ದಿತ್ವಾ ಚಂಡಮಾರುತ : ಕರ್ನಾಟಕದಲ್ಲಿಯೂ ಭಾರಿ ಮಳೆ ಸಾಧ್ಯತೆ

ನವದೆಹಲಿ: ಶ್ರೀಲಂಕಾದ ಕರಾವಳಿ ಮತ್ತು ಅದರ ಪಕ್ಕದ ನೈಋತ್ಯ ಬಂಗಾಳಕೊಲ್ಲಿಯಲ್ಲಿ ಪ್ರಸ್ತುತ ಸುಳಿಯುತ್ತಿರುವ ‘ದಿತ್ವಾ’ ಚಂಡಮಾರುತವು (Cyclonic Storm Ditwah) ಉತ್ತರ-ವಾಯುವ್ಯದ ಕಡೆಗೆ ಸಾಗುತ್ತಿದ್ದು, ನವೆಂಬರ್ 30ರ ಮುಂಜಾನೆಯ ವೇಳೆಗೆ ತಮಿಳುನಾಡು ಮತ್ತು ದಕ್ಷಿಣ ಆಂಧ್ರಪ್ರದೇಶದ ಕರಾವಳಿ ತೀರಕ್ಕೆ ಮತ್ತಷ್ಟು ಸಮೀಪಿಸುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಇದರಿಂದಾಗಿ ಕರ್ನಾಟಕದಲ್ಲಿಯೂ ನಾಲ್ಕೈದು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ.
ಸೆನ್ಯಾರ್ ಚಂಡಮಾರುತ ದುರ್ಬಲಗೊಳ್ಳುತ್ತಿದ್ದಂತೆ ದಿತ್ವಾ ಚಂಡಮಾರುತ ರೂಪುಗೊಳ್ಳುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ದಿತ್ವಾ ಚಂಡಮಾರುತವು ಶ್ರೀಲಂಕಾ ಕರಾವಳಿ ಮತ್ತು ಪಕ್ಕದ ನೈಋತ್ಯ ಬಂಗಾಳಕೊಲ್ಲಿಯಾದ್ಯಂತ ವಾಯುವ್ಯಕ್ಕೆ ಚಲಿಸುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಇದರ ಪ್ರಭಾವದಿಂದ ನವೆಂಬರ್ 30ರಿಂದ  ನಾಲ್ಕೈದು ದಿನಗಳ ಕಾಲ ತಮಿಳುನಾಡು, ತೆಲಂಗಾಣ, ಕೇರಳ, ಕರ್ನಾಟಕ ಮತ್ತು ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ.
‘ದಿತ್ವಾ’ ಚಂಡಮಾರುತವು ಪುದುಚೇರಿಯಿಂದ ದಕ್ಷಿಣ-ಆಗ್ನೇಯಕ್ಕೆ ಸುಮಾರು 440 ಕಿ.ಮೀ ಮತ್ತು ಚೆನ್ನೈಯಿಂದ ದಕ್ಷಿಣಕ್ಕೆ 540 ಕಿ.ಮೀ ದೂರದಲ್ಲಿದೆ. ಕಳೆದ ಆರು ಗಂಟೆಗಳಲ್ಲಿ ಇದು ಗಂಟೆಗೆ 7 ಕಿ.ಮೀ ವೇಗದಲ್ಲಿ ಬರುತ್ತಿದೆ.
ಇದು ಶ್ರೀಲಂಕಾದ ಕರಾವಳಿಯುದ್ದಕ್ಕೂ ಉತ್ತರ-ವಾಯುವ್ಯ ಪಥವನ್ನು ಮುಂದುವರಿಸಿ, ನೈಋತ್ಯ ಬಂಗಾಳಕೊಲ್ಲಿಯತ್ತ ಹೊರಹೊಮ್ಮಿ, ನವೆಂಬರ್ 30ರ ಮುಂಜಾನೆಯ ವೇಳೆಗೆ ಉತ್ತರ ತಮಿಳುನಾಡು, ಪುದುಚೇರಿ ಮತ್ತು ದಕ್ಷಿಣ ಆಂಧ್ರಪ್ರದೇಶದ ಕರಾವಳಿಗೆ ತಲುಪುವ ಸಾಧ್ಯತೆಯಿದೆ.
ದಕ್ಷಿಣದ ರಾಜ್ಯಗಳಲ್ಲಿ ಮಳೆಯ ಅಬ್ಬರ ಹೆಚ್ಚಳ
ಈ ಚಂಡಮಾರುತದ ಪರಿಣಾಮವಾಗಿ ದಕ್ಷಿಣ ಭಾರತದ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ, ತೆಲಂಗಾಣ, ಕೇರಳ ರಾಜ್ಯಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ.
ತಮಿಳುನಾಡು: ನವೆಂಬರ್ 28 ರಿಂದ 30ರ ನಡುವೆ ಭಾರಿ ಮಳೆಯಿಂದ ಅತಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ.
ರಾಯಲಸೀಮಾ: ನವೆಂಬರ್ 28 ರಿಂದ ಡಿಸೆಂಬರ್ 1ರವರೆಗೆ ಮಳೆ ಮುಂದುವರಿಯಲಿದೆ. ನವೆಂಬರ್ 30ರಂದು ಅತ್ಯಂತ ಭಾರಿ ಮಳೆಯಾಗುವ ಸಾಧ್ಯತೆ ಇದೆ.
ಕರಾವಳಿ ಆಂಧ್ರಪ್ರದೇಶ ಮತ್ತು ಯಾನಂ: ನವೆಂಬರ್ 28 ರಿಂದ ಡಿಸೆಂಬರ್ 2ರವರೆಗೆ ಭಾರಿ ಮಳೆಯಿಂದ ಅತಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ನವೆಂಬರ್ 30ರಂದು ಮಳೆ ತೀವ್ರಗೊಳ್ಳಲಿದೆ.
ಕೇರಳ ಮತ್ತು ಮಾಹೆ: ನವೆಂಬರ್ 28 ಮತ್ತು 29ರಂದು ಭಾರಿ ಮಳೆ ನಿರೀಕ್ಷಿಸಲಾಗಿದೆ.
ತೆಲಂಗಾಣ: ನವೆಂಬರ್ 30 ಮತ್ತು ಡಿಸೆಂಬರ್ 1ರಂದು ಪ್ರತ್ಯೇಕ ಸ್ಥಳಗಳಲ್ಲಿ ಭಾರಿ ಮಳೆ.
ದಕ್ಷಿಣ ಒಳನಾಡು ಕರ್ನಾಟಕ: ನವೆಂಬರ್ 29ರಂದು ಭಾರಿ ಮಳೆಯಾಗುವ ಸಾಧ್ಯತೆ ಇದೆ.
ಅಲ್ಲದೆ, ತಮಿಳುನಾಡು (ನವೆಂಬರ್ 28 ರಿಂದ ಡಿಸೆಂಬರ್ 1), ಕೇರಳ ಮತ್ತು ಮಾಹೆ (ನವೆಂಬರ್ 28 ರಿಂದ 29), ಕರಾವಳಿ ಆಂಧ್ರಪ್ರದೇಶ ಮತ್ತು ಯಾನಂ (ನವೆಂಬರ್ 28 ರಿಂದ ಡಿಸೆಂಬರ್ 1), ದಕ್ಷಿಣ ಒಳನಾಡು ಕರ್ನಾಟಕ (ನವೆಂಬರ್ 29 ರಿಂದ 30) ಮತ್ತು ಉತ್ತರ ಒಳನಾಡು ಕರ್ನಾಟಕ (ನವೆಂಬರ್ 30) ಸೇರಿದಂತೆ ಕರ್ನಾಟಕದ ಹಲವು ಪ್ರದೇಶಗಳಲ್ಲಿ ಗುಡುಗು ಮತ್ತು ಸಿಡಿಲು ಸಹಿತ ಮಳೆಯಾಗುವ ಸಂಭವವಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement