ನವದೆಹಲಿ : ದೆಹಲಿಯ ಬಿಜೆಪಿ ಸಂಸದರಾದ ಪ್ರವೀಣ್ ಖಂಡೇಲವಾಲ್ ಅವರು ರಾಷ್ಟ್ರ ರಾಜಧಾನಿ ದೆಹಲಿಗೆ ‘ಇಂದ್ರಪ್ರಸ್ಥ’ ಎಂದು ಮರುನಾಮಕರಣ ಮಾಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಶನಿವಾರ ಮನವಿ ಮಾಡಿದ್ದಾರೆ. ದೆಹಲಿಯು ತನ್ನ “ಪ್ರಾಚೀನ ಬೇರುಗಳನ್ನು” ಹೊಂದಿದೆ ಎಂದು ಅವರು ಈ ಸಂದರ್ಭದಲ್ಲಿ ಉಲ್ಲೇಖಿಸಿದ್ದಾರೆ.
ಖಂಡೇಲವಾಲ್ ಅವರ ಪ್ರಕಾರ, ಹಳೆಯ ದೆಹಲಿ ರೈಲು ನಿಲ್ದಾಣಕ್ಕೆ ‘ಇಂದ್ರಪ್ರಸ್ಥ ಜಂಕ್ಷನ್’ ಹಾಗೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ‘ಇಂದ್ರಪ್ರಸ್ಥ ವಿಮಾನ ನಿಲ್ದಾಣ’ ಎಂದು ಮರುನಾಮಕರಣ ಮಾಡಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.
ಅವರು ಅಮಿತ್ ಶಾ ಅವರಿಗೆ ಬರೆದ ಪತ್ರದಲ್ಲಿ (ಇದನ್ನು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮತ್ತು ಇತರ ಸಚಿವರಿಗೂ ಕಳುಹಿಸಲಾಗಿದೆ), ಈ ಬದಲಾವಣೆಯು ದೆಹಲಿಯ ಐತಿಹಾಸಿಕ, ಸಾಂಸ್ಕೃತಿಕ ಮತ್ತು ನಾಗರಿಕತೆಯ ಬೇರುಗಳನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.
“ದೆಹಲಿಯ ಇತಿಹಾಸವು ಕೇವಲ ಸಾವಿರಾರು ವರ್ಷಗಳ ಹಿಂದಿನದ್ದಲ್ಲ, ಇದು ಭಾರತೀಯ ನಾಗರಿಕತೆಯ ಆತ್ಮ ಮತ್ತು ಪಾಂಡವರು ಸ್ಥಾಪಿಸಿದ ‘ಇಂದ್ರಪ್ರಸ್ಥ’ ನಗರದ ರೋಮಾಂಚಕ ಸಂಪ್ರದಾಯವನ್ನು ಸಾಕಾರಗೊಳಿಸುತ್ತದೆ,” ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಪಾಂಡವರ ಭವ್ಯ ಪ್ರತಿಮೆಗಳನ್ನು ಸ್ಥಾಪಿಸಬೇಕು ಎಂದೂ ಅವರು ಮನವಿ ಮಾಡಿದ್ದಾರೆ. “ಇಂದ್ರಪ್ರಸ್ಥದ ಪವಿತ್ರ ಭೂಮಿಯಲ್ಲಿ ಪಾಂಡವರ ಪ್ರತಿಮೆಗಳನ್ನು ಸ್ಥಾಪಿಸುವುದರಿಂದ ಭಾರತದ ಇತಿಹಾಸ, ಸಂಸ್ಕೃತಿ ಮತ್ತು ನಂಬಿಕೆಗೆ ಮತ್ತೆ ಜೀವ ಬರುತ್ತದೆ. ಇದು ಪಾಂಡವರ ನೀತಿ, ಧರ್ಮ ಮತ್ತು ಧೈರ್ಯದ ಸಂಕೇತವಾಗಿ ಹೊಸ ಪೀಳಿಗೆಗೆ ಭಾರತದ ಇತಿಹಾಸವನ್ನು ನೆನಪಿಸುತ್ತದೆ,” ಎಂದು ಬಿಜೆಪಿ ಸಂಸದರು ಹೇಳಿದ್ದಾರೆ.
ಸಾಂಸ್ಕೃತಿಕ ಪುನರುಜ್ಜೀವನಕ್ಕಾಗಿ ಮಹತ್ವದ ಹೆಜ್ಜೆ
ದೆಹಲಿಯು “ಕೇವಲ ಆಧುನಿಕ ಮಹಾನಗರವಲ್ಲ, ಇದು ಭಾರತೀಯ ನಾಗರಿಕತೆಯ ಆತ್ಮ” ಎಂದು ಖಂಡೇಲ್ವಾಲ್ ಅಭಿಪ್ರಾಯಪಟ್ಟಿದ್ದಾರೆ.
ಪ್ರಯಾಗ ರಾಜ್, ಅಯೋಧ್ಯೆ, ಉಜ್ಜಯಿನಿ, ವಾರಾಣಸಿಯಂತಹ ದೇಶದ ಇತರೆ ಐತಿಹಾಸಿಕ ನಗರಗಳು ತಮ್ಮ “ಪ್ರಾಚೀನ ಗುರುತಿನೊಂದಿಗೆ” ಮರುಸಂಪರ್ಕ ಸಾಧಿಸುತ್ತಿರುವಾಗ, ದೆಹಲಿಯನ್ನೂ ಅದರ “ಮೂಲ ಸ್ವರೂಪದಲ್ಲಿ ಗೌರವಿಸಬೇಕು” ಎಂದು ಅವರು ಒತ್ತಾಯಿಸಿದರು.
“ಈ ಬದಲಾವಣೆಯು ಕೇವಲ ಐತಿಹಾಸಿಕ ನ್ಯಾಯವಲ್ಲ, ಇದು ಸಾಂಸ್ಕೃತಿಕ ಪುನರುಜ್ಜೀವನದತ್ತ ಮಹತ್ವದ ಹೆಜ್ಜೆಯಾಗಿದೆ. ಇದು ಇತಿಹಾಸವನ್ನು ಮರುಸ್ಥಾಪಿಸುತ್ತದೆ ಮತ್ತು ಐತಿಹಾಸಿಕ ನ್ಯಾಯ ಹಾಗೂ ಸಾಂಸ್ಕೃತಿಕ ಗೌರವವನ್ನು ಪ್ರತಿನಿಧಿಸುತ್ತದೆ,” ಎಂದು ಅವರು ಹೇಳಿದ್ದಾರೆ.
ದೆಹಲಿಗೆ ‘ಇಂದ್ರಪ್ರಸ್ಥ’ ಎಂದು ಮರುನಾಮಕರಣ ಮಾಡುವುದರಿಂದ, ಭಾರತದ ರಾಜಧಾನಿ ಕೇವಲ ಅಧಿಕಾರದ ಕೇಂದ್ರವಲ್ಲದೆ, ಧರ್ಮ, ನೀತಿ ಮತ್ತು ರಾಷ್ಟ್ರೀಯತೆಯ ಸಂಕೇತವೂ ಆಗಿದೆ ಎಂಬ ಸಂದೇಶವು ಮುಂದಿನ ಪೀಳಿಗೆಗೆ ರವಾನೆಯಾಗಲಿದೆ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.
ವಿಎಚ್ಪಿ ಸಹ ಇದೇ ಬೇಡಿಕೆ ಇಟ್ಟಿತ್ತು
ಕಳೆದ ತಿಂಗಳು ವಿಶ್ವ ಹಿಂದೂ ಪರಿಷತ್ (VHP) ಕೂಡ ಇದೇ ರೀತಿಯ ಬೇಡಿಕೆಯನ್ನು ಮಾಡಿತ್ತು. ಇದು ಪ್ರಾಚೀನ ಭಾರತೀಯ ಇತಿಹಾಸ ಮತ್ತು ಮಹಾಭಾರತ ಕಾಲದ ಬೇರುಗಳನ್ನು ನೆನಪಿಸುತ್ತದೆ ಎಂದು ವಿಎಚ್ಪಿ ಹೇಳಿತ್ತು.
ವಿಎಚ್ಪಿಯ ದೆಹಲಿ ಘಟಕವು ದೆಹಲಿಯ ಸಂಸ್ಕೃತಿ ಸಚಿವ ಕಪಿಲ್ ಮಿಶ್ರಾ ಅವರಿಗೆ ಪತ್ರ ಬರೆದು, ರಾಷ್ಟ್ರ ರಾಜಧಾನಿಯ ಹೆಸರು, ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ನವದೆಹಲಿ ರೈಲು ನಿಲ್ದಾಣದ ಹೆಸರುಗಳನ್ನು ಬದಲಾಯಿಸಿ, ನಗರದ “ನಿಜವಾದ ಸಾಂಸ್ಕೃತಿಕ ಗುರುತನ್ನು” ಪ್ರತಿಬಿಂಬಿಸುವಂತೆ ಮಾಡಲು ಆಗ್ರಹಿಸಿತ್ತು.


ನಿಮ್ಮ ಕಾಮೆಂಟ್ ಬರೆಯಿರಿ