ರಿಯಾದ್: ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಇತ್ತೀಚೆಗೆ ಬಲೂಚಿಸ್ತಾನದ ಬಗ್ಗೆ ನೀಡಿದ ಹೇಳಿಕೆ ಪಾಕಿಸ್ತಾನದಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದು, ಹಲವಾರು ವರದಿಗಳ ಪ್ರಕಾರ, ಪಾಕಿಸ್ತಾನ ಸರ್ಕಾರವು ನಟನಿಗೆ ಭಯೋತ್ಪಾದಕ ಎಂಬರ್ಥದಲ್ಲಿ ಹಣೆಪಟ್ಟಿ ಕಟ್ಟಲಾಗಿದೆ. ಪಾಕಿಸ್ತಾನವು ಸಲ್ಮಾನ್ ಖಾನ್ ಅವರನ್ನು ಭಯೋತ್ಪಾದನಾ ವಿರೋಧಿ ಕಾಯ್ದೆಯ (1997) 4 ನೇ ಶೆಡ್ಯೂಲ್ ಅಡಿಯಲ್ಲಿ ಇರಿಸಿದೆ ಎಂದು ಆರೋಪಿಸಲಾಗಿದೆ. ಈ ಶೆಡ್ಯೂಲ್ ಭಯೋತ್ಪಾದನೆಯೊಂದಿಗೆ ಸಂಪರ್ಕ ಹೊಂದಿರುವ ಶಂಕಿತ ವ್ಯಕ್ತಿಗಳಿಗೆ ಮೀಸಲಾದ ನಿಬಂಧನೆಯಾಗಿದೆ.
ಸಲ್ಮಾನ್ ಖಾನ್ ಮಾತನಾಡಿರುವ ವಿಡಿಯೊ ವೈರಲ್ (Viral Video) ಆಗಿದೆ.
ರಿಯಾದ್‌ನಲ್ಲಿ ನಡೆದ ಜಾಯ್ ಫೋರಮ್ 2025 ರಲ್ಲಿ ಸಲ್ಮಾನ್ ಖಾನ್, ಶಾರುಖ್ ಖಾನ್, ಅಮೀರ್ ಖಾನ್ ಅವರೊಂದಿಗೆ ಮಧ್ಯಪ್ರಾಚ್ಯದಲ್ಲಿ ಭಾರತೀಯ ಸಿನಿಮಾದ ಹೆಚ್ಚುತ್ತಿರುವ ಆಕರ್ಷಣೆಯ ಬಗ್ಗೆ ಮಾತನಾಡಿದ ನಂತರ ಈ ಬೆಳವಣಿಗೆ ನಡೆದಿದೆ. ಚರ್ಚೆಯ ಸಮಯದಲ್ಲಿ, ಸಲ್ಮಾನ್ ಖಾನ್ ಬಲೂಚಿಸ್ತಾನ್ ಮತ್ತು ಪಾಕಿಸ್ತಾನವನ್ನು ಪ್ರತ್ಯೇಕವಾಗಿ ಪ್ರಸ್ತಾಪಿಸಿರುವುದು ಪಾಕಿಸ್ತಾನವನ್ನು ಕೆರಳಿಸಿದೆ.
ಈಗ, ನೀವು ಹಿಂದಿ ಸಿನಿಮಾ ಮಾಡಿ ಇಲ್ಲಿ (ಸೌದಿ ಅರೇಬಿಯಾದಲ್ಲಿ) ಬಿಡುಗಡೆ ಮಾಡಿದರೆ, ಅದು ಸೂಪರ್ ಹಿಟ್ ಆಗುತ್ತದೆ. ನೀವು ತಮಿಳು, ತೆಲುಗು ಅಥವಾ ಮಲಯಾಳಿ ಸಿನಿಮಾ ಮಾಡಿದರೆ, ನೂರಾರು ಕೋಟಿ ವ್ಯವಹಾರ ಮಾಡುತ್ತದೆ. ಏಕೆಂದರೆ ಇತರ ದೇಶಗಳಿಂದ ಇಲ್ಲಿಗೆ ಅನೇಕ ಜನರು ಬಂದಿದ್ದಾರೆ. ಬಲೂಚಿಸ್ತಾನದ ಜನರಿದ್ದಾರೆ, ಅಫ್ಘಾನಿಸ್ತಾನದ ಜನರಿದ್ದಾರೆ, ಪಾಕಿಸ್ತಾನದ ಜನರಿದ್ದಾರೆ. ಎಲ್ಲರೂ ಇಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಸಲ್ಮಾನ್ ಖಾನ್ ಹೇಳಿದ್ದರು. ನಟ ಸಲ್ಮಾನ್ ಖಾನ್ ಅವರ ಈ ಹೇಳಿಕೆಯು ಪಾಕಿಸ್ತಾನ ಸರ್ಕಾರವನ್ನು ಕೆರಳಿಸಿದೆ.
ಆದರೆ, ಬಲೂಚ್ ಪ್ರತ್ಯೇಕತಾವಾದಿನಾಯಕರು ಸಲ್ಮಾನ್ ಹೇಳಿಕೆಯನ್ನು ಸ್ವಾಗತಿಸಿದ್ದಾರೆ. ಈ ಹೇಳಿಕೆಯು ಬಲೂಚ್ ಜನರಿಗೆ ಸಂತೋಷ ತಂದಿದೆ ಎಂದ ಬಲೂಚ್ ಸ್ವಾತಂತ್ರ್ಯದ ಹೋರಾಟಗಾರರಾದ ಮೀರ್ ಯಾರ್ ಬಲೂಚ್ ಹೇಳಿದ್ದಾರೆ. ಅನೇಕ ರಾಷ್ಟ್ರಗಳು ಹೇಳಲು ಹಿಂಜರಿಯುವ ಕೆಲಸವನ್ನು ನಟ ಸಲ್ಮಾನ್ ಖಾನ್ ಮಾಡಿದ್ದಕ್ಕಾಗಿ ಅವರು ಶ್ಲಾಘಿಸಿದರು.
ಪಾಕಿಸ್ತಾನದ ಅತಿದೊಡ್ಡ ಪ್ರಾಂತ್ಯ (ದೇಶದ ಶೇ. 46 ಇರುವ ಪ್ರದೇಶ) ಆದರೆ ಅದರ ಜನಸಂಖ್ಯೆಯ ಕೇವಲ ಶೇ. 6 (ಸುಮಾರು 1.5 ಕೋಟಿ) ಯಷ್ಟು ಜನರಿಗೆ ನೆಲೆಯಾಗಿರುವ ಬಲೂಚಿಸ್ತಾನದವು ತಾರತಮ್ಯ ನೀತಿ ಮತ್ತು ಆರ್ಥಿಕ ನಿರ್ಲಕ್ಷ್ಯದಿಂದ ಕಂಗೆಟ್ಟಿದೆ. ಖನಿಜ ಸಂಪನ್ಮೂಲಗಳಿಂದ ಸಮೃದ್ಧವಾಗಿದ್ದರೂ, ಬಲೂಚಿಸ್ತಾನವು ಪಾಕಿಸ್ತಾನದ ಅತ್ಯಂತ ಹಿಂದುಳಿದ ಪ್ರದೇಶವಾಗಿ ಉಳಿದಿದೆ. ಸುಮಾರು ಶೇಕಡಾ 70 ರಷ್ಟು ಜನರು ಬಡತನ ರೇಖೆಗಿಂತ ಕೆಳಗೆ ವಾಸಿಸುತ್ತಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ