ನವದೆಹಲಿ: ಕೆಂಪು ಕೋಟೆ ಕಾರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳ (NIA) ಮಹತ್ವದ ಯಶಸ್ಸು ಸಾಧಿಸಿದೆ. ಈ ಭಯಾನಕ ದಾಳಿಯ ಸೂತ್ರಧಾರನೊಂದಿಗೆ ಸಂಚು ರೂಪಿಸಿದ ಕಾಶ್ಮೀರಿ ನಿವಾಸಿಯೊಬ್ಬನನ್ನು ಎನ್ಐಎ (NIA) ಬಂಧಿಸಿದೆ. ಬಂಧಿತ ಆರೋಪಿ ಅಮೀರ್ ರಶೀದ್ ಅಲಿ ಯನ್ನು, ಬಹು-ರಾಜ್ಯಗಳ ಬೃಹತ್ ಶೋಧ ಕಾರ್ಯಾಚರಣೆಯ ನಂತರ ದೆಹಲಿಯಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಈ ದಾಳಿಯಲ್ಲಿ ೧೩ ಜನರು ಮೃತಪಟ್ಟು, ಸುಮಾರು 32 ಜನ ಗಾಯಗೊಂಡಿದ್ದರು. ಎನ್ಐಎ ತನಿಖೆಯ ಪ್ರಕಾರ, ಜಮ್ಮು ಮತ್ತು ಕಾಶ್ಮೀರದ ಪಾಂಪೋರ್ನ ಸಂಭೋರಾ ನಿವಾಸಿ ಅಮೀರ್, ಸ್ಫೋಟಕ ತುಂಬಿದ ವಾಹನದ ಮೂಲಕ ಐಇಡಿ (IED) ದಾಳಿ ನಡೆಸಲು ಆತ್ಮಹತ್ಯಾ ಬಾಂಬರ್ ಉಮರ್ ಉನ್ ನಬಿ ಜೊತೆ ಸಂಯೋಜನೆ ನಡೆಸಿದ್ದ. ಫರಿದಾಬಾದ್ನ ಅಲ್-ಫಲಾಹ್ ವಿಶ್ವವಿದ್ಯಾನಿಲಯದ ಜನರಲ್ ಮೆಡಿಸಿನ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದ ಉಮರ್ ನಬಿ, ಸ್ಫೋಟಕ ತುಂಬಿದ ಕಾರಿನ ಮೃತ ಚಾಲಕ ಎಂದು ವಿಧಿವಿಜ್ಞಾನ (forensic) ಪರೀಕ್ಷೆ ಮೂಲಕ ದೃಢಪಟ್ಟಿದೆ.
ನಬಿಗೆ ಸೇರಿದ ಮತ್ತೊಂದು ವಾಹನವನ್ನು ಎನ್ಐಎ ವಶಪಡಿಸಿಕೊಂಡಿದ್ದು, ಹೆಚ್ಚುವರಿ ಸಾಕ್ಷ್ಯಗಳಿಗಾಗಿ ಪರಿಶೀಲಿಸಲಾಗುತ್ತಿದೆ. ಈವರೆಗೆ, ತನಿಖಾಧಿಕಾರಿಗಳು ಗಾಯಗೊಂಡ ಹಲವು ಸಂತ್ರಸ್ತರನ್ನು ಒಳಗೊಂಡಂತೆ 73 ಸಾಕ್ಷಿಗಳನ್ನು ಪರಿಶೀಲಿಸಿದ್ದಾರೆ.
‘ವೈಟ್ ಕಾಲರ್’ ಭಯೋತ್ಪಾದಕ ಜಾಲ ಬಯಲು
ಸಮಾನಾಂತರ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ವೈದ್ಯರು ಸೇರಿದಂತೆ ಉನ್ನತ ಶಿಕ್ಷಣ ಪಡೆದ ವ್ಯಕ್ತಿಗಳ ನೇತೃತ್ವದಲ್ಲಿ ನಡೆದ ಅತ್ಯಾಧುನಿಕ “ವೈಟ್ ಕಾಲರ್” ಭಯೋತ್ಪಾದಕ ಜಾಲವನ್ನು ಬಯಲಿಗೆಳೆದಿದ್ದಾರೆ. ಕಳೆದ ವರ್ಷದಿಂದ ಈ ಜಾಲವು ಆತ್ಮಹತ್ಯಾ ಬಾಂಬರ್ಗಾಗಿ ಹುಡುಕಾಟ ನಡೆಸಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಪಿತೂರಿಯಲ್ಲಿ ಡಾ. ಉಮರ್ ನಬಿ ಕೇಂದ್ರಬಿಂದುವಾಗಿದ್ದ.
“ತೀವ್ರ ಮೂಲಭೂತವಾದಿ” (deeply radicalised) ಎಂದು ವಿವರಿಸಲಾದ ಡಾ. ಉಮರ್, ಹೆಚ್ಚಿನ ಸಾವು-ನೋವುಗಳನ್ನುಂಟು ಮಾಡುವ ದಾಳಿಗಾಗಿ ಆಕ್ರಮಣಕಾರಿಯಾಗಿ ಪ್ರಯತ್ನಿಸುತ್ತಿದ್ದ. ನವೆಂಬರ್ 10 ರ ಕೆಂಪು ಕೋಟೆ ಬಾಂಬ್ ದಾಳಿ ಹಾಗೂ ಡಿಸೆಂಬರ್ 6 ರಂದು ನಡೆಸಲು ಯೋಜಿಸಿದ್ದ ದಾಳಿ ಎರಡರ ಹಿಂದೆಯೂ ಇವನೇ ಮುಖ್ಯ ಸೂತ್ರಧಾರ ಎಂದು ಪೊಲೀಸರು ಶಂಕಿಸಿದ್ದಾರೆ.
ಬಂಧನಗಳಿಂದ ವ್ಯಾಪಕ ಜಾಲದ ಸುಳಿವು
ಸಹ-ಆರೋಪಿಗಳಾದ ಡಾ. ಆದಿಲ್ ರಾಥರ್ ಮತ್ತು ಡಾ. ಮುಜಾಫರ್ ಗಾನಾಯಿ ವಿಚಾರಣೆಯು ಪೊಲೀಸರನ್ನು ಖಾಜೀಗುಂಡ್ಗೆ ಕರೆದೊಯ್ದಿತು, ಅಲ್ಲಿ ರಾಜಕೀಯ ವಿಜ್ಞಾನ ಪದವೀಧರ ಜಸೀರ್ ಅಲಿಯಾಸ್ ಡ್ಯಾನಿಷ್ನನ್ನು ವಶಕ್ಕೆ ಪಡೆಯಲಾಯಿತು. ಆತನ ಬಂಧನವು ವ್ಯಾಪಕವಾದ ಜೈಶ್-ಎ-ಮೊಹಮ್ಮದ್ (JeM) ಸಂಬಂಧಿತ ಜಾಲವನ್ನು ಬಹಿರಂಗಪಡಿಸಲು ಸಹಾಯ ಮಾಡಿತು.
ಕಳೆದ ಅಕ್ಟೋಬರ್ನಲ್ಲಿ ಕುಲ್ಗಾಮ್ ಮಸೀದಿಯಲ್ಲಿ “ವೈದ್ಯರ ಜಾಲವನ್ನು” ಭೇಟಿಯಾದ ಡ್ಯಾನಿಷ್ ನನ್ನು ನಂತರ ಅಲ್-ಫಲಾಹ್ ವಿಶ್ವವಿದ್ಯಾಲಯದ ಬಾಡಿಗೆ ಕೋಣೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಆತನನ್ನು ಆತ್ಮಹತ್ಯಾ ಬಾಂಬರ್ ಆಗಿ ಸಿದ್ಧಪಡಿಸಲಾಗುತ್ತಿತ್ತು ಎಂದು ಆತ ಬಹಿರಂಗಪಡಿಸಿದ್ದಾನೆ. ಆರ್ಥಿಕ ಮತ್ತು ಧಾರ್ಮಿಕ ಕಾರಣಗಳಿಂದಾಗಿ ಆತ ಹಿಂದೆ ಸರಿದ ನಂತರ ಏಪ್ರಿಲ್ನಲ್ಲಿ ಆ ಯೋಜನೆ ವಿಫಲಗೊಂಡಿತು.
ಟರ್ಕಿ ಭೇಟಿಯಿಂದ ಮೂಲಭೂತವಾದಿ ಪ್ರೇರಣೆ
ಡಾ. ಉಮರ್ ಮತ್ತು ಸಹ-ಆರೋಪಿ ಡಾ. ಮುಜಮ್ಮಿಲ್ ಅಹ್ಮದ್ ಘನಿ 2021 ರಲ್ಲಿ ಟರ್ಕಿಗೆ ಭೇಟಿ ನೀಡಿದಾಗ ಮೂಲಭೂತವಾದಿಗಳಾಗಿ ಬದಲಾದರು ಮತ್ತು ಅಲ್ಲಿ ಅವರು ಜೆಇಎಂ (JeM) ಕಾರ್ಯಕರ್ತರನ್ನು ಭೇಟಿಯಾಗಿದ್ದಾರೆ ಎಂದು ಸಾಕ್ಷ್ಯಗಳು ಸೂಚಿಸುತ್ತವೆ. ಹಿಂದಿರುಗಿದ ನಂತರ, ಅವರು ಸುಮಾರು 360 ಕೆಜಿ ಸ್ಫೋಟಕಗಳನ್ನು ಸಂಗ್ರಹಿಸಿದ್ದರು, ಅದರಲ್ಲಿ ಹೆಚ್ಚಿನವು ವಿಶ್ವವಿದ್ಯಾಲಯದ ಕ್ಯಾಂಪಸ್ ಬಳಿ ಅಡಗಿಸಿಡಲಾಗಿತ್ತು. ಡಾ. ಘನಿ ಬಂಧನದ ಬಳಿಕ ಸ್ಫೋಟಕಗಳನ್ನು ವಶಪಡಿಸಿಕೊಂಡ ನಂತರ ಯೋಜಿತ ಡಿಸೆಂಬರ್ 6 ರ ದಾಳಿ ವಿಫಲಗೊಂಡಿತ್ತು.
ಅಂತಾರಾಜ್ಯ ತನಿಖೆ ಮುಂದುವರಿಕೆ
ಬಾನೋರಾ, ನೌಗಾಮ್ನಲ್ಲಿ ಜೆಇಎಂ (JeM) ಪೋಸ್ಟರ್ಗಳು ಕಾಣಿಸಿಕೊಂಡ ನಂತರ ಅಕ್ಟೋಬರ್ನಲ್ಲಿ ಭಯೋತ್ಪಾದಕ ಜಾಲವು ಮೊದಲು ಬೆಳಕಿಗೆ ಬಂದಿತ್ತು. ಸಿಸಿಟಿವಿ ದೃಶ್ಯಾವಳಿಗಳಿಂದಾಗಿ ಮಾಜಿ ಅರೆವೈದ್ಯ ಮತ್ತು ಮೌಲ್ವಿ ಇರ್ಫಾನ್ ಅಹ್ಮದ್ ಸೇರಿದಂತೆ ಹಲವರ ಬಂಧನವಾಗಿದೆ. ಇರ್ಫಾನ್ ಅಹ್ಮದ್ ವೈದ್ಯರಿಗೆ ಮೂಲಭೂತವಾದಿ ಪ್ರೇರಣೆ ನೀಡಿದ ಆರೋಪಿಯಾಗಿದ್ದಾನೆ.


ನಿಮ್ಮ ಕಾಮೆಂಟ್ ಬರೆಯಿರಿ