ಗುರುಗ್ರಾಮ ಮೂಲದ ಉದ್ಯಮಿಯೊಬ್ಬರು ತಮಗೆ ಬಂದಿರುವ “ಅತ್ಯಂತ ಪ್ರಾಮಾಣಿಕ ರಜಾ ಅರ್ಜಿ”ಯೊಂದನ್ನು ‘X’ (ಹಿಂದಿನ ಟ್ವಿಟರ್) ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಇದೀಗ ವ್ಯಾಪಕವಾಗಿ ಚರ್ಚೆಗೊಳಗಾಗಿದ್ದು, ಉದ್ಯೋಗಿಗಳಲ್ಲಿನ ಮಾನಸಿಕ ಆರೋಗ್ಯದ ಕುರಿತಾದ ಮುಕ್ತ ಸಂಸ್ಕೃತಿಯನ್ನು ಎತ್ತಿ ಹಿಡಿದಿದೆ.
ನಾಟ್ ಡೇಟಿಂಗ್ (Knot Dating) ಕಂಪನಿಯ ಸಹ-ಸಂಸ್ಥಾಪಕ ಮತ್ತು ಸಿಇಒ ಆಗಿರುವ ಜಸ್ವೀರ್ ಸಿಂಗ್ ಅವರು ಈ ಘಟನೆಯನ್ನು ಹಂಚಿಕೊಂಡಿದ್ದಾರೆ. ಜನರೇಷನ್ ಝಡ್ (Gen Z) ಫಿಲ್ಟರ್‌ಗಳನ್ನು ಇಟ್ಟುಕೊಳ್ಳುವುದಿಲ್ಲ,” ಎಂದು ಅಭಿಪ್ರಾಯಪಟ್ಟಿರುವ ಅವರು, ಕಿರಿಯ ನೌಕರರು ತಮ್ಮ ಭಾವನೆಗಳು ಮತ್ತು ಮಾನಸಿಕ ಯೋಗಕ್ಷೇಮದ ಬಗ್ಗೆ ನೇರವಾಗಿ ಹೇಳಲು ಹಿಂಜರಿಯುವುದಿಲ್ಲ ಎಂದು ಸೂಚಿಸಿದ್ದಾರೆ.
ಬ್ರೇಕ್ ಅಪ್ ಕಾರಣದಿಂದ ರಜೆ
ಘಟನೆಯ ವಿವರಗಳನ್ನು ನೀಡಿದ ಜಸ್ವೀರ್ ಸಿಂಗ್, ಒಬ್ಬ ನೌಕರನು ವೈಯಕ್ತಿಕ ಕಾರಣಕ್ಕಾಗಿ ರಜೆ ಕೋರಿ ಇ ಮೇಲ್ ಕಳುಹಿಸಿದ್ದನು ಎಂದು ತಿಳಿಸಿದ್ದಾರೆ. ತಾನು ಇತ್ತೀಚೆಗೆ ಬ್ರೇಕಪ್‌ನಿಂದ ಬಳಲುತ್ತಿದ್ದೇನೆ. ಹಾಗಾಗಿ ಕೆಲಸದಲ್ಲಿ ಗಮನಹರಿಸಲು ಕಷ್ಟವಾಗುತ್ತಿದೆ ಮತ್ತು ಚೇತರಿಸಿಕೊಳ್ಳಲು ಕೆಲವು ದಿನಗಳ ವಿರಾಮ ಬೇಕಾಗಿದೆ ಎಂದು ಆ ನೌಕರನು ಪ್ರಾಮಾಣಿಕವಾಗಿ ಹೇಳಿಕೊಂಡಿದ್ದ.
ಎಕ್ಸ್‌ನಲ್ಲಿ ಜಸ್ವೀರ್ ಸಿಂಗ್ ಅವರು ಹಂಚಿಕೊಂಡ ರಜಾ ಅರ್ಜಿಯಲ್ಲಿ “ನಾನು ಇತ್ತೀಚೆಗೆ ಬ್ರೇಕಪ್ ಮಾಡಿಕೊಂಡಿದ್ದೇನೆ ಮತ್ತು ಕೆಲಸದ ಮೇಲೆ ಗಮನಹರಿಸಲು ಸಾಧ್ಯವಾಗುತ್ತಿಲ್ಲ, ನನಗೆ ಒಂದು ಸಣ್ಣ ವಿರಾಮ ಬೇಕಾಗಿದೆ. ನಾನು ಇಂದು ಮನೆಯಿಂದ ಕೆಲಸ ಮಾಡುತ್ತಿದ್ದೇನೆ, ಹಾಗಾಗಿ 28 ರಿಂದ 8 ರವರೆಗೆ ರಜೆ ತೆಗೆದುಕೊಳ್ಳಲು ಬಯಸುತ್ತೇನೆ ಎಂದು ಬರೆದಿದ್ದಾರೆ.
ಮಾನಸಿಕ ಆರೋಗ್ಯಕ್ಕೆ ಬೆಂಬಲ:
ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಹಲವು ಬಳಕೆದಾರರು ನೌಕರನ ಪ್ರಾಮಾಣಿಕತೆಯನ್ನು ಮುಕ್ತವಾಗಿ ಶ್ಲಾಘಿಸಿದ್ದಾರೆ. ಇಂತಹ ಪಾರದರ್ಶಕತೆಯು, ಕೆಲಸದ ಸ್ಥಳದಲ್ಲಿ ಮಾನಸಿಕ ಆರೋಗ್ಯ ಮತ್ತು ಭಾವನಾತ್ಮಕ ಯೋಗಕ್ಷೇಮವನ್ನು ಮುಕ್ತವಾಗಿ ಚರ್ಚಿಸಲು ಸಹಾಯ ಮಾಡುತ್ತದೆ ಹಾಗೂ ಸ್ವಾಗತಾರ್ಹ ಬದಲಾವಣೆಯನ್ನು ತರುತ್ತದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜಸ್ವೀರ್ ಸಿಂಗ್ ಅವರಿಗೆ ಈ ರಜೆಯನ್ನು ಅನುಮೋದಿಸಿದ್ದೀರಾ ಎಂದು ಹಲವು ಬಳಕೆದಾರರು ಪ್ರಶ್ನಿಸಿದಾಗ, ಸಿಇಒ ಸಿಂಗ್ ಪ್ರತಿಕ್ರಿಯಿಸಿ, “ರಜೆಯನ್ನು ತಕ್ಷಣವೇ ಅನುಮೋದಿಸಲಾಯಿತು” ಎಂದು ತಿಳಿಸಿದ್ದಾರೆ. ನೌಕರನಿಗೆ ಬೆಂಬಲ ನೀಡಿದ ಅವರ ಈ ನಿಲುವು ವ್ಯಾಪಕ ಪ್ರಶಂಸೆಗೆ ಪಾತ್ರವಾಯಿತು.
ಇತರ ಬಳಕೆದಾರರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು, ಒಬ್ಬರು “ಇದು ಸಂಪೂರ್ಣವಾಗಿ ಸರಿ. ಕಾರಣವನ್ನು ವಿವರಿಸದಿರುವುದು ಇನ್ನೂ ಉತ್ತಮ,” ಎಂದು ಬರೆದರೆ, ಮತ್ತೊಬ್ಬರು ತಮಾಷೆಯಾಗಿ, “ಜನರು ತಮ್ಮ ಮದುವೆಗೂ ಅಷ್ಟು ರಜೆ ತೆಗೆದುಕೊಳ್ಳುವುದಿಲ್ಲ,” ಎಂದು ಕಾಮೆಂಟ್ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಸ್ವೀರ್ ಸಿಂಗ್, “ಆದರೆ ಮದುವೆಗಿಂತ ಬ್ರೇಕಪ್‌ಗಳಿಗೆ ಹೆಚ್ಚು ರಜೆ ಬೇಕು ಎಂದು ನಾನು ಭಾವಿಸುತ್ತೇನೆ,” ಎಂದು ಹಾಸ್ಯಭರಿತ ಉತ್ತರ ನೀಡಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ