಶದ ಖೈಬರ್ ಪಖ್ತುನ್‌ಖ್ವಾ ಪ್ರದೇಶಕ್ಕೆ ನೀರಿನ ಮತ್ತು ಜಲವಿದ್ಯುತ್ ಉತ್ಪಾದನೆಯ ಪ್ರಮುಖ ಮೂಲವಾಗಿದೆ.
ಪಾಕಿಸ್ತಾನವನ್ನು ಪ್ರವೇಶಿಸುವ ಮುನ್ನವೇ ಅಫ್ಘಾನಿಸ್ತಾನವು ಕುನಾರ್/ಕಾಬೂಲ್ ನದಿಗಳಿಗೆ ಅಣೆಕಟ್ಟುಗಳನ್ನು ನಿರ್ಮಿಸಿದರೆ, ಈಗಾಗಲೇ ಭಾರತದ ನೀರು ನಿರ್ಬಂಧದಿಂದ ಕುಂಠಿತಗೊಂಡಿರುವ ಪಾಕಿಸ್ತಾನದ ಕೃಷಿ ಮತ್ತು ಕುಡಿಯುವ ನೀರಿನ ಲಭ್ಯತೆಗೆ ದೊಡ್ಡ ಹೊಡೆತ ಬೀಳಲಿದೆ.
ಅತ್ಯಂತ ಮುಖ್ಯವಾಗಿ, ಪಾಕಿಸ್ತಾನವು ಭಾರತದೊಂದಿಗೆ ಸಹಿ ಮಾಡಿದ ಸಿಂಧೂ ಜಲ ಒಪ್ಪಂದ(IWT)ದಂತಹ ಯಾವುದೇ ಜಲ ಹಂಚಿಕೆ ಒಪ್ಪಂದವು ಕಾಬೂಲ್ ನದಿಗೆ ಸಂಬಂಧಿಸಿದಂತೆ ಇಲ್ಲ. ಇದರರ್ಥ, ಅಣೆಕಟ್ಟು ನಿರ್ಮಾಣದಿಂದ ಹಿಂದೆ ಸರಿಯುವಂತೆ ಅಫ್ಘಾನಿಸ್ತಾನವನ್ನು ಒತ್ತಾಯಿಸಲು ಪಾಕಿಸ್ತಾನಕ್ಕೆ ತಕ್ಷಣದಲ್ಲಿ ಯಾವುದೇ ಕಾನೂನು ಮಾರ್ಗವಿಲ್ಲ. ಇದು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವಿನ ಹಿಂಸಾಚಾರ ಮತ್ತಷ್ಟು ಹೆಚ್ಚಾಗುವ ಭೀತಿಗೆ ಕಾರಣವಾಗಿದೆ.

ತಾಲಿಬಾನ್‌ನ ನದಿ ನಿರ್ವಹಣಾ ಯೋಜನೆಗಳು
ಆಗಸ್ಟ್ 2021 ರಲ್ಲಿ ಅಫ್ಘಾನ್ ಸರ್ಕಾರದ ನಿಯಂತ್ರಣ ಸಾಧಿಸಿದಾಗಿನಿಂದ, ತಾಲಿಬಾನ್ ದೇಶದಾದ್ಯಂತ ಹರಿಯುವ ನದಿಗಳು ಮತ್ತು ಕಾಲುವೆಗಳ ಮೇಲೆ ತನ್ನ ಹಿಡಿತವನ್ನು ಸಾಧಿಸುವತ್ತ ಗಮನ ಹರಿಸಿದೆ. ಇವುಗಳಲ್ಲಿ ಪಶ್ಚಿಮಕ್ಕೆ ಮಧ್ಯ ಏಷ್ಯಾದ ಕಡೆ ಹರಿಯುವ ನದಿಗಳೂ ಸೇರಿವೆ. ಆಹಾರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಅಣೆಕಟ್ಟುಗಳು ಮತ್ತು ಕಾಲುವೆಗಳನ್ನು ನಿರ್ಮಿಸುತ್ತಿದೆ.
ಉದಾಹರಣೆಗೆ, ಉತ್ತರ ಅಫ್ಘಾನಿಸ್ತಾನದಲ್ಲಿ ನಿರ್ಮಾಣವಾಗುತ್ತಿರುವ ವಿವಾದಾತ್ಮಕ ಖೋಶ್ ಟೆಪಾ ಕಾಲುವೆ (Qosh Tepa canal). 285 ಕಿ.ಮೀ. ಉದ್ದದ ಈ ಕಾಲುವೆಯು 550,000 ಹೆಕ್ಟೇರ್‌ಗಳಷ್ಟು ಶುಷ್ಕ ಪ್ರದೇಶವನ್ನು ಕೃಷಿ ಯೋಗ್ಯ ಭೂಮಿಯಾಗಿ ಪರಿವರ್ತಿಸುವ ನಿರೀಕ್ಷೆಯಿದೆ. ಈ ಕಾಲುವೆಯು ಆಮು ದರ್ಯಾ ನದಿಯ ಸುಮಾರು 21 ಪ್ರತಿಶತದಷ್ಟು ನೀರನ್ನು ಬೇರೆಡೆಗೆ ತಿರುಗಿಸಬಹುದು, ಇದು ಈಗಾಗಲೇ ನೀರಿನ ಕೊರತೆಯಲ್ಲಿರುವ ಉಜ್ಬೇಕಿಸ್ತಾನ್ ಮತ್ತು ತುರ್ಕಮೆನಿಸ್ತಾನ್ ರಾಷ್ಟ್ರಗಳ ಮೇಲೆ ಪರಿಣಾಮ ಬೀರಬಹುದು ಎಂದು ತಜ್ಞರು ಹೇಳಿದ್ದಾರೆ.
ಕಳೆದ ವಾರ ತಾಲಿಬಾನ್‌ನ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಭಾರತಕ್ಕೆ ಔಪಚಾರಿಕ ಭೇಟಿ ನೀಡಿದ್ದರು. ಈ ವೇಳೆ ಅವರು ಹೆರಾತ್ ಪ್ರಾಂತ್ಯದಲ್ಲಿ ಅಣೆಕಟ್ಟಿನ ನಿರ್ಮಾಣ ಮತ್ತು ನಿರ್ವಹಣೆಗೆ ಭಾರತ ನೀಡಿದ ಬೆಂಬಲವನ್ನು ಪ್ರಶಂಸಿಸಿದರು. “ಸುಸ್ಥಿರ ಜಲ ನಿರ್ವಹಣೆಯ ಮಹತ್ವವನ್ನು ಎರಡೂ ಕಡೆಯವರು ಒತ್ತಿ ಹೇಳಿದ್ದು, ಅಫ್ಘಾನಿಸ್ತಾನದ ಇಂಧನ ಅಗತ್ಯಗಳನ್ನು ಪೂರೈಸಲು ಮತ್ತು ಅದರ ಕೃಷಿ ಅಭಿವೃದ್ಧಿಗೆ ಬೆಂಬಲ ನೀಡಲು ಜಲವಿದ್ಯುತ್ ಯೋಜನೆಗಳಲ್ಲಿ ಸಹಕರಿಸಲು ಒಪ್ಪಿಕೊಂಡಿದ್ದಾರೆ” ಎಂದು ಜಂಟಿ ಹೇಳಿಕೆ ತಿಳಿಸಿದೆ.

ಪ್ರಮುಖ ಸುದ್ದಿ :-   ಟ್ರಂಪ್ ಹತ್ಯೆ ಮಾಡಿದವರಿಗೆ ₹96 ಕೋಟಿ ಬಹುಮಾನ ನೀಡುವುದಾಗಿ ಘೋಷಿಸಿದ ಇರಾನ್ ಬೆಂಬಲಿತ ಇರಾಕಿನ ಬಂಡುಕೋರರ ಗುಂಪು

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement