ವೀಡಿಯೊ | ಸುದೀರ್ಘ ಕಾನೂನು ಹೋರಾಟದ ನಂತ್ರ 3 ಅಡಿ ಎತ್ತರದ ಯುವಕನ ವೈದ್ಯನಾಗುವ ಕನಸು ನನಸು

ಗುಜರಾತಿನ ಭಾವನಗರ ಜಿಲ್ಲೆಯ ಗಣೇಶ ಬರೈಯಾ ಎಂಬ 25 ವರ್ಷದ ಯುವಕ, ತನ್ನ 3 ಅಡಿ ಎತ್ತರ ಮತ್ತು 72 ಪ್ರತಿಶತದಷ್ಟು ಅಂಗವೈಕಲ್ಯದ (ಕುಬ್ಜತ್ವದಿಂದ ಉಂಟಾದ ಚಲನೆಯಲ್ಲಿನ ಅಸಾಮರ್ಥ್ಯ) ಕಾರಣಕ್ಕೆ ವೈದ್ಯಕೀಯ ಶಿಕ್ಷಣವನ್ನು ನಿರಾಕರಿಸಿದ ಭಾರತೀಯ ವೈದ್ಯಕೀಯ ಮಂಡಳಿ (MCI) ವಿರುದ್ಧ ಏಳು ವರ್ಷಗಳ ಕಾನೂನು ಹೋರಾಟ ಮಾಡಿದ ನಂತರ ಕೊನೆಗೂ ವೈದ್ಯಕೀಯ ಪದವಿ ಪೂರ್ಣಗೊಳಿಸಿ ಹೊರಬಂದಿದ್ದಾರೆ.
2018 ರಲ್ಲಿ, ಕೇವಲ 20 ಕೆಜಿ ತೂಕ ಹೊಂದಿರುವ ಗಣೇಶ ಬರೈಯಾ ಅವರು ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET)ಯಲ್ಲಿ ಯನ್ನು ಯಶಸ್ವಿಯಾಗಿ ತೇರ್ಗಡೆಯಾಗಿದ್ದರು. ಆದಾಗ್ಯೂ, ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ನಿರ್ವಹಿಸಲು ಅವರ ದೇಹದ ಎತ್ತರದಿಂದಾಗಿ ಸಮಸ್ಯೆ ಉಂಟಾಗಬಹುದು ಎಂಬ ಕಾರಣ ನೀಡಿ, ಅವರಿಗೆ ಎಂಬಿಬಿಎಸ್ (MBBS) ಪ್ರವೇಶವನ್ನು ನಿರಾಕರಿಸಲಾಯಿತು.

2018 ರಲ್ಲಿ ಭಾರತೀಯ ವೈದ್ಯಕೀಯ ಮಂಡಳಿ (MCI) ಅವರನ್ನು ಎಂಬಿಬಿಎಸ್ ಕೋರ್ಸ್‌ಗೆ ಸೇರಿಸಿಕೊಳ್ಳಲು ನಿರಾಕರಿಸಿದಾಗ ಅವರ ಕಾನೂನು ಹೋರಾಟ ಪ್ರಾರಂಭವಾಯಿತು, ಅವರ ದೈಹಿಕ ಸ್ಥಿತಿಯು ಅವರನ್ನು ವೈದ್ಯರಾಗಿ ಅವರು ಕೆಲಸ ಮಾಡುವುದನ್ನು ತಡೆಯುತ್ತದೆ ಎಂದು ಹೇಳಿ ಅವರಿಗೆ ಎಂಬಿಬಿಎಸ್‌ ಪ್ರವೇಶ ನಿರಾಕರಿಸಲಾಯಿತು. ಗಣೇಶ ಅವರು ತಮ್ಮ ಶಾಲೆಯ ಪ್ರಾಂಶುಪಾಲರಾದ ಡಾ. ದಳಪತ್‌ಭಾಯ್ ಕಟಾರಿಯಾ ಅವರ ಸಹಾಯದಿಂದ ಇದನ್ನು ಪ್ರಶ್ನಿಸಿ ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿದರು. ಗಣೇಶ ಅವರ ಕುಟುಂಬಕ್ಕೆ ಕಾನೂನು ವೆಚ್ಚಗಳನ್ನು ಭರಿಸಲು ಸಾಧ್ಯವಾಗದ ಕಾರಣ ಡಾ. ದಳಪತ್‌ಭಾಯ್ ಕಟಾರಿಯಾ ಆರ್ಥಿಕ ಬೆಂಬಲ ನೀಡಿದರು.
ಹೈಕೋರ್ಟ್ ಎಂಸಿಐ ನಿರ್ಧಾರವನ್ನು ಎತ್ತಿಹಿಡಿಯಿತು, ಆದರೆ ಅವರು ಕಾನೂನು ಹೋರಾಟ ಮುಂದುವರಿಸಿದರು. ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದರು. ಈ ಮಧ್ಯೆ ಬಿ.ಎಸ್ಸಿ. ಕೋರ್ಸ್‌ಗೂ ಸೇರ್ಪಡೆಯಾದರು.

ಅವರು ಅರ್ಜಿ ಸಲ್ಲಿಸಿದ ನಾಲ್ಕು ತಿಂಗಳ ನಂತರ, 2019 ರಲ್ಲಿ, ಸುಪ್ರೀಂ ಕೋರ್ಟ್ ಗಣೇಶ ಪರವಾಗಿ ತೀರ್ಪು ನೀಡಿತು. ವ್ಯಕ್ತಿಯ ಎತ್ತರದ ಆಧಾರದ ಮೇಲೆ ಅವರಿಗೆ ಪ್ರವೇಶವನ್ನು ನಿರಾಕರಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತು, ಇದು ಗಣೇಶ ಅವರಿಗೆ ವೈದ್ಯಕೀಯ ಅಧ್ಯಯನಕ್ಕೆ ದಾರಿ ಮಾಡಿಕೊಟ್ಟಿತು. ಅವರು ಭಾವನಗರ ವೈದ್ಯಕೀಯ ಕಾಲೇಜುಗೆ ಸೇರಿದರು.
ಅಂಗವೈಕಲ್ಯದಿಂದ ಹಲವಾರು ಸವಾಲುಗಳನ್ನು ಎದುರಿಸಿದರೂ ಅವರು ಭಾವನಗರ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಐದು ವರ್ಷಗಳ ಅಧ್ಯಯನ ಮತ್ತು ಇಂಟರ್ನ್‌ಶಿಪ್‌ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು.
ಸದ್ಯ, ಗಣೇಶ ಬರೈಯಾ ಅವರು ನವೆಂಬರ್ 27, 2025 ರಂದು ವೈದ್ಯಾಧಿಕಾರಿ (Medical Officer) ಆಗಿ ಸರ್ಕಾರಿ ಘಟಕದಲ್ಲಿ ತಮ್ಮ ಮೊದಲ ಪೋಸ್ಟಿಂಗ್ ಪಡೆದುಕೊಂಡು, ವೈದ್ಯಕೀಯ ಸೇವೆಯನ್ನು ಆರಂಭಿಸಿದ್ದಾರೆ. ಇವರು ವಿಶ್ವದ ಅತಿ ಕಡಿಮೆ ಎತ್ತರದ ವೈದ್ಯರಲ್ಲಿ ಒಬ್ಬರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಪ್ರಮುಖ ಸುದ್ದಿ :-   ಉದ್ಧವ್‌ಗೆ ಭಾರಿ ಹಿನ್ನಡೆ ; ಶಿಂಧೆ ಬಣದ ಜೊತೆ ಶಿವಸೇನೆ(ಯುಬಿಟಿ) 6 ಸಂಸದರ ವಿಲೀನಕ್ಕೆ ಲೋಕಸಭೆ ಸ್ಪೀಕರ್ ಅನುಮೋದನೆ

ಕೌಟುಂಬಿಕ ಹಿನ್ನೆಲೆ ಮತ್ತು ಕನಸು
ಭಾವನಗರದ ಗೊರಖಿ ಗ್ರಾಮದ ಕೃಷಿ ಕುಟುಂಬದಲ್ಲಿ ಜನಿಸಿದ ಗಣೇಶ ಅವರಿಗೆ ಏಳು ಸಹೋದರಿಯರು ಮತ್ತು ಒಬ್ಬ ಸಹೋದರ ಇದ್ದಾರೆ. ಅವರ ಕುಟುಂಬ ಬಡತನದಿಂದ ಕೂಡಿದ್ದು, ಅವರ ಪೋಷಕರು ಕಚ್ಛಾ ಮನೆಯಲ್ಲಿ ವಾಸಿಸುತ್ತಾ ಕೃಷಿ ಮಾಡುತ್ತಿದ್ದರು. ತಮ್ಮ ಕುಟುಂಬಕ್ಕೆ ಉತ್ತಮ ಮನೆಯನ್ನು ನಿರ್ಮಿಸುವುದು ತಮ್ಮ ಮೊದಲ ಆದ್ಯತೆ ಎಂದು ಅವರು ತಿಳಿಸಿದ್ದಾರೆ.
ಗಣೇಶ ಬರೈಯಾ ಅವರ ಈ ದೃಢ ಸಂಕಲ್ಪದ ಕಥೆಯು ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡುತ್ತದೆ, ಇದು ದೈಹಿಕ ಮಿತಿಗಳ ಮೇಲೆ ಮಾನವ ಚೈತನ್ಯವು ಹೇಗೆ ವಿಜಯ ಸಾಧಿಸುತ್ತದೆ ಎಂಬುದನ್ನು ತೋರಿಸುತ್ತದೆ. ಪ್ರಸ್ತುತ ಅವರು ಸೇವೆ ಸಲ್ಲಿಸುತ್ತಿದ್ದು, ಸಮಾಜದಲ್ಲಿ ಸಹಾನುಭೂತಿ, ಸಮಾನತೆ ಮತ್ತು ಪೂರ್ವಾಗ್ರಹಗಳನ್ನು ಮುರಿಯುವ ಅಗತ್ಯವನ್ನು ಗಣೇಶ ಬರೈಯಾ ಅವರ ಯಶೋಗಾಥೆ ಒತ್ತಿ ಹೇಳುತ್ತದೆ.

ಪ್ರಮುಖ ಸುದ್ದಿ :-   ತೃಣಮೂಲ ಬಂಡಾಯ ಸಂಸದರನ್ನು ಯಾಕೆ ಆಹ್ವಾನಿಸಿದ್ದೀರಿ ? : ಸರ್ವಪಕ್ಷ ಸಭೆಗೆ ಕೆಲಕಾಲ ಬಹಿಷ್ಕರಿಸಿದ ವಿಪಕ್ಷಗಳು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement