ಭೀಕರ ರಸ್ತೆ ಅಪಘಾತ : ನಿಂತಿದ್ದ ಟ್ರೈಲರ್‌ ಗೆ ಟೆಂಪೋ ಟ್ರಾವೆಲರ್ ಡಿಕ್ಕಿ ; 15 ಸಾವು

 ಜೈಪುರ/ಫಲೊಡಿ: ರಾಜಸ್ಥಾನದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ 15 ಜನರು ಸಾವನ್ನಪ್ಪಿದ್ದು ಮತ್ತು ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಿಲ್ಲಿಸಿದ್ದ ಟ್ರೈಲರ್‌ಗೆ ಟೆಂಪೋ ಟ್ರಾವೆಲರ್ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ.
ರಾಜಧಾನಿ ಜೈಪುರದಿಂದ ಸುಮಾರು 400 ಕಿ.ಮೀ. ದೂರದಲ್ಲಿರುವ ಫಲೊಡಿ ಜಿಲ್ಲೆಯ ಮಟೋಡಾ ಗ್ರಾಮದ ಬಳಿಯ ಭಾರತ ಮಾಲಾ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಮೃತರು ಜೋಧಪುರದ ಸೂರಸಾಗರ ಪ್ರದೇಶದ ನಿವಾಸಿಗಳಾಗಿದ್ದು, ಬಿಕಾನೇರ್‌ನ ಕೋಲಾಯತ್ ದೇವಾಲಯದಲ್ಲಿರುವ ಕಪಿಲ್ ಮುನಿ ಆಶ್ರಮದಲ್ಲಿ ಪ್ರಾರ್ಥನೆ ಸಲ್ಲಿಸಿ ಹಿಂತಿರುಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
“ಘಟನಾ ಸ್ಥಳದಲ್ಲೇ ಹದಿನೈದು ಪ್ರಯಾಣಿಕರು ಸಾವಿಗೀಡಾಗಿದ್ದು, ಇಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮೊದಲು ಓಸಿಯಾನ್ ಆಸ್ಪತ್ರೆಗೆ ಕರೆದೊಯ್ದು ನಂತರ ಜೋಧಪುರಕ್ಕೆ ರವಾನಿಸಲಾಗಿದೆ,” ಎಂದು ಜೋಧಪುರ ಪೊಲೀಸ್ ಆಯುಕ್ತ ಓಂ ಪ್ರಕಾಶ ಹೇಳಿದ್ದಾರೆ.

ರಕ್ಷಣಾ ಕಾರ್ಯ…
ಡಿಕ್ಕಿಯ ರಭಸಕ್ಕೆ ಟೆಂಪೋ ಟ್ರಾವೆಲರ್‌ನ ಮುಂಭಾಗ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು, ಅನೇಕ ಪ್ರಯಾಣಿಕರು ವಾಹನದೊಳಗೆ ಸಿಕ್ಕಿಬಿದ್ದಿದ್ದರು. ರಕ್ಷಣಾ ತಂಡಗಳು ಮತ್ತು ಸ್ಥಳೀಯ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿದರು. ಸ್ಥಳೀಯರ ಸಹಾಯದಿಂದ ಗಾಯಾಳುಗಳನ್ನು ಹೊರತೆಗೆದು ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಿದರು.
ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಅವರು ಘಟನೆಯ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಸಂತ್ರಸ್ತರ ಕುಟುಂಬಗಳಿಗೆ ಎಲ್ಲಾ ನೆರವು ನೀಡಲು ಮತ್ತು ಗಾಯಗೊಂಡವರಿಗೆ ಸೂಕ್ತ ವೈದ್ಯಕೀಯ ಆರೈಕೆ ಒದಗಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಹ ಸಂತಾಪ ವ್ಯಕ್ತಪಡಿಸಿದ್ದಾರೆ.

ಪ್ರಮುಖ ಸುದ್ದಿ :-   ಮೊದಲು ಹಾಲಿನಲ್ಲಿ ನಿದ್ದೆ ಮಾತ್ರೆ...ನಂತರ ಹಾಸಿಗೆ ಮೇಲೆ ವಿಷದ ಹಾವು ! ಗಂಡನ ಕೊಲೆಗೆ ಪತ್ನಿಯ ಭಯಾನಕ ಸಂಚು...!

ಪ್ರಧಾನಮಂತ್ರಿ ಪರಿಹಾರ ಘೋಷಣೆ:
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಪಘಾತದಲ್ಲಿ ಮಡಿದವರ ಕುಟುಂಬಗಳಿಗೆ ಪರಿಹಾರವನ್ನು ಘೋಷಿಸಿದ್ದಾರೆ. “ರಾಜಸ್ಥಾನದ ಫಲೊಡಿ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತದಿಂದ ಆದ ಜೀವಹಾನಿಗೆ ತೀವ್ರ ದುಃಖವಾಗಿದೆ. ಈ ಕಷ್ಟದ ಸಮಯದಲ್ಲಿ ನನ್ನ ಆಲೋಚನೆಗಳು ಸಂತ್ರಸ್ತ ಜನರು ಮತ್ತು ಅವರ ಕುಟುಂಬಗಳೊಂದಿಗಿವೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ,” ಎಂದು ಪ್ರಧಾನ ಮಂತ್ರಿ ಕಚೇರಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ (PMNRF) ನಿಂದ ಮೃತರ ಕುಟುಂಬದ ಮುಂದಿನ ಸಂಬಂಧಿಗಳಿಗೆ ತಲಾ ₹2 ಲಕ್ಷ ಪರಿಹಾರ ನೀಡಲಾಗುವುದು ಎಂದು ಪ್ರಕಟಿಸಿದೆ. ಹಾಗೂ ಗಾಯಗೊಂಡವರಿಗೆ ₹50,000 ಪರಿಹಾರ ನೀಡಲಾಗುವುದು ಎಂದು ತಿಳಿಸಿದೆ.
ಕಳೆದ ತಿಂಗಳು ಜೈಸಲ್ಮೇರ್‌ನಲ್ಲಿ ಸ್ಲೀಪರ್ ಬಸ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡು 26 ಜನರು ಸಜೀವ ದಹನವಾಗಿದ್ದರು. ಈ ಬಸ್‌ನಲ್ಲಿ ತುರ್ತು ನಿರ್ಗಮನ ದ್ವಾರ ಇರಲಿಲ್ಲ. ಈ ಘಟನೆಯ ನಂತರ, ಸಾರಿಗೆ ಇಲಾಖೆಯು ಅಕ್ರಮ ಮಾರ್ಪಾಡುಗಳು ಮತ್ತು ಪರವಾನಿಗೆ ಉಲ್ಲಂಘನೆಗಳ ವಿರುದ್ಧ ತೀವ್ರ ತಪಾಸಣೆ ಅಭಿಯಾನವನ್ನು ಪ್ರಾರಂಭಿಸಿದೆ.

ಪ್ರಮುಖ ಸುದ್ದಿ :-   ಉದ್ಧವ್‌ಗೆ ಭಾರಿ ಹಿನ್ನಡೆ ; ಶಿಂಧೆ ಬಣದ ಜೊತೆ ಶಿವಸೇನೆ(ಯುಬಿಟಿ) 6 ಸಂಸದರ ವಿಲೀನಕ್ಕೆ ಲೋಕಸಭೆ ಸ್ಪೀಕರ್ ಅನುಮೋದನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement