ವಿಶ್ವದ ಮೊದಲ ಟ್ರಿಲಿಯನೇರ್ ಆಗುವ ಹಾದಿಯಲ್ಲಿ ಇಲಾನ್‌ ಮಸ್ಕ್‌..! 88 ಲಕ್ಷ ಕೋಟಿ ರೂ.ವೇತನ ಪ್ಯಾಕೇಜ್‌ಗೆ ಟೆಸ್ಲಾ ಷೇರುದಾರರ ಒಪ್ಪಿಗೆ…!!

ಆಸ್ಟಿನ್, ಟೆಕ್ಸಾಸ್: ಟೆಸ್ಲಾ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಎಲಾನ್ ಮಸ್ಕ್ ಅವರ ಸುಮಾರು $1 ಟ್ರಿಲಿಯನ್ (ಸುಮಾರು 88 ಲಕ್ಷ ಕೋಟಿ ರೂ.) ಮೌಲ್ಯದ ಬೃಹತ್ ವೇತನ ಯೋಜನೆಗೆ ಕಂಪನಿಯ ಷೇರುದಾರರು ಅನುಮೋದನೆ ನೀಡಿದ್ದಾರೆ.
ಗುರುವಾರ ಆಸ್ಟಿನ್, ಟೆಕ್ಸಾಸ್‌ನಲ್ಲಿ ನಡೆದ ಕಂಪನಿಯ ವಾರ್ಷಿಕ ಷೇರುದಾರರ ಸಭೆಯಲ್ಲಿ, ಮತ ಚಲಾಯಿಸಿದ ಷೇರುದಾರರಲ್ಲಿ ಶೇ. 75 ರಷ್ಟು ಷೇರುದಾರರು ಈ ಪ್ರಸ್ತಾವನೆಯ ಪರವಾಗಿ ಮತ ಚಲಾಯಿಸಿವೆ ಎಂದು ಟೆಸ್ಲಾ ಪ್ರಕಟಿಸಿದೆ.
ಈ ವೇತನ ಯೋಜನೆಯು ಷೇರುಗಳ ರೂಪದಲ್ಲಿದ್ದು, ಮುಂದಿನ ಹತ್ತು ವರ್ಷಗಳಲ್ಲಿ ಟೆಸ್ಲಾ ಕೆಲವು ಮಹತ್ವದ ಸಾಧನೆಗಳನ್ನು ಮಾಡಿದರೆ ಮಸ್ಕ್‌ಗೆ ಹಂತ ಹಂತವಾಗಿ ಈ ಷೇರುಗಳು ಲಭ್ಯವಾಗುತ್ತವೆ. ಇದು ಜಾರಿಯಾದರೆ, ಈಗಾಗಲೇ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಮಸ್ಕ್ ಅವರ ಟೆಸ್ಲಾ ಮಾಲೀಕತ್ವವು ಸುಮಾರು ಶೇ. 13 ರಿಂದ ಶೇ. 25 ಕ್ಕೆ ಏರಿಕೆಯಾಗಲಿದೆ.
ಟೆಸ್ಲಾ ಮಂಡಳಿಯು ಸೆಪ್ಟೆಂಬರ್‌ನಲ್ಲಿ ಈ ಯೋಜನೆಯನ್ನು ಮಂಡಿಸಿತ್ತು. ಆದರೆ ಪ್ರಮುಖ ಪ್ರಾಕ್ಸಿ ಸಲಹೆಗಾರರಾದ ಗ್ಲಾಸ್ ಲೆವಿಸ್ (Glass Lewis) ಮತ್ತು ಐಎಸ್‌ಎಸ್ (ISS) ಸೇರಿದಂತೆ ಕೆಲವು ಹೂಡಿಕೆದಾರರು ಇದರ ವಿರುದ್ಧ ಮತ ಚಲಾಯಿಸುವಂತೆ ಶಿಫಾರಸು ಮಾಡಿದ್ದರೂ, ಮಸ್ಕ್‌ಗೆ ಬಹುಮತದ ಬೆಂಬಲ ಸಿಕ್ಕಿದೆ.

ಪ್ರಮುಖ ಸುದ್ದಿ :-   ಟ್ರಂಪ್ ಹತ್ಯೆ ಮಾಡಿದವರಿಗೆ ₹96 ಕೋಟಿ ಬಹುಮಾನ ನೀಡುವುದಾಗಿ ಘೋಷಿಸಿದ ಇರಾನ್ ಬೆಂಬಲಿತ ಇರಾಕಿನ ಬಂಡುಕೋರರ ಗುಂಪು

ಆದರೆ, ಮಸ್ಕ್ ಸಂಪೂರ್ಣ ವೇತನವನ್ನು ಪಡೆಯಬೇಕಾದರೆ, ಟೆಸ್ಲಾ ಕಂಪನಿಯ ಮಾರುಕಟ್ಟೆ ಮೌಲ್ಯವು ಪ್ರಸ್ತುತ ಇರುವ $1.54 ಟ್ರಿಲಿಯನ್‌ನಿಂದ $8.5 ಟ್ರಿಲಿಯನ್​ಗೆ ತಲುಪಬೇಕಿದೆ. ಈ ವೇತನವನ್ನು 12 ಹಂತಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ.
ಮೊದಲ ಹಂತದ ಷೇರು ಬಿಡುಗಡೆಗೆ ಮಾರುಕಟ್ಟೆ ಮೌಲ್ಯ $2 ಟ್ರಿಲಿಯನ್‌ಗೆ ತಲುಪಬೇಕಿದೆ. ಮುಂದಿನ 9 ಹಂತಗಳಿಗೆ ಪ್ರತಿ $500 ಬಿಲಿಯನ್ ಮೌಲ್ಯ ಹೆಚ್ಚಳವಾಗಬೇಕು. ಕಡೆಯ 2 ಹಂತಗಳಿಗೆ ಪ್ರತಿ $1 ಟ್ರಿಲಿಯನ್‌ನಷ್ಟು ಹೆಚ್ಚಳವಾಗಬೇಕು.
ಮಸ್ಕ್‌ಗೆ ವೇತನ ಬಿಡುಗಡೆ ಮಾಡಲು ಕಂಪನಿಯು ಹಣಕಾಸು ಮತ್ತು ಕಾರ್ಯಾಚರಣೆಯ ಮಹತ್ವದ ಗುರಿಗಳನ್ನು ನಿಗದಿಪಡಿಸಿದೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ 2 ಕೋಟಿ ವಾಹನಗಳ ವಿತರಣೆ, 1 ಕೋಟಿ ಸಕ್ರಿಯ ಎಫ್‌ಎಸ್‌ಡಿ (Full Self-Driving) ಚಂದಾದಾರಿಕೆಗಳು, 10 ಲಕ್ಷ ಆಪ್ಟಿಮಸ್ (Optimus) ಮಾನವರೂಪಿ ರೋಬೋಟ್‌ಗಳ ವಿತರಣೆ, 10 ಲಕ್ಷ ರೋಬೋಟ್ಯಾಕ್ಸಿಗಳ ವಾಣಿಜ್ಯ ಕಾರ್ಯಾಚರಣೆ ಸೇರಿವೆ.

ಇದಲ್ಲದೆ, ಪ್ರತ್ಯೇಕವಾಗಿ ಹೂಡಿಕೆದಾರ ಸ್ಟೀಫನ್ ಹಾಕ್ ಸಲ್ಲಿಸಿದ, ಮಸ್ಕ್ ಅವರ ಕೃತಕ ಬುದ್ಧಿಮತ್ತೆ ಸ್ಟಾರ್ಟಪ್ xAI ನಲ್ಲಿ ಟೆಸ್ಲಾ ಹೂಡಿಕೆ ಮಾಡುವ ಪ್ರಸ್ತಾಪಕ್ಕೂ ಷೇರುದಾರರಿಂದ ಬೆಂಬಲ ವ್ಯಕ್ತವಾಗಿದೆ. ಕಂಪನಿಯು ಮುಂದಿನ ಕ್ರಮಗಳನ್ನು ಪರಿಗಣಿಸುತ್ತಿದೆ.
2018 ರಲ್ಲಿ ಮಸ್ಕ್‌ಗೆ ನೀಡಿದ್ದ ಹಿಂದಿನ ವೇತನ ಯೋಜನೆಯನ್ನು ಡೆಲವೇರ್ ಕೋರ್ಟ್ ಆಫ್ ಚಾನ್ಸರಿ (Delaware Court of Chancery) ನ್ಯಾಯಾಲಯವು ಕಳೆದ ವರ್ಷ ಅಮಾನ್ಯಗೊಳಿಸಿತ್ತು. ಈ ಹೊಸ ಯೋಜನೆಯು ಆ ತೀರ್ಪಿನ ಮೇಲ್ಮನವಿಯ ನಡುವೆಯೇ ಅನುಮೋದನೆಗೊಂಡಿದೆ.
ಮಸ್ಕ್ ಅವರ ರಾಜಕೀಯ ನಿಲುವುಗಳು ಮತ್ತು ಇತರ ಕಂಪನಿಗಳ (ಸ್ಪೇಸ್‌ಎಕ್ಸ್, ಎಕ್ಸ್, ನ್ಯೂರಾಲಿಂಕ್) ಜವಾಬ್ದಾರಿಗಳ ಕುರಿತು ಕೆಲವು ಷೇರುದಾರರಲ್ಲಿ ಕಳವಳವಿದ್ದರೂ, ಮಸ್ಕ್‌ಗೆ ಕಂಪನಿಯನ್ನು ಮುನ್ನಡೆಸುವ ಸಾಮರ್ಥ್ಯವಿದೆ ಎಂದು ಬಹುಪಾಲು ಹೂಡಿಕೆದಾರರು ಒಪ್ಪಿಗೆ ಸೂಚಿಸಿದ್ದಾರೆ.

ಪ್ರಮುಖ ಸುದ್ದಿ :-   ಕ್ರಿಕೆಟ್ ದಂತಕತೆ ಸರ್ ಗ್ಯಾರಿ ಸೋಬರ್ಸ್ ನಿಧನ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement