ಬಿಹಾರ ಚುನಾವಣೆ ಸೋಲಿನ ಬೆನ್ನಲ್ಲೇ ರಾಜಕೀಯಕ್ಕೆ ಲಾಲು ಪುತ್ರಿ ಗುಡ್‌ ಬೈ : ಕುಟುಂಬದ ಜೊತೆ ಸಂಬಂಧ ಕಡಿದುಕೊಳ್ಳುವುದಾಗಿ ಘೋಷಣೆ..!

 ಪಾಟ್ನಾ : ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಹೀನಾಯ ಸೋಲು ಅನುಭವಿಸಿದ ಒಂದು ದಿನದ ನಂತರ, ಪಕ್ಷದ ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ ಅವರು ರಾಜಕೀಯಕ್ಕೆ ವಿದಾಯ ಹೇಳಿದ್ದಾರೆ ಮತ್ತು ತಮ್ಮ ಕುಟುಂಬದಿಂದ ದೂರವಾಗುವುದಾಗಿ ಪ್ರಕಟಿಸಿದ್ದಾರೆ.
ಎಕ್ಸ್ ಪೋಸ್ಟ್‌ನಲ್ಲಿ, ತೇಜಸ್ವಿ ಯಾದವ್ ಅವರ ಆಪ್ತರಾಗಿರುವ ಆರ್‌ಜೆಡಿ ಹಿರಿಯ ನಾಯಕ ಸಂಜಯ ಯಾದವ್ ಅವರ ಸೂಚನೆಯ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆಚಾರ್ಯ ಸೂಚಿಸಿದ್ದಾರೆ. “ನಾನು ರಾಜಕೀಯದಿಂದ ದೂರವಾಗುತ್ತಿದ್ದೇನೆ ಮತ್ತು ನನ್ನ ಕುಟುಂಬವನ್ನು ತೊರೆಯುತ್ತಿದ್ದೇನೆ… ಸಂಜಯ ಯಾದವ್ ಮತ್ತು ರಮೀಜ್ ನನಗೆ ಇದನ್ನೇ ಮಾಡಲು ಹೇಳಿದ್ದರು… ಮತ್ತು ನಾನು ಎಲ್ಲಾ ಹೊಣೆಯನ್ನು (ತಪ್ಪುಗಳ ಹೊಣೆ) ನನ್ನ ಮೇಲೆ ತೆಗೆದುಕೊಳ್ಳುತ್ತಿದ್ದೇನೆ” ಎಂದು ರೋಹಿಣಿ ಆಚಾರ್ಯ ಬರೆದಿದ್ದಾರೆ.
2022 ರಲ್ಲಿ ಲಾಲು ಯಾದವ್ ಅವರಿಗೆ ತಮ್ಮ ಒಂದು ಮೂತ್ರಪಿಂಡವನ್ನು ದಾನ ಮಾಡಿದ್ದ ರೋಹಿಣಿ ಆಚಾರ್ಯ, ಯಾವುದೋ ಒಂದು ವಿಷಯಕ್ಕೆ ತಾವೇ ಹೊಣೆ ಹೊರುತ್ತಿರುವುದಾಗಿ ಪೋಸ್ಟ್‌ನಲ್ಲಿ ಹೇಳಿದ್ದಾರೆ. ಇದು ಬಿಹಾರ ಚುನಾವಣೆಯ ಸೋಲಿಗೆ ಸಂಬಂಧಿಸಿದೆಯೇ ಅಥವಾ ಬೇರೆ ಯಾವುದೇ ವಿಷಯಕ್ಕೆ ಸಂಬಂಧಿಸಿದೆಯೇ ಎಂಬುದು ಸ್ಪಷ್ಟವಾಗಿಲ್ಲ.

ಮತ್ತಷ್ಟು ಬಿಕ್ಕಟ್ಟು
ಈ ಹೇಳಿಕೆಯು ಈಗಾಗಲೇ ಪಕ್ಷದ ಒಳಗೆ ಮತ್ತು ಲಾಲು ಕುಟುಂಬದಲ್ಲಿನ ಬಿಕ್ಕಟ್ಟನ್ನು ಇನ್ನಷ್ಟು ಹೆಚ್ಚಿಸಿದೆ. ಇತ್ತೀಚೆಗೆ ಲಾಲು ಯಾದವ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು.ತೇಜ್ ಪ್ರತಾಪ್ ಅವರು ನಂತರ ತಮ್ಮದೇ ಆದ ‘ಜನಶಕ್ತಿ ಜನತಾ ದಳ’ ಎಂಬ ಪಕ್ಷವನ್ನು ಸ್ಥಾಪಿಸಿ, ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದ್ದರು. ಅವರು ತೇಜಸ್ವಿ ಯಾದವ್ ವಿರುದ್ಧ ರಘೋಪುರ ವಿಧಾನಸಭಾ ಕ್ಷೇತ್ರದಲ್ಲೂ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರು. ತೇಜ್ ಪ್ರತಾಪ್ ಸ್ಪರ್ಧಿಸಿದ್ದ ಮಹುವಾ ಸೇರಿದಂತೆ ಅವರ ಪಕ್ಷ ಒಂದೇ ಒಂದು ಸ್ಥಾನವನ್ನೂ ಗೆಲ್ಲಲು ಸಾಧ್ಯವಾಗಲಿಲ್ಲ.
ತೇಜ್ ಪ್ರತಾಪ್ ಯಾದವ್ ಅವರ ಉಚ್ಚಾಟನೆಯಿಂದ ರೋಹಿಣಿ ಆಚಾರ್ಯ ಅವರು ಅಸಂತುಷ್ಟರಾಗಿದ್ದರು ಎನ್ನಲಾಗಿದೆ. ಬಿಹಾರ ವಿಧಾನಸಭಾ ಚುನಾವಣೆಯ ಆರಂಭಕ್ಕೂ ಮುನ್ನವೇ ಅವರು ಪಕ್ಷದ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು, ಆದರೆ ನಂತರ ರಾಜಿ ಮಾಡಿಕೊಳ್ಳುವಂತಹ ಸಂದೇಶಗಳನ್ನು ಸಹ ಪೋಸ್ಟ್ ಮಾಡಿದ್ದರು.

ಪ್ರಮುಖ ಸುದ್ದಿ :-   ಉದ್ಧವ್‌ಗೆ ಭಾರಿ ಹಿನ್ನಡೆ ; ಶಿಂಧೆ ಬಣದ ಜೊತೆ ಶಿವಸೇನೆ(ಯುಬಿಟಿ) 6 ಸಂಸದರ ವಿಲೀನಕ್ಕೆ ಲೋಕಸಭೆ ಸ್ಪೀಕರ್ ಅನುಮೋದನೆ

ಈ ಹಿಂದೆ ಸೆಪ್ಟೆಂಬರ್ ಆಸುಪಾಸಿನಲ್ಲಿ ಆಚಾರ್ಯ ಅವರು ಸಾಮಾಜಿಕ ಮಾಧ್ಯಮದಲ್ಲಿ ಎಲ್ಲಾ ರಾಜಕೀಯ ನಾಯಕರು ಮತ್ತು ಕುಟುಂಬ ಸದಸ್ಯರನ್ನು ಅನ್‌ಫಾಲೋ ಮಾಡಿದ್ದರು. ನಂತರ ತಮ್ಮ ಬಗ್ಗೆ ತಪ್ಪು ಮಾಹಿತಿ ಹರಡಲಾಗುತ್ತಿದೆ ಎಂದು ಆರೋಪಿಸಿ ಪೋಸ್ಟ್ ಮಾಡಿದ್ದರು.
“ಕೆಟ್ಟ ಆಲೋಚನೆಗಳನ್ನು ಹೊಂದಿರುವವರಿಗೆ ಮತ್ತು ಅಂತಹವರನ್ನು ಪ್ರೋತ್ಸಾಹಿಸುವವರಿಗೆ ನಾನು ಬಹಿರಂಗ ಸವಾಲು ಹಾಕುತ್ತೇನೆ. ನನಗಾಗಿ ಅಥವಾ ಬೇರೆಯವರಿಗಾಗಿ ನಾನು ಎಂದಾದರೂ ಯಾರನ್ನಾದರೂ ಏನಾದರೂ ಕೇಳಿದ್ದೇನೆ ಅಥವಾ ನನ್ನ ಪೂಜ್ಯ ತಂದೆಗೆ ಮೂತ್ರಪಿಂಡ ದಾನ ಮಾಡಿದ ವಿಷಯ ಸುಳ್ಳು ಎಂದು ಯಾರಾದರೂ ಸಾಬೀತುಪಡಿಸಿದರೆ, ನಾನು ರಾಜಕೀಯ ಮತ್ತು ಸಾರ್ವಜನಿಕ ಜೀವನದಿಂದ ಹಿಂದೆ ಸರಿಯುತ್ತೇನೆ” ಎಂದು ಅವರು ಎಕ್ಸ್‌ನಲ್ಲಿ ಬರೆದಿದ್ದರು.

ಆದರೆ, ನವೆಂಬರ್ 9 ರಂದು, ಎರಡು ಹಂತದ ಮತದಾನದ ಮೊದಲು, ರೋಹಿಣಿ ಆಚಾರ್ಯ ಅವರು ತಮ್ಮ ಸಹೋದರ ತೇಜಸ್ವಿ ಅವರಿಗೆ ಜನ್ಮದಿನದ ಶುಭಾಶಯ ಕೋರಿ, ಅವರ ನಾಯಕತ್ವವನ್ನು ಹೊಗಳಿದ್ದರು. “ವಯಸ್ಸಿನಲ್ಲಿ ಕಿರಿಯ, ಆದರೆ ಪ್ರಾಮಾಣಿಕ ಹೃದಯ ಮತ್ತು ಮಾತಿಗೆ ತಪ್ಪದ ವ್ಯಕ್ತಿ- ನಮ್ಮ ಕರ್ತವ್ಯನಿಷ್ಠ ಸಹೋದರ ತೇಜಸ್ವಿ. ನಿಮ್ಮ ಎಲ್ಲಾ ಕನಸುಗಳು ನನಸಾಗಲಿ, ನೀವು ಬಿಹಾರದ ಯುವಜನತೆಯ ಕನಸುಗಳನ್ನು – ಬಿಹಾರದ ಎಲ್ಲಾ ಜನರೊಂದಿಗೆ – ನನಸಾಗಿಸಿ ಮತ್ತು ನಿಮ್ಮ ಜೀವನವು ಯಾವಾಗಲೂ ಸಂತೋಷದಿಂದ ತುಂಬಿರಲಿ” ಎಂದು ಅವರು ಪೋಸ್ಟ್ ಮಾಡಿದ್ದರು. ಅವರ ಇತ್ತೀಚಿನ ಇತರ ಪೋಸ್ಟ್‌ಗಳು ಸಹ ಪಕ್ಷವನ್ನು ಬೆಂಬಲಿಸುವಂತಿದ್ದವು.

ಚುನಾವಣಾ ಫಲಿತಾಂಶ
243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಆರ್‌ಜೆಡಿ ಕೇವಲ 25 ಸ್ಥಾನಗಳನ್ನು ಗೆಲ್ಲುವಲ್ಲಿ ಮಾತ್ರ ಯಶಸ್ವಿಯಾಗಿದೆ ಮತ್ತು ವಿಪಕ್ಷಗಳ ಮೈತ್ರಿಕೂಟ ಮಹಾಘಟಬಂಧನ ಒಟ್ಟಾರೆಯಾಗಿ ಕೇವಲ 35 ಸ್ಥಾನಗಳಿಗೆ ಸೀಮಿತವಾಯಿತು. ಮತ್ತೊಂದೆಡೆ, ಎನ್‌ಡಿಎ 202 ಕ್ಷೇತ್ರಗಳಲ್ಲಿ ಜಯಗಳಿಸಿದೆ. ಆಡಳಿತಾರೂಢ ಒಕ್ಕೂಟದಲ್ಲಿ ಬಿಜೆಪಿ 89 ಸ್ಥಾನಗಳೊಂದಿಗೆ ಮುನ್ನಡೆ ಸಾಧಿಸಿದರೆ, ಜೆಡಿ(ಯು) 85 ಸ್ಥಾನಗಳನ್ನು ಗಳಿಸಿತು. ಎಲ್‌ಜೆಪಿ(ಆರ್‌ವಿ) 19, ಎಚ್‌ಎಎಂ 5, ಆರ್‌ಎಲ್‌ಎಂ 4 ಮತ್ತು ಇತರ ಸಣ್ಣ ಪಾಲುದಾರರ ಪ್ರಬಲ ಪ್ರದರ್ಶನವು ಎನ್‌ಡಿಎ ಪ್ರಾಬಲ್ಯವನ್ನು ಗಟ್ಟಿಗೊಳಿಸಿತು. ಮಹಾಘಟಬಂಧನದಲ್ಲಿ, ಆರ್‌ಜೆಡಿ ಕೇವಲ 25, ಕಾಂಗ್ರೆಸ್ 6 ಮತ್ತು ಎಡ ಪಕ್ಷಗಳು ಒಟ್ಟಾಗಿ ಕೇವಲ 3 ಸ್ಥಾನಗಳನ್ನು ಗಳಿಸಲು ಸಾಧ್ಯವಾಯಿತು. ಬಿಎಸ್‌ಪಿ ಮತ್ತು ಐಐಪಿ ತಲಾ ಒಂದು ಸ್ಥಾನ ಪಡೆದಿವೆ.

ಪ್ರಮುಖ ಸುದ್ದಿ :-   ಮೊದಲು ಹಾಲಿನಲ್ಲಿ ನಿದ್ದೆ ಮಾತ್ರೆ...ನಂತರ ಹಾಸಿಗೆ ಮೇಲೆ ವಿಷದ ಹಾವು ! ಗಂಡನ ಕೊಲೆಗೆ ಪತ್ನಿಯ ಭಯಾನಕ ಸಂಚು...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement