ಕಳೆದ ಆಗಸ್ಟ್ 2024 ರಲ್ಲಿ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರನ್ನು ಅಧಿಕಾರದಿಂದ ಪದಚ್ಯುತಗೊಳಿಸಿದ ಆಡಳಿತ ಬದಲಾವಣೆಯ ಹಿಂದೆ ಅಮೆರಿಕದ ‘ಡೀಪ್ ಸ್ಟೇಟ್’ (Deep State) ಕೈವಾಡವಿದೆ ಎಂಬ ವದಂತಿಗಳು ಬಹಳ ಕಾಲದಿಂದ ಹರಿದಾಡುತ್ತಿದ್ದವು. ಇದೀಗ, ಬಾಂಗ್ಲಾದೇಶದ ಮಾಜಿ ಸಚಿವ ಮೊಹಿಬುಲ್ ಹಸನ್ ಚೌಧರಿ ಅವರು ಈ ಆರೋಪವನ್ನು ದೃಢಪಡಿಸಿದ್ದಾರೆ.
ಜುಲೈ-ಆಗಸ್ಟ್ 2024 ರ ಬಿಕ್ಕಟ್ಟಿನ ಸಮಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಚೌಧುರಿ ಅವರು, ‘ರಷ್ಯಾ ಟುಡೇ’ (Russia Today – RT) ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಸ್ಫೋಟಕ ಹೇಳಿಕೆಗಳನ್ನು ನೀಡಿದ್ದಾರೆ. ಜಾರ್ಜ್ ಸೊರೊಸ್-ಸಂಬಂಧಿತ ಗುಂಪುಗಳು, ಯುಎಸ್‌ಐಡಿ (USAID), ಕ್ಲಿಂಟನ್ ಕುಟುಂಬ ಮತ್ತು ಬೈಡನ್ ಆಡಳಿತ ಒಳಗೊಂಡಿರುವ ಒಂದು ಒಕ್ಕೂಟವು (Nexus) ಹಣವನ್ನು ರವಾನಿಸಿದೆ. ಈ ಹಣವು ಮೂಲಭೂತವಾದಿಗಳನ್ನು ಪ್ರೋತ್ಸಾಹಿಸಿ, ಢಾಕಾದಲ್ಲಿ 2024 ರ ಆಡಳಿತ ಬದಲಾವಣೆಗೆ ಸಹಾಯ ಮಾಡಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಸಂದರ್ಶನದಲ್ಲಿ ಮಾತನಾಡಿದ ಚೌಧರಿ, ಹಸೀನಾ ಅವರನ್ನು ಅಧಿಕಾರದಿಂದ ಹೊರಹಾಕಿದ ಗಲಭೆಗಳು ಸ್ವಯಂಪ್ರೇರಿತವಾಗಿರಲಿಲ್ಲ ಎಂದು ಹೇಳಿದ್ದಾರೆ.
ಕ್ಲಿಂಟನ್-ಯೂನಸ್ ಒಕ್ಕೂಟ: “ಕ್ಲಿಂಟನ್ ಕುಟುಂಬ ಮತ್ತು ಮಧ್ಯಂತರ (Interim) ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ ಆಡಳಿತದ ನಡುವೆ ಬಹಳ ಹಿಂದಿನಿಂದಲೂ ನಂಟು ಇದೆ… ಈ ಚಟುವಟಿಕೆಗಳು ಬಹಳ ಕಾಲದಿಂದ ನಡೆಯುತ್ತಿದ್ದವು. ಅವು ಬಹಿರಂಗವಾಗಿರಲಿಲ್ಲ, ಆದರೆ ರಹಸ್ಯ ಎನ್‌ಜಿಒಗಳಿಗೆ (NGOs) ಹಣಕಾಸು ಹರಿಯುತ್ತಿತ್ತು. ಬಾಂಗ್ಲಾದೇಶದಲ್ಲಿ ಸರ್ಕಾರವನ್ನು ಬದಲಾಯಿಸಲೇಬೇಕು ಎಂದು ಅವರು ಪಣತೊಟ್ಟಿದ್ದರು” ಎಂದು ಮೊಹಿಬುಲ್ ಹಸನ್ ಚೌಧರಿ ಹೇಳಿದ್ದಾರೆ.
“ಕೆಲವು ಕುಟುಂಬಗಳು, ವಿಶೇಷವಾಗಿ ಬೈಡನ್ ಕುಟುಂಬ, ಕ್ಲಿಂಟನ್ಸ್, ಸೊರೊಸ್ ಕುಟುಂಬ, ಮತ್ತು ಕೆಲವು ಸರ್ಕಾರೇತರ ಸಂಸ್ಥೆಗಳು, ಅದರಲ್ಲೂ ಮುಖ್ಯವಾಗಿ ಅಮೆರಿಕದಿಂದ ಬಂದ ಯುಎಸ್‌ಐಡಿ ಮತ್ತು ಇಂಟರ್ನ್ಯಾಷನಲ್ ರಿಪಬ್ಲಿಕನ್ ಇನ್‌ಸ್ಟಿಟ್ಯೂಟ್ (IRI), 2018 ರಿಂದಲೇ ನಮ್ಮ ಸರ್ಕಾರದ ವಿರುದ್ಧ ಪ್ರಚಾರ ನಡೆಸುತ್ತಿದ್ದವು ಎಂದು ಅವರು ಪ್ರತಿಪಾದಿಸಿದ್ದಾರೆ.
ಯೋಜಿತ ಗಲಭೆ…
ಆರಂಭದಲ್ಲಿ ಉದ್ಯೋಗ ಕೋಟಾ ಸುಧಾರಣೆಗಳಿಗಾಗಿ ಪ್ರಾರಂಭವಾದ 2024 ರ ವಿದ್ಯಾರ್ಥಿ ಪ್ರತಿಭಟನೆಗಳು “ಈ ಹಣದಿಂದ ಎಚ್ಚರಿಕೆಯಿಂದ ಯೋಜಿಸಲ್ಪಟ್ಟಿದ್ದವು” ಎಂದು ಮಾಜಿ ಸಚಿವರು ಆರೋಪಿಸಿದ್ದಾರೆ. “ಒಂದು ಗೊಂದಲವನ್ನು ಎಚ್ಚರಿಕೆಯಿಂದ ಯೋಜಿಸಲಾಯಿತು. ನಂತರ ಆ ಗೊಂದಲವು ದೊಡ್ಡ ಗಲಭೆಯಾಗಿ ಮಾರ್ಪಟ್ಟಿತು ಎಂದು ಅವರು ಹೇಳಿದ್ದಾರೆ.
ಯುಎಸ್‌ಐಡಿಯ ಹಣಕಾಸಿನ ಚಟುವಟಿಕೆಗಳ ಬಗ್ಗೆಯೂ ಚೌಧುರಿ ಪ್ರಶ್ನೆಗಳನ್ನು ಎತ್ತಿದ್ದಾರೆ, “ಲಕ್ಷಾಂತರ ಡಾಲರ್‌ಗಳು ಎಲ್ಲಿ ಲೆಕ್ಕವಿಲ್ಲದೆ ಹೋದವು? ಅದು ಆಡಳಿತ ಬದಲಾವಣೆ ಚಟುವಟಿಕೆಗಳಿಗಾಗಿ ಮೀಸಲಾಗಿತ್ತು” ಎಂದು ನೇರವಾಗಿ ಅಮೆರಿಕದ ಬೆಂಬಲವನ್ನು ಆರೋಪಿಸಿದರು.
ಪಶ್ಚಿಮದ ಬೆಂಬಲಿತ ಕಾರ್ಯಾಚರಣೆ:
ಡಾ. ಮುಹಮ್ಮದ್ ಯೂನಸ್ ಅವರು ಈ “ಒಕ್ಕೂಟ”ದ ಭಾಗವಾಗಿದ್ದರು ಎಂದು ಚೌಧರಿ ಹೇಳಿದ್ದಾರೆ. ಹಸೀನಾ ಅಧಿಕಾರ ತ್ಯಜಿಸಿದ ನಂತರ ಯೂನಸ್ ಅವರನ್ನು ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರರನ್ನಾಗಿ ನೇಮಕ ಮಾಡಲಾಯಿತು.
ಇದು ಸ್ವಯಂಪ್ರೇರಿತ ವಿದ್ಯಾರ್ಥಿ ಚಳುವಳಿ ಎಂಬ ಕಥನವನ್ನು ಮಾಜಿ ಸಚಿವರು ತಳ್ಳಿಹಾಕಿದ್ದಾರೆ. ಬದಲಾಗಿ, ಇದು ಹಸೀನಾ ಅವರ ಸುದೀರ್ಘ ಆಡಳಿತವನ್ನು ಉರುಳಿಸಲು”ಪಾಶ್ಚಿಮಾತ್ಯ ಪ್ರಾಯೋಜಿತ ಕಾರ್ಯಾಚರಣೆ” ಎಂದು ಬಣ್ಣಿಸಿದ್ದಾರೆ.
ಬದಲಾದ ನೀತಿಗಳತ್ತ ಯೂನಸ್ ಆಡಳಿತ:
ಯೂನಸ್ ಅಧಿಕಾರ ವಹಿಸಿಕೊಂಡ ನಂತರ, ಢಾಕಾದ ಆಂತರಿಕ ಮತ್ತು ವಿದೇಶಾಂಗ ಆದ್ಯತೆಗಳು ಸ್ಪಷ್ಟವಾಗಿ ಬದಲಾಗಿವೆ. ಆಂತರಿಕವಾಗಿ ಇಸ್ಲಾಮಿಸ್ಟ್ ಗುಂಪುಗಳ ಪ್ರಭಾವಕ್ಕೆ ಒಳಗಾಗಿದೆ ಮತ್ತು ವಿದೇಶಾಂಗ ನೀತಿಯಲ್ಲಿ ಪಾಕಿಸ್ತಾನದ ಕಡೆಗೆ ಒಲವು ತೋರಿಸಿದೆ. ಮಧ್ಯಂತರ ಆಡಳಿತವು ಭಾರತದಿಂದ ದೂರ ಸರಿದಿದ್ದು, ಪಾಕಿಸ್ತಾನದ ಕಡೆಯಿಂದ ಬಂಗಾಳಿಗಳ ಮೇಲೆ ನಡೆದ ದೌರ್ಜನ್ಯಗಳ ಬಗ್ಗೆ ಮೃದು ನಿಲುವು ತಳೆದಿದೆ. ಅಲ್ಲದೆ, ಪ್ರಸ್ತುತ ಬಾಂಗ್ಲಾದೇಶದಲ್ಲಿ ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾತರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳ ಬಗ್ಗೆ ಕಣ್ಣುಮುಚ್ಚಿ ಕುಳಿತಿದೆ.
ಆಗಸ್ಟ್ 2024 ರಿಂದ, ಶೇಖ್ ಹಸೀನಾ ಆಡಳಿತದ ಪತನದಲ್ಲಿ ಪಾಶ್ಚಿಮಾತ್ಯರ ಪಾತ್ರದ ಬಗ್ಗೆ ಪಿತೂರಿಗಳನ್ನು ಪಿತೂರಿಯ ಮಾತು ಎಂದು ತಳ್ಳಿಹಾಕಲಾಯಿತು. ಆದರೆ ಚೌಧರಿಯವರ ಬಹಿರಂಗಪಡಿಸುವಿಕೆಗಳು ಈಗ ಅನೇಕರು ಶಂಕಿಸಿದ್ದಕ್ಕೆ ಬಲವನ್ನು ನೀಡುತ್ತವೆ. ಅವರ ಹೇಳಿಕೆಗಳು ಅವ್ಯವಸ್ಥೆಯ ಹಿಂದಿನ ವಿದೇಶಿ ಕೈಯನ್ನು ಬಹಿರಂಗಪಡಿಸುವುದಲ್ಲದೆ, ಮುಹಮ್ಮದ್ ಯೂನಸ್ ಅವರ ಉದ್ದೇಶಗಳು ಮತ್ತು ಮಧ್ಯಂತರ ಆಡಳಿತವು ಬಾಂಗ್ಲಾದೇಶವನ್ನು ಯಾವ ದಿಕ್ಕಿನಲ್ಲಿ ನಡೆಸುತ್ತಿದೆ ಎಂಬುದರ ಮೇಲೆ ಹೊಸ ಬೆಳಕನ್ನು ಚೆಲ್ಲುತ್ತವೆ.


ನಿಮ್ಮ ಕಾಮೆಂಟ್ ಬರೆಯಿರಿ