ಬಿಹಾರ ಚುನಾವಣೆ: ಇಂಡಿ ಬ್ಲಾಕ್‌ ನ ‘ಎಂವೈ’ ಸೂತ್ರಕ್ಕೆ ‘ಎಂವೈಇ’ ಸೂತ್ರ ಬಳಸಿ ಭರ್ಜರಿ ಗೆಲುವು ಸಾಧಿಸಿದ ಎನ್‌ಡಿಎ ; ಏನಿದು ಎಂವೈಇ..?

 ಪಾಟ್ನಾ: ಬಿಹಾರದ ರಾಜಕಾರಣದಲ್ಲಿ ಸುಮಾರು ಮೂರು ದಶಕಗಳ ಕಾಲ ಲಾಲು ಪ್ರಸಾದ ಯಾದವ್ ಅವರ ಆರ್‌ಜೆಡಿ ಪಕ್ಷದ ಏಳಿಗೆಗೆ ಶಕ್ತಿಯಾಗಿದ್ದ ‘ಎಂವೈ’ (ಮುಸ್ಲಿಂ-ಯಾದವ್) ಸಮೀಕರಣವು ಈಗ ಬದಲಾಗಿದೆ. 2025ರ ಬಿಹಾರ ಚುನಾವಣೆಯಲ್ಲಿ, ಹೊಸ ‘ಎಂವೈಇ’ (ಮಹಿಳೆ, ಯುವಜನತೆ ಮತ್ತು ಅತಿ ಹಿಂದುಳಿದ ವರ್ಗ-EBC) ಸಮೀಕರಣವು ಹೊರಹೊಮ್ಮಿದ್ದು, ಇದು ಈ ಸಲದ ಚುನಾವಣೆಯಲ್ಲಿ ಎನ್‌ಡಿಎಗೆ ಅಭೂತಪೂರ್ವ ಜಯ ತಂದುಕೊಟ್ಟಿದೆ.
ಜಾತಿ ಆಧಾರದ ಮೇಲೆ ಹೆಚ್ಚಾಗಿ ನೋಡಲಾಗುತ್ತಿದ್ದ ಬಿಹಾರ ಚುನಾವಣೆಯಲ್ಲಿ, ಸಾಮಾಜಿಕ ಕಲ್ಯಾಣ, ಲಿಂಗ ಸಮಾನತೆ ಮತ್ತು ಆಕಾಂಕ್ಷೆಗಳನ್ನು ಆಧರಿಸಿದ ಈ ಹೊಸ ಗಣಿತವು ಎನ್‌ಡಿಎಗೆ ಬಹುದೊಡ್ಡ ಗೆಲುವು ತಂದುಕೊಟ್ಟಿದೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.
“ಬಿಹಾರದ ಕೆಲವು ಪಕ್ಷಗಳು ‘ಎಂವೈ’ ಎಂಬ ಓಲೈಕೆ ಸೂತ್ರವನ್ನು ಸೃಷ್ಟಿಸಿದ್ದವು. ಆದರೆ ಇಂದಿನ ಗೆಲುವು ಹೊಸ ಸಕಾರಾತ್ಮಕ ‘ಎಂವೈ’ ಸೂತ್ರವನ್ನು ನೀಡಿದೆ, ಅದು ಮಹಿಳೆಯರು ಮತ್ತು ಯುವ ಸಮೂಹ. ಇಂದು, ಬಿಹಾರವು ಅತಿ ಹೆಚ್ಚು ಯುವಕರನ್ನು ಹೊಂದಿರುವ ರಾಜ್ಯಗಳಲ್ಲಿ ಒಂದಾಗಿದೆ, ಮತ್ತು ಇದರಲ್ಲಿ ಪ್ರತಿಯೊಂದು ಧರ್ಮ ಮತ್ತು ಪ್ರತಿಯೊಂದು ಜಾತಿಯ ಯುವಕರು ಸೇರಿದ್ದಾರೆ. ಅವರ ಆಸೆಗಳು, ಅವರ ಆಕಾಂಕ್ಷೆಗಳು ಮತ್ತು ಕನಸುಗಳು ಜಂಗಲ್ ರಾಜ್ ಜನರ ಹಳೆಯ ಕೋಮುವಾದಿ ‘ಎಂವೈ’ ಸೂತ್ರವನ್ನು ಸಂಪೂರ್ಣವಾಗಿ ನಾಶಪಡಿಸಿವೆ…” ಎಂದು ದೆಹಲಿ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಮಾಡಿದ ಭಾಷಣದಲ್ಲಿ ಪ್ರಧಾನಿ ಮೋದಿ ೀ ಅಂಶವನ್ನು ಒತ್ತಿ ಹೇಳಿದ್ದಾರೆ.

ಎನ್‌ಡಿಎ ಗೆಲುವಿನ ಮೂರು ಪ್ರಮುಖ ಅಂಶಗಳು
ಎನ್‌ಡಿಎಯ ಬಿಹಾರ ಚುನಾವಣಾ ಪ್ರಚಾರವು ಮುಖ್ಯವಾಗಿ ಮೂರು ಅಂಶಗಳ ಮೇಲೆ ನಿಂತಿತ್ತು.
ಮಹಿಳಾ ಮತದಾರರಲ್ಲಿ ನಿತೀಶಕುಮಾರ ಅವರಿಗಿರುವ ಅಪಾರ ಬೆಂಬಲ.
ಚಿರಾಗ್ ಪಾಸ್ವಾನ್ ಮತ್ತು ಉಪೇಂದ್ರ ಕುಶ್ವಾಹಾ ಅವರ ಮರಳುವಿಕೆಯಿಂದ ಜಾತಿ ಲೆಕ್ಕಾಚಾರಕ್ಕೆ ದೊರೆತ ಬಲ.
ಹಿಂದಿನ ಆರ್‌ಜೆಡಿ ಆಡಳಿತದಲ್ಲಿ ಪ್ರಚಲಿತವಾಗಿದ್ದ ‘ಕತ್ತಿ, ಬಂದೂಕು, ರಂಗ್ದಾರಿ’ (ಕಾನೂನುಬಾಹಿರತೆ) ಕುರಿತು ಎನ್‌ಡಿಎ ಪುನರಾವರ್ತಿತವಾಗಿ ಯುವಕರಿಗೆ ನೆನಪಿಸಿದ್ದು ಈ ಮೂರು ಅಂಶಗಳು ಎನ್‌ಡಿಎಗೆ ದೊಡ್ಡ ಪ್ರಮಾಣದಲ್ಲಿ ಮತಗಳನ್ನು ತಂದುಕೊಟ್ಟಿತು.
ಮತ್ತೊಂದೆಡೆ, ಮಹಾಘಟಬಂಧನ (ಮೈತ್ರಿಕೂಟ) ಮುಸ್ಲಿಮರು ಮತ್ತು ಯಾದವರನ್ನು ಮೀರಿ ತಮ್ಮ ಜಾತಿ ಸಮೂಹವನ್ನು ವಿಸ್ತರಿಸುವಲ್ಲಿ ವಿಫಲವಾಯಿತು. ಅವರ ಪ್ರಚಾರದ ಕೇಂದ್ರಬಿಂದುವಾಗಿದ್ದ “ಮತ ಕಳ್ಳತನ” ಆರೋಪಗಳು ಮತದಾರರ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ವಾಸ್ತವವಾಗಿ, ವಿಶ್ಲೇಷಣೆಯ ಪ್ರಕಾರ, ಎನ್‌ಡಿಎ ‘ಮುಸ್ಲಿಮ್‌-ಯಾದವ’ ಮತದಾರರ ಒಂದು ಭಾಗವನ್ನೂ ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಪ್ರಮುಖ ಸುದ್ದಿ :-   ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯ; ಕಕ್ಷೆ ತಲುಪಿದ ಸ್ಕೈರೂಟ್‌ನ ಖಾಸಗಿ ರಾಕೆಟ್ ‘ವಿಕ್ರಂ-1’

ಲೆಕ್ಕಾಚಾರ ಬದಲಿಸಿದ ಜಾತಿ ಸಮೀಕರಣ
1995ರಲ್ಲಿ ಮುಸ್ಲಿಂ-ಯಾದವ್ ಸಮೀಕರಣವು ಪ್ರಬಲವಾಗಿದ್ದ ಬಿಹಾರಕ್ಕೂ, 2025ರ ಬಿಹಾರಕ್ಕೂ ಸಾಕಷ್ಟು ವ್ಯತ್ಯಾಸವಿದೆ ಎಂದು ಈ ಚುನಾವಣೆಗಳು ಸಾಬೀತುಪಡಿಸಿವೆ.
ಈ ಬಾರಿ ಎನ್‌ಡಿಎಯು ವ್ಯಾಪಕವಾದ ಜಾತಿ ಆಧಾರವನ್ನು ಹೊಂದಿತ್ತು. ಬಿಜೆಪಿಯು ತನ್ನ ಮೇಲ್ಜಾತಿ ಹಾಗೂ ಹಿಂದುತ್ವದ ಬೆಂಬಲವನ್ನು ಉಳಿಸಿಕೊಂಡರೆ, ನಿತೀಶ ಅವರು ಇತ್ತೀಚಿನ ಚುನಾವಣೆಗಳಲ್ಲಿ ಪ್ರಮುಖ ಅಂಶವಾಗಿ ಹೊರಹೊಮ್ಮಿರುವ ಅತಿ ಹಿಂದುಳಿದ ವರ್ಗದ (EBC) ಬೆಂಬಲವನ್ನು ಗಟ್ಟಿಗೊಳಿಸಿದರು. ರಾಷ್ಟ್ರೀಯ ಲೋಕ ಮೋರ್ಚಾದ ಕುಶ್ವಾಹರು, ಎಲ್‌ಜೆಪಿಯ ಚಿರಾಗ್‌ ಪಾಸ್ವಾನ್‌ ಮತ್ತು ಹಿಂದೂಸ್ತಾನಿ ಆವಾಮ್ ಮೋರ್ಚಾದ ಜಿತನ್‌ ರಾಮ್‌ ಮಾಂಝಿ ಅವರು ದಲಿತರ ಬೆಂಬಲವು ಎನ್‌ಡಿಎಗೆ ಇನ್ನಷ್ಟು ಮತಗಳನ್ನು ತಂದುಕೊಟ್ಟವು.
2020ರ ಚುನಾವಣೆಗಳಲ್ಲಿ ಸಣ್ಣ ಅಂತರದಲ್ಲಿ ಅಧಿಕಾರ ರಚಿಸಿದ್ದ ಎನ್‌ಡಿಎಯ ಈ ಪ್ರಬಲ ಗೆಲುವಿನ ಹಿಂದೆ ಇಬಿಸಿ (EBC)ಗಳು ಪ್ರಮುಖ ಪಾತ್ರ ವಹಿಸಿದ್ದಾರೆ. ನಿತೀಶ ಸರ್ಕಾರ ಬಿಡುಗಡೆ ಮಾಡಿದ ಜಾತಿ ಸಮೀಕ್ಷೆಯ ದತ್ತಾಂಶಗಳ ಪ್ರಕಾರ, ಇಬಿಸಿಗಳು ಒಟ್ಟು ಜನಸಂಖ್ಯೆಯ ಶೇ. 36ರಷ್ಟಿದ್ದಾರೆ. ಕುರ್ಮಿ ಸಮುದಾಯಕ್ಕೆ (ಸುಮಾರು 3%) ಸೇರಿದ ನಿತೀಶ ಮತ್ತು ಎನ್‌ಡಿಎಯು, ಇಬಿಸಿಗಳನ್ನು ಗುರಿಯಾಗಿಸಿಕೊಂಡ ಕಲ್ಯಾಣ ಕ್ರಮಗಳ ಮೂಲಕ ಈ ಮತಬ್ಯಾಂಕ್ ಅನ್ನು ಕ್ರೋಢೀಕರಿಸಿದ್ದಾರೆ.

ಜೆಡಿ (ಯು)ಗೆ ಭರ್ಜರಿ ತಿರುವು
2020ರ ಚುನಾವಣೆಗಳಲ್ಲಿ ಇಬಿಸಿ ಮತ್ತು ಎಸ್‌ಸಿ ಜನಸಂಖ್ಯೆ ಗಣನೀಯವಾಗಿರುವ ಮೂರಕ್ಕೂ ಹೆಚ್ಚು ಸ್ಥಾನಗಳಲ್ಲಿ ಸೋತಿದ್ದ ಜೆಡಿ (ಯು)ಗೆ ಇದು ದೊಡ್ಡ ತಿರುವು. 2020ರಲ್ಲಿ 115 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಜೆಡಿ (ಯು) ಕೇವಲ 43ರಲ್ಲಿ ಗೆದ್ದಿತ್ತು. ಈ ಬಾರಿ ಅವರ ಗೆಲುವಿನ ಸಂಖ್ಯೆ ೮೬ರಲ್ಲಿ ಜಯಗಳಿಸಿದೆ.
ಮಗಧ ಮತ್ತು ಶಾಹಬಾದ್‌ನಂತಹ ಪ್ರದೇಶಗಳಲ್ಲಿ, ಭೋಜಪುರಿ ನಟ ಪವನ್ ಸಿಂಗ್ ಅವರನ್ನು ಪ್ರಚಾರಕ್ಕೆ ಕಳುಹಿಸಿ, ಉಪೇಂದ್ರ ಕುಶ್ವಾಹಾ ಅವರ ಪ್ರಭಾವದೊಂದಿಗೆ ರಜಪೂತ್ ಮತ್ತು ಕುಶ್ವಾಹಾ ಮತಗಳನ್ನು ಕ್ರೋಢೀಕರಿಸುವಲ್ಲಿ ಬಿಜೆಪಿ ಯಶಸ್ವಿಯಾಯಿತು.

ಮಹಿಳಾ ಮತದಾರರ ಶಕ್ತಿ
ಕಳೆದ ಐದು ವರ್ಷಗಳಿಂದ, ಮಹಿಳೆಯರು ಬಿಹಾರದಲ್ಲಿ ಹೊಸ ಮತಬ್ಯಾಂಕ್ ಆಗಿ ಹೊರಹೊಮ್ಮಿದ್ದಾರೆ. ಅವರು ಕೇವಲ ಜಾತಿ-ಧರ್ಮಗಳನ್ನು ಮೀರಿ ಮತ ಚಲಾಯಿಸುತ್ತಿದ್ದಾರೆ. ಅದರಲ್ಲಿಯೂ ಎನ್‌ಡಿಎ ಅಧಿಕಾರಕ್ಕೆ ಬರುವಲ್ಲಿ ಇವರ ಮತಗಳು ನಿರ್ಣಾಯಕವಾಗಿದೆ.
2010ರಿಂದ ಬಿಹಾರದಲ್ಲಿ ಮಹಿಳಾ ಮತದಾನದ ಪ್ರಮಾಣ ನಿರಂತರವಾಗಿ ಹೆಚ್ಚುತ್ತಿದೆ. ಈ ಸಲದ ಚುನಾವಣೆಯಲ್ಲಿ ಮಹಿಳಾ ಮತದಾರರ ಮತದಾನ ಪ್ರಮಾಣ ಪುರುಷರಿಗಿಂತ ಶೇ. 10ರಷ್ಟು ಹೆಚ್ಚಿತ್ತು. ಈ ಫಲಿತಾಂಶಗಳು ನಿತೀಶ್ ಅವರಿಗೆ ಮಹಿಳೆಯರು ಅತಿದೊಡ್ಡ ಬೆಂಬಲಿಗರಾಗಿ ಮುಂದುವರಿದಿರುವುದನ್ನು ತೋರಿಸಿದೆ.
2005ರಲ್ಲಿ ನಿತೀಶ್ ರಾಜ್ಯದ ಅಧಿಕಾರ ವಹಿಸಿಕೊಂಡಾಗಿನಿಂದ, ಶಾಲಾ ಬಾಲಕಿಯರಿಗೆ ಉಚಿತ ಸೈಕಲ್ ವಿತರಣೆಯಿಂದ ಹಿಡಿದು ಮದ್ಯಪಾನ ನಿಷೇಧ ಕಾಯ್ದೆಯಂತಹ ಹಲವಾರು ನೀತಿಗಳನ್ನು ಪರಿಚಯಿಸುವ ಮೂಲಕ ಅವರು ಮಹಿಳೆಯರನ್ನು ಪ್ರತ್ಯೇಕ ಮತಬ್ಯಾಂಕ್ ಆಗಿ ರೂಪಿಸಿದ್ದಾರೆ.
ಈ ಬಾರಿ, ಮಹಿಳಾ ಉದ್ಯಮಿಗಳಿಗೆ ₹10,000 ನೀಡುವ ‘ದಶಹಜಾರಿ ಯೋಜನೆ’ ಅಥವಾ ಮಹಿಳಾ ರೋಜಗಾರ್ ಯೋಜನೆಯು ಅವರನ್ನು ಎನ್‌ಡಿಎ ಪರವಾಗಿ ಮತ ಚಲಾಯಿಸುವಂತೆ ಮಾಡಿದೆ. ಇದಕ್ಕೆ ಪೂರಕವಾಗಿ ‘ಲಖಪತಿ ದೀದಿ’ ಕಾರ್ಯಕ್ರಮವು ಮಹಿಳಾ ಉದ್ಯಮಶೀಲತೆಯನ್ನು ಬೆಳೆಸಲು ನೆರವಾಯಿತು.
ಬಿಹಾರದ ರಾಜಕೀಯ ನಿರೂಪಣೆಯಲ್ಲಿ ‘ಎಂ’ ಎನ್ನುವುದು ಇನ್ನು ಮುಂದೆ ಮುಸ್ಲಿಮರು ಅಥವಾ ಧರ್ಮದ ಬಗ್ಗೆ ಅಲ್ಲ, ಅದು ಮಹಿಳಾ ಶಕ್ತಿಯ ಬಗ್ಗೆ ಎಂದು ಈ ಚುನಾವಣೆ ಹೊಸ ರಾಜಕೀಯ ವ್ಯಾಖ್ಯಾನ ಮಾಡಿದಂತಾಗಿದೆ.

ಪ್ರಮುಖ ಸುದ್ದಿ :-   ವಿಡಿಯೊ | ಸಿಜೆಪಿ ಸಂಸ್ಥಾಪಕ ಅಭಿಜೀತ ದೀಪ್ಕೆ ಮುಖಕ್ಕೆ ಶಾಯಿ ಎಸೆದ ಮಹಿಳೆ ; ಹೈಡ್ರಾಮಾಕ್ಕೆ ಸಾಕ್ಷಿಯಾದ ಜಂತರ್ ಮಂತರ್‌ ಪ್ರತಿಭಟನೆ

‘ಸುಶಾಸನ ಬಾಬು’  ಅಂಶ
ಎನ್‌ಡಿಎ ಗೆಲುವಿಗೆ ಶಕ್ತಿ ತುಂಬಿದ ಮೂರನೇ ಅಂಶವೆಂದರೆ ನಿತೀಶಕುಮಾರ ಅವರೇ. ಅವರ ‘ಸುಶಾಸನ ಬಾಬು’ (ಉತ್ತಮ ಆಡಳಿತಗಾರ) ಮತ್ತು ಭ್ರಷ್ಟಾಚಾರ ರಹಿತ ವರ್ಚಸ್ಸು ಮೈತ್ರಿಕೂಟದ ಅತಿದೊಡ್ಡ ಆಸ್ತಿಯಾಯಿತು.
74ರ ವಯಸ್ಸಿನ ನಿತೀಶ ಅವರು ಬಿಹಾರದ ರಾಜಕೀಯದಲ್ಲಿ ಎಂದಿಗಿಂತಲೂ ಹೆಚ್ಚು ಪ್ರಸ್ತುತರಾಗಿದ್ದಾರೆ ಮತ್ತು ಎನ್‌ಡಿಎ ಪ್ರಚಾರದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿದ್ದರು. ವರದಿಯ ಪ್ರಕಾರ, ಜೆಡಿ (ಯು) ಮುಖ್ಯಸ್ಥರು 84 ರ‍್ಯಾಲಿಗಳಲ್ಲಿ ಭಾಗವಹಿಸಿದ್ದರು, ಇದು 39 ವರ್ಷದ ತೇಜಸ್ವಿ ಯಾದವ್‌ಗಿಂತ ಕೇವಲ ಒಂದು ಕಡಿಮೆಯಷ್ಟೆ.
ತೇಜಸ್ವಿ ಅವರು ನಿತೀಶ ಅವರ ಆರೋಗ್ಯದ ಬಗ್ಗೆ ಟೀಕಿಸಿ, ಅವರ ಸರ್ಕಾರವನ್ನು “ವಯಸ್ಸಾದ, ದುರ್ಬಲ ಎಂದು ಕರೆದ ತಂತ್ರ ಮತದಾರರ ಮೇಲೆ ಪರಿಣಾಮ ಬೀರಲಿಲ್ಲ. ರಾಜ್ಯಾದ್ಯಂತ ಪ್ರಚಾರ ನಡೆಸಿದ ನಿತೀಶ ಅವರ ಪ್ರಯತ್ನಗಳು ಮತದಾರರಿಗೆ ಮನದಟ್ಟಾದವು.
ಇದಕ್ಕಿಂತ ಮುಖ್ಯವಾಗಿ, ಎಲ್ಲ ಗೃಹಬಳಕೆದಾರರಿಗೆ 125 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡುವ ಯೋಜನೆ ಮತ್ತು ಹಿರಿಯ ನಾಗರಿಕರ ಪಿಂಚಣಿಯನ್ನು ₹400 ರಿಂದ ₹1,100ಕ್ಕೆ ಹೆಚ್ಚಿಸಿದ್ದು ಗೇಮ್ ಚೇಂಜರ್ ಆಯಿತು. ಈ ಕ್ರಮಗಳು ನಿತೀಶಕುಮಾರ ಅವರನ್ನು ಬಿಹಾರದ ‘ಸುಶಾಸನ ಬಾಬು’ ಎಂದು ಜನರ ಮನಸ್ಸಿನಲ್ಲಿ ಮತ್ತೆ ಗಟ್ಟಿಗೊಳಿಸಿದವು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement